ಫಲಿಸಿದ ಲೆಕ್ಕಾಚಾರ ನಾಲ್ಕು ರಾಜ್ಯಗಳ ವಿಧಾನಸಭೆ ಉಪ ಚುನಾವಣೆ ಫಲಿತಾಂಶದಿಂದ ಬಿಜೆಪಿಗೆ ಸ್ವಲ್ಪಮಟ್ಟಿಗೆ ಹಿನ್ನಡೆ ಆಗಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೂರು ತಿಂಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಆ ಪಕ್ಷದ ಉತ್ಸಾಹಕ್ಕೆ ಭಂಗ ಉಂಟಾಗಿದೆ. ಬಿಹಾರದಲ್ಲಿ ಲಾಲು ಪ್ರಸಾದ್‌– ನಿತೀಶ್‌ ಕುಮಾರ್‌ ಜೋಡಿ ಗೆಲುವಿನ ನಗು ಚೆಲ್ಲಿದೆ. ಕರ್ನಾಟಕದಲ್ಲಿ ನಿರೀಕ್ಷೆಯಂತೆ ಚಿಕ್ಕೋಡಿ–ಸದಲಗಾ ಹಾಗೂ ಬಳ್ಳಾರಿ ಕ್ಷೇತ್ರಗಳು ‘ಕೈ’ ವಶವಾಗಿವೆ. ಶಿಕಾರಿ­ಪುರ ಕ್ಷೇತ್ರವನ್ನು ಬಿಜೆಪಿ ಪ್ರಯಾಸದಿಂದ ಉಳಿಸಿಕೊಂಡಿದೆ. ಸ್ವಲ್ಪ ಎಚ್ಚರ ತಪ್ಪಿ­ದ್ದರೂ ಬಿ.ವೈ. ರಾಘವೇಂದ್ರ ಸೋಲುವ ಸಂಭವವಿತ್ತು. ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಳಗದ ಹಿಡಿತಕ್ಕೆ ಸಿಲುಕಿದ್ದ ಬಳ್ಳಾರಿ ನಿಷ್ಠೆ ಬದಲಿಸಿದೆ. ಎನ್‌.ವೈ. ಗೋಪಾಲಕೃಷ್ಣ ಅವರ ಗೆಲುವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಂತ್ರಗಾರಿಕೆಯ ಫಲ ಎಂದು ವ್ಯಾಖ್ಯಾನಿಸಿದರೂ, ಅದರ ಶ್ರೇಯ ಸಚಿವ ಡಿ.ಕೆ. ಶಿವಕುಮಾರ್‌ ಅವರಿಗೇ ಹೋಗಬೇಕು. ಅವರು ಹಲವು ದಿನ ಬಳ್ಳಾರಿ­ಯಲ್ಲೇ ಕೂತು ಪಕ್ಷದ ಗೆಲುವಿಗೆ ಯೋಜನೆ ರೂಪಿಸಿದ್ದರು. ಕಿತ್ತಾಡು­ತ್ತಿದ್ದ ಕಾಂಗ್ರೆಸ್‌ ಮುಖಂಡರನ್ನು ಒಟ್ಟುಗೂಡಿಸಿ, ಗುಂಪುಗಾರಿಕೆ ನಿವಾರಿಸು­ವಲ್ಲಿ ಸಫಲರಾಗಿದ್ದರು. ಚಿಕ್ಕೋಡಿ–ಸದಲಗಾದಲ್ಲಿ ಗಣೇಶ್‌ ಹುಕ್ಕೇರಿ ಗೆಲುವು ಮೊದಲೇ ಖಚಿತವಾಗಿತ್ತು. ಬಿಹಾರದಲ್ಲಿ ಲೋಕಸಭೆ ಚುನಾವಣೆ ಸೋಲಿನಿಂದ ಸೊರಗಿದ್ದ ಲಾಲು– ನಿತೀಶ್‌ ಜೋಡಿ ಉಪಚುನಾವಣೆ ಗೆಲುವಿನಿಂದ ಬೀಗುತ್ತಿದೆ ಎಂದರೂ ತಪ್ಪಲ್ಲ. ಬಿಜೆಪಿ ಸಖ್ಯ ತೊರೆದು ಸರ್ಕಾರ ಉಳಿಸಿಕೊಳ್ಳಲು ಪರದಾಡಿದ್ದ ನಿತೀಶ್‌ ಅವರಿಗೆ ಲೋಕಸಭೆಯಲ್ಲಿ ಕೇವಲ ಎರಡು ಸ್ಥಾನ ಗೆಲ್ಲಲು ಸಾಧ್ಯವಾ­ಗಿತ್ತು. ಆರ್‌ಜೆಡಿ ಮುಖಂಡ ಲಾಲು ಅವರೂ ಹೆಚ್ಚುಕಡಿಮೆ ಅದೇ ಸ್ಥಿತಿಯ­ಲ್ಲಿ­ದ್ದರು. ಎರಡು ದಶಕಗಳಿಂದ ವಿರುದ್ಧ ದಿಕ್ಕುಗಳಿಗೆ ಮುಖ ಮಾಡಿದ್ದ ಕಡು ವೈರಿಗಳಿಬ್ಬರೂ ರಾಜಕೀಯ ಉಳಿವಿಗಾಗಿ ಮತ್ತೆ ಒಗ್ಗೂಡುವ ಮಹತ್ವದ ತೀರ್ಮಾನ ಕೈಗೊಂಡರು. ದ್ವೇಷ ಮರೆತು ಕೈಕುಲುಕಿದರು, ಪರಸ್ಪರ ಅಪ್ಪಿ­ಕೊಂಡರು. ವೇದಿಕೆ ಹಂಚಿಕೊಂಡರು. ಮತದಾರರೂ ಬೆಂಬಲಿಸಿದರು. ಹತ್ತು ಕ್ಷೇತ್ರಗಳಲ್ಲಿ ಆರನ್ನು ಬಾಚಿಕೊಂಡರು. ಬಾಕ ಕ್ಷೇತ್ರ ಬರೀ 711 ಮತ­ಗಳ ಅಂತರದಲ್ಲಿ ಆರ್‌ಜೆಡಿ ಕೈಜಾರಿದೆ. ‘ನಾವು ಸ್ವಲ್ಪ ಮೊದಲೇ ಸೀಟು ಹೊಂದಾ­ಣಿಕೆ ಮಾಡಿಕೊಂಡಿದ್ದರೆ ಇನ್ನೂ ಉತ್ತಮ ಪ್ರದರ್ಶನ ನೀಡಬಹು­ದಿತ್ತು’ ಎಂದು ನಿತೀಶ್‌ ಹೇಳಿದ್ದಾರೆ. ಲಾಲು, ನಿತೀಶ್‌, ಕಾಂಗ್ರೆಸ್‌ ಜತೆಗೂಡಿ ಇಟ್ಟಿ­ರುವ ಹೆಜ್ಜೆ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆ­ಯಲ್ಲಿ ಹೆಚ್ಚು ಲಾಭ ಮಾಡಿಕೊಡಬಹುದೆಂಬ ಲೆಕ್ಕಾಚಾರ ರಾಜಕೀಯ ವಲ­ಯದಲ್ಲಿದೆ. ಆರ್‌ಜೆಡಿ–ಜೆಡಿಯು ಧ್ರುವೀಕರಣ ನೆರೆಯ ಉತ್ತರ ಪ್ರದೇಶ ಸೇರಿ­ದಂತೆ ಅನೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಹತ್ತಿರವಾಗಲು ಪ್ರೇರಣೆ ಆಗಬಹುದು. ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್‌, ಬಿಎಸ್‌ಪಿ ನಾಯಕಿ ಮಾಯಾವತಿ ಜತೆಗೂಡಬೇಕು ಎಂಬ ಸಲಹೆ­ಗಳು ವ್ಯಕ್ತವಾಗಿವೆ. ಬಿಎಸ್‌ಪಿ ನಾಯಕಿ ಸದ್ಯಕ್ಕೆ ನಕಾರಾತ್ಮಕವಾಗಿ ಸ್ಪಂದಿಸಿ­ದ್ದರೂ ಮುಂದೆ ಮನಸು ಬದಲಿಸಬಹುದಾದ ಸಂದರ್ಭ ಬರಬಹುದು. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇತ್ತೀಚೆಗಷ್ಟೇ ಅಧಿಕಾರಕ್ಕೆ ಬಂದಿರುವುದರಿಂದ ಉಪಚುನಾವಣೆಯ ಹಿನ್ನಡೆಯನ್ನು ಮೋದಿ ಆಡಳಿತದ ಜತೆ ತಳುಕು ಹಾಕುವುದು ಸರಿಯಾದ ಕ್ರಮವಾಗಲಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.