ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಹೈ ಕೋರ್ಟಿನ ವಿಭಾಗೀಯ ಪೀಠದ ಆದೇಶದ ಅನುಸಾರ ಕರ್ನಾಟಕ ಲೋಕ­ಸೇವಾ ಆಯೋಗ 1998ನೇ ಸಾಲಿನ ಕೆಎಎಸ್‌ ಅಧಿಕಾರಿ­ಗಳ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ 25 ಅಧಿ­ಕಾರಿ­ಗಳ ಹೆಸರುಗಳಿಲ್ಲದಿರುವುದರಿಂದ ಅವರ ಭವಿಷ್ಯ ತೂಗುಯ್ಯಾ­ಲೆ­ಯ­ಲ್ಲಿದೆ. ಹೊಸ ಸಂದರ್ಶನಕ್ಕೆ ಅರ್ಹತೆ ಪಡೆದಿರಲಿಲ್ಲವೆಂದು ಕೆಪಿಎಸ್‌ಸಿ ಈ ಹಿಂದೆಯೇ ಮೂವರು ಅಧಿಕಾರಿಗಳನ್ನು ಕೆಲಸದಿಂದ ತೆಗೆದುಹಾಕಿತ್ತು. ಆದರೆ ಈ ಮೂವರು ಅಧಿಕಾರಿಗಳು ನ್ಯಾಯಾಲಯದಿಂದ ತಡೆ ಆದೇಶ ತಂದು ಕೆಲಸದಲ್ಲಿ ಮುಂದುವರಿದಿದ್ದಾರೆ. ಈಗ ಮತ್ತೆ ಈ ಮೂವರು ಸಂದ­ರ್ಶ­ನಕ್ಕೂ ಅರ್ಹರಾಗದವರು ಎಂದು ಪ್ರಕಟಿಸಲಾಗಿದೆ. 28 ಅಭ್ಯರ್ಥಿಗಳು ಹೊಸದಾಗಿ ಪರಿಷ್ಕೃತ ಪಟ್ಟಿಯಲ್ಲಿ ಸ್ಥಾನಪಡೆದುಕೊಂಡಿದ್ದಾರೆ. 140 ಅಧಿಕಾರಿ­ಗಳ ಹುದ್ದೆ ಬದಲಾಗಲಿದೆ. ಭ್ರಷ್ಟಾಚಾರ ನಿಗ್ರಹದ ನಿಟ್ಟಿನಲ್ಲಿ ಇದೊಂದು ಒಳ್ಳೆಯ ಬೆಳವಣಿಗೆ. ಹೈಕೋರ್ಟ್ ನಿರ್ದೇಶನ ಬಂದ ತಕ್ಷಣವೇ ಕೆಪಿಎಸ್‌ಸಿ ಪರಿಷ್ಕೃತ ಪಟ್ಟಿ ಬಿಡುಗಡೆ ಮಾಡಿದ್ದು ಸ್ವಾಗತಾರ್ಹ. ಸಾಂವಿ­ಧಾ­ನಿಕ ಸಂಸ್ಥೆಯೊಂದರ ಘನತೆ ಕಾಪಾಡುವ ಕ್ರಮವೂ ಹೌದು. ಈ ಕೆಲಸವನ್ನು ಇನ್ನೂ ಮೊದಲೇ ಮಾಡಿದ್ದರೆ ಸಂಸ್ಥೆಯ ಘನತೆ ಇನ್ನಷ್ಟು ಹೆಚ್ಚುತ್ತಿತ್ತು. ಪರಿ­ಷ್ಕೃತ ಪಟ್ಟಿ ಹಾಕುವಾಗ ಯಾವ ಮಾನದಂಡ ಅನುಸರಿಸಲಾಗಿದೆ ಎನ್ನುವು­ದನ್ನೂ ಬಹಿರಂಗಪಡಿಸಿದ್ದರೆ ಒಳ್ಳೆಯದಾಗಿತ್ತು. ಇದೇ ರೀತಿ ಅಕ್ರಮವಾಗಿ ನೇಮ­ಕ­ಗೊಂಡವರನ್ನು ರಾಜ್ಯ ಸರ್ಕಾರ ನಿರ್ದಾಕ್ಷಿಣ್ಯವಾಗಿ ವಜಾ ಮಾಡ­ಬೇಕು. ಈ ಪ್ರಕರಣ ತಾರ್ಕಿಕ ಅಂತ್ಯ ಕಾಣಲು ಇದು ಅಗತ್ಯ. ಹಾಗಾದಾಗ ಮಾತ್ರ ಜನರಲ್ಲಿ ನಂಬಿಕೆ ಉಳಿಯುವುದು ಸಾಧ್ಯ. ಯಾಕೆಂದರೆ ಅಕ್ರಮವಾಗಿ ನೇಮಕಗೊಂಡವರು ಸರ್ಕಾರ ಮತ್ತು ಸಾರ್ವಜನಿಕರನ್ನು ವಂಚಿಸಿದ್ದಾರೆ. ಇದೊಂದು ಉದ್ದೇಶಪೂರ್ವಕ ಮತ್ತು ಯೋಜಿತ ಭ್ರಷ್ಟಾಚಾರ. ಇಂತಹ ಜನ­ರನ್ನು ಆಡಳಿತ ವ್ಯವಸ್ಥೆಯಿಂದ ಕಿತ್ತು ಹಾಕುವುದರ ಮೂಲಕ ರಾಜ್ಯ ಸರ್ಕಾರ ಭ್ರಷ್ಟ ವ್ಯವಸ್ಥೆಯ ವಿರುದ್ಧವಾಗಿದೆ ಎನ್ನುವುದನ್ನು ತೋರಿಸ­ಬೇ­ಕಾ­ಗಿದೆ. ಇದು ಬರೀ 1998ರ ಸಾಲಿನ ಪಟ್ಟಿ ವಿಚಾರ. 1999, 2004ರ ಪಟ್ಟಿ ವಿಚಾರ ಇನ್ನೂ ನ್ಯಾಯಾಲಯದ ವಿಚಾರಣೆಯ ಹಂತದಲ್ಲಿ ಇದೆ. ಆಗಲೂ ಸಾಕಷ್ಟು ಮಂದಿ ಅಕ್ರಮವಾಗಿ ನೇಮಕಗೊಂಡಿದ್ದಾರೆ ಎಂಬ ಆರೋಪವಿದೆ. ಈ ಬಗ್ಗೆ ತನಿಖೆ ನಡೆಸಿದ ಸಿಐಡಿ ವರದಿಯು ಅಕ್ರಮವನ್ನು ದೃಢಪಡಿಸಿದೆ. ಎಲ್ಲ ವಿಚಾರವನ್ನೂ ನ್ಯಾಯಾಲಯವೇ ತೀರ್ಮಾನಿಸಲಿ ಎಂದು ಬಿಡುವುದರ ಬದಲು ರಾಜ್ಯ ಸರ್ಕಾರವೇ ದಿಟ್ಟ ಕ್ರಮ ಕೈಗೊಳ್ಳುವುದು ಒಳಿತು. 2011ನೇ ಸಾಲಿನ ನೇಮಕಾತಿ ಪಟ್ಟಿಯನ್ನು ತಿರಸ್ಕರಿಸಿ ದೃಢ ಹೆಜ್ಜೆಯನ್ನು ಇಟ್ಟ ರಾಜ್ಯ ಸರ್ಕಾರ ಈ ಹಿಂದಿನ ನೇಮಕಾತಿಯ ಬಗ್ಗೆ ಕೂಡ ಸ್ಪಷ್ಟ ಮತ್ತು ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಭ್ರಷ್ಟಾಚಾರದ ಮೂಲಕ ನೇಮಕವಾದ ಅಧಿಕಾರಿ­ಗಳು ನ್ಯಾಯಸಮ್ಮತವಾಗಿ ಕರ್ತವ್ಯ ನಿರ್ವಹಿಸುತ್ತಾರೆ ಎಂದು ಭಾವಿಸಲು ಸಾಧ್ಯವೇ ಇಲ್ಲ. ಅಲ್ಲದೆ ಒಮ್ಮೆ ಸರ್ಕಾರಿ ಕೆಲಸಕ್ಕೆ ಬಂದವರು 30ರಿಂದ 35 ವರ್ಷ ಅಧಿಕಾರದಲ್ಲಿ ಇರುತ್ತಾರೆ. ಭ್ರಷ್ಟಾಚಾರದ ಮೂಲಕ ಇಡೀ ಆಡಳಿತ ವ್ಯವಸ್ಥೆಯನ್ನು ಹಾಳು ಮಾಡುತ್ತಾರೆ. ಆಡಳಿತ ವ್ಯವಸ್ಥೆ ಶುದ್ಧೀಕರಣ ಹಾಗೂ ದೀರ್ಘಕಾಲದ ಪರಿಣಾಮಗಳನ್ನು ಗಮನದಲ್ಲಿ ಇಟ್ಟುಕೊಂಡು ರಾಜ್ಯ ಸರ್ಕಾರ ಹೆಜ್ಜೆ ಇಡಬೇಕಾಗಿದೆ. ಆ ಮೂಲಕ ಕರ್ನಾಟಕ ಲೋಕ­ಸೇವಾ ಆಯೋಗದ ಗೌರವವನ್ನು ಹೆಚ್ಚಿಸಬೇಕಾಗಿದೆ. ಸಾರ್ವಜನಿಕ ರಂಗ­ದಲ್ಲಿ ಮರೆಯಾಗಿರುವ ವಿಶ್ವಾಸವನ್ನೂ ಮರಳಿ ತರಬೇಕಾಗಿದೆ. ಆಯೋಗ­ದಲ್ಲಿ ಖಾಲಿ ಇರುವ ಅಧ್ಯಕ್ಷ ಮತ್ತು ಸದಸ್ಯರ ಹುದ್ದೆಗೆ ಯೋಗ್ಯರನ್ನು ನೇಮಕ ಮಾಡಿ ಹೊಸ ನೇಮಕಾತಿಗೆ ಮುಂದಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.