ಎಬೋಲಾ: ಕಟ್ಟೆಚ್ಚರ ಅಗತ್ಯ ಕಂಡು ಕೇಳರಿಯದ ಕಾಯಿಲೆಗಳು ಮನುಕುಲದ ನೆಮ್ಮದಿ ಕದಡು­ತ್ತಿವೆ. ಎಚ್‌ಐವಿ, ಎಚ್1ಎನ್1, ಅಂಥ್ರಾಕ್ಸ್ ಮುಂತಾದ ಸೋಂಕು ಹಾಗೂ ರೋಗ­ಗಳು ಇತ್ತೀಚಿನ ವರ್ಷಗಳಲ್ಲಿ ತಲ್ಲಣ ಮೂಡಿಸಿ­ದ್ದವು. ಆ ಸಾಲಿಗೆ ಈಗ ಎಬೋಲಾ ವೈರಾಣು ಸೋಂಕು ಸೇರಿದೆ. ಕಾಂಗೊ ಗಣರಾಜ್ಯದಲ್ಲಿ 37 ವರ್ಷಗಳ ಹಿಂದೆ ಮೊದಲಿಗೆ ಕಾಣಿಸಿಕೊಂಡ ಈ ಸಾಂಕ್ರಾಮಿಕ ರೋಗ, ಈಗ ಪಶ್ಚಿಮ ಆಫ್ರಿಕಾ ದೇಶಗಳಲ್ಲಿ ತೀವ್ರಗತಿಯಲ್ಲಿ ಹರಡುವ ಮೂಲಕ ವಿಶ್ವ ಸಮುದಾಯವನ್ನು ಕಳವಳಕ್ಕೆ ಈಡುಮಾಡಿದೆ. ಜಗತ್ತಿನ ಯಾವುದೋ ಮೂಲೆ­ಯಲ್ಲಿ ಕಾಣಿಸಿಕೊಂಡ ಕಾಯಿಲೆ ಕುರಿತು ನಾವೇಕೆ ಚಿಂತೆಗೀಡಾಗ­ಬೇಕು ಎಂದು ನಿರುಮ್ಮಳವಾಗಿ ಕೂರುವಂತಿಲ್ಲ. ಸಂಚಾರ, ಸಂಪರ್ಕ ಕ್ರಾಂತಿ ಹಾಗೂ ಜಾಗತೀಕರಣದಿಂದ ದೇಶ–ವಿದೇಶಗಳ ನಡುವಣ ‘ಅಂತರ’ ಕಡಿಮೆಯಾಗಿದೆ. ಈ ಸೋಂಕು ವ್ಯಾಪಕವಾಗಿ ಹರಡಿರುವ ಲೈಬೀರಿಯಾ, ಸಿಯೆರಾ ಲಿಯೋನ್‌ ಹಾಗೂ ಗಿನಿ ದೇಶಗಳಲ್ಲಿ 4,700 ಭಾರತೀಯ­ರಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ­ವರ್ಧನ್‌ ತಿಳಿಸಿದ್ದಾರೆ. ಸೋಂಕು ಇದೀಗ ನೈಜೀರಿಯಾಕ್ಕೂ ಹರಡಿದೆ. ಅಲ್ಲಿ 40 ಸಾವಿರ ಭಾರತೀ­ಯ­­ರಿ­ದ್ದಾರಂತೆ. ಅಲ್ಲದೆ ಶಿಕ್ಷಣ, ಉದ್ಯೋಗ, ವ್ಯವಹಾರ ನಿಮಿತ್ತ ಆ ದೇಶ­ಗಳಿಂದ ಇಲ್ಲಿಗೆ ಬಂದು–ಹೋಗುವವರು ಇದ್ದೇ ಇರುತ್ತಾರೆ. ಆದ­ಕಾರಣ ಯಾವ ಕಾಯಿಲೆಯೂ ಈಗ ‘ಸ್ಥಳೀಯ’ವಲ್ಲ. ಅದನ್ನು ನಿಭಾಯಿ­ಸುವ ಹೊಣೆಯೂ ನಿರ್ದಿಷ್ಟ ಕೆಲವೇ ದೇಶ– ಪ್ರದೇಶಗಳಿಗೆ ಸೀಮಿತವಲ್ಲ. ಈ ನೆಲೆ­ಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಎಬೋಲಾ ಕಾರಣಕ್ಕಾಗಿ ‘ಜಾಗತಿಕ ಆರೋಗ್ಯ ತುರ್ತು ಸ್ಥಿತಿ’ ಘೋಷಿಸಿರುವುದು ಸರಿಯಾಗಿಯೇ ಇದೆ. ಮುನ್ನೆಚ್ಚರಿಕೆಯ ಕ್ರಮಗಳಲ್ಲಿ ಆಲಸ್ಯ ತೋರಿದರೆ, ಮಾರಿಯನ್ನು ಮನೆಗೆ ಆಹ್ವಾನಿಸಿದಂತೆಯೇ ಸರಿ. ‘ಕಳೆದ 40 ವರ್ಷಗಳಲ್ಲಿ ಸಾಂಕ್ರಾಮಿಕ ರೋಗವೊಂದು ಇಷ್ಟೊಂದು ವ್ಯಾಪಕವಾಗಿ ಹಬ್ಬಿದ ಮತ್ತೊಂದು ನಿದರ್ಶನ ಇಲ್ಲ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ. ಇದು ಸೋಂಕು ಹರಡುವಿಕೆಯ ತೀವ್ರತೆಯನ್ನು ಬಿಂಬಿಸುತ್ತದೆ. ಬಡ ರಾಷ್ಟ್ರಗಳಲ್ಲಿ ಕಾಣಿಸಿಕೊಂಡ ಕಾಯಿಲೆ ಎಂಬ ಕಾರ­ಣಕ್ಕೋ ಏನೋ ಇದರ ಬಗ್ಗೆ ಬಾಧಿತ ರಾಷ್ಟ್ರಗಳೂ ಒಳಗೊಂಡಂತೆ ಯಾವ ರಾಷ್ಟ್ರವೂ ಈವರೆಗೆ ಹೆಚ್ಚಿನ ಗಮನ ಕೊಟ್ಟಿರಲಿಲ್ಲ. ನಿಯಂತ್ರಣಕ್ಕೆ ಲಸಿಕೆ­ಯನ್ನೂ ಅಭಿವೃದ್ಧಿಪಡಿಸಿಲ್ಲ. ಈ ನಿಟ್ಟಿನಲ್ಲಿ ಈಗಲಾದರೂ ಪ್ರಯತ್ನಗಳು ಬಿರುಸು ಪಡೆಯಬೇಕು. ದೇಹದಲ್ಲಿನ ಬೆವರು, ಎಂಜಲು, ರಕ್ತದಂಥ ದ್ರವಗಳಿಂದ ಈ ಸೋಂಕು ಹರಡುತ್ತದೆ. ಈ ಸೋಂಕಿನಿಂದ ಇದುವರೆಗೆ ಸುಮಾರು ಸಾವಿರ ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿ­ರುವುದು ಕಳವಳಕಾರಿ. ಆಫ್ರಿಕಾದ ಕಾಡು ಪ್ರಾಣಿಗಳಿಂದ ಮನುಷ್ಯನಿಗೆ ಈ ಸೋಂಕು ದಾಟಿದೆ ಎಂಬ ಮಾತಿದೆ. ಅರಣ್ಯಗಳ ಮೇಲಿನ ಅತಿಯಾದ ಒತ್ತಡ, ಮಾನವ ಹಸ್ತಕ್ಷೇಪ ಹಾಗೂ ಸೋಂಕು ತಗುಲಿದ ಪ್ರಾಣಿಯ ಮಾಂಸ ಸೇವನೆಯು ಎಬೋಲಾ ಆ ದೇಶಗಳಲ್ಲಿ ವ್ಯಾಪಕವಾಗಿ ಹರಡಲು ಕಾರಣವಾಗಿರಬಹುದು. ಅಂತ್ಯಕ್ರಿಯೆ ವೇಳೆ ಬುಡಕಟ್ಟು ಜನರು ನಡೆಸುವ ಆಚರಣೆಗಳೂ ಇದಕ್ಕೆ ಕಾರಣ ಎಂದು ತಜ್ಞರು ಶಂಕಿಸಿದ್ದಾರೆ. ವಿದೇಶಗಳಿಂದ ಬರುವ ಪ್ರಯಾಣಿಕರನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಿ ಈ ಸೋಂಕು ಇಲ್ಲದಿರುವ ಬಗ್ಗೆ ದೃಢಪಡಿಸಿಕೊಳ್ಳಬೇಕು. ಲಸಿಕೆ ಇಲ್ಲದ ಕಾರಣ ಮುನ್ನೆಚ್ಚರಿಕೆಯೊಂದೇ ಉಳಿದಿರುವ ಆಯ್ಕೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.