ಔಷಧೀಯ ಮರಗಳನ್ನು ಉಳಿಸಿ ಅಪರೂಪದ ಔಷಧೀಯ ಗುಣಗಳನ್ನು ಹೊಂದಿರುವ ಅಶೋಕ ವೃಕ್ಷ ಕಣ್ಮರೆಯ ಅಂಚಿಗೆ ತಲುಪಿದೆ ಎನ್ನುವ ಆತಂಕದ ಸಂಗತಿ ಕರ್ನಾಟಕ ರಾಜ್ಯ ಔಷಧೀಯ ಸಸ್ಯಗಳ ಪ್ರಾಧಿಕಾರ (ಕಂಪ) ನಡೆಸಿದ ವೈಜ್ಞಾನಿಕ ಸಮೀಕ್ಷೆಯಿಂದ ಬಹಿರಂಗವಾಗಿದೆ. ಅಡಿಯಿಂದ ಮುಡಿವರೆಗೆ ಔಷಧೀಯ ಗುಣವನ್ನು ಹೊಂದಿರುವ ಈ ಮರವನ್ನು ಉತ್ತರ ಕನ್ನಡ, ಶಿವಮೊಗ್ಗ, ಬೆಳಗಾವಿ, ಚಿಕ್ಕಮಗಳೂರು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಾತ್ರವೇ ಕಾಣಬಹುದು. ಪಶ್ಚಿಮ ಘಟ್ಟದ ಎತ್ತರದ ಪ್ರದೇಶಗಳಲ್ಲೂ ಈ ವೃಕ್ಷವನ್ನು ನೋಡಬಹುದು. ಇಷ್ಟು ಅಪರೂಪದ ಮರದ ಅಂಕಿ ಅಂಶದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿಯೇ ಇರಲಿಲ್ಲ. ಹೀಗಾಗಿ ಸಂರಕ್ಷಣೆಗೆ ಮಹತ್ವದ ಕಾರ್ಯಕ್ರಮ ಹಮ್ಮಿಕೊಂಡಿರಲಿಲ್ಲ. ಆದರೀಗ ‘ಕಂಪ’ ನಡೆಸಿದ ಸಮೀಕ್ಷೆಯಿಂದ ರಾಜ್ಯದಲ್ಲಿ ಕೇವಲ ೨೨ ಸಾವಿರ ಅಶೋಕ ವೃಕ್ಷಗಳಿವೆ ಎನ್ನುವ ಮಾಹಿತಿ ಪತ್ತೆಯಾಗಿದ್ದು, ಇದು ಆತಂಕದ ವಿಚಾರವೇ ಸರಿ. ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಂ (ಜಿಪಿಎಸ್‌) ಬಳಸಿ ಸಮೀಕ್ಷೆ ಮಾಡಲಾಗಿದೆ. ಇದರಿಂದ ಪ್ರತಿಯೊಂದು ಮರ ಇರುವ ಸ್ಥಳದ ಅಕ್ಷಾಂಶ ಮತ್ತು ರೇಖಾಂಶವನ್ನು ನಿಖರವಾಗಿ ಪತ್ತೆ ಮಾಡಲು ಸಾಧ್ಯವಾಗಿದೆ. ಮರದ ಕಾಂಡ, ಹೂ, ಬೀಜ ಮತ್ತು ತೊಗಟೆ ಆಯುರ್ವೇದ ಚಿಕಿತ್ಸೆಯಲ್ಲಿ ಬಳಕೆಯಾಗುತ್ತಿವೆ. ತೊಗಟೆಯ ಬೆಲೆ ಕೆ.ಜಿಗೆ ₨ ೧೫೦ರಿಂದ ೩೦೦ರವರೆಗೆ ಇದ್ದು, ಪ್ರತಿ ವರ್ಷ ೩೦೦ ಕ್ವಿಂಟಲ್‌ ತೊಗಟೆಗೆ ಬೇಡಿಕೆಯಿದೆ. ಇದರಿಂದ ಮರದ ಕಳ್ಳಸಾಗಣೆ ಸಹ ನಡೆಯುತ್ತಿದೆ. ಇದೇ ರೀತಿಯಲ್ಲಿ ಮರದ ಬಳಕೆ ಮತ್ತು ಕಳ್ಳಸಾಗಣೆ ನಡೆದರೆ ಅಶೋಕ ವೃಕ್ಷದ ವಿವರಣೆ ಪುಸ್ತಕಗಳಲ್ಲಿ ಮಾತ್ರ ದೊರಕುವ ದಿನ ದೂರವಿಲ್ಲ. ಜಿಪಿಎಸ್‌ ಬಳಸಿ ಮರದ ಇರುವಿಕೆಯನ್ನು ಪತ್ತೆ ಮಾಡಿರುವುದು ಶ್ಲಾಘನೀಯ ಸಂಗತಿ. ಆದರೆ ಕಂಪದ ಸಮೀಕ್ಷೆ ಅಶೋಕ ಮರಕ್ಕೆ ಮಾತ್ರ ಸೀಮಿತವಾಗಬಾರದು. ರಾಜ್ಯದಲ್ಲಿರುವ ಔಷಧೀಯ ಸಸ್ಯ ಮತ್ತು ಮರಗಳ ಬಗ್ಗೆ ಸಮಗ್ರ ಸಮೀಕ್ಷೆಯನ್ನು ನಡೆಸಿ ಅಳಿವಿನ ಅಂಚಿಗೆ ತಲುಪುತ್ತಿರುವ ಸಸ್ಯಗಳ ವಂಶವಾಹಿಯನ್ನು ಸಾಂಪ್ರದಾಯಿಕ ಅಥವಾ ಅಂಗಾಂಶ ಕೃಷಿಯ ಮೂಲಕ ಹೆಚ್ಚಿಸುವ ಕಾರ್ಯಕ್ರಮವನ್ನು ಬೃಹತ್‌ ಮಟ್ಟದಲ್ಲಿ ಮಾಡಬೇಕು. ಕಂಪದಲ್ಲಿ ಮಾನವ ಸಂಪನ್ಮೂಲ ಸೀಮಿತ ಸಂಖ್ಯೆಯಲ್ಲಿದೆ. ಹೀಗಾಗಿ ಸಾಂಪ್ರದಾಯಿಕ ಹಾಗೂ ಕೃಷಿ ವಿಶ್ವವಿದ್ಯಾಲಯಗಳ ಅಂಗಾಂಶ ಕೃಷಿ ವಿಭಾಗಗಳ ಸಹಯೋಗದಿಂದ ಕಾರ್ಯಕ್ರಮ ಆರಂಭಿಸಬಹುದು. ಒಮ್ಮೆ ಔಷಧೀಯ ಇಲ್ಲವೇ ಅಪರೂಪದ ಸಸ್ಯಗಳ ವಂಶವಾಹಿ ಅಳಿದರೆ ಮತ್ತೆ ಪಡೆಯಲು ಸಾಧ್ಯವಿಲ್ಲ ಎನ್ನುವುದನ್ನು ರಾಜ್ಯ ಸರ್ಕಾರ ಸಹ ಮನಗಾಣಬೇಕು. ಇಂತಹ ಸಾರ್ವಜನಿಕ ಮಹತ್ವದ ಕೆಲಸಕ್ಕೆ ಧನಸಹಾಯ ಒದಗಿಸುವಲ್ಲಿ ಸರ್ಕಾರ ಧಾರಾಳತನ ತೋರಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.