ಅಡಿಕೆ ಬೆಳೆ: ಚಿಂತನೆ ಇರಲಿ ಜಗಿದು ತಿನ್ನುವ ತಂಬಾಕು ಪದಾರ್ಥಗಳ ನಿಷೇಧಕ್ಕೆ ಸರ್ಕಾರ ಮುಂದಾಗಿರುವುದರಿಂದ ಅಡಿಕೆ ಬೆಲೆ ದಿಢೀರ್‌ ಕುಸಿದು ಬೆಳೆ ಗಾರರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ. ಹಿಂದೆ ಗುಟ್ಕಾ ನಿಷೇಧಿಸಿದ್ದ ಸಂದರ್ಭ­ದಲ್ಲೂ ಇಂಥದ್ದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ರಂಗೋಲಿ ಕೆಳಗೆ ತೂರಿದ್ದ ಗುಟ್ಕಾ ಕಂಪೆನಿಗಳು, ಇರುವ ಕಾನೂನನ್ನೇ ಬಳಸಿಕೊಂಡು ಬದಲಿ ರೂಪದಲ್ಲಿ ಗುಟ್ಕಾ ಮಾರಾಟ ಮುಂದುವರಿಸಿದ್ದವು. ಆದರೆ ಸರ್ಕಾರದ ಈಗಿನ ಕ್ರಮದಿಂದ ಇಂತಹ ಪರೋಕ್ಷ ಗುಟ್ಕಾ ಮಾರಾಟಕ್ಕೂ ತಡೆ ಬೀಳಲಿರುವುದು ಅಡಿಕೆ ಬೆಳೆಗಾರರ ಆತಂಕವನ್ನು ಇಮ್ಮಡಿಗೊಳಿಸಿದೆ. ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾದ ಅಡಿಕೆ ಆಗಿಂದಾಗ್ಗೆ ಇಂತಹ ತಲ್ಲಣಗಳಿಗೆ ಒಳಗಾಗುತ್ತಲೇ ಇದೆ. ಮಲೆನಾಡು ಮತ್ತು ಬಯಲು­ಸೀಮೆ­ಯನ್ನು ಒಳಗೊಂಡ 16 ಜಿಲ್ಲೆಗಳಲ್ಲಿ ಅಡಿಕೆ ಬೆಳೆಗಾರರಿ­ದ್ದಾರೆ. ಉತ್ಪಾದನೆಯ ಗರಿಷ್ಠ ಪ್ರಮಾಣದ ಅಡಿಕೆಯು ಗುಟ್ಕಾ ತಯಾರಿಕೆಗೇ ಹೋಗುವುದರಿಂದ ಸರ್ಕಾರದ ಇಂತಹ ಕ್ರಮಗಳಿಗೆ ಸಹಜವಾಗಿಯೇ ಬೆಳೆಗಾರರಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಮಧ್ಯವರ್ತಿಗಳು ಬೆಲೆ ಇಳಿಸಿ ಪರಿಸ್ಥಿತಿಯ ಲಾಭ ಪಡೆದುಕೊಳ್ಳುತ್ತಾರೆ. ಹಿಂದೊಮ್ಮೆ, ಅಡಿಕೆ ಸೇವನೆಯೇ ಆರೋಗ್ಯಕ್ಕೆ ಹಾನಿಕರ ಎಂಬ ವಿವಾದ ಸೃಷ್ಟಿಯಾಗಿ, ಕಡೆಗೆ ಇದೊಂದು ನಿರಾಧಾರವಾದ ಹೇಳಿಕೆ ಎಂಬುದನ್ನು ಸಾಬೀತುಪಡಿಸುವಷ್ಟರಲ್ಲಿ ಬೆಳೆಗಾರರು ಹೈರಾಣಾಗಿದ್ದರು. ವಾಸ್ತವದಲ್ಲಿ, ಅಡಿಕೆ ಆರೋಗ್ಯಕ್ಕೆ ಪೂರಕ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಆದರೆ ತಂಬಾಕು ಉತ್ಪನ್ನಗಳ ಜೊತೆ ಸೇರಿಸಿ ಬಳಸುವುದರಿಂದ ಅವುಗಳ ಕಳಂಕ ಇದಕ್ಕೂ ಅಂಟಿಕೊಂಡಿದೆ. ಹಿಂದೆಲ್ಲ ಸಾಂಪ್ರದಾಯಿಕ ಬೆಳೆಯಾದ ಅಡಿಕೆಯ ಔಷಧೀಯ ಉತ್ಪನ್ನಗಳು ಬಳಕೆಯಲ್ಲಿದ್ದವು. ನಂತರ ದಿಢೀರನೆ ಹೆಚ್ಚಿದ ಗುಟ್ಕಾ ಸಂಸ್ಕೃತಿ ಇದಕ್ಕೆಲ್ಲ ಪೆಟ್ಟು ಕೊಟ್ಟು ಅಡಿಕೆಯ ಮಾನ ಕಳೆಯಿತು. ಆದರೂ ಆರ್ಥಿಕವಾಗಿ ಲಾಭ ತಂದುಕೊಡುವ ಬೆಳೆಯನ್ನು ರಾಜ್ಯದ ಸುಮಾರು 60 ಲಕ್ಷ ಕುಟುಂಬಗಳು ನೆಚ್ಚಿಕೊಂಡಿವೆ. ಹಾಗೆಂದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ತಂಬಾಕು ಉತ್ಪನ್ನಗಳನ್ನು ನಿಷೇಧಿಸುವುದೇ ತಪ್ಪು ಎನ್ನಲಾಗದು. ಯಾವ ದೃಷ್ಟಿಯಿಂದ ನೋಡಿದರೂ ಇಂತಹ ಕ್ರಮ ಸ್ವಾಗತಾರ್ಹವೇ. ಇಂದಲ್ಲದಿದ್ದರೆ ಮುಂದೆ ಎಂದಾದರೂ ಒಂದು ದಿನ ಇದು ಆಗಲೇಬೇಕಾದ ಕಾರ್ಯ. ಅದಿಲ್ಲದೆ ಜನಜಾಗೃತಿ ಮೂಡಿದರೂ ಸಾಕು, ನಿಷೇಧದ ಅಗತ್ಯವೇ ಇಲ್ಲದೆ ಬೇಡಿಕೆ ತಂತಾನೇ ಕುಸಿಯುತ್ತದೆ. ಹೀಗಾಗಿ ದೀರ್ಘಕಾಲೀನ ಪರಿಣಾಮಗಳನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಬೆಳೆಗಾರರ ಹಿತ ಕಾಯಬೇಕಾದುದು ಸರ್ಕಾರದ ಆದ್ಯ ಕರ್ತವ್ಯ. ಅಡಿಕೆಯ ವೈವಿಧ್ಯಮಯ ಬಳಕೆಯನ್ನು ವ್ಯಾಪಕವಾಗಿ ಪ್ರೋತ್ಸಾಹಿ­ಸುವುದು ಇದಕ್ಕಿರುವ ಪ್ರಮುಖ ಪರಿಹಾರ. ಈ ನಿಟ್ಟಿನಲ್ಲಿ ಸಂಶೋಧನೆ ಕೈಗೊಳ್ಳಲು, ಅಡಿಕೆಯ ರೋಗ ಬಾಧೆ ತಡೆಗಟ್ಟಲು ಕೇಂದ್ರ ಮಟ್ಟದಲ್ಲಿ ಅಡಿಕೆ ಮಂಡಳಿ ರಚಿಸಬೇಕೆಂಬ ಬೆಳೆಗಾರರ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಈಗಾಗಲೇ ಕೆಲವು ರಾಜ್ಯಗಳಲ್ಲಿ ಅಡಿಕೆಯಿಂದ ಕಾಫಿ, ಚಾಕೊಲೆಟ್‌, ವೈನ್‌ನಂತಹ ಪದಾರ್ಥಗಳನ್ನು ಉತ್ಪಾದಿಸ­ಲಾಗುತ್ತಿದೆ. ಇಂತಹ ಬೆಳವಣಿಗೆಗಳಿಗೆ ನಮ್ಮಲ್ಲೂ ಉತ್ತೇಜಕ ವಾತಾವರಣ ನಿರ್ಮಾಣ­ವಾಗಬೇಕು. ಜೊತೆಗೆ ಪರ್ಯಾಯ ಬೆಳೆಗಳನ್ನು ಪ್ರೋತ್ಸಾಹಿಸಬೇಕಾದುದೂ ಅಷ್ಟೇ ಮುಖ್ಯ. ಎಲ್ಲಕ್ಕಿಂತ ಹೆಚ್ಚಾಗಿ, ಇದಕ್ಕೆಲ್ಲ ಬೆಳೆಗಾರರನ್ನು ಮಾನಸಿಕವಾಗಿ ಸಿದ್ಧಗೊಳಿಸಬೇಕಾದ ಕೆಲಸ ಮೊದಲು ಆಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.