ಆಹಾರ ಭದ್ರತೆಯ ಅಗತ್ಯ ‘ದೇಶಕ್ಕೆ ಆಹಾರ ಭದ್ರತಾ ಕಾನೂನು ಬಂದಿದೆ. ಇನ್ನೇನು ಎಲ್ಲರೂ ಉಂಡುಟ್ಟು ನೆಮ್ಮದಿಯಾಗಿರುತ್ತಾರೆ’ ಎಂದು ಯಾರಾದರೂ ಭಾವಿಸಿದ್ದರೆ ಅದೊಂದು ತಪ್ಪು ಕಲ್ಪನೆಯಾಗಿದೆ ಮಾತ್ರ. ಕಾನೂನೇನೋ ಬಂತು. ಹಾಗೆಂದು ನೆಮ್ಮದಿ ಬರಲೇ ಇಲ್ಲ. ಇಂದಿನ ಆಹಾರ ಭದ್ರತಾ ಕಾನೂನಿಗೆ ಬಹುದೊಡ್ಡ ಹಿನ್ನೆಲೆ ಇದೆ. ದೇಶದ ಮೂಲೆ ಮೂಲೆಗಳಲ್ಲಿ ಆಹಾರದ ಭದ್ರತಾ ಕಾನೂನು ಬೇಕೆಂದು ಹೋರಾಟಗಳು ನಡೆದಿವೆ. ಹಳ್ಳಿ ಹಳ್ಳಿ­ಗಳ ಜನರು ತಮಗೆಂಥ ಆಹಾರ ಬೇಕೆಂದು ಪತ್ರ ಚಳವಳಿ, ಸಹಿ ಆಂದೋಲನ, ಮೆರವಣಿಗೆ, ಧರಣಿ­ಗಳ ಮೂಲಕ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಚುನಾವಣಾ ಭರವಸೆ­ಯನ್ನು ಕೊಟ್ಟಿದ್ದ ಯುಪಿಎ ಸರ್ಕಾರ ಅಳೆದೂ ಸುರಿದೂ ತಾನು ಗದ್ದುಗೆಯಿಂದ ನಿರ್ಗಮಿಸುವ ಹೊತ್ತಿಗೆ ಆಹಾರ ಭದ್ರತಾ ಮಸೂದೆಯನ್ನು ಕಾನೂನನ್ನಾಗಿಸಿ ಹೋಯಿತು. ಮುಂದಿನ ಪಾತ್ರ ಎನ್‌ಡಿಎ ಸರ್ಕಾರದ್ದು. ‘ದೇಶದ ಸಮಗ್ರತೆ ಮತ್ತು ಸಾರ್ವಭೌಮತೆಗಾಗಿ ಸಾರ್ವತ್ರಿಕ ಆಹಾರ ಭದ್ರತೆಗೆ ಬದ್ಧ. ಆಹಾರ ಭದ್ರತೆಯ ಎಲ್ಲಾ ಯೋಜನೆಗಳೂ ಜನರನ್ನು ತಲುಪುತ್ತವೆ. ಅದು ಕೇವಲ ಕಾಗದದ ಆಹಾ­ರದ ಹಕ್ಕಾಗಿ ಉಳಿಯುವುದಿಲ್ಲ’ಎಂದು ತನ್ನ ಚುನಾ­ವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಬಿಜೆಪಿ, ಅಧಿಕಾರಕ್ಕೆ ಬಂದ ನಂತರದ ದಿನಗಳಲ್ಲಿ ಆಹಾರ ಭದ್ರತೆಯ ಬಗ್ಗೆ ಮಾತಾಡುವುದನ್ನೇ ಬಿಟ್ಟಿತು. ಪಾರ್ಲಿಮೆಂಟಿನಲ್ಲಿ ಸಾರ್ವಾನುಮತ­ದಿಂದ ಪಾಸಾಗಿರುವ, ತಕ್ಷಣದಿಂದಲೇ ಜಾರಿ­ಯಾಗಬೇಕಿದ್ದ ಆಹಾರ ಭದ್ರತಾ ಕಾನೂನನ್ನು ಜಾರಿಗೊಳಿಸಲು ಅದು ರಾಜ್ಯಗಳಿಗೆ ಜುಲೈ ನಂತರವೂ ೩-೪ ತಿಂಗಳುಗಳ ಅವಕಾಶವನ್ನು ನೀಡಿದೆ. ಆಹಾರದ ಸಬ್ಸಿಡಿಗೆ ಹಿಂದಿನ ಸರ್ಕಾರ ಅಂದಾಜು ಹಾಕಿದ್ದು ₨೧,೩೨,೦೦೦ ಕೋಟಿ. ಈಗಿನ ಸರ್ಕಾರ ಇಟ್ಟಿರುವ ಮೊತ್ತ, ₨ ೧,೧೫,೦೦೦ ಕೋಟಿ ಮಾತ್ರ. ದೇಶದ ಶೇ ೯೦ಕ್ಕೂ ಹೆಚ್ಚು ಮಹಿಳೆಯರು ಅಸಂಘಟಿತ ವಲಯದಲ್ಲೇ ಇದ್ದಾರೆ. ಅಂಥವ­ರಿಗೆ ಗರ್ಭಧಾರಣೆ ಮತ್ತು ಹೆರಿಗೆಗಾಗಿ ಯಾವುದೇ ರೀತಿಯ ರಜೆಯಾಗಲೀ, ಭತ್ಯೆಯಾ­ಗಲೀ ಸಿಗುತ್ತಿಲ್ಲ. ಅಂಥವರ ಬೆಂಬಲಕ್ಕೆ ನಿಂತಿರುವ ಆಹಾರ ಭದ್ರತಾ ಕಾನೂನು ಗರ್ಭಧಾರಣೆ ಮತ್ತು ಹೆರಿಗೆಯ ಅವಧಿಯಲ್ಲಿ ₨೬೦೦೦ ಪಡೆ­ಯಬೇಕೆಂದು ಹೇಳಿದೆ. ದೇಶದ ೫೨ ಜಿಲ್ಲೆಗಳಲ್ಲಿ ಪ್ರಾಯೋಗಿಕ ಹಂತದಲ್ಲಿ ಮಾತ್ರ ಇದು ಜಾರಿ­ಯಾಗಿದೆ. ಇಡೀ ದೇಶದಲ್ಲೂ ಈ ಯೋಜನೆ ಜಾರಿಗೊಳ್ಳಲು ₨೧೫,೦೦೦ ಕೋಟಿ ಬೇಕು. ಶಿಶು­ಮರಣ ಮತ್ತು ಮಗುವಿನ ಅಪೌಷ್ಟಿಕತೆ ತಡೆಯಲು ನವಜಾತ ಶಿಶುವಿಗೆ ಆರು ತಿಂಗಳ­ವರೆಗೆ ಹಾಲೂಡುವುದು ಅತ್ಯವಶ್ಯ ಎನ್ನುವು­ದನ್ನು ಸರ್ಕಾರ ಗುರುತಿಸಿದ್ದರೂ ಇದಕ್ಕಾಗಿ ಮೀಸಲಿಟ್ಟಿರುವ ಹಣ ಕೇವಲ ₨೪೦೦ ಕೋಟಿ. ಇಂದಿನ ಪ್ರಧಾನಿಯವರು ಹಿಂದೆ ಮುಖ್ಯ­ಮಂತ್ರಿ­ಯಾಗಿದ್ದಾಗ ಜನರನ್ನು ಗುರಿಗುಂಪು­ಗಳ­ನ್ನಾಗಿ ಮಾಡುವುದನ್ನು ವಿರೋಧಿಸಿದ್ದರು. ಆದರೆ ಇಂದಿನ ವಿತ್ತ ಮಂತ್ರಿಗಳು ಹಿಂದಿನ ಸರ್ಕಾರದ ನೀತಿಯನ್ನೇ ಪುನರುಚ್ಚರಿಸುತ್ತಿದ್ದಾರೆ. ‘ಆಹಾರ ಮತ್ತು ಪೆಟ್ರೋಲಿಯಮ್ ಸಬ್ಸಿಡಿಗಳನ್ನು ಒಂದೊಂ­ದಾಗಿ ಕಡಿಮೆ ಮಾಡುತ್ತ ಹೆಚ್ಚೆಚ್ಚು ಗುರಿಗುಂಪಿಗೆ ಮಾತ್ರ ಕೊಡುವ ಉದ್ದೇಶವಿದೆ’ ಎಂದು ಅವರು ತಮ್ಮ ಬಜೆಟ್ ಭಾಷಣದಲ್ಲಿ ಹೇಳುತ್ತಾರೆ. ತಮ್ಮ ಚುನಾವಣಾ ಪ್ರಣಾಳಿಕೆ­ಯಲ್ಲಿ ಸಾರ್ವತ್ರೀಕರಣದ ಬಗ್ಗೆ ಪ್ರಚಾರ ಮಾಡಿ­ದವರು ತಮ್ಮ ಮಾತುಗಳನ್ನು ಇಷ್ಟು ಬೇಗ ಮರೆತುಬಿಟ್ಟರೇ? ಜನರನ್ನು ಗುರಿಗುಂಪು ಮಾಡಿ ಕೆಲವೇ ಜನರಿಗೆ ಆಹಾರ ಕೊಡುವ ಪದ್ಧತಿ ಯಾವ ದೇಶದಲ್ಲೂ ಯಶಸ್ವಿಯಾಗಿಲ್ಲ ಎಂದು ವಿಶ್ವ ಬ್ಯಾಂಕಿನ ಅಧ್ಯಯನಗಳು ಹೇಳಿದ್ದರೂ ನವನವೀನ ಯೋಜನೆಗಳಿಂದ ಹೊರಹೊಮ್ಮು­ತ್ತಿರುವ ಹೊಸ ಸರ್ಕಾರ ಮಾತ್ರ ಆ ಹಳೆಯ ಚಾಳಿಗೇ ಅಂಟಿರುವುದು ಚೋದ್ಯವೇ ಸರಿ. ಆಹಾರದ ಬೆಲೆ ಶರವೇಗದಿಂದ ಏರುತ್ತಿ­ದ್ದರೂ ಮಧ್ಯಾಹ್ನದ ಬಿಸಿಯೂಟ ಮತ್ತು ಐಸಿಡಿಎಸ್ ಗಳಿಗಾಗಿ ಇಟ್ಟಿರುವ ಬಜೆಟ್ ಹಣ­ದಲ್ಲಿ ಹೆಚ್ಚಳವಾಗಿಲ್ಲ. ಮಕ್ಕಳ ನಿತ್ಯದ ಊಟ­ಕ್ಕಾಗಿ ನೀಡುವ ಖರ್ಚು, ಅಂಗನವಾಡಿಯ ಪೂರಕ ಆಹಾರಕ್ಕಾಗಿ ಕೊಡಮಾಡುವ ಸಹಾ­ಯ­­ಧನ­ವನ್ನು ಸರ್ಕಾರವು ಹೆಚ್ಚಿಸುತ್ತಿಲ್ಲ. ವಿಕಲಾಂ­ಗರು, ವೃದ್ಧರು, ವಿಧವೆಯರಂಥ ಕಡು ಬಡ ಕುಟುಂಬಗಳಿಗೆ ಸಾಮಾಜಿಕ ಭದ್ರತೆಗಾಗಿ ಕೂಡ ಬಜೆಟ್‌ನಲ್ಲಿ ಇಟ್ಟಿದ್ದು ಸಾಕಾಗುವಷ್ಟಿಲ್ಲ. ಗತಿಹೀನರಿಗಾಗಿ ಆಹಾರ ಭದ್ರತಾ ಕಾನೂನಿನಲ್ಲಿ ಪ್ರಸ್ತಾಪ ಮಾಡಿರುವ ಸಮುದಾಯ ಅಡುಗೆ­ಮನೆಯ ಬಗ್ಗೆ ಪ್ರಸ್ತಾಪವೇ ಇಲ್ಲ. ಉದ್ಯೋಗ ಖಾತರಿಗಾಗಿ ಇಟ್ಟಿರುವ ಬಜೆಟ್ ಕುಸಿದಿದೆ. ‘ಆಹಾರ ಭದ್ರತಾ ಸುಗ್ರೀವಾಜ್ಞೆಯು ದೇಶದ ನಾಗರಿಕರಿಗೆ ದಿನಕ್ಕೆ ಒಂದು ಊಟದ ಖಾತ್ರಿ­ಯನ್ನೂ ಕೊಡುವುದಿಲ್ಲವಲ್ಲ ಎಂದು ನನಗೆ ಬಹಳ ನೋವಾಗಿದೆ’ ಎಂದು ಅಂದು ಗುಜ­ರಾ­ತಿನ ಮುಖ್ಯಮಂತ್ರಿ ಆಗಿದ್ದಾಗ ನರೇಂದ್ರ ಮೋದಿ­ಯ­ವರು ಅಂದಿನ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಪತ್ರ ಬರೆದಿ­ದ್ದರು. ಕಾನೂನು ಇನ್ನೂ ಹೆಚ್ಚಿನದನ್ನು ಕೊಡಬೇ­ಕೆಂದು ಒತ್ತಾಯಿ­ಸುತ್ತ ಮುರಳಿ ಮನೋಹರ ಜೋಶಿಯವರು ‘ಪ್ರತಿಯೊಬ್ಬ ನಾಗರಿಕನಿಗೆ ೧೦ ಕೆ.ಜಿ. ಧಾನ್ಯ, ೨.೫ ಕೆ.ಜಿ. ಬೇಳೆ, ೯೦೦ ಗ್ರಾಂ ಎಣ್ಣೆಯು ಪ್ರತಿ ತಿಂಗಳೂ ಸಿಗಬೇಕು’ ಎಂಬ ಪ್ರಸ್ತಾವವನ್ನು ಪಾರ್ಲಿಮೆಂಟಿ­ನಲ್ಲಿ ಇಟ್ಟಿದ್ದರು. ಮಾತುಗಳು ಹೇಗೆ ಬದಲಾಗು­ತ್ತವೆ ನೋಡಿ, ‘ಭಾರತೀಯ ಆಹಾರ ನಿಗಮವು ಸರಿಯಾದ ವ್ಯವಸ್ಥೆಯಿಲ್ಲದೆ ಒದ್ದಾಡುತ್ತಿದೆ. ಕಾರಣ, ನೇರ ನಗದು ವರ್ಗಾ­ವಣೆಯನ್ನು ಎಲ್ಲ ರಾಜ್ಯಗಳಿಗೂ ವಿಸ್ತರಿಸುವುದು ಒಂದೇ ಮಾರ್ಗವೆನಿಸುತ್ತದೆ. ಹಣ ವರ್ಗಾವಣೆ ಅಥವಾ ಆಹಾರ ಕೂಪನ್‌­ಗಳಂ­ಥವು ನಮ್ಮ ಆಹಾರದ ನೀತಿಗೆ ಬಲ ಕೊಡುವುದು ಮತ್ತು ಜನರ ಅವಶ್ಯಕತೆಗಳನ್ನು ಪೂರೈಸುವುದಲ್ಲದೆ ವಿತ್ತೀಯ ಸಂಕಟಕ್ಕೂ ಉತ್ತರವಾಗಲಿದೆ. ನೇರ ನಗದು ವರ್ಗಾವಣೆ ಮತ್ತು ಆಹಾರ ಕೂಪನ್‌ಗಳು ಆಹಾರ ನೀತಿಗೆ ಯಾವ ರೀತಿಯಲ್ಲಿ ಬಲ ಕೊಡಬಹುದು? ಸಾರ್ವತ್ರೀಕರಣದ ಭರವಸೆ ನೀಡಿ ಇರುವು ದನ್ನೂ ಪೂರ್ತಿ ಪ್ರಮಾಣದಲ್ಲಿ ಕೊಡದಿರು ವುದು ಕೇಂದ್ರ ಸರ್ಕಾರದ ನೀತಿಯಾದರೆ, ‘ನಾವು ಮಾಡಿದ್ದೇ ಆಹಾರ ಭದ್ರತೆ ಎನ್ನುವುದು ರಾಜ್ಯ ಸರ್ಕಾರದ ಧೋರಣೆ. ಕೇಂದ್ರ ಸರ್ಕಾರದ ಪೆಟ್ಟಿನಿಂದ ಹೇಗೆ ಸುಧಾರಿಸಿಕೊಳ್ಳುವುದು ಎಂದು ಯೋಚಿಸುತ್ತಿರುವಾಗಲೇ ರಾಜ್ಯ ಸರ್ಕಾರದ ಗುದ್ದು. ಆಹಾರ ಭದ್ರತಾ ಕಾನೂನಿನ ಪ್ರಕಾರ ಹಳ್ಳಿಯ ನೂರಕ್ಕೆ ೭೫ ಕುಟುಂಬಗಳಿಗೆ ಮತ್ತು ಶಹರದ ನೂರಕ್ಕೆ ೫೦ ಕುಟುಂಬಗಳಿಗೆ ಆಹಾರ ಹಂಚಿಕೆಯ ಪ್ರಸ್ತಾಪವಿದೆ. ಅವು ಆದ್ಯತಾ ಕುಟುಂಬಗಳು. ಅಂತ್ಯೋದಯ ಕಾರ್ಡುಗಳಿಗೆ ಬೇರೆಯದೇ ಲೆಕ್ಕವಿದೆ. ‘ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುಗಳೆಲ್ಲವೂ ಆದ್ಯತಾ ಪಟ್ಟಿಯಲ್ಲಿ ಸೇರುತ್ತದೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮಂತ್ರಿ ದಿನೇಶ್ ಗುಂಡೂ ರಾವ್ ಹೇಳಿದಾಗ ಇವರು ಈ ಕಾನೂನನ್ನು ಓದಿಯೇ ಇಲ್ಲವೇ ಎಂದು ಸೋಜಿಗವಾಗುತ್ತದೆ. ಉಳ್ಳವರ ಕೈಯಲ್ಲೇ ಬಹುತೇಕ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುಗಳು ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅವರನ್ನೇ ಆದ್ಯತಾ ಪಟ್ಟಿಯಲ್ಲೂ ಕೂಡ ಗಟ್ಟಿಯಾಗಿ ಕೂಡ್ರಿಸಿದಂತಾಯಿತು. ಆದ್ಯತಾ ಪಟ್ಟಿ ತಯಾರಿಸುವುದಕ್ಕೆ ಪೂರ್ವ ಭಾವಿಯಾಗಿ ಸರ್ಕಾರವು ಹಳ್ಳಿ ಹಳ್ಳಿಗಳಲ್ಲಿ ಕುಟುಂಬಗಳ ಸಾಮಾಜಿಕ ಆರ್ಥಿಕ ಸರ್ವೆಯ ಪಟ್ಟಿಯನ್ನು ತಯಾರಿಸಿಟ್ಟಿದೆ. (ಅಂತರ್ಜಾಲ­ದಲ್ಲಿ ಇದು ಲಭ್ಯ.) ಈ ಪಟ್ಟಿಯಲ್ಲಿ ಕೆಳಗಿನಿಂದ ಶೇ ೭೫ರಷ್ಟು ಕುಟುಂಬ ಗಳನ್ನೇ ತೆಗೆದುಕೊಂಡು ಪಂಚಾಯಿತಿ ಮಟ್ಟದಲ್ಲಿಯೇ ಆದ್ಯತಾ ಪಟ್ಟಿಗ­ಳನ್ನು ಮಾಡಬೇಕೆಂ ಬುದು ಮೂಲ ಉದ್ದೇಶ­ವಾಗಿತ್ತು. ಸಾಮಾಜಿಕ ಆರ್ಥಿಕ ಸರ್ವೆಯ ಪಟ್ಟಿ­ಯನ್ನು ಜನರ ಮುಂದಿಟ್ಟು ಗ್ರಾಮ ಸಭೆ­ಯಲ್ಲಿ ಜನರ ಮಧ್ಯೆ ಆದ್ಯತಾ ಪಟ್ಟಿಗಳು ತಯಾರಾ­ಗ­ಬೇಕು. ಕರ್ನಾ ಟಕ ರಾಜ್ಯ ಸರ್ಕಾರ ಇವೆಲ್ಲ ಪ್ರಕ್ರಿ­ಯೆಯನ್ನೂ ಬದಿಗೊತ್ತಿ ಈಗಿರುವ ಕಾರ್ಡು­ಗಳೇ ಆದ್ಯತಾ ಪಟ್ಟಿ ಎಂದು ಸಾರುವುದು ಸರ್ಕಾರ­ಕ್ಕಿರುವ ನಿಷ್ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಅನಧಿಕೃತ ಬಿಪಿಎಲ್ ಕಾರ್ಡುಗಳನ್ನು ತೆಗೆದುಹಾಕುವ ನಿಟ್ಟಿನಲ್ಲಿ ಸರ್ಕಾರದ ಕ್ರಮಗಳು ಮಾತ್ರ ತೀರಾ ಹಾಸ್ಯಾಸ್ಪದ ಸರ್ಕಸ್‌ಗಳೇ ಆಗಿದ್ದರೂ ಕಾರ್ಡುದಾರರನ್ನು ಇಕ್ಕಟ್ಟಿಗೆ ಸಿಲುಕಿಸಿ ರುವ ಸರ್ಕಸ್ಸುಗಳು ಅವು. ಕಾರ್ಡುದಾರರೆಲ್ಲ ತಮ್ಮ ಕಾರ್ಡ್ ನಂಬರು, ಚುನಾವಣಾ ಕಾರ್ಡಿನ ನಂಬರುಗಳನ್ನು ಎಸ್ಸೆಮ್ಮೆಸ್ ಮಾಡಬೇಕೆಂಬ ಆಜ್ಞೆ, ಆಧಾರ ನಂಬರನ್ನು ಕಡ್ಡಾಯವಾಗಿ ನಮೂದಿಸಬೇಕೆಂಬ ಷರತ್ತು, ಕಾರ್ಡುದಾರರಲ್ಲಿ ಅಲ್ಲೋಲಕಲ್ಲೋಲವನ್ನೇ ಮಾಡಿತು. ಒಂದು ಫೋನಿನಿಂದ ಮೂರು ಮೆಸೇಜ್ ಮಾಡಬಹು ದಂತೆ. ನಿಮ್ಮದೇ ಫೋನ್ ಅಲ್ಲದಿದ್ದರೂ ನಡೆಯು­ವು­ದಂತೆ. ₨೫೦ ಕ್ಕೆ ಒಂದೊಂದು ಮೆಸೇ­ಜು­ಗಳು ಮಾರಾಟವಾದವು. ನಿಮ್ಮದೇ ಫೋನಿನಲ್ಲಿ ನಿಮ್ಮದೇ ಮೆಸೇಜ್ ಮಾಡಿ ಕೊಡಲಿಕ್ಕೆ ಕೂಡ ₨೨೦ ರೇಟು. ಮೊಬೈಲ್ ಇಲ್ಲದ ಜನರು ದಿಕ್ಕೇ ತೋಚದಂತಾದರು. ಮೆಸೇಜ್ ಕಳಿಸಿದವರು ತಮ್ಮ ಮೆಸೇಜ್ ಮುಟ್ಟಿದೆಯೋ ಇಲ್ಲವೋ ಎಂದು ತಿಳಿಯದೇ ಗೊಂದಲಕ್ಕೊಳಗಾದರು. ಆಧಾರ ನಂಬರು ಕಡ್ಡಾಯ ಎಂದು ಆದೇಶ ಮಾಡಿ, ನಂತರ, ‘ಅದು ಕಡ್ಡಾಯವೇನೂ ಅಲ್ಲ’ ಎಂದು ಪತ್ರಿಕೆಗಳಲ್ಲಿ ಬಂದ ಹೇಳಿಕೆಗಳು ಇನ್ನಷ್ಟು ಪೇಚಿಗೆ ಸಿಲುಕಿಸಿವೆ. ಈ ಎರಡು ಮಾತುಗಳ ಅರ್ಥ ವೇನು? ‘ಕಾರ್ಡ್ ಬೇಕಿಲ್ಲದವರಿಗೆ ಆಧಾರ್ ಕಡ್ಡಾಯವಲ್ಲ, ಬೇಕೆಂದು ಅರ್ಜಿ ಹಾಕಿ­ದ­ವರಿಗೆ ಕಡ್ಡಾಯ ಎಂದೇ? ಆಧಾರ್ ಕಾರ್ಡ್ ಇದ್ದವರೆಲ್ಲ ಪ್ರತಿಗಳನ್ನು ಮಾಡುವ ಅಂಗಡಿಗೆ ದೌಡಾಯಿಸಿದರು, ಇನ್ನೂ ಕಾರ್ಡ್ ಬರದೇ ಇದ್ದವರು ತಲೆ ಮೇಲೆ ಕೈ ಹೊತ್ತು ಕುಳಿತರು. ಆಜ್ಞೆಗಳನ್ನು ಜಾರಿಗೆ ತರುವ ಅಧಿಕಾರಿಗಳಿಗೂ ಗೋಜಲು. ಕಡ್ಡಾಯವೆಂಬ ಆದೇಶವನ್ನು ಪಾಲಿಸಬೇಕೆ? ಅಥವಾ ಪತ್ರಿಕೆಯಲ್ಲಿ ಬಂದು ದನ್ನು ನಿಜವೆಂದು ನಂಬಬೇಕೆ? ಅವರವರ ಭಾವಕ್ಕೆ ಅವರವರ ಭಕುತೀಗೆ . . . . ಅವರವರ ತಿಳಿವಳಿಕೆಗೆ . . . ಅವರವರ ಅರ್ಥಕ್ಕೆ . . . ಸಂದರ್ಭವನ್ನು ಉಪಯೋಗಿಸಿಕೊಂಡು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನಲ್ಲಿ ಸುದ್ದಿ ಹಬ್ಬಿತು, ‘ಎಲ್ಲಾ ಅಂತ್ಯೋದಯ ಕಾರ್ಡ ಿನವರು ತಾಲ್ಲೂಕು ಕಚೇರಿಗೆ ಹೋಗಿ ಕಾರ್ಡ್ ಹಿಂತಿರುಗಿಸಿ ಬಿಪಿಎಲ್ ಕಾರ್ಡ್ ಪಡೀಬೇಕಂತೆ. ಇನ್ನುಮುಂದೆ ಅವರಿಗೆ ೩೫ ಕೆ.ಜಿ. ಬದಲಿಗೆ ೧೦ ಕೆ.ಜಿ. ಮಾತ್ರ.’ ಗಾಳಿಯಲ್ಲಿ ಹರಡಿದ ಸುದ್ದಿ ಕೇಳಿ ನಂಬಿದ ನಿಜ ಬಡವರು ಅದೂ ಸಿಗಲಿಕ್ಕಿಲ್ಲ ಎಂದು ದೌಡಾಯಿಸಿ ಮೈಲುದ್ದದ ಕ್ಯೂನಲ್ಲಿ ತಮ್ಮನ್ನು ನಿಲ್ಲಿಸಿಕೊಂಡರು. ಜನರಿಂದ ವಿರೋಧವಿಲ್ಲ ಎಂದು ಸರ್ಕಾರ ತಿಳಿಯುತ್ತದೆ. ಆದರೆ ಸ್ವಾಮಿ, ಉಣ್ಣುವ ಅನ್ನದ ವಿಚಾರ ಇದು. ‘ಇಷ್ಟೂ ಸಿಕ್ಕದಿದ್ದರೇನು ಗತಿ’ ಎಂದು ಅತ್ತಿಂದಿತ್ತ ಓಡುವು ದರಲ್ಲಿ ಮಗ್ನರಾದ ಜನತೆ ಪ್ರತಿಭಟನೆಯನ್ನು ಯಾವಾಗ ಮಾಡೀತು? ಹೇಗೆ ಮಾಡೀತು? ಕಾಳಿನ ಬದಲಿಗೆ ಕಾಸನ್ನು ಕೊಡುವ ವಿಚಾರವನ್ನು ದೇಶದ ಎಲ್ಲಾ ಕಡೆಯಿಂದ ನಾಗರಿಕರು ಒಕ್ಕೊರಲಿನಿಂದ ತಿರಸ್ಕರಿಸುತ್ತಲೇ ಬಂದಿದ್ದರೂ ಆ ವಿಚಾರವು ಕಾನೂನಿನೊಳಗೆ ನುಸುಳಿದೆ. ಆಹಾರ ಧಾನ್ಯವನ್ನು, ಊಟವನ್ನು ಆಯಾ ಜನರಿಗೆ ಒದಗಿಸುವುದಕ್ಕೆ ಸರ್ಕಾರಕ್ಕೆ ಸಾಧ್ಯವಾಗಲಿಲ್ಲವೆಂದಾದರೆ ‘ಫುಡ್ ಕೂಪನ್ ಅಥವಾ ‘ಆಹಾರ ಭದ್ರತಾ ಅಲೋವನ್ಸ್’ ಕೊಡುವ ವಿಚಾರವದು. ಕಾನೂನಿನಲ್ಲಿ ಸ್ಪಷ್ಟವಾಗಿ ಹೇಳಿರುವ ಆದ್ಯತಾ ಪಟ್ಟಿ ತಯಾರಿಸುವ ಜವಾಬ್ದಾರಿಯನ್ನು ಕೊಡವಿ ಕೊಳ್ಳುವ ನಮ್ಮ ಕರ್ನಾಟಕ ಸರ್ಕಾರವು ಒಳನುಸುಳಿಕೊಂಡಿರುವ ನೇರ ನಗದು (ಕ್ಯಾಶ್ ಟ್ರಾನ್ಸ್‌ಫರ್) ನಂಥ ಚಿಕ್ಕ ಪದವನ್ನೇ ಆದ್ಯತೆಯಾಗಿ ಸ್ವೀಕರಿಸಿ ಆಗಲೇ ಬ್ಯಾಂಕುಗಳ ಅಧಿಕಾರಿಗಳ ಜೊತೆ ಮಾತುಕತೆ ಆರಂಭಿಸಿದೆ. ಮೂರು ಜಿಲ್ಲೆಗಳಲ್ಲಿ ಸೀಮೆ ಎಣ್ಣೆಯ ಬದಲು ಅವರವರ ಖಾತೆಗೆ ನೇರ ನಗದು ಮಾಡಲು ಆಜ್ಞೆಯನ್ನೂ ಹೊರಡಿಸಿದೆ. ಆದೇಶದಲ್ಲಿ, ‘ರಾಜಸ್ತಾನ ಸರ್ಕಾರವು ಸೀಮೆ ಎಣ್ಣೆಯ ನೇರ ನಗದನ್ನು ಯಶಸ್ವಿಯಾಗಿ ಜಾರಿಯಲ್ಲಿ ತಂದು ಶೇ ೮೦ರಷ್ಟು ಸೋರಿಕೆಯನ್ನು ತಡೆಹಿಡಿದಿದೆ ಎಂದು ಉದಾಹರಿಸುವ ನಮ್ಮ ಸರ್ಕಾರ ಅದೇ ರಾಜಸ್ತಾನ ಯಶಸ್ವಿಯಾಗಿ ಜಾರಿಯಲ್ಲಿ ತಂದಿರುವ ಉಚಿತ ಔಷಧ ಸೇವೆಯನ್ನು ಮಾದರಿಯಾಗಿ ನೋಡುತ್ತಿಲ್ಲ. ಪಡಿತರ ಚೀಟಿಗಾಗಿ ಅರ್ಜಿಗಳನ್ನು ಆನ್ ಲೈನ್ ಮೂಲಕ ಸಲ್ಲಿಸಲು ಕೇಳುವುದು ಕೂಡ ಜನರಿಗೆ ತೊಂದರೆ ಕೊಡಲೆಂದೇ ಬಂದಿರುವ ಇನ್ನೊಂದು ಹಾಸ್ಯಾಸ್ಪದ ಸರ್ಕಸ್ಸೇ ಸರಿ. ಸರ್ಕಾರ ಬದಲಾದರೂ ಕೂಡ ಈ ಆದೇಶ ಬದಲಾಗದಿರುವುದು ಆಶ್ಚರ್ಯವನ್ನು ಉಂಟು ಮಾಡುತ್ತದೆ. ಹಳ್ಳಿ ಹಳ್ಳಿಯಲ್ಲಿ ಇಂಟರ್ ನೆಟ್ ಸೌಲಭ್ಯ ಇದೆ, ಪ್ರತಿ ಬಡವರ ಕೈಯಲ್ಲೂ ಮೊಬೈಲ್ ಇದೆ, ಅದನ್ನು ಬಳಸಲು ಬರುತ್ತದೆ ಎಂದು ತಿಳಿದಿರುವ ರಾಜ್ಯದ ಅಧಿಕಾರಿವರ್ಗ, ಗೋದಾಮಿನಿಂದ ರೇಶನ್ ಅಂಗಡಿಯವರೆಗಿನ ಮಾಲು ಹೋಗುವ ಜಾಡು ಕಂಡುಹಿಡಿಯ ಬಹುದಾದ ಜಿಪಿಎಸ್ ಮಾಡಲಿಕ್ಕೆ ಮಾತ್ರ ಇನ್ನೂ ತಯಾರಿ ಮಾಡಿಕೊಂಡಿಲ್ಲ. ಅದಕ್ಕೆ ಇಂಟರ್ ನೆಟ್ ಸೌಲಭ್ಯ ಇಲ್ಲವೇ? ಅಕ್ರಮ ಪಡಿತರ ಚೀಟಿಗಳನ್ನು ತೆಗೆದು ಹಾಕುವುದು ಪ್ರತಿ ನಿತ್ಯ ಪತ್ರಿಕೆಗಳಲ್ಲಿ ದೊಡ್ಡ ಸುದ್ದಿ. ಹಿಂದೆ ನ್ಯಾ.ಸಂತೋಷ್ ಹೆಗ್ಡೆಯವರು ಲೋಕಾಯುಕ್ತರಾಗಿದ್ದಾಗ ಡಾ. ಬಾಲ ಸುಬ್ರ ಮಣಿಯಮ್ ನೇತೃತ್ವದ ತಂಡ ಪಡಿತರ ಚೀಟಿ ಗಳ ಅಕ್ರಮವನ್ನೆಲ್ಲ ಬಯಲಿಗೆ ತಂದಿತ್ತು. ಬೋಗಸ್ ಕಾರ್ಡುಗಳೆಷ್ಟು? ಯಾವುವು? ಎಂದು ಆಧಾರ ಸಹಿತವಾಗಿ ದಾಖಲಿಸಿತ್ತು. ಆದರೆ ಆ ವರದಿಯನ್ನು ಕತ್ತಲಿನ ಕೂಪಕ್ಕೆ ತಳ್ಳಿ ಬೋಗಸ್ ಕಾರ್ಡ್‌ಗಳ ವಿಲೇವಾರಿಗೆ ನಿತ್ಯ ಒಂದು ಹೊಸ ಪ್ರಯೋಗ ಮಾಡುತ್ತ ಜನ ಸಾಮಾನ್ಯರಿಗೆ ಅದರಲ್ಲೂ ಬಡವರಿಗೆ ಒದ್ದಾಟ ವನ್ನೇ ಹಚ್ಚಿದೆ ಸರ್ಕಾರ. ಕೇಂದ್ರ ಸರ್ಕಾರದ ಕಾನೂನು ಕೊಡಮಾಡು ವುದಕ್ಕಿಂತ ಹೆಚ್ಚಿನದನ್ನು ಆಯಾ ರಾಜ್ಯ ಸರ್ಕಾರಗಳು ಕೊಡಬಹುದು ಎಂದು ಕಾನೂನು ಹೇಳುತ್ತದೆ. ಛತ್ತೀಸಗಡ ರಾಜ್ಯ ಮತ್ತು ಪಕ್ಕದ ತಮಿಳುನಾಡು ರಾಜ್ಯಗಳು ಈಗಾಗಲೆ ನಾಗರಿಕರ ಆಹಾರ ಭದ್ರತೆಯತ್ತ ದಿಟ್ಟ ಹೆಜ್ಜೆ ಇರಿಸಿವೆ ತನ್ನ ಜನರಿಗೆ ಆಹಾರ ಭದ್ರತೆ ಒದಗಿಸುವತ್ತ. ಆದರೆ ಕರ್ನಾಟಕ ಸರ್ಕಾರದ್ದು ಮಾತ್ರ ಶೋಚನೀಯ ಸೋಲು. ಕಾಳ ಸಂತೆಯ ಖದೀಮರ ಬಿಗಿ ಮುಷ್ಟಿಯಿಂದ ಸರ್ಕಾರ ಹೊರಬಂದೇ ಇಲ್ಲ ಎನ್ನುವುದನ್ನು ಇದು ಎತ್ತಿ ತೋರಿಸುತ್ತದೆ. ಬೆಂಗ ಳೂರಿನಲ್ಲಿ ಫುಡ್ ವರ್ಲ್ಡ್ ನಂಥ ಕಾರ್ಪೊ ರೇಟ್ ಅಂಗಡಿಗಳಲ್ಲಿ ಪಡಿತರ ವಿತರಣೆ ಆರಂಭ ಮಾಡಿದ್ದು, ಹಳ್ಳಿಯ ರೇಷನ್ ಅಂಗಡಿ ಮುಂದೆ ಕ್ಯೂ ಹಚ್ಚಿ ನಿಂತವರಿಗೆ, ‘ಇಂದಿಲ್ಲ, ನಾಳೆ ಬಾ’ ‘ನಿನ್ನ ಕಾರ್ಡು ಸರಿಯಾಗಿಲ್ಲ ಸರಿ ಮಾಡಿ ಸ್ಕೊಂಡು ಬಾ’ ‘ನಿನ್ನ ಕಾರ್ಡು ಡಿಲೀಟಾಗಿ ಹೋಗಿದೆ’ ‘ನಿನ್ನ ಹೆಬ್ಬೆರಳು ಗುರುತನ್ನು ಕಂಪ್ಯೂಟರು ಗುರುತಿಸ್ತಿಲ್ಲ’ ‘ಇವೊತ್ತು ಹೆಬ್ಬೆರಳು ಕೊಟ್ಟು ಹೋಗು, ರೇಷನ್ ಒಯ್ಯಲು ನಾಳೆ ಬಾ’ ‘ನೀವು ಮೆಸೇಜ್ ಕಳಿಸಿಲ್ಲವಾ? ಹಾಗಾದ್ರೆ ರೇಷನ್ ಇಲ್ಲ’ ‘ಈ ತಿಂಗಳಿನಿಂದ ಅಂತ್ಯೋದಯ ಕಾರ್ಡ್‌ ಎಲ್ಲಾ ಬಿಪಿಎಲ್ ಆಗಿಬಿಡುತ್ತವೆ’ ಪ್ರತಿ ನಿತ್ಯ ಒಂದೊಂದು ಸುದ್ದಿ. ರೇಷನ್ನೇ ನಂಬಿರುವ ವರಿಗೆ ಜೀವ ತಲ್ಲಣಗೊಳಿಸುವಂಥ ಸುದ್ದಿಗಳು. ಈ ಬಾರಿ ರೇಷನ್ ಸಿಗುತ್ತೋ ಇಲ್ಲವೋ ಎಂದು ಹೆದರುತ್ತಲೇ ಅಂಗಡಿಗೆ ಹೋಗುವಂಥ ಪ್ರಸಂಗಗಳು ಸೂಚಿಸುವುದೇನನ್ನು? ಮೋದಿಯವರ ಸರ್ಕಾರವು ಪಡಿತರದ ಸಾರ್ವತ್ರೀಕರಣದ ವಚನ ನೀಡಿ ದೊಡ್ಡ ಪ್ರಮಾಣದಲ್ಲಿ ಆರಿಸಿ ಬಂದು ಈಗ ವಚನ ಮರೆ ಯುವುದು ವಂಚನೆಯಾಗುತ್ತದೆ. ಸಮಾಜದಲ್ಲಿ ದುರ್ಬಲ ಕುಟುಂಬಗಳಿಗೆ ಆಹಾರ ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸುವುದು ಸರ್ಕಾರದ ಕರ್ತವ್ಯ ಮತ್ತು ಅದಕ್ಕೆ ಅದು ಬದ್ಧವಾಗಿದ್ದುಕೊಂಡು ತಕ್ಷಣವೇ ರಾಷ್ಟ್ರೀಯ ಆಹಾರ ಭದ್ರತಾ ಕಾನೂನನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲೇಬೇಕು. ತಮಿಳುನಾಡು, ಛತ್ತೀಸಗಢದ ಮಾದರಿಯನ್ನು ಇಡೀ ದೇಶಕ್ಕೆ ವಿಸ್ತರಿಸುವುದು ಕಷ್ಟವಲ್ಲ. ಅಭಿವೃದ್ಧಿಯತ್ತ ದಾಪುಗಾಲು ಹಾಕಲು ಸಶಕ್ತ ದೇಹಧಾರ್ಡ್ಯ ಬೇಕು. ಅಂತೆಯೇ ೩೦ ಕೆ.ಜಿ. ಅಕ್ಕಿ ಎಂದು ಘೋಷಿಸಿರುವ ರಾಜ್ಯ ಸರ್ಕಾರ ಆ ಘೋಷಣೆಯಲ್ಲಿರುವ ಕಳಕಳಿಯನ್ನು ಉಳಿಸಿ ಕೊಂಡು ಹೋಗಬೇಕು. ನಿಮ್ಮ ಅನಿಸಿಕೆ ತಿಳಿಸಿ: @.. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.