ಸಡಿಲವಾಗದ ಬಿಗಿ ನಿಲುವು ಭಾರತೀಯ ರಿಸರ್ವ್‌ ಬ್ಯಾಂಕ್‌, ಮಂಗಳ­ವಾರ ಪ್ರಕಟಿಸಿದ ನಾಲ್ಕನೇ ದ್ವೈಮಾಸಿಕ ಹಣಕಾಸು ನೀತಿ ಪರಾಮ­ರ್ಶೆಯಲ್ಲಿ ಅನಿರೀಕ್ಷಿತವಾ­ದದ್ದೇನೂ ಇಲ್ಲ. ಸ್ಥಳೀಯ ಮತ್ತು ಜಾಗತಿಕ ಆರ್ಥಿಕ ವಿದ್ಯಮಾ­ನಗಳು ಅಷ್ಟೇನೂ ನಿರಾ­ಶಾದಾಯಕ­ವಾಗಿ ಇಲ್ಲ­ದಿದ್ದರೂ, ಭವಿಷ್ಯದ ಒಟ್ಟಾರೆ ಆರ್ಥಿಕ ಚಿತ್ರಣ ಅನಿಶ್ಚಿತತೆ­ಯಿಂದ ಕೂಡಿರುವುದೇ, ಆರ್‌ಬಿಐನ ಕೈಕಟ್ಟಿ ಹಾಕಿ­ದಂತಾಗಿದೆ. ಸದ್ಯದ ಮಟ್ಟಿಗೆ ಬಡ್ಡಿ ದರಗಳನ್ನು ಇಳಿಸುವ ಇರಾದೆ ಕೇಂದ್ರೀಯ ಬ್ಯಾಂಕ್‌ಗೆ ಇಲ್ಲದಿರುವುದು ಈಗ ಮತ್ತೊಮ್ಮೆ ಸ್ಪಷ್ಟಗೊಂಡಿದೆ. ನಾಲ್ಕನೇ ತ್ರೈಮಾಸಿಕ­ದವರೆಗೆ ಆರ್ಥಿಕ ಚಟುವಟಿಕೆಗಳು ಚೇತರಿಕೆಯ ಹಳಿಗೆ ಮರಳುವುದಿಲ್ಲ ಎನ್ನುವ ನಿರೀಕ್ಷೆಯ ಫಲವಾಗಿಯೇ ಬಡ್ಡಿ ದರಗಳ ಇಳಿಕೆ ಸಾಧ್ಯವಾಗಿಲ್ಲ. ಸಗಟು ಹಣದುಬ್ಬರವು ಆಗಸ್ಟ್‌ ತಿಂಗಳಲ್ಲಿ ಶೇ 3.7ಕ್ಕೆ ಇಳಿ­ದಿರುವುದು, ಚಿಲ್ಲರೆ ಹಣ­ದುಬ್ಬರ ಪ್ರಮಾಣ ಶೇ 8 ಮಟ್ಟದಲ್ಲಿ ಇರುವುದು, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆ­ಲ್‌ಗೆ 100 ಡಾಲರ್‌ಗಿಂತ ಕಡಿಮೆ ಇರುವುದು ಮತ್ತು ರೂಪಾಯಿ ಮೌಲ್ಯ ಹೆಚ್ಚು­ಕಡಿಮೆ ಸ್ಥಿರವಾಗಿರು­ವಾಗಲೂ ಬಡ್ಡಿ ದರಗಳಲ್ಲಿ ಯಥಾಸ್ಥಿತಿ ಕಾಯ್ದು­ಕೊಂಡಿರುವುದಕ್ಕೆ ಸಕಾರಣ­ಗಳು ಇರುವುದೂ ಸುಳ್ಳಲ್ಲ. ದೇಶದಾ­ದ್ಯಂತ ಮುಂಗಾರು ಮಳೆ ಈ ಬಾರಿ ಶೇ 12ರಷ್ಟು ಕಡಿಮೆ­ಯಾಗಿರುವುದರಿಂದ ಚಿಲ್ಲರೆ ಹಣ­ದುಬ್ಬರ ಮತ್ತೆ ಏರುಗತಿ­ಯಲ್ಲಿ ಸಾಗುವ ಆತಂಕ ‘ಆರ್‌ಬಿಐ’ಗೆ ಇರುವಂತಿದೆ. ಚಿಲ್ಲರೆ ಹಣದುಬ್ಬರವು ಶೇ 6ರ ಸಂತೃಪ್ತ ಮಟ್ಟದಲ್ಲಿ ಇರು­ವಂತೆ ನೋಡಿ­ಕೊಳ್ಳಲೂ ಈಗಿನಿಂದಲೇ ಆರ್‌ಬಿಐ ಆದ್ಯತೆ ನೀಡಿರುವುದು ಎಚ್ಚರಿಕೆಯ ನಡೆಯಾಗಿದೆ. ದುಬಾರಿ ಬಡ್ಡಿ ದರಗಳಿಂದಾಗಿ ಸಾಲ ಪಡೆಯುವ ಪ್ರಮಾಣ ಕಡಿಮೆ­ಯಾ­ಗು­ತ್ತಿದ್ದಂತೆ ಬ್ಯಾಂಕ್‌ಗಳು ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಇಳಿ­ಸುವು­ದರಿಂದ ಠೇವಣಿದಾರರ ಬಡ್ಡಿ ಆದಾ­ಯಕ್ಕೂ ಖೋತಾ ಬೀಳುವುದು ಆದಷ್ಟು ಬೇಗ ತಪ್ಪಬೇಕಾಗಿದೆ. ಬರೀ ಬ್ಯಾಂಕ್‌ ಬಡ್ಡಿ ದರ ಕಡಿತಗೊಳಿಸು­ವು­ದ­ರಿಂದಷ್ಟೇ ಕೈಗಾರಿಕಾ ವಲಯದಲ್ಲಿ ಬಂಡವಾಳ ಹೂಡಿಕೆಗೆ ಉತ್ತೇಜನ ದೊರೆಯದು. ಮೂಲ ಸೌಕರ್ಯ ರಂಗದಲ್ಲಿ ಬಂಡ­ವಾಳ ಹೂಡಿಕೆಗೆ ಹಾದಿ ಸುಗಮಗೊ­ಳಿಸಿದರೆ ಮಾತ್ರ ಆರ್ಥಿಕ­ತೆಯ ಎಲ್ಲ ವಲಯಗಳಲ್ಲಿನ ಚೇತರಿಕೆ ಸ್ಥಿರಗೊಂಡು ಬಡ್ಡಿ ದರ ಇಳಿಕೆಗೆ ಸೂಕ್ತ ತಳಹದಿ ನಿರ್ಮಾಣಗೊಳ್ಳಲಿದೆ. ಸದ್ಯದ ಮಟ್ಟಿಗೆ, ಗರಿಷ್ಠ ಪ್ರಮಾಣದ ಬಡ್ಡಿ ದರಗಳು ಕೈಗಾರಿಕಾ ಉತ್ಪಾದನಾ ಚಟುವಟಿಕೆ ಹೆಚ್ಚಿಸಲು ಅಡ್ಡಿಯಾಗಿವೆ. ಮೂರು ವರ್ಷಗಳಿಂದ ಮಂದಗ­ತಿಯ ಆರ್ಥಿಕ ಚಟುವಟಿಕೆಗಳಿಂದ ನಲುಗಿ­ರುವ ಅರ್ಥ ವ್ಯವಸ್ಥೆಗೆ ಚೇತರಿಕೆ ನೀಡಲು ಹಣಕಾಸು ಮತ್ತು ವಿತ್ತೀಯ ಕ್ರಮಗಳು ಉತ್ತೇಜನ­ಕಾರಿಯಾಗಿ­ರಬೇಕಾಗಿದೆ. ಕೇಂದ್ರ ಸರ್ಕಾರವು ಸೂಕ್ತ ವಿತ್ತೀಯ ಕ್ರಮ­ಗಳನ್ನು ಪ್ರಕಟಿಸುವ ಮೂಲಕ ಅರ್ಥ ವ್ಯವಸ್ಥೆಗೆ ಉತ್ತೇಜನ ನೀಡಲು ಆರ್‌ಬಿಐ ಜತೆ ಕೈಜೋಡಿ­ಸ­ಬೇಕಾಗಿದೆ. ಸ್ಥಗಿತಗೊಂಡಿರುವ ಯೋಜ­­ನೆ­­ಗಳಿಗೆ ಮರು ಚಾಲನೆ ನೀಡುವುದು ಮತ್ತು ಹೊಸ ಯೋಜನೆ­ಗಳ ಜಾರಿಗೆ ಆದ್ಯತೆ ನೀಡುವುದರಿಂದಲೇ ಆರ್ಥಿಕ ಚಟು­ವಟಿಕೆಗಳು ಮತ್ತೆ ಗರಿಗೆದರಲಿವೆ ಎನ್ನುವ ಆರ್‌ಬಿಐ ಆಶಯಕ್ಕೆ ಕೇಂದ್ರ ಸರ್ಕಾರ ಸೂಕ್ತವಾಗಿ ಸ್ಪಂದಿಸಿದರೆ ಮಾತ್ರ ಬ್ಯಾಂಕ್‌ ಬಡ್ಡಿ ದರ ತಗ್ಗಿಸಲು ಸೂಕ್ತ ಪರಿಸರ ನಿರ್ಮಾಣವಾದೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.