ಒತ್ತುವರಿ ತೆರವು ತುರ್ತು ಅಗತ್ಯ ಸರ್ಕಾರಿ ಜಮೀನುಗಳ ಒತ್ತುವರಿ ತೆರವಿನ ವಿಚಾರದಲ್ಲಿ ಸ್ವಾತಂತ್ರ್ಯ ಹೋರಾಟ­ಗಾರ ಎಚ್‌.ಎಸ್‌. ದೊರೆಸ್ವಾಮಿ, ಮಾಜಿ ಶಾಸಕ ಎ.ಟಿ.­ರಾಮಸ್ವಾಮಿ ಮತ್ತಿತರರು ಎರಡನೇ ಹಂತದ ಹೋರಾಟ ಕೈಗೆತ್ತಿ­ಕೊಂಡಿ­ದ್ದಾರೆ. ಅವರ ಧರಣಿ ಸತ್ಯಾಗ್ರಹ ಎರಡು ವಾರ ಪೂರೈಸಿ ಮೂರನೇ ವಾರಕ್ಕೆ ಕಾಲಿಟ್ಟಿದೆ. ಆದರೂ ಸರ್ಕಾರದ ಕಡೆಯಿಂದ ಸರಿಯಾದ ಭರವಸೆ ಸಿಕ್ಕಿಲ್ಲ. ತಾರ್ಕಿಕ ಅಂತ್ಯ ಕಾಣದೆ ಧರಣಿ ಕೈಬಿಡುವುದಿಲ್ಲ ಎಂಬ ಧರಣಿನಿರತರ ಬಿಗಿ­ಪಟ್ಟಿನ ಹಿಂದೆ ಸಹಸ್ರಾರು ಕೋಟಿ ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿ ಉಳಿಸಬೇಕು ಎಂಬ ಕಾಳಜಿ ಇದೆ. ಇದನ್ನು ಸರ್ಕಾರ ಗೌರವಿಸಬೇಕು. ಸರ್ಕಾರಿ ಜಮೀನು ಒತ್ತುವರಿ ವಿಷಯ 2006ರಿಂದಲೂ ಪದೇಪದೇ ಚರ್ಚೆಗೆ ಒಳಗಾಗುತ್ತಿದೆ. ಜೆಡಿಎಸ್‌–ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿ­ಯಲ್ಲಿ ಎ.ಟಿ.ರಾಮಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ವಿಧಾನ­ಮಂಡಲದ ಜಂಟಿ ಸದನ ಸಮಿತಿ, ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಸುಮಾರು 40 ಸಾವಿರ ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿದೆ ಎಂದು ಗುರುತಿಸಿತ್ತು. ನಂತರ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ವಿ. ಬಾಲಸುಬ್ರಮಣಿಯನ್‌ ನೇತೃತ್ವದಲ್ಲಿ ಸರ್ಕಾರಿ ಜಮೀನು­ಗಳ ಸಂರಕ್ಷಣಾ ಕಾರ್ಯಪಡೆ ರಚಿಸಲಾಗಿತ್ತು. ರಾಜ್ಯದಾದ್ಯಂತ ಸುಮಾರು 12 ಲಕ್ಷ ಎಕರೆ ಜಮೀನು ಒತ್ತುವರಿಯಾಗಿದೆ ಎಂದು ಈ ಕಾರ್ಯ­ಪಡೆ ವರದಿ ನೀಡಿತ್ತು. ಎರಡೂ ವರದಿಗಳು ಸರ್ಕಾರದ ಬಳಿ ಇವೆ. ಒತ್ತುವರಿ ತೆರವು ಮಾಡಿ ಸರ್ಕಾರಿ ಜಮೀನನ್ನು ವಶಕ್ಕೆ ಪಡೆಯುವುದಾಗಿ ಸರ್ಕಾರ ಹೇಳುತ್ತಲೇ ಇದೆ. ಆದರೆ, ಆ ಕೆಲಸ ಈವರೆಗೂ ವೇಗ ಪಡೆದಿಲ್ಲ. ಈ ವಿಳಂಬ ನೀತಿ ಭೂಗಳ್ಳರ ಪಾಲಿಗೆ ವರದಾನವಾಗಿ ಪರಿಣಮಿಸಿದೆ. ಸರ್ಕಾರಿ ಜಮೀನನ್ನು ಕಬಳಿಸುವವರಿಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ‘2011ರ ಕರ್ನಾಟಕ ಭೂಕಬಳಿಕೆ ನಿಷೇಧ ಮಸೂದೆ’ ರಾಷ್ಟ್ರಪತಿ­ಯವರ ಒಪ್ಪಿಗೆಗಾಗಿ ದೀರ್ಘಕಾಲದಿಂದ ಕಾಯುತ್ತಿದೆ. ಇದರಿಂದಾಗಿ ಭೂ ಕಬಳಿಕೆ ಪ್ರಕರಣಗಳ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸುವ ಪ್ರಸ್ತಾವ ನನೆಗುದಿಗೆ ಬಿದ್ದಿದೆ. ಈ ಮಸೂದೆಗೆ ಶೀಘ್ರದಲ್ಲಿ ಒಪ್ಪಿಗೆ ಪಡೆದು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಿದಲ್ಲಿ ಮಾತ್ರವೇ ಭೂಕಬಳಿಕೆ ನಿಯಂತ್ರಣ ಕ್ರಮಗಳಲ್ಲಿ ಬಿಗಿ ತರಲು ಸಾಧ್ಯ. ಒತ್ತುವರಿ ತೆರವಿನ ವಿಷಯ­ದಲ್ಲೂ ಸರ್ಕಾರ ಗೊಂದಲದ ನೀತಿಯನ್ನು ಅನುಸರಿಸುತ್ತಿದೆ. ರಾಮಸ್ವಾಮಿ ಮತ್ತು ಬಾಲಸುಬ್ರಮಣಿಯನ್‌ ಅವರ ವರದಿಗಳನ್ನು ಒಪ್ಪಿಕೊಳ್ಳಲು ಸರ್ಕಾರ ಹಿಂದೇಟು ಹಾಕುತ್ತಿದೆ. ಈ ವರದಿಗಳ ವಿಷಯದಲ್ಲಿ ಸ್ಪಷ್ಟ ನಿಲುವು ಪ್ರಕಟಿಸುವ ಮೂಲಕ ಗೊಂದಲಕ್ಕೆ ತೆರೆ ಎಳೆಯಬೇಕು. ಒತ್ತುವರಿ ತೆರವಿನ ವಿಷಯ­ದಲ್ಲಿ ಎಲ್ಲ ಪಕ್ಷಗಳೂ ರಾಜಕೀಯ ಲಾಭ–ನಷ್ಟದ ಲೆಕ್ಕಾಚಾರ ಹಾಕು­ತ್ತಿವೆ. ಸರ್ಕಾರಿ ಜಮೀನುಗಳನ್ನು ವಶಕ್ಕೆ ಪಡೆಯುವ ಇಚ್ಛಾಶಕ್ತಿಯನ್ನು ಕಾಂಗ್ರೆಸ್‌ ಸರ್ಕಾರ ಪ್ರದರ್ಶಿಸಬೇಕು. ಅಧಿಕಾರಸ್ಥ ರಾಜಕಾರಣಿಗಳು ಮತ್ತು ಅಧಿಕಾರಿಗಳ ನೆರವಿಲ್ಲದೆ ಭೂಕಬಳಿಕೆ ನಡೆಯಲು ಸಾಧ್ಯವಿಲ್ಲ. ಸರ್ಕಾರದ ಆಸ್ತಿಯನ್ನು ಅತಿಕ್ರಮಿಸಲು ನೆರವಾದ ರಾಜಕಾರಣಿಗಳು, ಅಧಿಕಾರಿಗಳ ವಿರುದ್ಧವೂ ಕಾನೂನು ಕ್ರಮ ಜರುಗಿಸಿ ಕಠಿಣ ಸಂದೇಶ ರವಾನಿಸಬೇಕು. ‘ಒತ್ತು­ವರಿ ತೆರವಿನ ವಿಷಯದಲ್ಲಿ ಒತ್ತಡಕ್ಕೆ ಮಣಿಯುವುದಿಲ್ಲ’ ಎಂಬ ಮುಖ್ಯಮಂತ್ರಿಯವರ ಮಾತು ಅಕ್ಷರಶಃ ಕೃತಿಗಿಳಿಯಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.