ಕಾಲದ ಜತೆ ಬದಲಾವಣೆ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (ಆರ್‌ಟಿಒ) ಭ್ರಷ್ಟಾಚಾರ ರಾಜಾರೋಷವಾಗಿ ನಡೆಯುತ್ತದೆ, ಲಂಚ ಮತ್ತು ವಶೀಲಿಬಾಜಿ ಇದ್ದರೆ ಏನು ಬೇಕಾದರೂ ‘ಕೊಳ್ಳಬಹುದು’ ಎಂಬುದು ಬಹುತೇಕರ ಅನುಭವ. ಇದಕ್ಕೆ ಎಲ್ಲೋ ಅಲ್ಲೊಂದು ಇಲ್ಲೊಂದು ಅಪವಾದ ಇರಬಹುದು. ಇದರ ಜತೆಗೆ ರಸ್ತೆಗಳಲ್ಲಿ ಇಲ್ಲಸಲ್ಲದ ನೆಪದಲ್ಲಿ ವಾಹನ ಸವಾರರನ್ನು ಗೋಳಾಡಿಸುವ, ದಂಡ ಜಡಿಯುವ ಸಂಚಾರ ಪೊಲೀಸರ ಸಂಖ್ಯೆಯೂ ಬೇಕಾದಷ್ಟಿದೆ. ಈ ಎರಡೂ ಇಲಾಖೆಗಳಲ್ಲಿ ಪಾರದರ್ಶಕತೆಯ ಕೊರತೆ ಕಾಣುತ್ತಿದೆ. ಇಂಥ ಪ್ರವೃತ್ತಿಗೆ ಕೊನೆ ಹಾಡಿ, ಸಾರಿಗೆ ಕಚೇರಿ ಸಿಬ್ಬಂದಿಗಳ ಮತ್ತು ಸಂಚಾರ ಪೊಲೀಸರ ಸ್ವೇಚ್ಛಾಚಾರದ ವರ್ತನೆಗೆ ಕಡಿವಾಣ ಹಾಕುವ ದಿನಗಳು ಎಂದು ಬರುತ್ತವೆ ಎಂದು ನಾಗರಿಕರು ಕಾಯುತ್ತಲೇ ಇದ್ದರು. ಇದು ಈಗ ಕೇಂದ್ರ ಸರ್ಕಾರದ ಗಮನಕ್ಕೂ ಬಂದಿದೆ. ಅದಕ್ಕಾಗಿಯೇ ಕೇಂದ್ರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಲು ತೀರ್ಮಾನಿಸಿದೆ. ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಈ ಕುರಿತ ಮಸೂದೆ ಮಂಡಿಸಲಾಗುವುದು ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಬಹಿರಂಗಪಡಿಸಿದ್ದಾರೆ. ಅಮೆರಿಕ, ಕೆನಡಾ, ಸಿಂಗಪುರ, ಜರ್ಮನಿ, ಜಪಾನ್‌ ಮತ್ತು ಬ್ರಿಟನ್‌ಗಳಲ್ಲಿ ಇರುವ ಮೋಟಾರು ವಾಹನ ಕಾಯ್ದೆಗಳನ್ನು ಅಭ್ಯಸಿಸಿ ಮಸೂದೆ ಸಿದ್ಧಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಆನ್‌ಲೈನ್‌ ಮೂಲಕ ಚಾಲನಾ ಪರವಾನಗಿ ನೀಡಿಕೆ, ಕ್ಯಾಮೆರಾಗಳು ಸೆರೆ ಹಿಡಿದ ದೃಶ್ಯಗಳನ್ನು ಆಧರಿಸಿ ಸಂಚಾರ ನಿಯಮ ಉಲ್ಲಂಘನೆಗೆ ದಂಡ, ಅಂತರರಾಷ್ಟ್ರೀಯ ಮಾದರಿಯಂತೆ ವಾಹನ ವಿನ್ಯಾಸ, ಮಾಲಿನ್ಯ ನಿಯಂತ್ರಣದ ನಿಯಮಗಳನ್ನು ಇದು ಒಳಗೊಂಡಿರುತ್ತದೆ ಎಂದು ತಿಳಿಸಿದ್ದಾರೆ. ನಾಗರಿಕ ಸೇವೆಗಳಲ್ಲಿ ಭ್ರಷ್ಟಾಚಾರ ಮತ್ತು ಮನಸ್ವೇಚ್ಛೆ ನಿರ್ಧಾರಕ್ಕೆ ಕಡಿವಾಣ ಹಾಕುವ ಇಂಥದೊಂದು ಮಾರ್ಪಾಡು ತೀರಾ ಅಗತ್ಯವಾಗಿತ್ತು. ನಮ್ಮಲ್ಲಿ ಈಗಿರುವ ಕೇಂದ್ರ ಮೋಟಾರು ವಾಹನಗಳ ಕಾಯ್ದೆ 26 ವರ್ಷಗಳಷ್ಟು ಹಳೆಯದು. ಈ ಕಾಯ್ದೆ ರೂಪುಗೊಂಡ ಸಮಯ, ಸನ್ನಿವೇಶಕ್ಕೆ ಹೋಲಿಸಿದರೆ ಈಗ ಬಹಳಷ್ಟು ಬದಲಾವಣೆಗಳಾಗಿವೆ. ಆದರೆ ಅದಕ್ಕೆ ತಕ್ಕಂತೆ ಸಾರಿಗೆ ಕಚೇರಿ ಸಿಬ್ಬಂದಿಯ ಮನೋಭಾವ ಬದಲಾದಂತಿಲ್ಲ. ದರ್ಪ ಹೋಗಿಲ್ಲ. ವಾಹನ ಚಾಲನಾ ಪತ್ರ, ನೋಂದಣಿ, ಮಾಲೀಕತ್ವ ಬದಲಾವಣೆ, ಪರ್ಮಿಟ್‌ ಇತ್ಯಾದಿ ಸೇವೆಗಳನ್ನು ಮಧ್ಯವರ್ತಿಗಳ ಸಹಾಯವಿಲ್ಲದೆ ಪಡೆಯುವುದು ಸುಲಭವಲ್ಲ ಎನ್ನುವ ಸ್ಥಿತಿ ಇದೆ. ನಮ್ಮ ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾರಿಗೆ ಕಚೇರಿಗಳನ್ನು ಕಂಪ್ಯೂಟರೀ­ಕರಿಸ­ಲಾಗಿದೆ. ಬೆಂಗಳೂರು ನಗರದಲ್ಲಿ ಆನ್‌ಲೈನ್‌ ಮೂಲಕ ಕೆಲ ಸೇವೆಗಳನ್ನು ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ವಿವೇಚನಾ ಅಧಿಕಾರ ಬಳಕೆಗೆ ಅವಕಾಶ ಇರುವ ಸೇವೆಗಳಲ್ಲಿ ಪಾರದರ್ಶಕತೆ ಇನ್ನೂ ಪೂರ್ಣವಾಗಿ ಗೋಚರಿಸುತ್ತಿಲ್ಲ. ಜಿಲ್ಲಾ, ಉಪ ವಿಭಾಗ ಕೇಂದ್ರಗಳಲ್ಲಿರುವ ಆರ್‌ಟಿಒ ಕಚೇರಿಗಳ ಬಗ್ಗೆ ಈಗಲೂ ದೂರುಗಳು ಇದ್ದೇ ಇವೆ. ತಮ್ಮ ಬಳಿ ಬರುವವರು ಸರ್ಕಾರ ನಿಗದಿಪಡಿಸಿದ ಶುಲ್ಕ ತೆತ್ತಿರುತ್ತಾರೆ, ಅವರಿಗೆ ಕಾನೂನಿನ ಚೌಕಟ್ಟಿನಲ್ಲಿ ಸೇವೆ ಒದಗಿಸುವುದು ತಮ್ಮ ಕರ್ತವ್ಯ ಎಂಬ ಮನೋಭಾವದ ಸಿಬ್ಬಂದಿಗಳು ಕಮ್ಮಿ. ಅವರನ್ನು ಸರಿದಾರಿಗೆ ತರುವಲ್ಲಿಯೂ ಹೊಸ ಕಾಯ್ದೆ ಯಶಸ್ವಿಯಾದರೆ ಜನ ಸರ್ಕಾರವನ್ನು ಹಾಡಿಹೊಗಳಿಯಾರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.