ಇದು ಕ್ರೀಡಾಸ್ಫೂರ್ತಿ ಅಲ್ಲ ಏಷ್ಯನ್‌ ಕ್ರೀಡಾಕೂಟದ ಬಾಕ್ಸಿಂಗ್‌ನ ಮಹಿಳಾ ವಿಭಾಗದಲ್ಲಿ ಮೇರಿ ಕೋಮ್‌ ಯಶೋಗಾಥೆ ದೇಶದಾದ್ಯಂತ ಸಂಭ್ರಮದ ಅಲೆ ಎಬ್ಬಿಸಿದೆ. ಆದರೆ ಇನ್ನೊಬ್ಬ ಬಾಕ್ಸರ್‌ ಸರಿತಾ ದೇವಿ ಅವರು ಪದಕ ತಿರಸ್ಕರಿಸಿದಾಗ ಉಂಟಾದ ವಿವಾದದಿಂದ ವಿಷಾದದ ಛಾಯೆ ಮೂಡಿಸಿತ್ತು. ಗುರುವಾರ ಸರಿತಾ ಆ ಪದಕವನ್ನು ಸ್ವೀಕರಿಸಿದರೂ ಕಹಿ ನೆನಪು ಉಳಿದು ಹೋಗಿದೆ. ಈ ಘಟನಾವಳಿ ಬಾಕ್ಸಿಂಗ್‌ ಆಗುಹೋಗುಗಳನ್ನು ಅನುಮಾನದಿಂದ ನೋಡು­ವಂತೆ ಮಾಡಿದೆ. ಲೈಟ್‌ವೇಟ್‌ ವಿಭಾಗದ ಸೆಮಿಫೈನಲ್‌ನಲ್ಲಿ ಆತಿಥೇಯ ದಕ್ಷಿಣ ಕೊರಿಯದ ಜೀನಾ ಪಾರ್ಕ್‌ ಮತ್ತು ಸರಿತಾ ದೇವಿ ನಡುವಣ ಹಣಾ­­ಹಣಿಯ ಕೊನೆಯಲ್ಲಿ ಜೀನಾ ಗೆದ್ದಿದ್ದಾರೆಂದು ರೆಫರಿಗಳು ಪ್ರಕಟಿಸಿದರು. ಆಗ ಸರಿತಾ ದೇವಿ ಕಣ್ಣೀರಿಡುತ್ತಾ ‘ಈ ಸೆಣಸಾಟದಲ್ಲಿ ನಾನೇ ಮೇಲುಗೈ ಸಾಧಿಸಿದ್ದೆ. ಆದರೆ ರೆಫರಿಗಳು ಆತಿಥೇಯ ಸ್ವರ್ಧಿಯ ಪರವಾಗಿ ನಡೆದು­ಕೊಂಡಿದ್ದಾರೆ’ ಎಂದು ಆರೋಪಿಸಿದ್ದರು. ಮಾಧ್ಯಮಗಳು ಸರಿತಾ ಅಳಲಿಗೆ ಪ್ರಾಮುಖ್ಯ ನೀಡಿದವು. ಆದರೆ ಸಂಘಟಕರು ಇದಾವುದನ್ನೂ ಗಂಭೀರವಾಗಿ ಪರಿಗಣಿಸಲಿಲ್ಲ. ನಿಗದಿತ ಕಾರ್ಯಕ್ರಮದಂತೆ ಜೀನಾ ಅವರು ಫೈನಲ್‌ನಲ್ಲಿ ಪೈಪೋಟಿ ನಡೆಸಿದರು. ಬೆಳ್ಳಿಯನ್ನೂ ಪಡೆದರು. ಸರಿತಾ ದೇವಿ ಆರೋಪ­ದಲ್ಲಿ ತಥ್ಯವಿದೆ ಎಂಬ ಸಂಗತಿ ಇಂಚೆನ್‌ನಲ್ಲಿದ್ದ ಭಾರತ ತಂಡದ ಅಧಿಕಾರಿ­ಗಳಿಗೆ ಮನದಟ್ಟಾಗಿದ್ದಿದ್ದರೆ, ಸಂಬಂಧಪಟ್ಟವರನ್ನು ಭೇಟಿಯಾಗಿ ತಕ್ಷಣವೇ ತಮ್ಮ ಅಸಮಾಧಾನವನ್ನು ಸಾಕ್ಷ್ಯ ಸಮೇತ ದಾಖಲು ಮಾಡಬೇಕಿತ್ತು. ಫೈನಲ್‌ ಪೈಪೋಟಿ ನಡೆಯುವ ಮೊದಲೇ ಸೆಮಿಫೈನಲ್‌ ಫಲಿತಾಂಶಕ್ಕೆ ಸಂಬಂಧಿಸಿದಂತೆ ಸರಿತಾ ಅವರ ಅಹವಾಲನ್ನು ಸಂಘಟಕರು ಗಂಭೀರವಾಗಿ ಪರಿಗಣಿಸುವಂತೆ ಭಾರತ ಪರಿಣಾಮಕಾರಿಯಾಗಿ ಒತ್ತಡ ಹೇರಬೇಕಿತ್ತು. ಅದೂ ನಡೆದಂತಿಲ್ಲ. ಆದರೆ ಆ ಘಟನೆ ಸರಿತಾ ಅವರ ಮನಸ್ಸಿಗೆ ತೀವ್ರ ಘಾಸಿ ಮಾಡಿತು. ಬುಧವಾರ ಪದಕ ಪ್ರದಾನದ ಸಂದರ್ಭದಲ್ಲಿ ವಿಜಯ ವೇದಿಕೆಯಲ್ಲಿಯೇ ಅವರ ಅಸಮಾಧಾನ ಸ್ಫೋಟಗೊಂಡಿತು. ಅವರು ಕಂಚಿನ ಪದಕವನ್ನು ಸ್ವೀಕ­ರಿ­ಸಿದ ನಂತರ ಅದನ್ನು ತಮ್ಮ ಪಕ್ಕದಲ್ಲಿಯೇ ನಿಂತಿದ್ದ ಜೀನಾ ಅವರ ಕೊರ­ಳಿಗೆ ಹಾಕಿ ಕಣ್ಣೀರಿಡುತ್ತಾ ಅಲ್ಲಿಂದ ಹೊರಟು ಹೋದರು. ಇದೊಂದು ಅನಿ­ರೀ­ಕ್ಷಿತ ಘಟನೆ. ಕೆಲವರು ಸರಿತಾ ಸರಿಯಾಗಿಯೇ ನಡೆದುಕೊಂಡಿದ್ದಾರೆ ಎಂದು ವಾದಿಸಿದರೆ, ಇನ್ನು ಕೆಲವರು ಅದು ಕ್ರೀಡಾ ಸ್ಫೂರ್ತಿಯಿಂದ ನಡೆದು­ಕೊಳ್ಳುವ ಪರಿ ಅಲ್ಲ ಎಂದಿದ್ದಾರೆ. ಅಂತರರಾಷ್ಟ್ರೀಯ ಬಾಕ್ಸಿಂಗ್‌ ಸಂಸ್ಥೆಯು ಸರಿತಾ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಸೂಚನೆಯನ್ನೂ ನೀಡಿತು. ಈ ನಡುವೆ ಸರಿತಾ ಅವರು ಪದಕವನ್ನು ವಾಪಸು ಪಡೆದು ನಿಜವಾದ ಕ್ರೀಡಾ­ಸ್ಫೂರ್ತಿ ಮೆರೆದಿದ್ದಾರೆ. ಅವರು ರೆಫರಿಗಳ ಮೇಲೆ ಮಾಡಿರುವ ಆರೋ­ಪದ ಬಗ್ಗೆ ತನಿಖೆ ನಡೆಯಬೇಕಿದೆ. ಆರೋಪ ನಿಜ ಎಂದಾದರೆ ಅದು ಅಕ್ಷಮ್ಯ. ಅಂತರ­ರಾಷ್ಟ್ರೀಯ ಬಾಕ್ಸಿಂಗ್‌ ಸಂಸ್ಥೆ ಈ ಘಟನೆಯನ್ನು ಗಂಭೀರವಾಗಿ ಪರಿ­ಗಣಿಸ­ಬೇಕು. ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿ ರೆಫರಿಗಳು ನಡೆದು­ಕೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದರೂ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.