ಭಾರತದ ಬದ್ಧತೆಗೆ ಮನ್ನಣೆ ಆಹಾರ ಸಬ್ಸಿಡಿ ಮತ್ತು ಧಾನ್ಯ ದಾಸ್ತಾನಿಗೆ ಸಂಬಂಧಿಸಿದಂತೆ ಭಾರತ ಹಾಗೂ ಅಮೆರಿಕದ ನಡುವೆ ಇದ್ದ ಬಿಕ್ಕಟ್ಟು ಶಮನವಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ಇದರಿಂದ, ದೇಶದ ಬಡವರು ಮತ್ತು ರೈತರ ಹಿತರಕ್ಷಣೆಯಲ್ಲಿ ಸರ್ಕಾರಕ್ಕೆ ಇದ್ದ ತೊಡಕುಗಳು ನಿವಾರಣೆಯಾಗಿವೆ. ಸಾರ್ವ­ಜನಿಕ ಹಿತಾಸಕ್ತಿಯ ಆಹಾರ ಭದ್ರತಾ ಕಾರ್ಯಕ್ರಮಗಳಿಗಾಗಿ ಭಾರತ ಹೆಚ್ಚಿನ ಪ್ರಮಾಣದಲ್ಲಿ ಧಾನ್ಯ ದಾಸ್ತಾನು ಮಾಡುವುದು ಮತ್ತು ಕೃಷಿ ಸಬ್ಸಿಡಿ ನೀಡುವುದು ಅಮೆರಿಕ ಸೇರಿದಂತೆ ‘ವಿಶ್ವ ವ್ಯಾಪಾರ ಸಂಘಟ­ನೆ’ಯ (ಡಬ್ಲ್ಯುಟಿಒ) ಸದಸ್ಯ ರಾಷ್ಟ್ರಗಳ ಕಣ್ಣು ಕೆಂಪಾಗಿಸಿತ್ತು. ಆಹಾರ ಧಾನ್ಯ­ಗಳ ಮಿತಿಮೀರಿದ ಸಂಗ್ರಹದಿಂದ ಜಾಗತಿಕ ವಾಣಿಜ್ಯ ವಹಿವಾಟಿಗೆ ಭಾರತ ಧಕ್ಕೆ ಉಂಟು ಮಾಡುತ್ತಿದೆ ಎಂದು ಅವು ಆಕ್ಷೇಪಿಸಿದ್ದವು. ಕಳೆದ ವರ್ಷ ಬಾಲಿಯಲ್ಲಿ ನಡೆದ ಸಭೆಯಲ್ಲಿ, ಆಹಾರ ಧಾನ್ಯ ಸಂಗ್ರಹಕ್ಕೆ ಮಿತಿ ವಿಧಿಸಬೇಕೆಂಬ ಪ್ರಸ್ತಾವ ಸಹ ಮಂಡಿಸಿದ್ದವು. ಡಬ್ಲ್ಯುಟಿಒ ನಿಯಮಾವಳಿ ಪ್ರಕಾರ, ಯಾವುದೇ ಅಭಿವೃದ್ಧಿಶೀಲ ದೇಶ ತನ್ನ ಒಟ್ಟಾರೆ ಕೃಷಿ ಉತ್ಪಾದನಾ ಮೌಲ್ಯದ ಗರಿಷ್ಠ ಶೇ 10ರಷ್ಟು ಮೊತ್ತ­ವನ್ನು ಮಾತ್ರ ಆಹಾರ ಸಬ್ಸಿಡಿಗೆ ಬಳಸಬಹುದು. ಈ ಮಿತಿಯನ್ನು ಉಲ್ಲಂಘಿ­ಸಿದ ರಾಷ್ಟ್ರಕ್ಕೆ ದಂಡ ವಿಧಿಸಲು ಅವಕಾಶ ಇದೆ. ಆದರೆ ಇಂತಹ ನಿಯಮಾ­ನು­ಸಾರ ನಡೆಯುವುದು ಭಾರತದ ಮಟ್ಟಿಗೆ ಕಷ್ಟಸಾಧ್ಯದ ಮಾತು. ಏಕೆಂ­ದರೆ ನಮ್ಮಲ್ಲಿ ಪಡಿತರ ವ್ಯವಸ್ಥೆ ಮೂಲಕ ಅಗ್ಗದ ದರದಲ್ಲಿ ಆಹಾರ ಧಾನ್ಯ­ಗಳನ್ನು ಪೂರೈಸಲಾಗುತ್ತಿದೆ; ಕನಿಷ್ಠ ಬೆಂಬಲ ಬೆಲೆಗೆ ಕೃಷಿ ಉತ್ಪನ್ನಗಳನ್ನು ಖರೀದಿಸಲಾಗುತ್ತಿದೆ. ಹೀಗಾಗಿ ಭಾರತದ ಇಂತಹ ಕ್ರಮಗಳನ್ನು ಯಾವುದೇ ದೇಶ ಕೂಡ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಾಗಿತ್ತು. ಆದರೆ ಈಚೆಗೆ ಅಮೆರಿ­ಕಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರದ ಇಂತಹ ಇಕ್ಕಟ್ಟುಗಳನ್ನು ಅಲ್ಲಿನ ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಅದರ ಫಲವಾಗಿ ಭಾರತ ಈಗ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಒಪ್ಪಂದವೊಂದನ್ನು ರೂಪಿಸಿ ಅದಕ್ಕೆ ಅಮೆರಿಕದ ಸಮ್ಮತಿ ಪಡೆಯುವಲ್ಲಿ ಯಶಸ್ವಿ­ಯಾಗಿದೆ. ಇದರಿಂದ ತನ್ನ ಪ್ರಜೆಗಳಿಗೆ ಆಹಾರ ಭದ್ರತೆ ಒದಗಿಸುವ ಭಾರತದ ಬದ್ಧತೆಗೆ ಮನ್ನಣೆ ಸಿಕ್ಕಂತಾಗಿದೆ. ಅಷ್ಟೇ ಅಲ್ಲ, ಸುಗಮ ವಾಣಿಜ್ಯ ಒಪ್ಪಂದ (ಟಿಎಫ್‌ಎ) ಏರ್ಪಡುವುದಕ್ಕೆ ಇದ್ದ ತೊಡಕುಗಳೂ ನಿವಾರಣೆ ಆಗಿವೆ. ನಮ್ಮ ಆರ್ಥಿಕ ಸಾಮರ್ಥ್ಯ ವೃದ್ಧಿಯಾಗಬೇಕಾದರೆ ಡಬ್ಲ್ಯುಟಿಒ ಒಪ್ಪಂದ­ಗಳಿಗೆ ದೇಶ ತಲೆಬಾಗಲೇಬೇಕಾಗುತ್ತದೆ. ಆದರೆ ಅದಕ್ಕಾಗಿ ಬಡ­ವರು ಮತ್ತು ರೈತರ ಹಿತ ಬಲಿಕೊಡಲು ಸುತರಾಂ ಒಪ್ಪದ ಸರ್ಕಾರದ ನಿಲುವು ತರ್ಕಬದ್ಧವಾಗಿಯೇ ಇದೆ. ಹಿಂದಿದ್ದ ಯುಪಿಎ ಸರ್ಕಾರ ಕೂಡ ಇದೇ ನಿಲುವು ಕಾಯ್ದುಕೊಂಡಿತ್ತು. ಏನೇ ಆಗಲಿ, ಇದೊಂದು ತಾತ್ಕಾಲಿಕ ಒಪ್ಪಂದ. ಮುಂದೆ ಇತರ ರಾಷ್ಟ್ರಗಳು ಇದಕ್ಕೆ ತಕರಾರು ಎತ್ತಬಹುದಾದ ಸಾಧ್ಯತೆ ಇಲ್ಲದಿಲ್ಲ. ಡಿಸೆಂಬರ್‌ನಲ್ಲಿ ನಡೆಯಲಿರುವ ಡಬ್ಲ್ಯುಟಿಒ ಮಹಾಧಿವೇಶನದಲ್ಲಿ ಈ ಒಪ್ಪಂದದ ಪ್ರಸ್ತಾವಗಳಿಗೆ ಅನುಮೋದನೆ ಸಿಗುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ, ಅಭಿವೃದ್ಧಿಶೀಲ ದೇಶಗಳ ಹಕ್ಕೊತ್ತಾ­ಯ­ವನ್ನು ಪ್ರತಿಪಾದಿಸುವ ವಿಷಯಗಳಿಗೆ ಸಂಬಂಧಿಸಿದಂತೆ ಶಾಶ್ವತ ಒಪ್ಪಂದ­ವೊಂದನ್ನು ರೂಪಿಸಲು ವೇದಿಕೆ ಸಿದ್ಧಪಡಿಸಬೇಕಾದ ಜಾಣ್ಮೆಯನ್ನೂ ನಾವು ತೋರಬೇಕಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.