ನೀತಿ ಸಂಹಿತೆ ಬೇಕು ಸುಪ್ರೀಂಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ಅವರನ್ನು ಕೇರಳದ ನೂತನ ರಾಜ್ಯಪಾಲರಾಗಿ ನೇಮಕ ಮಾಡಲಾ­ಗಿದೆ. ಈ ನೇಮಕಾತಿ ಸಾಧ್ಯತೆಯ ವಿಚಾರ ಕೆಲವು ದಿನಗಳ ಹಿಂದೆ ಬಹಿರಂಗ­ವಾಗುತ್ತಿದ್ದಂತೆಯೇ ರಾಜಕೀಯ ಹಾಗೂ ಕಾನೂನು ವಲಯಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು. ಆದರೂ ಈ ವಿರೋಧದ ದನಿಗಳನ್ನು ಕೇಂದ್ರ ಸರ್ಕಾರ ಗಣನೆಗೇ ತೆಗೆದುಕೊಳ್ಳದೆ ತನ್ನ ನಿರ್ಧಾರ ಜಾರಿಗೊಳಿಸಿದೆ. ಸದಾಶಿವಂ ಅವರು ಕಳೆದ ಏಪ್ರಿಲ್ ತಿಂಗಳಲ್ಲಷ್ಟೇ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾಗಿದ್ದರು. ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಯೊಬ್ಬರು ರಾಜ್ಯಪಾಲ ಹುದ್ದೆ ಪಡೆಯು­ತ್ತಿ­ರುವುದು ರಾಷ್ಟ್ರದಲ್ಲಿ ಇದೇ ಮೊದಲು ಎಂಬುದು ಇಲ್ಲಿ ವಿಶೇಷ. ಆದರೆ ಇದು ತಪ್ಪು ಮೇಲ್ಪಂಕ್ತಿಯಾಗಬಹುದು ಎಂಬಂಥ ಟೀಕೆ ಸರಿಯಾದುದೆ. ಏಕೆಂದರೆ ಸದಾಶಿವಂ ಅವರಿಗೆ ನಿವೃತ್ತಿ ನಂತರ ರಾಜ್ಯಪಾಲ ಹುದ್ದೆ ನೀಡಿಕೆ ಹಾಗೂ ಗೋಪಾಲ್ ಸುಬ್ರಮಣಿಯಂಗೆ ನ್ಯಾಯಮೂರ್ತಿ ಹುದ್ದೆ ನಿರಾಕ­ರಣೆ ಮೂಲಕ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ನ್ಯಾಯಾಂಗಕ್ಕೆ ರವಾ­ನಿ­ಸುತ್ತಿರುವ ಸಂದೇಶ ಸ್ಪಷ್ಟವಾಗಿಯೇ ಇದೆ. ವಾಸ್ತವವಾಗಿ ಶಿಷ್ಟಾಚಾರ ನಿಯಮಾವಳಿಗಳ ಪ್ರಕಾರ, ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಪ್ರಧಾನಿ ನಂತರ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ)ಗಳದ್ದು ನಾಲ್ಕನೇ ಸ್ಥಾನ. ರಾಷ್ಟ್ರಪತಿಗಳಿಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯ­ಮೂರ್ತಿ ಪ್ರತಿಜ್ಞಾ ವಿಧಿ ಬೋಧಿಸುತ್ತಾರೆ. ಇಂತಹ ಹುದ್ದೆ ಹೊಂದಿದ ನಂತರ ರಾಷ್ಟ್ರ­ಪತಿ­ಗಳ ಕೆಳಗೆ ರಾಜ್ಯಪಾಲರಾಗುವುದು ಸರಿಯಲ್ಲ. ನ್ಯಾಯಾಂಗದ ಅತ್ಯುನ್ನತ ಹುದ್ದೆಯನ್ನು ನಿಭಾಯಿಸಿದ ವ್ಯಕ್ತಿ ನಿವೃತ್ತಿಯ ನಂತರವೂ ಅದೇ ಘನತೆ ಹಾಗೂ ಸ್ಥಾನಮಾನ ಹೊಂದಿರಬೇಕೆಂಬ ನಿರೀಕ್ಷೆ ಹೊಂದುವುದು ಸರಿ­ಯಾ­ದುದೆ. ರಾಜ್ಯಪಾಲರ ಹುದ್ದೆಗೆ ಹೊಸ ಎನ್‌ಡಿಎ ಸರ್ಕಾರ ನೇಮಿಸಿದ ಮೊದಲ ರಾಜಕೀಯೇತರ ವ್ಯಕ್ತಿಯೂ ಆಗಿದ್ದಾರೆ ಪಿ. ಸದಾಶಿವಂ. ಬಿಜೆಪಿಯ ಈಗಿನ ಅಧ್ಯಕ್ಷ ಅಮಿತ್ ಷಾ ಅವರಿಗೆ ಎನ್‌ಕೌಂಟರ್ ಪ್ರಕರಣವೊಂದಕ್ಕೆ ಸಂಬಂಧಿ­ಸಿದಂತೆ ಅನುಕೂಲಕರವಾದ ತೀರ್ಪನ್ನು ನ್ಯಾ.ಸದಾಶಿವಂ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ನೀಡಿತ್ತು ಎಂಬುದನ್ನು ಜನತೆ ಮರೆತಿಲ್ಲ. ‘ಸಾಂವಿಧಾನಿಕ ಹುದ್ದೆ­ಯನ್ನು ಒಪ್ಪಿಕೊಳ್ಳುತ್ತಿದ್ದೇನೆ ಅಷ್ಟೆ ’ಎಂಬುದು ನ್ಯಾ .ಸದಾಶಿವಂ ಅವರ ಸಮರ್ಥನೆ. ಹಿಂದೆ ತೊಂಬತ್ತರ ದಶಕದಲ್ಲಿ ನಿವೃತ್ತ ಮುಖ್ಯ ನ್ಯಾಯ­ಮೂರ್ತಿ ರಂಗನಾಥ ಮಿಶ್ರಾ ಅವರನ್ನು ಕಾಂಗ್ರೆಸ್ ಸರ್ಕಾರ ರಾಜ್ಯಸಭೆಗೆ ಆಯ್ಕೆ ಮಾಡಿದ್ದೂ ವಿವಾದವಾಗಿತ್ತು. ಇಂತಹ ನೇಮಕಾತಿಗಳು ನ್ಯಾಯಾಂಗದ ವಿಶ್ವಾಸಾರ್ಹತೆಗೇ ಕುಂದು ತರುವಂತಹವು. ಹೀಗಾಗಿಯೇ, ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತಿಯಾಗಿ ಕನಿಷ್ಠ ಎರಡು ವರ್ಷ ಕಳೆದ ನಂತರವಷ್ಟೇ ನ್ಯಾಯಾಂಗ ಆಯೋಗಗಳು ಅಥವಾ ನ್ಯಾಯ ಮಂಡಳಿಗಳಿಗೆ ಅವರನ್ನು ನೇಮಕ ಮಾಡುವಂತಿರಬೇಕು ಎಂಬ ಬಗ್ಗೆ ಈ ಹಿಂದೆ ಬಿಜೆಪಿ ನಾಯಕರುಗಳೇ ಸಲಹೆಗಳನ್ನು ನೀಡಿದ್ದರು. ಇಂತಹದೊಂದು ಕಡ್ಡಾಯ ನೀತಿ ಸಂಹಿತೆಯನ್ನು ರೂಪಿಸಬೇಕಾದ ಅಗತ್ಯದ ಬಗ್ಗೆ ಈಗಲಾದರೂ ಚರ್ಚೆ­ಗಳು ನಡೆಯಬೇಕು. ನ್ಯಾಯಾಂಗದ ಸ್ವಾತಂತ್ರ್ಯವನ್ನು ಕಾಪಾಡಿ-­ಕೊಳ್ಳಲು ಇದು ಅತ್ಯಂತ ಅವಶ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.