ಎತ್ತಿಗೆ ಜ್ವರ, ಎಮ್ಮೆಗೆ ಬರೆ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಭಾರತ ಹೀನಾಯವಾಗಿ ಸೋತ ಒಡನೆ ತಂಡದ ಇಬ್ಬರು ಸಹಾಯಕ ಸಿಬ್ಬಂದಿಯನ್ನು ಕಿತ್ತು ಹಾಕಿದ ಬಿಸಿಸಿಐ ಕ್ರಮದ ವಿರುದ್ಧ ಟೀಕಾ ಪ್ರವಾಹ ಹರಿದಿದೆ. ಆಟಗಾ­ರರು ಕೆಟ್ಟದಾಗಿ ಆಡಿ ಸೋತರೆ, ಕೋಚ್‌ಗಳನ್ನೇ ಜವಾಬ್ದಾರರ­ನ್ನಾಗಿ­ಸಿ­ರುವುದು ಅದೆಷ್ಟು ಮಟ್ಟಿಗೆ ಸರಿ ಎಂಬ ಮಾತು ವ್ಯಾಪಕವಾಗಿ ಕೇಳಿ ಬರು­ತ್ತಿದೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆಯುವಂತಹ ಕೆಲಸವನ್ನು ಬಿಸಿ­ಸಿಐ ಮಾಡಿದೆ. ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಭಾರತ 1–3­ರಿಂದ ಸೋತ ನಂತರ ಬಿಸಿಸಿಐ ಆಡಳಿತಗಾರರು ಫೀಲ್ಡಿಂಗ್‌ ಕೋಚ್‌ ಟ್ರೇವರ್‌ ಪೆನ್ನಿ ಮತ್ತು ಬೌಲಿಂಗ್‌ ಕೋಚ್‌ ಜೋ ಡೇವ್ಸ್‌ ಅವರನ್ನು ಆ ಸ್ಥಾನಗಳಿಂದ ತೆಗೆದು ಹಾಕಿ, ಅವರ ಜಾಗಕ್ಕೆ ಸಂಜಯ್‌ ಬಂಗಾರ್‌, ಶ್ರೀಧರ್‌ ಮತ್ತು ಭರತ್‌ ಅರುಣ್‌ ಅವರನ್ನು ನೇಮಿಸಿದ್ದಾರೆ. ತಂಡದ ಕೋಚ್‌ ಡಂಕನ್‌ ಫ್ಲೆಚರ್‌ ಅವರ ಸಲಹೆಯ ಮೇರೆಗೆ ಟ್ರೇವರ್‌ ಮತ್ತು ಜೋ ಅವರನ್ನು ಹಿಂದೆ ನೇಮಕ ಮಾಡಿಕೊಳ್ಳಲಾಗಿತ್ತು. ಭಾರತ ತಂಡದ ಮಾಜಿ ನಾಯಕ ರವಿಶಾಸ್ತ್ರಿ ಅವರನ್ನು ಈಗ ತಂಡದ ನಿರ್ದೇಶಕರನ್ನಾಗಿ ನೇಮಿಸ­ಲಾಗಿದೆ. ಈ ನಿರ್ಧಾರದಿಂದ ಫ್ಲೆಚರ್‌ ಅವರಿಗೆ ಮುಖಭಂಗವಾಗಿ­ರುವು­ದಂತೂ ನಿಜ. ಇಂತಹ ನಿರ್ಧಾರಗಳು ದೂರದೃಷ್ಟಿಯದ್ದಲ್ಲ. ತಂಡದ ಹೀನಾಯ ಸೋಲಿಗೆ ದೇಶದ ವಿವಿಧ ವಲಯಗಳಲ್ಲಿ ಕಂಡು ಬಂದ ಆಕ್ರೋಶ­ವನ್ನು ತಣ್ಣಗಾಗಿಸಲು ಇಂತಹದ್ದೊಂದು ನಿರ್ಧಾರವನ್ನು ಬಿಸಿಸಿಐ ತೆಗೆದು­ಕೊಂಡಿದೆ. ಇದು ಕ್ರಿಕೆಟ್‌ನ ಅಭಿವೃದ್ಧಿಗೆ ಪೂರಕವಾಗುವಂತಹ ನಿರ್ಧಾರ­ವಂತೂ ಅಲ್ಲವೇ ಅಲ್ಲ. ತಂಡವೊಂದು ವಿದೇಶ ಪ್ರವಾಸದಲ್ಲಿರುವಾಗಲೇ ಇಂತಹ ಬದಲಾವಣೆ­ಗಳನ್ನು ಮಾಡುವುದು ಸರಿಯಲ್ಲ ಎಂದು ಭಾರತ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಹೇಳಿರುವುದು ಅಕ್ಷರಶಃ ಸರಿ. ಆಟಗಾರನೊಬ್ಬ ಸಂಪೂರ್ಣ ವಿಫಲನಾದರೆ ಅಥವಾ ಗಾಯಾಳುವಾದರೆ ಆತನನ್ನು ಹೊರ­ಗಿಡ­ಬಹುದು. ಆದರೆ ಯಾರದೋ ತಪ್ಪಿಗೆ ಇನ್ನಾರನ್ನೋ ಹೊಣೆಗಾರರನ್ನಾ­ಗಿ­ಸುವ ಈ ಧೋರಣೆ ಅದೆಷ್ಟು ಸರಿ ಎಂಬುದು ಕ್ರಿಕೆಟ್‌ ವಲಯದಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ. ತಂಡದ ನಾಯಕ ಹೊಣೆಗಾರನಲ್ಲವೇ, ಆಯ್ಕೆ ಸಮಿತಿ ಸದಸ್ಯರಿಗೆ ಹೊಣೆಗಾರಿಕೆ ಇಲ್ಲವೇ ಎಂಬ ಪ್ರಶ್ನೆಗಳೂ ಏಳುತ್ತಿವೆ. ಆಟಗಾರರು ಎಡವಿರುವುದಾದರೂ ಎಲ್ಲಿ ಎಂಬುದನ್ನು ಪತ್ತೆ ಹಚ್ಚಿ ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಬಿಸಿಸಿಐ ಕಾರ್ಯಪ್ರವೃತ್ತವಾಗಬೇಕಿತ್ತು. ಆದರೆ ಹಾಗಾಗಿಲ್ಲ. ಈ ನಡುವೆ ತಂಡದ ನಾಯಕ ಮಹೇಂದ್ರ ಸಿಂಗ್‌ ದೋನಿ ಅವರು ಹೇಳಿಕೆಯೊಂದನ್ನು ನೀಡಿ ‘ಮುಂದಿನ ವಿಶ್ವಕಪ್‌ ಮುಗಿಯುವವ­ರೆಗೂ ಫ್ಲೆಚರ್‌ ತಮ್ಮ ಸ್ಥಾನದಲ್ಲಿಯೇ ಮುಂದುವರಿಯಲಿದ್ದಾರೆ’ ಎಂದಿ­ದ್ದಾರೆ. ಇದು ಉದ್ಧಟತನದ ಹೇಳಿಕೆ. ಕೋಚ್‌ಗಳ ಬಗ್ಗೆ ನಿರ್ಧಾರ ತೆಗೆದು­ಕೊಳ್ಳಬೇಕಿರುವುದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯೇ ಹೊರತು, ಕ್ರಿಕೆಟ್‌ ತಂಡದ ನಾಯಕನಲ್ಲ. ತಂಡ ಸೋತಾಗ ಕಳಪೆಯಾಗಿ ಆಡಿದವರ ಬಗ್ಗೆ ಮೌನ ತಾಳಿ, ಸಹಾಯಕ ಸಿಬ್ಬಂದಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟಿರುವ ಬಿಸಿ­ಸಿಐ ಇದೀಗ ದೋನಿಯವರು ತಮ್ಮ ವ್ಯಾಪ್ತಿ ಮೀರಿ ಮಾತಾಡಿರುವುದನ್ನು ಕೇಳಿಸಿಕೊಂಡೂ ಮೌನ ವಹಿಸಿದೆ. ಇದು ಸರಿಯಲ್ಲ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.