ಇದು ಅಮಾನುಷ ಹತ್ಯೆ ಉತ್ತರ ಇರಾಕ್‌ ಮತ್ತು ಸಿರಿಯಾದಲ್ಲಿ ನೆಲೆಯೂರಿರುವ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರರು ಬ್ರಿಟನ್‌ನ ಸಾಮಾಜಿಕ ಕಾರ್ಯಕರ್ತ ಡೇವಿಡ್‌ ಹೇನ್ಸ್ ಎಂಬುವರ ಶಿರಚ್ಛೇದ ಮಾಡಿರುವುದು ಅತ್ಯಂತ ಹೇಯ ಕೃತ್ಯ. ಉಗ್ರರ ಸಿಟ್ಟಿರುವುದು ಅಮೆರಿಕ ಮತ್ತು ಬ್ರಿಟನ್‌ ಸರ್ಕಾರ­ಗಳ ಮೇಲೆ. ಆದರೆ ಅದನ್ನು ಆ ದೇಶಗಳ ಅಸಹಾಯಕ ಒತ್ತೆ­ಯಾಳು­­ಗಳ ಮೇಲೆ ತೀರಿಸಿಕೊಳ್ಳುವುದು ಅಕ್ಷಮ್ಯ. ಕತ್ತು ಕತ್ತರಿಸುವುದು, ಅದನ್ನು ಚಿತ್ರೀಕರಿಸಿ ವಿಡಿಯೊ ಬಿಡುಗಡೆ ಮಾಡುವುದು ಮಾನವತೆಗೊಂದು ಕಳಂಕ, ಉಗ್ರರ ವಿಕೃತ ಮನೋಭಾವದ ನಿದರ್ಶನ. ಶಿರಚ್ಛೇದಕ್ಕೆ ಒಳಗಾದ ಪಾಶ್ಚಾತ್ಯ ಒತ್ತೆಯಾಳುಗಳಲ್ಲಿ ಡೇವಿಡ್‌ ಮೂರನೆಯವರು ಮತ್ತು ಮೊದಲ ಬ್ರಿಟಿಷ್‌ ಪ್ರಜೆ. ಈ ಹಿಂದೆ ಅಮೆರಿಕದ ಪತ್ರಕರ್ತರಾದ ಜೇಮ್‌್ಸ ಫಾಲಿ ಮತ್ತು ಸ್ಟೀವನ್‌ ಸಾಟ್ಲಾಫ್‌ ಎಂಬುವರನ್ನೂ ಇದೇ ರೀತಿ ಶಿರಚ್ಛೇದ ಮಾಡ­­ಲಾಗಿತ್ತು. ಇದು ವಿಶ್ವಕ್ಕೊಂದು ಸವಾಲು. ಇದನ್ನು ಗಂಭೀರವಾಗಿ ಪರಿ­ಗಣಿ­ಸುವುದು ಅಗತ್ಯ. ಫಾಲಿ ಮತ್ತು ಸಾಟ್ಲಾಫ್‌ ಅವರು ಪತ್ರಿಕೆಗಳಿಗೆ ವರದಿ ಮಾಡಲು ಇರಾಕ್‌, ಸಿರಿಯಾಗೆ ಹೋದಾಗ ಐಎಸ್‌ ಉಗ್ರರ ಕೈಗೆ ಸಿಕ್ಕಿ ಹಾಕಿ­ಕೊಂಡಿದ್ದರು. ಡೇವಿಡ್‌ ಒಬ್ಬ ಸಾಮಾಜಿಕ ಕಾರ್ಯಕರ್ತ. ಯುದ್ಧಪೀಡಿತ ಪ್ರದೇಶದಲ್ಲಿ ತೊಂದರೆಗೆ ಒಳಗಾದ ನಾಗರಿಕರಿಗೆ ಸಹಾಯ ಮಾಡುತ್ತಿರುವ ಫ್ರಾನ್‌್ಸ ಮೂಲದ ‘ಆ್ಯಕ್ಟೆಡ್‌’ನ ಪರವಾಗಿ ಅಲ್ಲಿದ್ದವರು. ಪರಿಹಾರ ಕಾರ್ಯ­­ದಲ್ಲಿ ತೊಡಗಿಸಿಕೊಂಡ ಈ ವ್ಯಕ್ತಿ ಅಮಾನವೀಯವಾಗಿ ಹತ್ಯೆಯಾಗಬೇಕಾ­ಯಿತು ಎನ್ನುವುದು ದುರದೃಷ್ಟಕರ. ಹತ್ಯೆಗೂ ಮುನ್ನ ಉಗ್ರರು ಒತ್ತೆ­ಯಾಳಿನ ಬಾಯಲ್ಲಿಯೇ, ‘ಬ್ರಿಟಿಷ್‌ ಮುಖಂಡರೇ ಈ ಕಗ್ಗೊಲೆಗೆ ಕಾರಣ’ ಎಂದು ಬಲವಂತವಾಗಿ ಹೇಳಿಸಿದ್ದಾರೆ. ಉಗ್ರರ ವಕ್ತಾರನೊಬ್ಬ, ‘ಐಎಸ್‌ ವಿರುದ್ಧ ಯುದ್ಧ ಸಾರಿದರೆ ನಮ್ಮ ಕೈಯಲ್ಲಿ ನಿಮ್ಮ ಜನರ ರಕ್ತದಿಂದ ತುಂಬಿದ ಬಟ್ಟಲು ಇರುತ್ತದೆ’ ಎಂಬ ಬೆದರಿಕೆ ಹಾಕಿದ್ದಾನೆ. ಇದರ ನಡು­ವೆಯೇ ಸಿರಿಯಾದಲ್ಲಿ ಬ್ರಿಟನ್‌ ಮೂಲದ ಮುಸ್ಲಿಂ ಸ್ವಯಂಸೇವಾ ಸಂಸ್ಥೆ­ಯೊಂದರ ಪರವಾಗಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡು ಈಗ ಉಗ್ರರ ಒತ್ತೆಯಾಳಾಗಿರುವ ಅಲೆನ್‌ ಹೆನ್ನಿಂಗ್ ಎಂಬುವರ ತಲೆ ಮೇಲೆ ಹತ್ಯೆ ಬೆದರಿಕೆಯ ಕತ್ತಿ ತೂಗುತ್ತಿದೆ. ಇದ್ಯಾವುದೂ ಅಮೆರಿಕವನ್ನು ವಿಚಲಿತಗೊಳಿಸಿಲ್ಲ. ಐಎಸ್‌ ಉಗ್ರರ ನಿರ್ನಾ­ಮ­ಕ್ಕಾಗಿ ವಾಯು ದಾಳಿಗೆ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಮುಂದಾ­ಗಿ­ದ್ದಾರೆ. ಆದರೆ ಈ ದಾಳಿಯಲ್ಲಿ ಬ್ರಿಟನ್‌ ಭಾಗವಹಿಸುತ್ತಿಲ್ಲ. ಬ್ರಿಟಿಷ್‌ ಪ್ರಧಾನಿ ಡೇವಿಡ್‌ ಕ್ಯಾಮರಾನ್‌ ಅವರು ‘ದಾಳಿಯಲ್ಲಿ ಭಾಗವಹಿಸ ಬಾ­ರದು’ ಎಂಬ ಆಂತರಿಕ ಒತ್ತಡ ಎದುರಿಸುತ್ತಿದ್ದಾರೆ. ವಿಶೇಷ ಎಂದರೆ ಇರಾಕ್‌, ಸಿರಿಯಾ, ಈಜಿಪ್‌್ಟ, ಜೋರ್ಡಾನ್‌, ಲೆಬನಾನ್‌, ಯುಎಇ ಮತ್ತು ಮೂರು ಕೊಲ್ಲಿ ದೇಶಗಳು ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಬೆಂಬಲ ನೀಡುತ್ತಿವೆ. ಇದು ಗಮನಾರ್ಹ. ಆದರೆ ಉಗ್ರರನ್ನು ಹತ್ತಿಕ್ಕಲು ಇಷ್ಟೇ ಸಾಲದು. ಏಕೆಂದರೆ ಐಎಸ್‌ ಈಗ ಇರಾಕ್‌ ಉತ್ತರ ಭಾಗ ಮತ್ತು ಸಿರಿ­ಯಾದಲ್ಲಿ ಆಳವಾಗಿ ಬೇರು ಬಿಟ್ಟಿದೆ. ತಕ್ಕಮಟ್ಟಿಗೆ ಜನಬೆಂಬಲವನ್ನೂ ಗಳಿ­ಸಿಕೊಂಡಿದೆ ಎಂಬ ವರದಿಗಳಿವೆ. ಹೀಗಿರುವಾಗ ಸೇನಾ ದಾಳಿಯೊಂದೇ ಪರಿ­ಹಾರ ಎಂಬ ಅತಿವಿಶ್ವಾಸಕ್ಕೆ ಜೋತು ಬೀಳದೆ ಸ್ಥಳೀಯ ನಾಗರಿಕರ ವಿಶ್ವಾಸ ಗಳಿ­ಸಿಕೊಳ್ಳುವುದು, ಉಗ್ರರ ಅನಾಹುತಗಳನ್ನು ಮನವರಿಕೆ ಮಾಡಿ­ಕೊಡು­ವುದು ಸೇರಿದಂತೆ ಬಹುನೆಲೆಗಳ ಕಾರ್ಯಯೋಜನೆಗಳ ಬಗ್ಗೆ ಅಮೆರಿಕ ಆಲೋಚಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.