ಎಚ್ಚರಿಕೆ ಗಂಟೆ ಸರ್ಕಾರಿ ಸ್ವಾಮ್ಯದ ಸಿಂಡಿಕೇಟ್ ಬ್ಯಾಂಕ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಎಸ್. ಕೆ. ಜೈನ್ (54) ಅವರನ್ನು ಭ್ರಷ್ಟಾಚಾರ ಆರೋಪ­ದಡಿ ಬಂಧಿಸಿರುವುದು ರಾಷ್ಟ್ರೀಕೃತ ಬ್ಯಾಂಕ್‌ಗಳ ಉನ್ನತ ಮಟ್ಟ­ದಲ್ಲಿಯೂ ಭ್ರಷ್ಟಾಚಾರದ ಬೇರುಗಳು ಆಳವಾಗಿ ಚಾಚಿಕೊಂಡಿ­ರುವುದಕ್ಕೆ ನಿದರ್ಶನವಾಗಿದೆ. ಸುಸ್ತಿದಾರ ಉದ್ದಿಮೆ ಸಂಸ್ಥೆಗಳ ಸಾಲದ ಗರಿಷ್ಠ ಮಿತಿ ಹೆಚ್ಚಿಸಲು ಭಾರಿ ಮೊತ್ತದ ಲಂಚ ಸ್ವೀಕರಿಸಿದ ಆರೋಪ ಜೈನ್ ಮೇಲಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿಯೂ (ಪಿಎಸ್‌ಬಿ), ಸಾಲ ಮಂಜೂರಾತಿ ವಿಧಾನ ಮತ್ತು ವಸೂ­ಲಾಗದ ಸಾಲಗಳ ಬಗ್ಗೆ ಪಾಲಿಸು­ತ್ತಿರುವ ನೀತಿ ನಿಯಮ­ಗಳ ಬಗ್ಗೆಯೇ ಈಗ ಅನುಮಾನಗಳು ಮೂಡುತ್ತಿವೆ. ಬ್ಯಾಂಕ್‌ಗಳ ವಸೂ­ಲಾಗದ ಸಾಲದ ಪ್ರಮಾಣ (ಎನ್‌ಪಿಎ) ಹೆಚ್ಚಳಗೊಳ್ಳಲು ಕುಂಠಿತ ಆರ್ಥಿಕತೆಯೇ ಕಾರಣವಾಗಿ­ರುವುದರ ಜತೆಗೆ ಬ್ಯಾಂಕ್ ಅಧಿಕಾರಿಗಳ ಕೈಚಳಕವೂ ತಳಕು ಹಾಕಿಕೊಂಡಿ­ರುವುದು ಇದರಿಂದ ಸಾಬೀತಾ­ಗಿದೆ. ಇದೊಂದು ವಿಶೇಷ ಪ್ರಕರಣವೇನೂ ಅಲ್ಲ. ಇಂತಹ ಇತರ ನಿದರ್ಶನಗಳೂ ಇವೆ. ಬೆಳಕಿಗೆ ಬಾರದ ಪ್ರಕರಣಗಳ ಸಂಖ್ಯೆಯೂ ಸಾಕಷ್ಟಿದೆ. ಸರ್ಕಾರಿ ಬ್ಯಾಂಕ್‌­ಗಳಲ್ಲಿ ತಮ್ಮ ಹಣ ಸುರಕ್ಷಿತವಾಗಿರುತ್ತದೆ ಎನ್ನುವ ನಂಬಿಕೆ­ಯಿಂದಲೇ ಜನರು ತಮ್ಮೆಲ್ಲ ಉಳಿತಾಯವನ್ನು ಠೇವಣಿ ಇರಿಸಿರು­ತ್ತಾರೆ. ಬ್ಯಾಂಕ್‌ ಷೇರುಗಳಲ್ಲಿ ಹಣ ತೊಡಗಿ­ಸುತ್ತಾರೆ. ಬ್ಯಾಂಕಿಂಗ್‌ ವಹಿ­ವಾಟು ನಿರ್ವಹಣೆ­ಯಲ್ಲಿನ ದೋಷಗಳು ಮತ್ತು ಭ್ರಷ್ಟಾಚಾರ ಪ್ರಕರಣಗಳಿಗೆ ಕಡಿವಾಣ ವಿಧಿಸಲು ಕೇಂದ್ರ ಸರ್ಕಾರ ಈಗಲೂ ಮುಂದಾ­ಗದಿದ್ದರೆ ಬ್ಯಾಂಕ್‌ಗಳ ವಿಶ್ವಾಸಾರ್ಹತೆಗೇ ಧಕ್ಕೆ ಒದಗಲಿದೆ. ದೊಡ್ಡ ಮೊತ್ತದ ಸಾಲ ಮಂಜೂರಾ­ತಿಯಲ್ಲಿ ಪಾರದರ್ಶಕತೆ ಇಲ್ಲದಿರು­ವುದು ಮತ್ತು ಬ್ಯಾಂಕ್‌ನ ಹಿರಿಯ ಅಧಿಕಾರಿ­ಗಳು ತಮ್ಮ ವಿವೇಚನಾಧಿಕಾರ ಬಳಕೆ­ಯಲ್ಲಿ ಯಾವುದೇ ನಿರ್ಬಂಧಗಳು ಇಲ್ಲದಿರುವುದರಿಂದಲೇ ಇಂತಹ ಪ್ರಕ­ರಣ­ಗಳು ನಡೆಯುತ್ತಿವೆ. ಬ್ಯಾಂಕ್ ಅಧಿ­ಕಾರಿಗಳು ಕೆಲ ಪ್ರಕರಣಗಳಲ್ಲಿ ರಾಜಕಾರ­­ಣಿಗಳ ಒತ್ತಡಕ್ಕೆ ಒಳಗಾಗಿ ಕೆಲಸ ನಿರ್ವಹಿ­ಸಬೇಕಾಗುತ್ತದೆ ಎನ್ನು­ವುದೂ ನಿಜ. ರಾಷ್ಟ್ರೀಕೃತ ಬ್ಯಾಂಕ್‌ಗಳು ವೃತಿಪರತೆಯ ಆಡಳಿತ ಅಳವಡಿಸಿ­ಕೊಳ್ಳ­ದಿದ್ದರೆ ಸಾರ್ವ­ಜನಿಕರ ಹಿತಾಸಕ್ತಿ ರಕ್ಷಣೆ ಸಾಧ್ಯವಾ­ಗುವುದಿಲ್ಲ. ಈ ಪ್ರಕರಣವು ಬ್ಯಾಂಕಿಂಗ್‌ ಕ್ಷೇತ್ರದಲ್ಲಿನ ಭ್ರಷ್ಟಾಚಾರ, ವಸೂಲಾ­ಗದ ಸಾಲ ಪ್ರಮಾಣ ಹೆಚ್ಚಳ, ಅಪಾತ್ರರಿಗೆ ಅಗತ್ಯಕ್ಕಿಂತ ಹೆಚ್ಚು ಸಾಲ ಮಂಜೂರು ಮತ್ತಿತರ ಹುಳುಕುಗಳಿಗೆ ಕಡಿವಾಣ ಹಾಕಲು ಎಚ್ಚರಿಕೆ ಗಂಟೆ­ಯಾಗಿದೆ. ಪಿಎಸ್‌ಬಿಗಳ ಆಡಳಿತ ಮಂಡಳಿಗಳ ಸುಧಾರಣೆಗೂ ಇದು ಸಕಾಲ. ಬ್ಯಾಂಕ್‌­ಗಳ ಕಾರ್ಯನಿರ್ವ­ಹಣೆಯಲ್ಲಿ ಸರ್ಕಾರದ ಹಸ್ತಕ್ಷೇಪವೂ ನಿಂತಾ­ಗಲೇ ಇಂತಹ ಹಗರಣಗಳು ಕೊನೆ­ಗೊಂಡಾವು. ಬ್ಯಾಂಕಿಂಗ್‌ ವಹಿವಾಟಿ­ನಲ್ಲಿ ಹೆಚ್ಚು ಪಾರದರ್ಶಕತೆ ತರಲು, ಮಧ್ಯವರ್ತಿಗಳ ಹಾವಳಿ ಮಟ್ಟ ಹಾಕಲು , ಉನ್ನತ ಅಧಿಕಾರಿಗಳ ಹೊಣೆಗಾರಿಕೆ ಹೆಚ್ಚಿಸಲು ಮತ್ತು ವಿಚಕ್ಷಣೆ ಬಲಪಡಿ­ಸುವಂತಹ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳ­ಬೇಕಾಗಿದೆ. ಇದೇ ನೆಪದಲ್ಲಿ ಪ್ರಾಮಾಣಿಕ ಸಾಲಗಾರರಿಗೆ ಕಿರುಕುಳ ಉಂಟಾ­ಗದಂತೆ ನೋಡಿಕೊಂಡು ಸಾಲ ನೀಡಿಕೆ ಪ್ರಕ್ರಿಯೆ ಇನ್ನಷ್ಟು ಸುಸೂತ್ರ­ವಾಗುವಂತೆ ಮಾಡಿದರೆ ಮಾತ್ರ ಸರ್ಕಾರಿ ಬ್ಯಾಂಕ್‌ಗಳ ವಿಶ್ವಾಸಾ­ರ್ಹತೆ ಹೆಚ್ಚೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.