ಗೊಂದಲಮಯ ನಡೆ ದೇವೇಂದ್ರ ಫಡಣವೀಸ್‌ ನೇತೃತ್ವದ ಮಹಾರಾಷ್ಟ್ರ ಸರ್ಕಾರ, ಧ್ವನಿಮತದ ಮೂಲಕ ವಿಶ್ವಾಸಮತ ಅಂಗೀಕರಿಸಿ ಆರಂಭದಲ್ಲೇ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ವಿಶ್ವಾಸಮತ ಗೊತ್ತುವಳಿ­ಯನ್ನು ಮತಕ್ಕೆ ಹಾಕದಿರುವುದನ್ನೇ ನೆಪವಾಗಿಟ್ಟು ಶಿವಸೇನಾ ಮತ್ತು ಕಾಂಗ್ರೆಸ್‌ ಗದ್ದಲ ಎಬ್ಬಿಸಲು ತಾನಾಗೇ ಅವಕಾಶ ಮಾಡಿಕೊಟ್ಟಿದೆ. ಇದೊಂದು ಅನಗತ್ಯವಾದ ಹಾಗೂ ಗೊಂದಲಮಯ ನಡೆ. ಶಿವಸೇನಾ ಜೊತೆಗಿನ ಮೈತ್ರಿ ಕಡಿದುಕೊಂಡರೂ 122 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಗೆ ವಿಶ್ವಾಸಮತ ಯಾಚನೆ ನಿರಾಯಾಸ ಎಂದೇ ಭಾವಿಸಲಾಗಿತ್ತು. 287 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ 7 ಪಕ್ಷೇತರರ ಜೊತೆಗೆ ಸಣ್ಣ ಪಕ್ಷಗಳ ಸಹಕಾರವೂ ತನಗಿರುವ ವಿಶ್ವಾಸವನ್ನು ಅದು ವ್ಯಕ್ತಪಡಿಸಿತ್ತು. ಆದರೆ ಕಡೇ ಕ್ಷಣದಲ್ಲಿ ಆದ ನಾಟಕೀಯ ಬೆಳವಣಿಗೆಗಳು ವಿಶ್ವಾಸಮತದ ಗೆಲುವಿನ ಸಂಭ್ರಮಕ್ಕೆ ಕರಿನೆರಳಾಗಿವೆ. ಮೋದಿ ಜನಪ್ರಿಯತೆಯ ಅಲೆಯಲ್ಲಿ ತೇಲುತ್ತಿರುವ ಪಕ್ಷ, ವಿಶ್ವಾಸಮತ ಸಾಬೀತಿಗೆ ಅಷ್ಟೇನೂ ನ್ಯಾಯಸಮ್ಮತವಲ್ಲದ ಧ್ವನಿಮತಕ್ಕೆ ಮೊರೆ ಹೋಗಿದ್ದು ಯಾಕೆ? ಮತ ಚಲಾವಣೆಯ ಮೂಲಕ ವಿಶ್ವಾಸಮತ ಗೆಲ್ಲುವ ಭರವಸೆ ಅದಕ್ಕೆ ಯಾಕೆ ಇರಲಿಲ್ಲ ಎಂಬುದು ಅಚ್ಚರಿಯ ಸಂಗತಿ. ಬಹುಶಃ ಸರ್ಕಾರದ ಜೊತೆ ಕೈಜೋಡಿಸಲು ಕಾಯುತ್ತಿರುವ ಶಿವಸೇನಾ ಮತ್ತು ಎನ್‌ಸಿಪಿ ಎರ­ಡಕ್ಕೂ ತಕ್ಕ ಸಂದೇಶ ರವಾನಿಸುವ ಇರಾದೆ ಅದಕ್ಕೆ ಇರಬಹುದು. ಚುನಾ­ವಣಾ ಪೂರ್ವ ಲಾಗಾಯ್ತಿನಿಂದಲೂ ಬಿಜೆಪಿಗೆ ಮಗ್ಗುಲಮುಳ್ಳಾಗಿರುವ ಶಿವಸೇನಾ ಅತ್ತ ಸರ್ಕಾರಕ್ಕೆ ಬೇಷರತ್‌ ಬೆಂಬಲವನ್ನೂ ಕೊಡದೆ ಇತ್ತ ಸಂಪೂರ್ಣವಾಗಿ ಮೈತ್ರಿಯನ್ನೂ ಕಡಿದುಕೊಳ್ಳದೆ ದ್ವಂದ್ವ ನಿಲುವು ಅನುಸರಿ­ಸುತ್ತಿದೆ. ಕೇಂದ್ರ, ರಾಜ್ಯ ಎರಡು ಕಡೆಯೂ ಹೆಚ್ಚು ಸಚಿವ ಸ್ಥಾನಗಳಿಗೆ ಬೇಡಿಕೆ ಇರಿಸುತ್ತಾ ಶೀತಲ ಸಮರ ಮುಂದುವರಿಸಿದೆ. ವಾಸ್ತವದಲ್ಲಿ ಶಿವಸೇನಾಗೆ ಬಿಜೆಪಿ ಮೈತ್ರಿಯನ್ನು ಸಂಪೂರ್ಣವಾಗಿ ಕಡಿದುಕೊಳ್ಳುವುದು ಅಷ್ಟು ಸುಲಭವೂ ಅಲ್ಲ. ಹಾಗೆ ಮಾಡಲು ಅದು ಬರೀ ಮೋದಿ ಸರ್ಕಾರದಲ್ಲಿರುವ ತನ್ನ ಪ್ರತಿನಿಧಿಯನ್ನು ವಾಪಸ್‌ ಕರೆಸಿಕೊಂಡರಷ್ಟೇ ಸಾಲದು; ರಾಜ್ಯದ ವಿವಿಧ ಪಾಲಿಕೆಗಳಲ್ಲೂ ಅದರೊಟ್ಟಿಗಿನ ಸಂಬಂಧಕ್ಕೆ ಇತಿಶ್ರೀ ಹಾಡಬೇಕಾಗುತ್ತದೆ. ಆಗ ಪ್ರತಿಷ್ಠಿತ ಮುಂಬೈ ಮಹಾನಗರಪಾಲಿಕೆ ಸೇರಿದಂತೆ ತಾನು ಅಧಿಕಾರ ದ­ಲ್ಲಿರುವ ಇತರ ಸ್ಥಳೀಯ ಸಂಸ್ಥೆಗಳಲ್ಲಿ ಅದು ಬಹುಮತ ಕಳೆದು­ಕೊಳ್ಳುತ್ತದೆ. ಹೀಗಾಗಿ ಹೇಗಾದರೂ ತನ್ನ ಬೇಡಿಕೆಗಳಿಗೆ ಬಿಜೆಪಿಯನ್ನು ಮಣಿಸಿ ಸರ್ಕಾರದಲ್ಲಿ ಮುಂದುವರಿಯುವ ಇರಾದೆ ಅದರದ್ದು. ಆದರೆ ತಮ್ಮಿಬ್ಬರ ರಾಜಕೀಯ ಎದುರಾಳಿ ಎನ್‌ಸಿಪಿ, ಸರ್ಕಾರಕ್ಕೆ ಬೆಂಬಲ ಘೋಷಿಸಿ­ದಾಗ ಬಿಜೆಪಿ ಅದನ್ನು ಸಾರಾಸಗಟಾಗಿ ತಳ್ಳಿಹಾಕದೇ ಇರುವುದು ಶಿವಸೇನಾ­ವನ್ನು ಕೆರಳಿಸಿದೆ. ಹತ್ತಾರು ಹಗರಣಗಳಲ್ಲಿ ಸಿಲುಕಿದ್ದ ಎನ್‌ಸಿಪಿ ಬೆಂಬಲವನ್ನು ಮುಕ್ತವಾಗಿ ಒಪ್ಪಿಕೊಳ್ಳುವುದು ಬಿಜೆಪಿಗೂ ಧರ್ಮಸಂಕಟದ ವಿಷಯ. ಎನ್‌ಸಿಪಿ ಜೊತೆ ಸಖ್ಯ ಬೆಳೆಸುವುದು ಪಾರದರ್ಶಕ ಆಡಳಿತದ ಭರವಸೆಗೆ ಚ್ಯುತಿ ತರುತ್ತದೆ ಎಂಬುದು ವರಿಷ್ಠರ ನಂಬಿಕೆ. ಹೀಗೆ ಶಿವಸೇನಾ ಮತ್ತು ಎನ್‌ಸಿಪಿಗೆ ಬುದ್ಧಿ ಕಲಿಸುವ ಭರದಲ್ಲಿ ಬಿಜೆಪಿ ವಿಶ್ವಾಸಮತ ಯಾಚನೆಗೆ ಸಾಂಪ್ರದಾಯಿಕ ಮಾರ್ಗ ಅನುಸರಿಸದೆ ಎದುರಾಳಿಗಳ ಬಾಯಿಗೆ ಆಹಾರವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.