ಸರಿಯಾದ ನಿರ್ಧಾರ ಡೀಸೆಲ್‌ನ ಮಾರಾಟ ದರ ನಿಗದಿ ಮಾಡುವುದನ್ನು ಕೇಂದ್ರ ಸರ್ಕಾರ ತನ್ನ ನಿಯಂತ್ರಣದಿಂದ ಮುಕ್ತಗೊಳಿ­ಸಿದೆ. ದಿಟ್ಟ ಆರ್ಥಿಕ ಸುಧಾರಣಾ ಕ್ರಮಗಳ ಜಾರಿ ನಿಟ್ಟಿನಲ್ಲಿನ ಇದು ಮತ್ತೊಂದು ಮಹತ್ವದ ಮತ್ತು ಸಕಾಲಿಕ ನಿರ್ಧಾರ­. ನಿಯಂತ್ರಣ ಮುಕ್ತಗೊಳಿಸುವ ಪ್ರಕ್ರಿಯೆಗೆ ಹಿಂದಿನ ಯುಪಿಎ ಸರ್ಕಾರವೇ ಚಾಲನೆ ನೀಡಿದ್ದರಿಂದ, ಬಹಳ ದಿನಗಳ ನಿರೀಕ್ಷೆ ಈಗ ಈಡೇರಿದೆ. ಗ್ರಾಹಕರು ಇನ್ನು ಮುಂದೆ ಡೀಸೆಲ್ ಖರೀದಿಗೆ ಮಾರು­ಕಟ್ಟೆ ಶಕ್ತಿಗಳೇ ನಿಗದಿಪಡಿಸುವ ದರ ನೀಡಬೇಕಾಗುತ್ತದೆ. ಇದರಿಂದಾ­ಗ­ಬಹುದಾದ ಬೆಲೆ ಮಟ್ಟ ಏರಿಳಿತಗಳಿಗೆ ಹೊಂದಿಕೊಳ್ಳ­ಬೇಕಾಗುತ್ತದೆ. ಸದ್ಯಕ್ಕೆ ಅಂತರರಾಷ್ಟ್ರೀಯ ಮಾರು­ಕಟ್ಟೆಯಲ್ಲಿ ಕಚ್ಚಾ ತೈಲದ ದರವು 4 ವರ್ಷಗಳ ಕೆಳಗಿನ ಮಟ್ಟದಲ್ಲಿದೆ. ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನ ಮಾರಾಟ ಸಂಸ್ಥೆಗಳು ಮೊದಲ ಬಾರಿಗೆ ಡೀಸೆಲ್ ಮಾರಾಟದಲ್ಲಿ ಲಾಭ ಗಳಿಸುತ್ತಿರು­ವುದು ಮತ್ತು ಹಣದುಬ್ಬ­ರವು 5 ವರ್ಷಗಳಲ್ಲೇ ಕಡಿಮೆ ಮಟ್ಟ­ದಲ್ಲಿ ಇರುವುದೂ ಸರ್ಕಾರದ ಈ ನಿರ್ಧಾರಕ್ಕೆ ಪ್ರೇರಕವಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳೂ ಸೇರಿದಂತೆ ಖಾಸಗಿ ಸಂಸ್ಥೆಗಳೂ ಇನ್ನು ಮುಂದೆ ಡೀಸೆಲ್ ಮಾರಾಟ ದರ ತೀರ್ಮಾನಿಸುವ ಸ್ವಾತಂತ್ರ್ಯ ಹೊಂದಿ­ರುವುದರಿಂದ ಬೆಲೆ ದುಬಾರಿಯಾಗುವ ಸಾಧ್ಯತೆ ತಳ್ಳಿ ಹಾಕು­ವಂತಿಲ್ಲ. ಆದರೆ, ಮುಕ್ತ ಮಾರು­ಕಟ್ಟೆಯಲ್ಲಿ ಬೆಲೆ ನಿಗದಿಗೆ ಸ್ಪರ್ಧೆ ನಡೆ­ಯು­ವುದರಿಂದ ಅಂತಿಮವಾಗಿ ಅದರ ಪ್ರಯೋಜನ ಗ್ರಾಹಕರಿಗೆ ದೊರೆಯಲಿದೆ. ಡೀಸೆಲ್‌ ದರ ನಿಯಂತ್ರಣ ಮುಕ್ತ­ಗೊಳ್ಳುವುದರಿಂದ ಕೇಂದ್ರದ ಬೊಕ್ಕಸದ ಮೇಲಿನ ಸಬ್ಸಿಡಿ ಹೊರೆ ಗಣನೀಯ­ವಾಗಿ ತಗ್ಗಲಿದೆ. ಜತೆಗೆ ತೈಲ ಕಂಪೆನಿಗಳ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಲಿದೆ. ದೀರ್ಘಾವಧಿಯಲ್ಲಿ ಸಬ್ಸಿಡಿ ಕಡಿ­ತಕ್ಕೆ ಮತ್ತು ವಿತ್ತೀಯ ಕೊರತೆಯಲ್ಲಿ ಸಮತೋಲನ ಸಾಧಿಸಲು ಇದರಿಂದ ಅನುಕೂಲವಾಗಲಿದೆ. ಅರ್ಹರಿಗೆ ಮಾತ್ರ ಸಬ್ಸಿಡಿ ಒದಗಿಸಲು ಮತ್ತು ಉಳ್ಳ­ವರು ಅಗ್ಗದ ದರದಲ್ಲಿ ಡೀಸೆಲ್ ಬಳಸಿಕೊಳ್ಳುವುದೂ ತಪ್ಪಲಿದೆ. ಜಾಗತಿಕ ಪೇಟೆಯಲ್ಲಿ ಕಚ್ಚಾ ತೈಲದ ಬೆಲೆ ಮಟ್ಟ ಸ್ಥಿರಗೊಳ್ಳದ ಕಾರಣಕ್ಕೆ ಯಾವುದೇ ಸಂದರ್ಭದಲ್ಲಿ ಬೆಲೆಯು ತೀವ್ರವಾಗಿ ಏರಿಕೆ ಕಂಡರೆ ಅದರ ಬಿಸಿ ಗ್ರಾಹಕರಿಗೆ ಮತ್ತು ಜನಸಾಮಾನ್ಯರಿಗೆ ಸಹಜವಾಗಿಯೇ ತಟ್ಟಲಿದೆ. ಇದರಿಂದ ಸದ್ಯಕ್ಕೆ ನಿಯಂತ್ರಣಕ್ಕೆ ಬಂದಿರುವ ಹಣದುಬ್ಬರ ಮತ್ತೆ ಯಾರ ಅಂಕೆಗೂ ನಿಲುಕದೇ ಹೋಗುವ ಆತಂಕವೂ ಇದ್ದೇ ಇದೆ. ಸತತ ನಾಲ್ಕನೆ ತಿಂಗಳೂ ಹಣದುಬ್ಬರ­ದಲ್ಲಿ ಇಳಿಕೆ ಪ್ರವೃತ್ತಿ ಕಂಡು ಬಂದಿರುವುದು ಅರ್ಥ ವ್ಯವಸ್ಥೆಯ ಪಾಲಿಗೆ ಉತ್ತೇಜಕರ ಸಂಗತಿಯಾಗಿದೆ. ಸೆಪ್ಟೆಂಬರ್ ತಿಂಗಳ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಮತ್ತು ಸಗಟು ಬೆಲೆ ಸೂಚ್ಯಂಕಗಳು (ಡಬ್ಲ್ಯುಪಿಐ) ಗಮ­ನಾರ್ಹ ಪ್ರಮಾಣದಲ್ಲಿ ಇಳಿಕೆ ದಾಖಲಿಸಿವೆ. ಜಾಗತಿಕ ವಿದ್ಯಮಾನಗಳ ಫಲವಾಗಿ ಅಂತರರಾಷ್ಟ್ರೀಯ ಮಾರುಕ­ಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಭವಿಷ್ಯ­ದಲ್ಲಿ ಏರುಗತಿಗೆ ಮರಳಿದಾಗ ಬೆಲೆ ಹೆಚ್ಚಳಗೊಂಡು ಅವಶ್ಯಕ ಸರಕುಗಳ ಬೆಲೆಗಳು ಮತ್ತೆ ನಾಗಾಲೋಟದಲ್ಲಿ ಏರಿಕೆ ಕಾಣುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಸರ್ಕಾರಿ ಮತ್ತು ಖಾಸಗಿ ತೈಲ ಮಾರಾಟ ಸಂಸ್ಥೆಗಳು ಪರಿಸ್ಥಿತಿಯ ದುರ್ಲಾಭ ಪಡೆಯಲು ಅಗತ್ಯಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಬೆಲೆ ಹೆಚ್ಚಿಸದಂತೆ ಸರ್ಕಾರ ನಿಗಾ ವಹಿಸಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿಯೇ ಸರ್ಕಾರದ ಬದ್ಧತೆ ಪರೀಕ್ಷೆಗೆ ಒಳಪಡಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.