ನಿರ್ಲಕ್ಷ್ಯದ ಪರಮಾವಧಿ ಗುಲ್ಬರ್ಗ ಜಿಲ್ಲೆ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವ­ವಿದ್ಯಾಲಯದ ಹಾಸ್ಟೆಲ್ ವಿದ್ಯಾರ್ಥಿಯೊಬ್ಬ ವೈರಾಣು ಜ್ವರದಿಂದ ಮೃತಪಟ್ಟಿರುವುದು ನೋವಿನ ಸಂಗತಿ. ದೂರದ ಬಿಹಾರದಿಂದ ಬಂದ ಈ ವಿದ್ಯಾರ್ಥಿಯ ಭವಿಷ್ಯ, ಅರಳುವ ಮೊದಲೇ ಶಾಶ್ವತವಾಗಿ ಮುದುಡಿ ಹೋಗಿದೆ. ಕಲುಷಿತ ಆಹಾರ ಅಥವಾ ನೀರಿನಿಂದ ಈತನಿಗೆ ವೈರಾಣು ಜ್ವರ ಬಂದಿರಬಹುದು ಎಂಬ ಅನುಮಾನಗಳಿದ್ದರೂ ನಿಖರ ಕಾರಣ ಇನ್ನಷ್ಟೇ ಗೊತ್ತಾಗಬೇಕಿದೆ. ‘ಜ್ವರ ಕಾಣಿಸಿಕೊಂಡ ಒಂದು ವಾರದವರೆಗೂ ಈತ ಆಸ್ಪತ್ರೆಗೇ ಹೋಗಿರಲಿಲ್ಲ, ನಂತರ ಬಲವಂತವಾಗಿ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು, ಅಲ್ಲಿನ ವೈದ್ಯರ ಸಲಹೆ ಮೇರೆಗೆ ಹೈದರಾಬಾದ್‌ಗೆ ಸ್ಥಳಾಂತರಿಸಲಾಗಿತ್ತು. ಅಲ್ಲೂ ಚಿಕಿತ್ಸೆ ಫಲಕಾರಿಯಾಗಲಿಲ್ಲ’ ಎಂದು ಹೇಳ­ಲಾಗುತ್ತಿದೆ. ಇದನ್ನೆಲ್ಲ ನೋಡಿದರೆ, ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಯೊಬ್ಬ ಅನಾರೋಗ್ಯದಿಂದ ಬಳಲುತ್ತಿದ್ದರೂ ವಾರ್ಡನ್ ಆಗಲಿ, ಸಹಪಾಠಿಗಳಾಗಲಿ ಆತನ ಕಡೆ ಗಮನ ಕೊಟ್ಟಿಲ್ಲ ಎನಿಸುತ್ತದೆ. ಇಲ್ಲಿ ಎಲ್ಲರ ನಿರ್ಲಕ್ಷ್ಯ, ಉದಾಸೀನ ಎದ್ದು ಕಾಣುತ್ತದೆ. ಹೀಗಾದರೆ ಪೋಷಕರು ತಮ್ಮ ಮಕ್ಕಳನ್ನು ಹಾಸ್ಟೆಲ್‌­ಗಳಲ್ಲಿ ಯಾವ ಧೈರ್ಯದ ಮೇಲೆ ಬಿಡಬೇಕು? ಈ ವಿಶ್ವವಿದ್ಯಾಲಯದ ಹಾಸ್ಟೆಲ್‌ಗಳಲ್ಲಿದ್ದ ಇನ್ನೂ ಅನೇಕ ವಿದ್ಯಾರ್ಥಿ, ವಿದ್ಯಾರ್ಥಿನಿಯರೂ ಅನಾ­ರೋಗ್ಯದಿಂದ ಬಳಲುತ್ತಿದ್ದಾರೆ. ವಿಶ್ವವಿದ್ಯಾಲಯಕ್ಕೆ ಈಗೇನೋ ನವೆಂಬರ್ 2ರವರೆಗೂ ರಜೆ ನೀಡಲಾಗಿದೆ. ಏನೇ ಇದ್ದರೂ, ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಶುಚಿತ್ವಕ್ಕೆ ಮಹತ್ವ ಕೊಡದಿರುವುದೇ ಬಹುಪಾಲು ಅನಾರೋಗ್ಯದ ಮೂಲ. ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ದೇಶದ ವಿವಿಧೆಡೆಯ 1300 ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ 450 ಜನ ಕಡಗಂಚಿಯ ಕ್ಯಾಂಪಸ್‌ನಲ್ಲಿ, ಉಳಿದವರು ಗುಲ್ಬರ್ಗ ನಗರದ 8 ಬಾಡಿಗೆ ಹಾಸ್ಟೆಲ್‌ಗಳಲ್ಲಿ ತಂಗಿದ್ದಾರೆ. ಈ ಹಾಸ್ಟೆಲ್‌ಗಳಿಗೆ ಅದರಲ್ಲೂ ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳಿಗೆ ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕು, ಕ್ಯಾಂಪಸ್‌ನಲ್ಲಿ ತುರ್ತು ಚಿಕಿತ್ಸಾ ವಾಹನ ಇಡಬೇಕು, ಸ್ನಾನಕ್ಕೆ ಬಿಸಿನೀರು, ಆರೋಗ್ಯ ತಪಾಸಣೆಗೆ ನುರಿತ ವೈದ್ಯರು, ಮಹಿಳಾ ವೈದ್ಯರ ನೇಮಕ ಮಾಡಬೇಕು ಎಂದು ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದಾರೆ. ಅಂದರೆ ಅತ್ಯಂತ ಮೂಲಭೂತವಾದ ಈ ಯಾವ ಸೌಕರ್ಯ­ಗಳೂ ಕೇಂದ್ರೀಯ ವಿ.ವಿ. ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ. ಇದಂತೂ ಆಘಾತಕಾರಿ. ವೈದ್ಯರನ್ನು ಇಡಿ, ಭದ್ರತೆ ಕಲ್ಪಿಸಿ ಎಂದು ವಿದ್ಯಾರ್ಥಿಗಳು ಗೋಗರೆ­ಯಬೇಕೆ? ಸಂಬಂಧಪಟ್ಟ ಅಧಿಕಾರಿಗಳಿಗೆ ಏನೂ ಜವಾಬ್ದಾರಿಯೇ ಇಲ್ಲವೆ? ಶುದ್ಧ ನೀರು ಪೂರೈಕೆ ಬಗ್ಗೆ ಜಿಲ್ಲಾ ಆಡಳಿತದ ಜತೆ ಚರ್ಚಿ­ಸುವುದಾಗಿ ಕುಲಪತಿ ಹೇಳಿದ್ದಾರೆ. ಹಾಗಿದ್ದರೆ ಇಷ್ಟು ದಿನ ಅಲ್ಲಿ ಏನು ನಡೆಯು­ತ್ತಿತ್ತು? ‘ಮುಖ್ಯ ಕ್ಯಾಂಪಸ್‌ಗೆ ಒಳ್ಳೆ ನೀರನ್ನೇ ಪೂರೈಸುತ್ತಿರುವುದು ದೃಢ­ಪಟ್ಟಿದೆ. ಆದರೆ ಕ್ಯಾಂಪಸ್‌ನಲ್ಲಿ ನೀರು ಶುದ್ಧೀಕರಣ ಘಟಕವೇ ಇಲ್ಲ’ ಎಂದು ರಾಜ್ಯದ ಆರೋಗ್ಯ ಸಚಿವರು ಹೇಳಿದ್ದಾರೆ. ಅಂದರೆ ಲೋಪ ವಿ.ವಿ. ಆಡಳಿತ ಮಂಡಳಿಯಲ್ಲೇ ಇದೆ. ನೆಪ ಸಾಕು. ಇನ್ನಾದರೂ ವ್ಯವಸ್ಥೆ ಸುಧಾರಿಸಿ, ಲೋಪಕ್ಕೆ ಕಾರಣರಾದವರ ಮೇಲೆ ಕ್ರಮ ಜರುಗಿಸಬೇಕು. ಹಾಸ್ಟೆಲ್‌ಗಳ ಅಡುಗೆ ಕೋಣೆ, ಸ್ನಾನದ ಮನೆ, ಶೌಚಾಲಯಗಳಲ್ಲಿ ಶುಚಿತ್ವ ಕಾಪಾಡಲು ವಿದ್ಯಾರ್ಥಿಗಳೂ ಸಹಕರಿಸಬೇಕು. ತಮ್ಮ ಆರೋಗ್ಯ ರಕ್ಷಣೆಗೆ ಇದು ಮುಖ್ಯ ಎನ್ನುವ ಅರಿವು ಅವರಿಗೂ ಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.