ಮಹತ್ವದ ಹೆಜ್ಜೆ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರ ಆಸ್ತಿ ವಿವರಗಳನ್ನು ಸಿಬ್ಬಂದಿಯು ಕಾರ್ಯನಿರ್ವಹಿಸುವ ಸಚಿವಾಲಯಗಳು ಮತ್ತು ಇಲಾಖೆಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಕಡ್ಡಾಯ­ವಾಗಿ ಪ್ರಕಟಿಸಬೇಕು ಎಂದು ಕೇಂದ್ರ ಸರ್ಕಾರ ಎಲ್ಲ ಇಲಾಖೆ­ಗಳಿಗೂ ನಿರ್ದೇಶನ ನೀಡಿದೆ. ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ. 2013ರಲ್ಲಿ ರೂಪಿಸಲಾಗಿರುವ ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆ ಅನುಷ್ಠಾನದ ಭಾಗವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಬಹುಮುಖ್ಯವಾಗಿ ಅಧಿಕಾರಿಗಳು ಮತ್ತು ನೌಕರರ ಆಸ್ತಿ ವಿವರಗಳನ್ನು ಕಾಲಮಿತಿಯೊಳಗೆ ವೆಬ್‌ಸೈಟ್‌ನಲ್ಲಿ ಹಾಕಬೇಕು ಎಂದು ಸರ್ಕಾರವು ಇಲಾಖೆಗಳಿಗೆ ಸೂಚಿಸಿರುವುದು ಸ್ವಾಗತಾರ್ಹ. ವಿವರಗಳನ್ನು ಸಲ್ಲಿಸು­ವಾಗ ಆಸ್ತಿ ಪಾಸ್ತಿ ಬಗ್ಗೆ ತಪ್ಪು ಮಾಹಿತಿ ನೀಡಿದರೂ ಮೇಲಧಿಕಾರಿ­ಗಳು ಶಿಸ್ತು ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಈ ಹಿಂದೆಯೂ ಸರ್ಕಾರಿ ಸಿಬ್ಬಂದಿ ತಮ್ಮ ಆಸ್ತಿ ಪಾಸ್ತಿ ವಿವರಗಳನ್ನು ತಮ್ಮ ಇಲಾಖೆಗೆ ಸಲ್ಲಿ­ಸು­ತ್ತಿದ್ದರು. ಆದರೆ ಇಲಾಖೆಯು ಇದನ್ನು ಸಾರ್ವಜನಿಕರಿಗೆ ಬಹಿರಂಗ­ಪಡಿಸು­ತ್ತಿರ­ಲಿಲ್ಲ. ಲಂಚ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿರುವ ಸಿಬ್ಬಂದಿ ಕಾನೂನಿನ ಕಣ್ಣು ತಪ್ಪಿಸಲು ಕುಟುಂಬದ ಸದಸ್ಯರ ಹೆಸರಿನಲ್ಲಿ ಆಸ್ತಿಯನ್ನು ಮಾಡಿಡುವುದು ಸಾಮಾನ್ಯ. ವೆಬ್‌ಸೈಟ್‌ನಲ್ಲಿ ಕುಟುಂಬ ಸದಸ್ಯರ ಆಸ್ತಿ ವಿವರಗಳನ್ನೂ ಪ್ರಕಟಿಸಿದರೆ ಜನಸಾಮಾನ್ಯರ ಕಣ್ಣು ತಪ್ಪಿಸಲು ಆಗುವುದಿಲ್ಲ. ಈ ಕಾನೂನಿನ ಜಾರಿಯಿಂದ ಲಂಚ ಮತ್ತು ಭ್ರಷ್ಟಾಚಾರ ಸಂಪೂರ್ಣವಾಗಿ ನಿಲ್ಲದಿದ್ದರೂ, ಶಿಕ್ಷೆಯ ಭಯದಿಂದ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗುವುದಂತೂ ಖಂಡಿತ. ನೌಕರರು ಹೊಂದಿರುವ ಆಸ್ತಿಗಳಲ್ಲಿ ಯಾವು­ದನ್ನಾ­ದರೂ ವೆಬ್‌ಸೈಟ್‌ನಲ್ಲಿ ಪ್ರಕಟಿಸದೇ ಮುಚ್ಚಿಟ್ಟರೆ ಅಂತಹ ಆಸ್ತಿಗಳನ್ನು ಅಕ್ರಮ ಸಂಪಾದನೆ ಎಂದು ಪರಿಗಣಿಸಲು ನಿರ್ಧರಿಸಿರುವುದು ಇನ್ನೊಂದು ಮಹತ್ವದ ಹೆಜ್ಜೆ. ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ ಸಂಸ್ಥೆಯ 2011ರ ಸಮೀಕ್ಷೆ ಪ್ರಕಾರ ಭ್ರಷ್ಟಾಚಾರದಲ್ಲಿ ಭಾರತವು ಅಂತರರಾಷ್ಟ್ರೀಯ ಮಟ್ಟದಲ್ಲಿ 95ನೇ ಸ್ಥಾನ­ದಲ್ಲಿದೆ. ವಿವಿಧ ರಾಜ್ಯಗಳಲ್ಲಿ ಲೋಕಾಯುಕ್ತ ಕಾಯ್ದೆಯ ಪರಿಣಾಮ­ಕಾರಿ ಜಾರಿಯಿಂದ ಭ್ರಷ್ಟರನ್ನು ಬಂಧಿಸುವ ಮತ್ತು ಶಿಕ್ಷಿಸುವ ಕೆಲಸ ಇತ್ತೀಚಿನ ವರ್ಷಗಳಲ್ಲಿ ಪರಿಣಾಮಕಾರಿಯಾಗಿ ನಡೆಯುತ್ತಿದೆ. ಮಾಹಿತಿ ಹಕ್ಕು ಕಾಯ್ದೆಯ ಬಲದಿಂದಾಗಿ ಸರ್ಕಾರದ ಮಟ್ಟದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಪ್ರಯತ್ನವೂ ಸಾಕಷ್ಟು ನಡೆದಿದೆ. ಆದರೆ ಈ ರೀತಿ ಮಾಹಿತಿಗಳನ್ನು ಕೇಳಿ, ಸಮಾಜದಲ್ಲಿ ಎಚ್ಚರ ಮೂಡಿಸುವ ಕೆಲಸ ಮಾಡುವವರನ್ನು ಹತ್ತಿ­ಕ್ಕುವ ಪ್ರಯತ್ನವೂ ಭ್ರಷ್ಟರಿಂದ ಅಷ್ಟೇ ಜೋರಾಗಿ ನಡೆದಿದೆ. 2010-11­ರಲ್ಲಿ 12 ಮಂದಿ ಮಾಹಿತಿ ಹಕ್ಕು ಕಾರ್ಯಕರ್ತರ ಕೊಲೆ ನಡೆದಿರುವುದು ಮತ್ತು ಹಲವಾರು ಹಲ್ಲೆ ಪ್ರಕರಣಗಳು ವರದಿಯಾಗಿರುವುದು ಇದಕ್ಕೆ ಸಾಕ್ಷಿ. ಭ್ರಷ್ಟಾ­ಚಾರವನ್ನು ಬಯಲಿಗೆಳೆಯಲು ಶ್ರಮಿಸುವ ಸಂಸ್ಥೆಗಳು ಮತ್ತು ವ್ಯಕ್ತಿ­ಗಳಿಗೂ ಸೂಕ್ತ ರಕ್ಷಣೆ ಒದಗಿಸುವ ಕೆಲಸ ಸರ್ಕಾರದಿಂದ ಆಗಬೇಕು. ಭ್ರಷ್ಟಾಚಾರದ ವಿರುದ್ಧ ಆಡಳಿತವು ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರುವಲ್ಲಿ ಸಮಾಜದ ಸಜ್ಜನರ ಪಾತ್ರವೂ ಮಹತ್ವದ್ದು. ವೆಬ್‌ಸೈಟ್‌ನಲ್ಲಿ ಸಿಗುವ ಮಾಹಿತಿಗಳ ಮೇಲೆ ಸಮಾಜದ ಕಣ್ಗಾವಲು ಇದ್ದರೆ ಭ್ರಷ್ಟರನ್ನು ಬಯಲಿಗೆ ಎಳೆಯುವುದು ಇನ್ನಷ್ಟು ಸುಲಭವಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.