ಗಂಗೆ ಉಳಿಸಿ ಗಂಗಾನದಿ ಪುನಶ್ಚೇತನ ಯೋಜನೆ ಕುರಿತು ಸುಪ್ರೀಂಕೋರ್ಟ್‌ ಅತ್ಯಂತ ಕಟುವಾದ ಮಾತುಗಳನ್ನಾಡಿದೆ. ಎನ್‌ಡಿಎ ಸರ್ಕಾರದ ಈ ಕನಸಿನ ಯೋಜನೆ ತೋರಿಕೆಗೆ ಮಾತ್ರ ಸೀಮಿತವಾಗಬಾರದು. ನಿಜವಾದ ಅರ್ಥದಲ್ಲಿ ರಚನಾತ್ಮಕ ಕ್ರಮಗಳನ್ನು ಕೈಗೊಂಡು, ಮುಂದಿನ ಪೀಳಿಗೆಗಾ­ದರೂ ನದಿ ಉಳಿಸಬೇಕೆಂದು ಹೇಳಿರುವುದು ಅತ್ಯಂತ ಸಮಯೋಚಿತ­ವಾ­ಗಿದೆ. ನದಿ ಶುಚಿಗೊಳಿಸಲು ಸಿದ್ಧಪಡಿಸಿರುವ ‘ಕ್ರಿಯಾ ಯೋಜನೆ’ ಗಮನಿಸಿ­ದರೆ ಈ ಕೆಲಸ ಪೂರ್ಣಗೊಳಿಸಲು 200 ವರ್ಷಗಳಾದರೂ ಹಿಡಿಯಲಿದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಪಕ್ಕಾ ಯೋಜನೆ ರೂಪಿಸಿ, ಕಾಲಮಿತಿಯೊಳಗೆ ಕಾರ್ಯಗತಗೊಳಿಸುವಂತೆ ಹೇಳಿರುವುದರಿಂದ ಸರ್ಕಾರಕ್ಕೆ ಹೊಣೆಗಾರಿಕೆ ನಿಗದಿಪಡಿಸಿದಂತಾಗಿದೆ. ಗಂಗಾ ನದಿ ಪುನಶ್ಚೇತನ ಸರ್ಕಾರಕ್ಕೆ ಸವಾಲಿನ ಕೆಲಸ. ಲೋಕಸಭೆ ಚುನಾವಣೆ ವೇಳೆ ವಾರಾಣಸಿ ಕ್ಷೇತ್ರ­ದಲ್ಲಿ ಈ ನದಿ ಸ್ವಚ್ಛತೆಯೇ ಪ್ರಮುಖ ವಿಷಯವಾಗಿತ್ತು. ಇಲ್ಲಿಂದ ಆಯ್ಕೆ­ಯಾಗಿರುವ ಪ್ರಧಾನಿ ನರೇಂದ್ರ ಮೋದಿ ‘ಗಂಗಾ ಪೂಜೆ’ ನೆರವೇರಿಸಿ ಜನರ ಮನಗೆದ್ದರು. ಕೊಟ್ಟ ಮಾತಿನಂತೆ ನದಿ ಸ್ವಚ್ಛತೆಗೆ ಪ್ರಧಾನಿ ಮುಂದಾ­ಗಿದ್ದಾರೆ. ಹಣಕಾಸು ಸಚಿವ ಅರುಣ್‌ ಜೇಟ್ಲಿ ಈ ಉದ್ದೇಶಕ್ಕೆ ಬಜೆಟ್‌ನಲ್ಲಿ ಎರಡು ಸಾವಿರ ಕೋಟಿ ರೂಪಾಯಿ ತೆಗೆದಿರಿಸಿದ್ದಾರೆ. ಉತ್ತರಾಖಂಡ, ಉತ್ತರಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳ ರೈತರಿಗೆ ಆಸರೆಯಾ­ಗಿ­ರುವ ಗಂಗಾ ನದಿ ಪುನಶ್ಚೇತನ ವಿಷಯದಲ್ಲಿ ಎನ್‌ಡಿಎ ಸರ್ಕಾರ ದೊಡ್ಡ ಮಟ್ಟದಲ್ಲಿ ಪ್ರಚಾರ ಪಡೆದುಕೊಂಡಿದೆ. ಗಂಗಾ ನದಿ ಶುದ್ಧೀಕರಣದ ಯೋಜನೆ ರೂಪುಗೊಂಡಿರುವುದು ಇದೇ ಮೊದ­ಲಲ್ಲ. ರಾಜೀವ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮೊದಲ ಬಾರಿಗೆ ‘ಗಂಗೆ ಮೈಲಿಗೆ’ ತೊಳೆಯುವ ಕೆಲಸಕ್ಕೆ ಕೈಹಾಕಿತ್ತು. ಈ ಉದ್ದೇಶ­ಕ್ಕಾಗಿ 1986ರಲ್ಲೇ ₨ 1,500 ಕೋಟಿ ಖರ್ಚು ಮಾಡಿತ್ತು. ಜಪಾನ್‌ ಕೂಡಾ ₨ 2,500 ಕೋಟಿ ನೆರವು ಕೊಟ್ಟಿದೆ. ವಿಶ್ವ ಬ್ಯಾಂಕ್‌ ದೊಡ್ಡ ಪ್ರಮಾ­ಣ­ದಲ್ಲಿ ಸಹಾಯ ಮಾಡಿದೆ. ಇಷ್ಟೊಂದು ಹಣ ಖರ್ಚು ಮಾಡಿದರೂ ಪ್ರಯೋ­ಜನವಾಗಿಲ್ಲ. ಮಾಲಿನ್ಯದಿಂದ ನದಿ ಎಳ್ಳಷ್ಟೂ ಮುಕ್ತವಾಗಿಲ್ಲ. ವಿವೇ­ಚ­ನಾ­ರಹಿತವಾಗಿ ಹಣ ಖರ್ಚು ಮಾಡುವುದರಿಂದ ಮಾಲಿನ್ಯ ನಿವಾ­ರಿ­ಸ­ಲಾ­ಗದು. ಸರ್ಕಾರ ಜನರನ್ನು ಭಾವನಾತ್ಮಕವಾಗಿ ಮರುಳು ಮಾಡದೆ ಇಚ್ಛಾ­ಶಕ್ತಿ ಪ್ರದರ್ಶಿಸಬೇಕು. ಸಮಸ್ಯೆಯ ಮೂಲಕ್ಕೆ ಕೈಹಾಕಬೇಕು. ಕಲುಷಿತ ನೀರನ್ನು ಸಂಸ್ಕರಿಸದೆ ನೇರವಾಗಿ ನದಿಗೆ ಬಿಡುತ್ತಿರುವ ಸ್ಥಳೀಯ ಸಂಸ್ಥೆಗಳು, ಉದ್ಯಮಗಳ ಮೇಲೆ ಮುಲಾಜಿಲ್ಲದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕಲುಷಿತ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವ ಸ್ಥಳೀಯ ಸಂಸ್ಥೆಗಳು, ಕಾರ್ಖಾನೆಗಳ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿರುವುದು ಸ್ವಾಗತಾರ್ಹ. ಈ ತಿಂಗಳ 24ರಂದು ನಡೆಯುವ ಮುಂದಿನ ವಿಚಾರಣೆ ಸಮಯದಲ್ಲಿ ನಿರ್ದಿಷ್ಟ ಯೋಜನೆ ಒಳಗೊಂಡ ಹೆಚ್ಚು­ವರಿ ಪ್ರಮಾಣ ಪತ್ರ ಸಲ್ಲಿಸುವಂತೆ ನ್ಯಾಯಾಲಯ ಹೇಳಿರುವುದು ಸೂಕ್ತ­ವಾಗಿದೆ. ಕೆರೆಕಟ್ಟೆಗಳು, ನದಿ, ಪರಿಸರ ಸಂರಕ್ಷಣೆ ಸರ್ಕಾರದ ಆದ್ಯ ಕರ್ತವ್ಯ. ಅದನ್ನು ಆದ್ಯತೆ ಮೇಲೆ ನೆರವೇರಿಸದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸಲಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.