ಪ್ರಧಾನಿ ಮೋದಿಯೂ ಕಸವೂ ನಾವೂ ಭಾರತವೂ ಭಾರತದ ಹಿರಿಮೆ ಗರಿಮೆಗಳನ್ನು ಕುರಿತು ನಮ್ಮ ವೇದಗಳನ್ನು ಸಂಪಾದಿಸಿದ ಜರ್ಮನಿಯ ಮ್ಯಾಕ್‌್ಸ ಮುಲ್ಲರ್‌ ಹೀಗೆ ಹೇಳಿದ್ದಾನೆ: ‘ಅತ್ಯಂತ ಆಳವಾದ ಚಿಂತನೆಗಳಿಂದ ಪರಿಹಾರ ರೂಪದಲ್ಲಿ ಮಾನವ ಪ್ರಗತಿಗೆ, ಬದುಕಿನ ಮೂಲಭೂತ ಸಮಸ್ಯೆಗಳಿಗೆ ಪ್ಲೇಟೊ ಮತ್ತು ಕಾಂಟ್‌ ಅವರನ್ನು ಅಧ್ಯಯನ ಮಾಡಿರುವವರ ಗಮನವನ್ನೂ ಸೆಳೆವ ಕೊಡುಗೆ ಯಾವ ದಿಗಂತದಡಿಯಲ್ಲಿ ಗರಿಗೆದರಿದೆ ಎಂದು ನನ್ನನ್ನು ಕೇಳಿದರೆ ನಾನು ಭಾರತ­ವನ್ನು ಸೂಚಿಸುತ್ತೇನೆ. ಯುರೋಪಿನಲ್ಲಿರುವ ನಾವು ಯಾವ ಗ್ರೀಕ್‌ ಮತ್ತು ರೋಮನ್‌ ಹಾಗೂ ಸೆಮೆಟಿಕ್‌ ಜನಾಂಗ ಜ್ಯೂಗಳ ಚಿಂತನೆ­ಯನ್ನು ಪೂರ್ಣವಾಗಿ ಒಪ್ಪಿರುವೆವೋ ಆ ನಮ್ಮ ಅಂತರಂಗದ ಜೀವನ ಪಾವನಗೊಳ್ಳಲು, ವಿಸ್ತಾರ­ಗೊಳ್ಳಲು, ವಿಶ್ವವ್ಯಾಪಕವಾಗಲು, ವಾಸ್ತವವಾಗಿ ಹೆಚ್ಚು ಮಾನವೀಯವಾಗಲು, ಭೌತಿಕ ಪ್ರಪಂಚ­ಕ್ಕಷ್ಟೇ ಅಲ್ಲ ಆಧ್ಯಾತ್ಮಿಕ ಪ್ರಪಂಚದ ದಿವ್ಯರೂಪ ಪಡೆಯಲು ಯಾವ ಸಾಹಿತ್ಯದಿಂದ ಸಾಧ್ಯ ಎಂದು ನನ್ನನ್ನು ಕೇಳಿದರೆ ನಾನು ಮತ್ತೆ ಭಾರತ­ವನ್ನು ಸೂಚಿಸುತ್ತೇನೆ’. ಈ ಹಿರಿಮೆಗೆ ಪಾತ್ರವಾಗಿದ್ದೂ ಭಾರತ ಏನಾಗಿದೆ? 2014ರ ಸ್ವಾತಂತ್ರ್ಯ ದಿನಾಚರಣೆ­ಯಂದು ಪ್ರಧಾನಮಂತ್ರಿ ಕೆಂಪುಕೋಟೆಯ ಮೇಲೆ ನಿಂತು ‘ಶೌಚಾಲಯ’ ಕುರಿತು ಒತ್ತಿ ಹೇಳುವ ಪರಿಸ್ಥಿತಿ ಇನ್ನೂ ಇದೆಯಲ್ಲ ಏಕೆ? ತಲೆಯ ಮೇಲೆ ಮಲ ಹೊರುವ ದೀನಸ್ಥಿತಿ ಇಂದಿಗೂ ಏಕೆ ಇದೆ? ಬ್ರಿಟಿಷರು ಭಾರತಕ್ಕೆ ಬರದಿದ್ದರೆ ಫ್ಲಷ್‌ಔಟ್‌ ವ್ಯವಸ್ಥೆ ಆಗುತ್ತಿತ್ತೆ? ಭಾರತ ಒಕ್ಕೂಟ ರಾಷ್ಟ್ರವಾಗಿ ಹೊಮ್ಮು­ತ್ತಿತ್ತೆ? ತಲೆ ಇರುವುದೇ ಮಲ ಹೊರಲು ಎನ್ನುವ ಸ್ಥಿತಿಯಿಂದ ಎಂದಿಗೆ ಪಾರಾಗುವುದು? ಸ್ವಾತಂತ್ರ್ಯ ಬಂದ 67ನೇ ವರ್ಷದಲ್ಲಿ ಪ್ರಧಾನಿ ‘ಸ್ವಚ್ಛ ಭಾರತಕ್ಕೆ’ ಕರೆ ಕೊಟ್ಟಿದ್ದಾರೆ. ಸ್ವಾಗ ತಾರ್ಹ. ಸಾರ್ವಜನಿಕರ ಪಾಲ್ಗೊಳ್ಳುವಿಕೆಯ ಅಗತ್ಯವನ್ನು ಅದು ಸಾರುತ್ತದೆ. ಆದರೆ ಸ್ವಚ್ಛತೆ­ಯನ್ನು ಕಾಪಾಡಬೇಕಾದ ಆಡಳಿತ ಯಂತ್ರ ನಿಷ್ಕ್ರಿಯವಾಗಿ ಉಳಿದರೆ ಅದು ಸಾಧ್ಯವಾದೀತೆ? ಅದನ್ನು ಚುರುಕುಗೊಳಿಸುವ ಯಾವ ಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅನುಮೋದಿಸಿ ದ್ದಾರೆ? ಸ್ವಚ್ಛತೆ ಕಾರ್ಯ ಒಂದು ದಿನ ಮಾಡಿ ಬಿಡು­ವಂಥದ್ದಲ್ಲ. ಎದ್ದಾಗ ಮುಖ ತೊಳೆಯು­ವಂತೆ ಅದು ನಿತ್ಯ ನಿರಂತರ ನಡೆಯಬೇಕಾದುದು. ಮುಂದುವರಿದ ರಾಷ್ಟ್ರಗಳನ್ನು ನೋಡಿ ಬಂದ ಯಾರಿಗಾದರೂ ಭಾರತ ಕೊಳೆಗೇರಿಯಂತೆ ಭಾಸವಾದರೆ ಆಶ್ಚರ್ಯವಿಲ್ಲ. ಏಕೆ ಇನ್ನೂ ಈ ಸ್ಥಿತಿಯಲ್ಲಿ ನಾವು ಉಳಿದಿದ್ದೇವೆ? ಭುಗಿಲೇಳು ತ್ತಿರುವ ಭ್ರಷ್ಟಾಚಾರವೆ? ಅದು ನಿಜ ಎನ್ನುವು­ದಾದರೆ ನಮ್ಮ ಶಿಕ್ಷಣ ವ್ಯವಸ್ಥೆ ಎಂಥವರನ್ನು ತಯಾರು ಮಾಡುತ್ತಿದೆ? ಸ್ವಚ್ಛ ಭಾರತಕ್ಕಾಗಿ ಸ್ವತಂತ್ರ ಭಾರತದಲ್ಲಿ ಶಿಕ್ಷಣ ಪಡೆದವರ ಕೊಡುಗೆ ಏನು? ಬದಲಾವಣೆಯಾ­ಗಬೇಕಾಗಿ­ರು­ವುದು ಎಲ್ಲಿ? ‘ಜಗಳ ಕಾಯುವುದು, ಒಬ್ಬರು ಮತ್ತೊಬ್ಬರನ್ನು ನಿಂದಿಸುವುದು ನಮ್ಮ ಜನಾಂಗದ ಚಾಳಿಯಾಗಿದೆ’ ಎಂದು ವಿವೇಕಾ­ನಂದರು ಹೇಳಿ ಶತಮಾನ ಸಂದರೂ ಅದು ಉಡುಗುವ ಬದಲು ಇನ್ನೂ ಉಲ್ಬಣಗೊಳ್ಳುತ್ತಿದೆಯಲ್ಲ ಏಕೆ? ಶಿಕ್ಷಣ ಕಲಿಸುತ್ತಿರುವುದೇನು? ಪರಿಸರ ಶುದ್ಧವಾಗಿರಬೇಕು ಎನ್ನುವ ಪ್ರಧಾನಿ ಯವರ ಕಳಕಳಿ ಸ್ವಾಗತಾರ್ಹ. ಕೇವಲ ಬಹಿರಂಗ ಶುದ್ಧಿಗಷ್ಟೆ ಸೀಮಿತವಾದರೆ ಸಾಕೆ? ಅಥವಾ ಅದಕ್ಕೂ ಮೂಲಭೂತವಾದ ಅಂತರಂಗ ಶುದ್ಧಿಗೆ, ಪರಿವರ್ತನೆಗೆ ಎದೆ ತೆರೆಯ­ಬೇಕಾದ ಅನಿವಾರ್ಯತೆ ಇಲ್ಲವೆ? ಭಾರತದ ಮುಂದಿರುವ ಪ್ರಮುಖ ಪ್ರಶ್ನೆ ಎಂದರೆ ಹೊರದೇಶದ ಕಾರ್ಪೊರೇಟ್‌ ಧಣಿಗಳು ಭಾರತದಲ್ಲಿ ಬೇರೂರಿ ಅಂತರಂಗ­ದಲ್ಲಿ ಎಲ್ಲ ಬನಿಯನ್ನೂ ಬಸಿದುಕೊಂಡು ಬಹಿ­ರಂಗದಲ್ಲಿ ‘ಮೇಡ್‌ ಇನ್‌ ಇಂಡಿಯಾ’ ಎಂದು ಮುದ್ರೆ ಯೊತ್ತಿದರೆ ಸಾಕೆ? ಇಲ್ಲಾ ಭಾರತ ತನ್ನ ಅಂತಃಸತ್ವದಿಂದ ಮೇಲೆದ್ದು ನಿಲ್ಲಬೇಕೆ? ಗಾಂಧಿಯವರ ಸ್ವಚ್ಛಭಾರತದ ಕಲ್ಪ ನೆಯೇ ವಿಭಿನ್ನ ಹಾಗೂ ವಿಶಿಷ್ಟವಾದುದು. ಅವರು ಬಹಿರಂಗ ಶುದ್ಧಿಯಷ್ಟೇ ಅಥವಾ ಅದಕ್ಕಿಂತ ಮಿಗಿಲಾಗಿ ಹಾಗೂ ಅದಕ್ಕೆ ಪೂರಕ­ವಾಗುವ ಅಂತರಂಗ ಶುದ್ಧಿಗೆ ಪ್ರೇರಣೆ ನೀಡುತ್ತಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಸಹಧರ್ಮಿಣಿ ಕಸ್ತೂ­ರಿಬಾ ಅವರು ಶೌಚಾಲಯ ಶುದ್ಧಿ ಮಾಡು­ವುದಿಲ್ಲ ಎಂದಾಗ ಗಾಂಧೀಜಿ ಅವರನ್ನು ಮನೆಯಿಂದ ಹೊರ­ದಬ್ಬುತ್ತಾರೆ. ಆಗ ಕಸ್ತೂರಿಬಾ ‘ನಾನು ನಿಮ್ಮನ್ನು ನಂಬಿ ಬಂದಿದ್ದೇನೆ. ಎಲ್ಲಿಗೆ ಹೋಗಲಿ?’ ಎಂದು ಕಣ್ಣೀರಿ­ಡು­ತ್ತಾರೆ. ಗಾಂಧಿ ಸಮಾಧಾನ­ಚಿತ್ತರಾಗಿ ಕಸ್ತೂ­ರಿಬಾ ಅವರನ್ನು ಕರೆದುಕೊಂಡು ಮನವೊಲಿಸುತ್ತಾರೆ. ಇಂದು ಇಡೀ ರಾಷ್ಟ್ರವನ್ನು ಕಾಡುತ್ತಿರುವ ಮೂಲ ಸಮಸ್ಯೆಗಳನ್ನು ಕುರಿತು ಪ್ರಧಾನಿ­ಯವರ ಗಮನವನ್ನು ಸೆಳೆಯಬೇಕಾಗಿದೆ. ಇಲ್ಲ­ವಾದರೆ ‘ಸ್ವಚ್ಛಭಾರತ’ ಇರಲಿ, ಭಾರತ ಭಾರತವಾಗಿಯೇ ಉಳಿಯುವುದಿಲ್ಲ. ಭಾರತ, ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ. ಅದಕ್ಕೆ ಕಾರಣವಾದ ಮೂಲವನ್ನು ಗಾಂಧೀಜಿ ಅಂದೇ ಗುರುತಿಸಿ ಅವುಗಳನ್ನು ಸಪ್ತ ಸಾಮಾಜಿಕ ಪಾತಕಗಳೆಂದು ಕರೆದಿದ್ದಾರೆ. ಅವುಗಳೆಂದರೆ 1. ತತ್ವರಹಿತ ರಾಜಕಾರಣ 2. ದುಡಿಮೆ ಇಲ್ಲದ ಸಂಪತ್ತು 3. ಆತ್ಮಸಾಕ್ಷಿ ಇಲ್ಲದ ಸಂತೋಷ 4. ಚಾರಿತ್ರ್ಯವಿಲ್ಲದ ಶಿಕ್ಷಣ 5. ನೀತಿ ಇಲ್ಲದ ವ್ಯಾಪಾರ 6. ಮಾನವೀಯತೆ ಇಲ್ಲದ ವಿಜ್ಞಾನ 7. ತ್ಯಾಗವಿಲ್ಲದ ಪೂಜೆ ಆದರೆ ಈ ಎಲ್ಲ ವಿಷಯಗಳಲ್ಲಿ ತದ್ವಿರುದ್ಧ­ವಾದ ಕ್ರಿಯೆಗಳೇ ನಡೆಯುತ್ತಿವೆ. ತತ್ವ ಅಂತ ಹೊರಟರೆ ರಾಜಕಾರಣ ಮಾಡಲಾಗುವುದಿಲ್ಲ ಎಂದು ರಾಜಕಾರಣಿಗಳು ವಂಚಿತರಾಗಿ ವಂಚಿ ಸುತ್ತಿದ್ದಾರೆ. ಶ್ರಮವೇ ಇಲ್ಲದೆ ಹಣ ಗಳಿಸುವ ಬುದ್ಧಿಜೀವಿಗಳು, ಚಾರಿತ್ರ್ಯವಲ್ಲ, ಹಣವೇ ಸರ್ವಸ್ವ ಎಂದು ನಂಬಿರುವ ಶಿಕ್ಷಣ ವ್ಯವಸ್ಥೆ, ಕಲಬೆರಕೆ ಹಾಗೂ ಮೋಸವೇ ವ್ಯಾಪಾರದ ಜೀವ ಜೀವಾಳ ಎನ್ನುವ ವರ್ತಕ ವರ್ಗ. ಮನುಷ್ಯತ್ವವನ್ನೇ ನಾಶಮಾಡುವ ವೈಜ್ಞಾನಿಕ ಅವಿಷ್ಕಾರ­ಗಳು. ತ್ಯಾಗವಲ್ಲ, ಗಳಿಕೆಯೇ ಪೂಜೆಯ ಅಂತಿಮ ಗುರಿ ಎಂದು ಮುಗಿಬೀಳುತ್ತಿರುವ ಪುರೋ­ಹಿತ­ವರ್ಗ. ಹೀಗೆ ಇವು ಇಡೀ ಸಾಮಾಜಿಕ ಬದುಕನ್ನು ನರಕಸದೃಶವಾಗಿಸುತ್ತಿವೆ. ನಿಜವಾಗಿಯೂ ಆತ್ಮಸಾಕ್ಷಿಯಾಗಿ ಪೊರಕೆ ಹಿಡಿದು ಕಸಗುಡಿಸುವವರ ಸಂಖ್ಯೆ ವಿರಳಾತಿ­ವಿರಳ. ಪ್ರಚಾರಪ್ರಿಯರ ಸಂಖ್ಯೆಯೇ ಹೆಚ್ಚು. ಪ್ರಧಾನಿ ಮೋದಿಯವರು ಇನ್ನಾದರೂ ಈ ಸಪ್ತ ಸಾಮಾಜಿಕ ಪಾಪಗಳ ನಿರ್ಮೂಲನೆಯತ್ತ ತಮ್ಮ ಚಿತ್ತವನ್ನು ಹರಿಸಿ ಕಾರ್ಯೋನ್ಮುಖರಾದರೆ ಭಾರತದ ಬದುಕಿಗೆ ಇನ್ನು ಮುಂದಾದರೂ ಬನಿ ಹನಿಯುತ್ತದೆ. ಆ ಅಂತರಂಗದ ಪ್ರೇರಣೆ ನಮ್ಮದಾಗಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.