ಪಾರದರ್ಶಕತೆ ಇರಲಿ ವಿದ್ಯುನ್ಮಾನ ವಾಣಿಜ್ಯದ (ಇ–ಕಾಮರ್ಸ್‌) ಮೂರು ದೈತ್ಯ ಸಂಸ್ಥೆಗಳು ಗ್ರಾಹಕ ಉತ್ಪನ್ನಗಳನ್ನು ಭಾರಿ ರಿಯಾ­ಯಿತಿ ದರದಲ್ಲಿ ಮಾರಾಟ ಮಾಡಿ­­ರು­ವುದು ಮತ್ತು ಈ ಕೊಡುಗೆಗೆ ಗ್ರಾಹಕರು ಅಷ್ಟೇ ಉತ್ಸಾಹದಿಂದ ಸ್ಪಂದಿಸಿರುವುದು ದೇಶದಲ್ಲಿ ಇನ್ನೂ ಅಂಬೆಗಾಲು ಇಡುತ್ತಿರುವ ಈ ಬಗೆಯ ವಹಿವಾಟಿನ ಪಾಲಿಗೆ ಉತ್ತೇಜಕರ ಬೆಳವಣಿಗೆಯಾಗಿದೆ. ಆನ್‌ಲೈನ್‌ ಮಾರಾ­­ಟದ ಉದ್ಯಮಕ್ಕೆ ಇದು ಸಾಕಷ್ಟು ಪಾಠಗಳನ್ನೂ ಕಲಿಸಿದೆ. ಬೆಂಗ­ಳೂರು ಮೂಲದ ‘ಫ್ಲಿಪ್‌­ಕಾರ್ಟ್‌’, ಪ್ರತಿ­ಸ್ಪರ್ಧಿ ಸಂಸ್ಥೆ ‘ಸ್ನಾಪ್‌ಡೀಲ್‌’, ಮತ್ತು ಬಹುರಾಷ್ಟ್ರೀಯ ಸಂಸ್ಥೆ ‘ಅಮೆಜಾನ್‌’, ಕೆಲವೇ ಗಂಟೆಗಳಲ್ಲಿ ಕೋಟ್ಯಂತರ ರೂಪಾಯಿಗಳ ವಹಿ­ವಾಟು ನಡೆಸಿರುವು­ದರಿಂದ ದೇಶಿ ಆನ್‌­ಲೈನ್‌ ವಹಿವಾಟು ವಲಯದಲ್ಲಿ ಸಹಜವಾಗಿಯೇ ಹೊಸ ಸಂಚಲನ ಕಂಡು ಬಂದಿದೆ. ಅತ್ಯಾಕರ್ಷಕ ಕೊಡುಗೆಗಳಿಗೆ ಗ್ರಾಹ­ಕರ ಅತ್ಯುತ್ಸಾಹದ ಪ್ರತಿಕ್ರಿಯೆಗೆ ಈ ತಾಣಗಳು ಪೂರ್ಣ ಪ್ರಮಾಣದಲ್ಲಿ ಸನ್ನದ್ಧಗೊಂಡಿ­ರದ ಕಾರಣಕ್ಕೆ ಗ್ರಾಹ­ಕರು ಪರದಾಡಿ­ದರು. ಮಾರು­ಕಟ್ಟೆ­ಯಲ್ಲಿನ ದುಬಾರಿ ದರದ ಸರಕುಗಳು ರಿಯಾಯ್ತಿ ಹೆಸರಿನಲ್ಲಿ ಆನ್‌ಲೈನ್‌ನಲ್ಲಿ ಕೈಗೆಟುಕದೆ ಹೋದವು. ಅನೇಕ ಗ್ರಾಹ­ಕರ ಪಾಲಿಗೆ ಸರಕು ಖರೀದಿ ಖಚಿತವಾಗದೇ ಹೋಯಿತು. ಈ ಬೆಳ­ವಣಿಗೆಗಳಿಂದ ರೋಸಿ ಹೋದ ಗ್ರಾಹಕರು ಇಂತಹ ಮಾರಾಟ ಸ್ವರೂಪದ ವಿರುದ್ಧ ಅಪಸ್ವರವನ್ನೂ ಎತ್ತಿ­ದರು. ಹಬ್ಬದ ದಿನಗಳಲ್ಲಿ ಈ ಅಂತರ್ಜಾಲ ತಾಣ­ಗಳು ಗ್ರಾಹಕ­ರನ್ನು ಸೆಳೆಯುತ್ತಿ­ರುವು­ದರಿಂದ ಸಾಂಪ್ರ­ದಾಯಿಕ ಚಿಲ್ಲರೆ ವಹಿ­ವಾಟಿನ ಸಣ್ಣ ಮತ್ತು ದೊಡ್ಡ ವಹಿ­ವಾಟುದಾರರೂ ಆತಂಕ­ಗೊಂಡಿ­ದ್ದಾರೆ. ಆನ್‌ಲೈನ್‌ ಮಾರಾಟ ವಹಿವಾಟಿನ ಮೇಲೆ ನಿಗಾ ಇರಿಸಲು ಮತ್ತು ನಿಯಂತ್ರಣ ವಿಧಿಸಲು ಅಖಿಲ ಭಾರತ ವರ್ತಕರ ಒಕ್ಕೂಟ ಸರ್ಕಾರಕ್ಕೆ ಒತ್ತಾಯಿ­ಸಿದೆ. ಭಾರಿ ರಿಯಾಯ್ತಿಯ ಆಕರ್ಷಕ ಕೊಡುಗೆಗಳ ಬಗ್ಗೆ ತನಿಖೆ ನಡೆಸಬೇಕೆಂಬ ಕೂಗೂ ಕೇಳಿ ಬಂದಿದೆ. ಇವೆಲ್ಲವೂ ಈ ಬಗೆಯ ವಹಿವಾಟಿ­ನಲ್ಲಿ ಸಾಕಷ್ಟು ಸ್ಪಷ್ಟತೆ ಮತ್ತು ಪಾರದರ್ಶಕತೆ ಅಳವಡಿಕೆಯ ಅಗತ್ಯವನ್ನು ಮನದಟ್ಟು ಮಾಡಿ­­­ಕೊಟ್ಟಿವೆ. ರಿಯಾಯ್ತಿಗಳು ಪೂರ್ಣ­ ಸಾಚಾ ಆಗಿಲ್ಲ­ದಿರುವುದು, ಖರೀದಿ ರದ್ದುಪಡಿಸಿರುವುದು ಗ್ರಾಹಕರಿಗೆ ಎಸಗುವ ವಂಚನೆ. ವಹಿವಾಟಿನ ವಿಶ್ವಾ­ಸಾರ್ಹತೆ ಕಳೆದು­ಕೊಳ್ಳುವ ಭೀತಿಯಿಂದ ‘ಫ್ಲಿಪ್­­ಕಾರ್ಟ್‌’ನ ಸ್ಥಾಪಕರು ಗ್ರಾಹಕರ ಕ್ಷಮೆ ಕೇಳಿರುವುದು ಸೂಕ್ತ ನಿರ್ಧಾರ­ವಾಗಿದೆ. ಬರೀ ಕ್ಷಮೆ ಕೇಳಿದ­ರಷ್ಟೇ ಸಾಲದು. ರಿಯಾಯ್ತಿ ಕೊಡುಗೆಯನ್ನು ಗ್ರಾಹಕರಿಗೆ ತಲುಪಿಸಲೂ ಕಾಳಜಿ ತೋರಬೇಕು. ಗ್ರಾಹಕರು ತಮಗೆ ಬೇಕಾದ ಸರಕುಗಳನ್ನೆಲ್ಲ ಅಂತರ್ಜಾಲದಲ್ಲಿಯೇ ಖರೀ­ದಿ­ಸುವ, ಮನೆ ಬಾಗಿಲಿಗೆ ಸರಕು ತಲುಪಿಸುವ ‘ಇ–ವಾಣಿಜ್ಯ’ ವಹಿವಾಟು ನಡೆ­ಸುವ ಸಂಸ್ಥೆಗಳು ವಹಿವಾಟಿನ ತುರ್ತಿಗೆ ತಮ್ಮ ಸಂಗ್ರಹದ ಕೆಲ ಭಾಗ­ವನ್ನು ರಿಯಾಯ್ತಿ ದರದಲ್ಲಿ ಸೀಮಿತ ಪ್ರಮಾಣದಲ್ಲಿ ಮಾರಾಟ ಮಾಡುವು­ದ­ರಲ್ಲಿ ಅಕ್ರಮವಾದದ್ದೇನೂ ಇಲ್ಲ. ಆದರೆ, ಗ್ರಾಹಕರು ಖರೀದಿಸಲು ಇಚ್ಛಿ­ಸಿದ್ದ ಸರಕು ಕೈಗೆಟುಕದಿರಲು ತಂತ್ರಜ್ಞಾನ ದೋಷದ ನೆಪ ಹೇಳುವುದು ಸಮರ್ಥನೀ­ಯವಲ್ಲ. ಮೊನ್ನೆಯ ವಹಿವಾಟಿನಲ್ಲಿ ಕಂಡು­ಬಂದ ಗ್ರಾಹ­ಕರ ಕ್ರಿಯಾ­ಶೀಲತೆಯು ಆನ್‌ಲೈನ್‌ ವಹಿವಾ­ಟು­­ದಾರರಷ್ಟೇ ಅಲ್ಲದೇ, ಸಾಂಪ್ರ­ದಾಯಿಕ ವಹಿವಾಟು­ದಾರರಲ್ಲಿಯೂ ಪಾರದರ್ಶಕ ವಹಿವಾಟಿನ ಎಚ್ಚರ ಮೂಡಿಸುವಂತಾ­ದರೆ ಗ್ರಾಹಕರಿಗೆ ಉತ್ತಮ ಗುಣಮಟ್ಟದ, ನ್ಯಾಯ­ಯುತ ಬೆಲೆಯ ಸರಕು­ಗಳೇ ದೊರೆಯಲಿವೆ. ಗ್ರಾಹಕರ ಪಾಲಿಗೆ ಅದೊಂದು ದೊಡ್ಡ ಗೆಲುವೂ ಹೌದು. ಆನ್‌ಲೈನ್‌ ಮಾರಾ­ಟದಿಂದ ಚಿಲ್ಲರೆ ಮಾರಾಟಗಾರರಿಗೆ ತಕ್ಷಣದ ಬೆದರಿಕೆಯೇನೂ ಇಲ್ಲ. ಏಕೆಂದರೆ ಒಟ್ಟು ಮಾರುಕಟ್ಟೆಯಲ್ಲಿ ಇದರ ಪ್ರಮಾಣ ಕೇವಲ ಶೇ 1. ಹೆಚ್ಚಿನ ಮೌಲ್ಯವರ್ಧಿತ ಸೇವೆ ಅಂತರ್ಜಾಲ ಆಧರಿತ ಮಾರಾಟ­-ವಹಿವಾಟಿ­ನಿಂದ ಸಿಕ್ಕಿದಲ್ಲಿ ಅದು ಗ್ರಾಹಕರಿಗೆ ಸಿಕ್ಕಂತಹ ಅನುಕೂಲ. ಸಾಂಪ್ರದಾಯಿಕ ನೆಲೆಯ ಕಂಪೆನಿಗಳು ತಮ್ಮ ಚಿಂತನೆಯ ಧಾಟಿ­ಗಳನ್ನು ಬದಲಾಯಿಸಿ­ಕೊಳ್ಳ­ಬೇಕು. ಬದಲಾವಣೆಗೆ ಒಗ್ಗಿಕೊಳ್ಳುವುದು ಮುಖ್ಯ. ಕಡೆಗೆ ಮುಖ್ಯವಾದದ್ದು ಗ್ರಾಹಕರ ಹಣಕ್ಕೆ ಸೂಕ್ತ ಮೌಲ್ಯ ಸಿಗ­ಬೇಕು ಎನ್ನುವುದಷ್ಟೇ. ಸೇವೆಯೂ ಸುಧಾರಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.