‘ರಾಜಕೀಯ’ ಬೇಡ ಮಿಜೋರಾಂ ರಾಜ್ಯಪಾಲರಾದ ಕಮಲಾ ಬೇನಿವಾಲ್ ಅವರ ವಜಾ ಪ್ರಕರಣವನ್ನು ಎನ್‌ಡಿಎ ಸರ್ಕಾರ ಸಮರ್ಥಿಸಿಕೊಂಡಿದೆ. ಅವರ ವಿರುದ್ಧ ಕೆಲವು ಆರೋಪಗಳನ್ನು ಮುಂದು ಮಾಡಿ ತನ್ನ ಕ್ರಮ ಸಾಂವಿಧಾನಿಕ­ವಾಗಿ ಸರಿಯಾಗಿದೆ ಎಂದು ಅದು ಪ್ರತಿಪಾದಿಸಿದೆ. ಬೇನಿವಾಲ್ ಅಧಿಕಾರಾ­ವಧಿ ಮುಕ್ತಾಯವಾಗಲು ಎರಡು ತಿಂಗಳಷ್ಟೇ ಬಾಕಿ ಇರುವಾಗ ಅವರನ್ನು ವಜಾ ಮಾಡುವಷ್ಟು ಈ ಆರೋಪಗಳು ಬಲವಾಗಿವೆಯೇ ಎಂಬುದು ಪ್ರಶ್ನೆ. ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರ ಜೊತೆ ಆಗ ಅಲ್ಲಿನ ರಾಜ್ಯಪಾಲರಾಗಿದ್ದಾಗ ಬೇನಿವಾಲ್ ಹೊಂದಿ­ದ್ದಂತಹ ಅಸಹನೆಯ ಸಂಬಂಧ ಎಲ್ಲರಿಗೂ ತಿಳಿದಿದೆ. ಗುಜರಾತ್‌ನಲ್ಲಿ ಲೋಕಾಯುಕ್ತ ನೇಮಕದ ವಿಚಾರದಲ್ಲಿ ಮೋದಿ ವಿರುದ್ಧ ಬೇನಿವಾಲ್ ಸಂಘರ್ಷದ ಹಾದಿ ತುಳಿದಿದ್ದರು. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ಹಿಂದಿನ ಯುಪಿಎ ಸರ್ಕಾರ­ದಿಂದ ನೇಮಕಗೊಂಡ ಅನೇಕ ರಾಜ್ಯಪಾಲರಿಗೆ ಆ ಹುದ್ದೆಯಲ್ಲಿ ಮುಂದು­ವರಿ­ಯದಂತೆ ಆದೇಶಿಸಲಾಗಿತ್ತು. ಈ ಪೈಕಿ ಬೇನಿವಾಲ್‌ ಅವರಿಗೂ ಹುದ್ದೆ ಬಿಡಲು ಆದೇಶಿಸಲಾಗಿತ್ತು. ಆದರೆ ಅವರು ಮಣಿಯಲಿಲ್ಲವಾದ್ದರಿಂದ ಅವರನ್ನು ಮಿಜೋರಾಂಗೆ ವರ್ಗಾವಣೆ ಮಾಡಲಾಗಿತ್ತು. ಅವರ ಮೇಲಿನ ಆರೋಪ ಅವರನ್ನು ವಜಾ ಮಾಡುವಷ್ಟು ಗಟ್ಟಿಯಾಗಿದ್ದಿದ್ದರೆ ವರ್ಗಾವಣೆ ಬದಲು ಆಗಲೇ ವಜಾ ಮಾಡಿರಬಹುದಿತ್ತು. ಅವರನ್ನು ವರ್ಗಾಯಿಸಿ, ವಜಾ ಮಾಡಿ ಅವಮಾನಿಸುವುದು ಬೇಕಿತ್ತೆ? ಎಂಬುದು ಪ್ರಶ್ನೆ.ಇದಕ್ಕೆ ಕಾರಣ­­ಗಳನ್ನು ಹುಡುಕಿ ಸಮರ್ಥನೆಯನ್ನು ಸರ್ಕಾರ ನೀಡುತ್ತಿದ್ದರೂ ರಾಜಕೀಯ ಹಾಗೂ ವೈಯಕ್ತಿಕ ದುರುದ್ದೇಶಗಳನ್ನು ಈ ಪ್ರಕರಣ ಬಯಲುಗೊಳಿಸುತ್ತದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಪಾಲರನ್ನು ನಡೆಸಿಕೊಳ್ಳುತ್ತಿರುವ ಕ್ರಮವೇ ವಿವಾದಾಸ್ಪದ. ಲೋಕಸಭೆ ಚುನಾವಣೆ ನಂತರ ಕೇಂದ್ರದಲ್ಲಿ ಅಧಿಕಾರ ಗದ್ದುಗೆ ಹಿಡಿಯುವ ಪಕ್ಷ ಹಿಂದಿನ ಸರ್ಕಾರ ನೇಮಕ ಮಾಡಿದ ರಾಜ್ಯ­ಪಾಲರನ್ನು ಬದಲಾಯಿಸಿ ತಮಗೆ ಬೇಕಾದವರನ್ನು ನೇಮಕ ಮಾಡಿ­ಕೊಳ್ಳುವ ಸಂಪ್ರದಾಯ ಬೆಳೆದುಬಂದಿದೆ. ಯಾವ ರಾಜಕೀಯ ಪಕ್ಷವೂ ಇದಕ್ಕೆ ಹೊರತಾಗಿಲ್ಲ. ಇಂತಹ ಸಂಪ್ರದಾಯದ ವಿರುದ್ಧ ಸುಪ್ರೀಂಕೋರ್ಟ್ ತೀವ್ರ ಟೀಕೆಗಳನ್ನು ಮಾಡಿದೆ. ಆದರೆ ಸುಪ್ರೀಂ ಕೋರ್ಟ್‌ನ ತೀರ್ಪಿಗೂ ಬೇನಿ­ವಾಲ್ ಪ್ರಕರಣದಲ್ಲಿ ಮಾನ್ಯತೆ ಸಿಕ್ಕಿಲ್ಲ. ‘ಇದು ರಾಜಕೀಯ ಪ್ರತೀಕಾರ ಕ್ರಮ’ ಎಂದು ಕಾಂಗ್ರೆಸ್ ಆರೋಪಿಸಿದೆ. ಗುಜರಾತ್ ರಾಜ್ಯಪಾಲರಾಗಿದ್ದಾಗ ಫೈಲು ವಿಲೇವಾರಿ ವಿಳಂಬ ಹಾಗೂ ಪದೇ ಪದೇ ವಿಮಾನದಲ್ಲಿ ಪಯಣಿಸಿ ಸಾರ್ವಜನಿಕ ಹಣ ದುರುಪಯೋಗ ಮಾಡಿದ್ದಾರೆಂಬುದು ಬೇನಿವಾಲ್ ವಿರುದ್ಧ ಮಾಡಲಾಗಿರುವ ಮುಖ್ಯ ಆರೋಪ. ಇದಕ್ಕಾಗಿ ಅವರನ್ನು ವಜಾ ಮಾಡಿದ್ದರ ಪರವಾಗಿ ತಾಂತ್ರಿಕವಾಗಿ ವಾದ ಮಂಡಿಸಬಹುದು. ಆದರೆ ಇದರ ಹಿಂದೆ ರಾಜಕೀಯ ಹಾಗೂ ವೈಯಕ್ತಿಕ ವಿಚಾರಗಳು ಕೆಲಸ ಮಾಡಿಲ್ಲ ಎಂದು ಹೇಳಲಾಗದು. ರಾಜ್ಯಪಾಲರ ಹುದ್ದೆಯ ಘನತೆಯನ್ನು ಎತ್ತಿ ಹಿಡಿ­ಯಬೇಕಾದ ಸಾಂವಿಧಾನಿಕ ಕರ್ತವ್ಯ ತನ್ನದಾಗಿದೆ ಎಂಬುದನ್ನು ಸರ್ಕಾರ ಮರೆಯಬಾರದು. ಇದಕ್ಕಾಗಿ, ಹಿರಿಯ ಮುಖಂಡರ ರಾಜಕೀಯ ಪುನರ್ವ­ಸತಿ­ಗಾಗಿ ರಾಜ್ಯಪಾಲರ ಹುದ್ದೆಗಳನ್ನು ಬಳಸಿಕೊಳ್ಳುವುದು ಮೊದಲಿಗೆ ತಪ್ಪಬೇಕು. ಅದು ಸಾಧ್ಯವಾಗಬೇಕಾದರೆ ರಾಜ್ಯಪಾಲರ ಹುದ್ದೆಗೆ ಕೇವಲ ಹಿರಿಯ ರಾಜಕಾರಣಿಗಳು ಅಥವಾ ಆಡಳಿತ ಕ್ಷೇತ್ರದ ವ್ಯಕ್ತಿಗಳನ್ನಷ್ಟೇ ಪರಿಗಣಿಸುವ ಬದಲು ಅನುಭವಿ ಸಂವಿಧಾನ ತಜ್ಞರು, ಅರ್ಥತಜ್ಞರು ಸೇರಿ­ದಂತೆ ವಿವಿಧ ಕ್ಷೇತ್ರಗಳ ತಜ್ಞರನ್ನೂ ನೇಮಿಸುವ ಪರಿಪಾಠ ಬೆಳೆಯಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.