ಜನಸ್ನೇಹಿ ಹೆಜ್ಜೆ ಪೊಲೀಸ್ ಠಾಣೆಗೆ ಹೋಗದೆ ಆನ್‌ಲೈನ್‌ ಕಿಯಾಸ್ಕ್‌ನಲ್ಲಿಯೇ ಅಪರಾಧ ಸಂಬಂಧಿ ದೂರುಗಳನ್ನು ದಾಖಲಿಸಿ ಕೆಲವೇ ನಿಮಿಷ­ಗಳಲ್ಲಿ ಎಫ್ಐಆರ್ ಪ್ರತಿಯನ್ನೂ ಪಡೆಯುವ ‘ರಿಮೋಟ್ ಎಫ್ಐಆರ್’ ಸೌಲಭ್ಯ ಈಗ ಬೆಂಗಳೂರಲ್ಲಿ ಆರಂಭವಾಗಿದೆ. ಇದರೊಂದಿಗೆ ಸಿಮ್‌, ಮೊಬೈಲ್, ಲ್ಯಾಪ್‌ಟಾಪ್, ಚಾಲನಾಪತ್ರ, ದಾಖಲಾತಿ ಇತ್ಯಾದಿ ಕಳೆದು­ಹೋದರೆ ಆನ್‌ಲೈನ್‌ನಲ್ಲೇ ದೂರು ಸಲ್ಲಿಸಿ ಸ್ವೀಕೃತಿ ಪತ್ರ ಪಡೆಯುವ ಸೇವೆಗೂ ಚಾಲನೆ ಸಿಕ್ಕಿದೆ. ಇವೆರಡೂ ಜನಸ್ನೇಹಿ ಉಪಕ್ರಮಗಳು. ಇದ­ರಿಂದ, ದೂರು ಸಲ್ಲಿಸಲು ಅಲೆದಾಟ ತಪ್ಪುತ್ತದೆ. ಪೊಲೀಸರು ತಮ್ಮ ಕರ್ತವ್ಯ­ದಿಂದ ಜಾರಿಕೊಳ್ಳುವುದಕ್ಕೆ ಕಡಿವಾಣ ಬೀಳುತ್ತದೆ. ಓಬೀರಾಯನ ಕಾಲದ ನಿಯಮಗಳ ಜಂಜಾಟದಿಂದ ನಾಗರಿಕರಿಗೆ ಮುಕ್ತಿ ಸಿಗುತ್ತದೆ. ಕಾಗದ ಮೂಲಕದ ವ್ಯವಹಾರ ತಪ್ಪಿಸಬಹುದು. ದಿನನಿತ್ಯ ಬಳಸುವ ವಸ್ತುಗಳು ಕಳೆದು ಹೋದರೆ ಆನ್‌ಲೈನ್‌ನಲ್ಲೇ ದೂರು ಸಲ್ಲಿಸಿ ಸ್ವೀಕೃತಿ ಪತ್ರ ಪಡೆಯುವ ಸೌಕರ್ಯ ಈಗಾಗಲೇ ದೆಹಲಿಯಲ್ಲಿದೆ. ಆದರೆ ಎಫ್ಐಆರ್ ಪಡೆಯುವ ಸೌಲಭ್ಯ ಕಲ್ಪಿಸಿದ ದೇಶದ ಮೊದಲ ನಗರ ಬೆಂಗಳೂರು. ಮಾಹಿತಿ ತಂತ್ರ­ಜ್ಞಾನಕ್ಕೆ ಹೆಸರಾದ ಈ ನಗರದಲ್ಲಿ ಕೊನೆಗೂ ಇಂಥದೊಂದು ಸೇವೆ ಅನುಷ್ಠಾನ ಸ್ವಾಗತಾರ್ಹ. ದೂರು ಸಲ್ಲಿಸಲು ಪೊಲೀಸ್ ಠಾಣೆಗಳಿಗೆ ಹೋಗುವುದಕ್ಕೇ ಜನ ಹಿಂಜರಿ­ಯಲು ನಾನಾ ಕಾರಣಗಳಿವೆ. ಪೊಲೀಸರು ಬಳಸುವ ಭಾಷೆ, ತೋರುವ ದರ್ಪ, ಲಂಚಗುಳಿತನ, ಅದಕ್ಷತೆ, ಕಿರುಕುಳ, ಸತಾಯಿಸುವುದು, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಒಂದು ಠಾಣೆಯಿಂದ ಇನ್ನೊಂದು ಠಾಣೆಗೆ ಅಲೆಸುವುದು ಇತ್ಯಾದಿಗಳನ್ನು ನೋಡಿದ ಜನಕ್ಕೆ ಈ ಪೊಲೀಸರ ಸಹವಾಸವೇ ಸಾಕು ಎನಿಸಿದರೂ ಆಶ್ಚರ್ಯವಿಲ್ಲ. ಈ ಎಲ್ಲ ಆರೋ­ಪ­ಗಳು ಪೊಲೀಸರ ಮೇಲಿರುವುದು ನಿಜ ಎನ್ನುವುದನ್ನು ಹಿರಿಯ ಅಧಿಕಾರಿಗಳಷ್ಟೇ ಅಲ್ಲ ಸ್ವತಃ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ತಂತ್ರ­ಜ್ಞಾನದ ಬಳಕೆಯಿಂದ ಈ ಲೋಪದೋಷಗಳನ್ನು ಬಹುಪಾಲು ಸರಿಪಡಿಸ­ಬ­ಹುದು, ಭ್ರಷ್ಟಾಚಾರ ನಿಯಂತ್ರಿಸಬಹುದು ಎಂಬುದಕ್ಕೆ ಬೇಕಾದಷ್ಟು ನಿದರ್ಶ­ನ­ಗಳು ನಮ್ಮ ಸುತ್ತಮುತ್ತಲೇ ಸಿಗುತ್ತವೆ. ಅಂಥ ಒಂದು ಪ್ರಯತ್ನ ಪೊಲೀಸ್ ಇಲಾಖೆ­ಯಲ್ಲಿ ಶುರುವಾಗಿದೆ. ರಿಮೋಟ್ ಎಫ್ಐಆರ್ ಕೇಂದ್ರ ಮತ್ತು ಆನ್‌ಲೈನ್‌ ಸ್ವೀಕೃತಿ ಸೇವೆ ಆ ದಾರಿಯಲ್ಲಿ ಮಹತ್ವದ ಹೆಜ್ಜೆ. ಫ್ರಾನ್ಸ್ ಮತ್ತು ಸ್ಪೇನ್‌ನಲ್ಲಿ ಯಶಸ್ವಿಯಾದ ಈ ವ್ಯವಸ್ಥೆ ನಮ್ಮಲ್ಲೂ ಯಶ ಕಾಣುವ ನಿರೀಕ್ಷೆ ಇಟ್ಟುಕೊಳ್ಳಬಹುದು. ಆದರೆ ಇದರಿಂದ ನಿಯಮಿತ ಮೇಲು ಸಂಪಾದನೆ ತಪ್ಪಿ ಹೋಗುತ್ತದೆ ಎಂದು ಕೆಲವರಿಗೆ ಅಸಮಾಧಾನವೂ ಆಗಬಹುದು. ಮೊದಲು ಮೂರು ತಿಂಗಳು ಪ್ರಾಯೋಗಿಕವಾಗಿ ನೋಡಿ ಅದರ ಅನು­ಭವದ ಆಧಾರದ ಮೇಲೆ ಇತರೆಡೆ ವಿಸ್ತರಿಸುವುದು ಇಲಾಖೆಯ ಚಿಂತನೆ. ಈ ಅವಧಿಯಲ್ಲಿ ಜನಪರವಾದ ಇಂಥ ವ್ಯವಸ್ಥೆ ಹಾಳು ಮಾಡುವ ಪ್ರಯತ್ನ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಏಕೆಂದರೆ, ದಶಕದ ಹಿಂದೆ ಬೆಂಗಳೂ­ರಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿ ಜಾರಿಗೆ ತಂದಾಗ ಅದನ್ನು ಕೆಡಿಸುವ ಯತ್ನ ಅಧಿಕಾರಶಾಹಿಯಿಂದಲೇ ನಡೆದಿತ್ತು. ಅಂಥದಕ್ಕೆಲ್ಲ ಸೊಪ್ಪು ಹಾಕಬಾರದು. ಶೀಘ್ರ ರಾಜ್ಯದೆಲ್ಲೆಡೆ ವಿಸ್ತರಿಸಬೇಕು. ಈಗಾಗಲೇ ಅಟಲ್ ಜನಸ್ನೇಹಿ ಕೇಂದ್ರಗಳು, ನೆಮ್ಮದಿ ಕೇಂದ್ರಗಳು ಎಲ್ಲೆಡೆ ಹರಡಿಕೊಂಡಿವೆ. ಅವುಗಳನ್ನು ಈ ಸೇವೆಗೆ ಬಳಸಿಕೊಂಡರೆ ಗ್ರಾಮೀಣ ಭಾಗದ ಜನರಿಗೂ ಅನುಕೂಲವಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.