ತೆರವು ಕಾರ್ಯ ನಿಲ್ಲದಿರಲಿ ಬೆಂಗಳೂರಿನ ಹೃದಯ ಭಾಗದ ಚಿಕ್ಕಕಲ್ಲಸಂದ್ರ ಕೆರೆಯನ್ನೇ ನುಂಗಿ ನೀರು ಕುಡಿದಿದ್ದ ಭೂಗಳ್ಳರ ಮೇಲೆ ಕಳೆದ ವಾರ ಸರ್ಕಾರ ಗದಾ­­ಪ್ರಹಾರ ನಡೆಸಿ ಒತ್ತುವರಿಯಾಗಿದ್ದ ೧೨.೧೬ ಎಕರೆ ಪೈಕಿ ೬.೩೮ ಎಕರೆ­ಯನ್ನು ಮರುವಶಕ್ಕೆ ಪಡೆದಿದೆ. ಪದ್ಮನಾಭನಗರದಲ್ಲಿರುವ ಈ ಕೆರೆ ಒತ್ತು­ವರಿ ತೆರವಿನಿಂದ ಸುಮಾರು ₨ ೬೦೦ ಕೋಟಿ ಸ್ವತ್ತು ಸರ್ಕಾರದ ಕೈವಶ­ವಾಗಿದೆ. ಭೂಗಳ್ಳರ ಮೇಲೆ ಬೆಂಗಳೂರು ನಗರ ಜಿಲ್ಲಾಡಳಿತ ನಡೆಸುತ್ತಿರುವ ಕಾನೂನು ಕ್ರಮ ಶ್ಲಾಘನೀಯ. ಇಲ್ಲಿ ಕೆರೆಯೊಂದು ಇತ್ತು ಎನ್ನುವುದಕ್ಕೆ ಯಾವುದೇ ಕುರುಹು ಇಲ್ಲದಂತೆ ಒತ್ತುವರಿ ಮಾಡಲಾಗಿತ್ತು. ತಾತ್ಕಾಲಿಕ ಶೆಡ್‌ಗಳಲ್ಲಿ ನಡೆಯುತ್ತಿದ್ದ ವಾಣಿಜ್ಯ ವಹಿವಾಟಿಗೆ ಕೊನೆ ಹೇಳಲಾಗಿದೆ. ಆದರೆ ಅಕ್ರಮವಾಗಿ ಕಟ್ಟಿರುವ ದೇವಾಲಯ, ಕೆಲವು ಮನೆಗಳು ಮತ್ತು ಸರ್ಕಾ­ರವೇ ನಿರ್ಮಿಸಿರುವ ಬಿಎಂಟಿಸಿ ಬಸ್‌ ನಿಲ್ದಾಣವನ್ನು ಇನ್ನೂ ಮುಟ್ಟಿಲ್ಲ. ಈ ತಾರತಮ್ಯ ಯಾವುದೇ ಕಾರಣಕ್ಕೂ ಸಲ್ಲದು. ಕೆರೆ ಜಾಗದಲ್ಲಿ ಅನಧಿ­ಕೃತ­ವಾಗಿ ಬಸ್‌ ನಿಲ್ದಾಣ ಹೇಗೆ ನಿರ್ಮಾಣವಾಯಿತು ಎನ್ನುವ ಬಗ್ಗೆ ಸರ್ಕಾರವೇ ತನಿಖೆ ನಡೆಸಬೇಕು. ಇದರಲ್ಲಿ ಅಕ್ರಮ ನಡೆದಿದ್ದ ಪಕ್ಷದಲ್ಲಿ ಅಧಿಕಾರಿ­ಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಈ ಕೆರೆ ಒತ್ತುವರಿಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಕೆಲ ಸದಸ್ಯರ ಕೈವಾಡವಿದೆ ಎನ್ನುವ ಗುಸುಗುಸು ಹರಡಿದೆ. ಇದು ನಿಜವೇ ಆಗಿದ್ದ ಪಕ್ಷದಲ್ಲಿ ಕಾನೂನಿನ ದಂಡ­ಪ್ರಯೋಗ ನಡೆಯಬೇಕು. ಭೂಗಳ್ಳರ ಮೇಲೆ ಮಾತ್ರವೇ ಗದಾ­ಪ್ರಯೋಗ ನಡೆದರೆ ಸಾಲದು. ಈ ಅಕ್ರಮದಲ್ಲಿ ಭಾಗಿಯಾಗಿ ಅಕ್ರಮವಾಗಿ ಕಂದಾಯ ದಾಖಲೆಗಳನ್ನು ಸೃಷ್ಟಿ ಮಾಡಿದ ಅಧಿಕಾರಿಗಳ ವಿರುದ್ಧವೂ ಸರ್ಕಾರ ಕ್ರಮಕೈಗೊಳ್ಳಬೇಕು. ಅಧಿಕಾರಿಗಳು ನಿವೃತ್ತರಾಗಿದ್ದರೂ ಕಾನೂನಿನ ಕ್ರಮ ಜರುಗಬೇಕು. ಆಗ ಮಾತ್ರವೇ ಕಾನೂನಿಗೆ ಬೆಲೆ ಬರುತ್ತದೆ. ಈಗ ಕೆರೆಯ ಶೇ ೫೦ರಷ್ಟು ಭಾಗ ಮಾತ್ರವೇ ಸರ್ಕಾರದ ವಶಕ್ಕೆ ಬಂದಿದೆ. ಉಳಿದ ಜಾಗದಲ್ಲಿ ವಾಸದ ಮನೆಗಳನ್ನು ತೆರವು ಮಾಡಬೇಕಿದೆ. ಇದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಅಕ್ರಮ ಮನೆ ನಿರ್ಮಾಣದ ಹಿಂದೆ ಯಾವುದೇ ರಾಜಕೀಯ ಮುಖಂಡರ ಅಭಯವಿದ್ದರೂ ಸರ್ಕಾರ ಮುಲಾಜಿ­ಲ್ಲದೆ ಕ್ರಮ ತೆಗೆದುಕೊಳ್ಳಬೇಕು. ರಾಜ್ಯ ಸರ್ಕಾರವೇ ಎ.ಟಿ.ರಾಮಸ್ವಾಮಿ ನೇತೃತ್ವ­ದಲ್ಲಿ ರಚಿಸಿದ್ದ ಸಮಿತಿ ನೀಡಿದ್ದ ವರದಿಯ ಪ್ರಕಾರ ಬೆಂಗಳೂರು ನಗರ ಜಿಲ್ಲೆ­ಯಲ್ಲಿ ೩೪,೧೧೧ ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ. ಇದರ ಪೈಕಿ ೧೪,೭೦೮ ಎಕರೆಯನ್ನು ಸರ್ಕಾರ ಇದುವರೆಗೆ ವಶಕ್ಕೆ ಪಡೆದಿದೆ. ಅಕ್ಟೋ­ಬರ್‌ ತಿಂಗಳಲ್ಲೇ ೩೩೮ ಎಕರೆ ಜಮೀನು ಸರ್ಕಾರದ ಸುಪರ್ದಿಗೆ ಬಂದಿದೆ. ಒತ್ತುವರಿಯಾಗಿದ್ದ ಭೂಮಿಯನ್ನು ಮತ್ತೆ ಸರ್ಕಾರದ ವ್ಯಾಪ್ತಿಗೆ ಪಡೆಯುವ ಕಾರ್ಯಕ್ಕೆ ಚುರುಕು ನೀಡಿರುವ ಜಿಲ್ಲಾಧಿಕಾರಿ ವಿ.ಶಂಕರ್‌ ಅವರ ಕ್ರಮ ಶ್ಲಾಘ­ನೀಯ. ಈ ಕೆಲಸಕ್ಕೆ ಮತ್ತಿಬ್ಬರು ಜಿಲ್ಲಾಧಿಕಾರಿಗಳನ್ನು ನೇಮಿಸುವು­ದಾಗಿ ಸರ್ಕಾರ ಪ್ರಕಟಿಸಿದೆ. ಇದು ಆದಷ್ಟು ಬೇಗ ಜಾರಿಯಾದರೆ ಭೂಗ­ಳ್ಳರ ಮೇಲೆ ಮತ್ತಷ್ಟು ಗದಾಪ್ರಹಾರ ಮಾಡಲು ಅನುಕೂಲವಾಗುತ್ತದೆ. ಸರ್ಕಾರ ವಶಕ್ಕೆ ಪಡೆದ ಭೂಮಿಯನ್ನು ಸದ್ಬಳಕೆ ಮಾಡಬೇಕು. ಇಲ್ಲವಾದರೆ ಅದರ ಮೇಲೆ ಮತ್ತೆ ಭೂಗಳ್ಳರ ಕಾಕದೃಷ್ಟಿ ಬೀಳುವ ಅಪಾಯ ಇದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.