ಪಾಠ ಕಲಿಯಲಿ ಛತ್ತೀಸಗಡ ರಾಜ್ಯ ಸರ್ಕಾರ, ಬಿಲಾಸಪುರದಲ್ಲಿ ಆಯೋಜಿಸಿದ್ದ ಸಂತಾನಶಕ್ತಿಹರಣ ಸಾಮೂಹಿಕ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರ ಪೈಕಿ 11 ಮಹಿಳೆಯರು ಸತ್ತಿದ್ದಾರೆ. 49 ಮಹಿಳೆಯರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರಲ್ಲಿ 20ಕ್ಕೂ ಹೆಚ್ಚು ಮಂದಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂಬುದು ಆಘಾತಕಾರಿ. ಇದು ಗಂಭೀರವಾದ ಮಾನವ ದುರಂತ ಎಂದು ವಿಶ್ವಸಂಸ್ಥೆ ಹೇಳಿರುವುದು ಸರಿಯಾಗಿಯೇ ಇದೆ. 80 ಶಸ್ತ್ರಚಿಕಿತ್ಸೆಗಳನ್ನು ಕೇವಲ 5 ಗಂಟೆ ಅವಧಿಯಲ್ಲಿ ಒಬ್ಬರೇ ವೈದ್ಯರು ಮಾಡಿ ಮುಗಿಸಿದ್ದಾರೆ ಎಂಬಂಥ ವರದಿಗಳಿವೆ. ಈ ಬಗ್ಗೆ ಸಮಗ್ರ ತನಿಖೆ­ಯಾಗಬೇಕು. ಈ ಮಟ್ಟಿನ ದುರಂತಕ್ಕೆ ವೈದ್ಯಕೀಯ ನಿರ್ಲಕ್ಷ್ಯ, ಔಷಧದ ವ್ಯತ್ಯಾಸ ಅಥವಾ ಬೇರೆ ಇನ್ನಿತರ ಯಾವ ಸಂಗತಿಗಳು ಕಾರಣವಾಗಿವೆ ಎಂಬುದು ನಿಖರವಾಗಿ ಪತ್ತೆಯಾಗಬೇಕು. ಸಾರ್ವಜನಿಕ ಆರೋಗ್ಯ ಶಿಬಿರಗಳ ಅವ್ಯವಸ್ಥೆಗಳು ಈ ದುರಂತದ ಮೂಲಕ ಮತ್ತೊಮ್ಮೆ ಬಯಲಾಗಿವೆ ಎನ್ನಬ­ಹುದು. ಬಡಮಹಿಳೆಯರ ಜೀವಗಳು ಈ ಅವ್ಯವಸ್ಥೆಗೆ ಬಲಿಯಾಗಿರುವುದು ವಿಷಾದನೀಯ. ಭಾರತದಲ್ಲಿ ಏರುತ್ತಲೇ ಇರುವ ಜನಸಂಖ್ಯೆಯ ನಿಯಂತ್ರಣಕ್ಕಾಗಿ ಸಂತಾನಶಕ್ತಿಹರಣ ಸಾಮೂಹಿಕ ಶಸ್ತ್ರಚಿಕಿತ್ಸಾ ಶಿಬಿರಗಳನ್ನು ನಡೆಸುವುದು ಚಾಲ್ತಿಯಲ್ಲಿರುವ ಕ್ರಮ. ಟ್ಯೂಬೆಕ್ಟಮಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮಹಿಳೆ­ಯರಿಗೆ ಪ್ರೋತ್ಸಾಹಕರ ಬಹುಮಾನಗಳನ್ನೂ ನೀಡಲಾಗುತ್ತದೆ. ವಾಸ್ತವವಾಗಿ ಕುಟುಂಬ ಯೋಜನೆಯಡಿ ಮಹಿಳೆಯರು ಮಾತ್ರವಲ್ಲ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಪುರುಷರಿಗೂ ಅವಕಾಶವಿದೆ. ಪುರುಷರಿಗೆ ಮಾಡ­ಲಾಗುವ ವ್ಯಾಸೆಕ್ಟೆಮಿ ಶಸ್ತ್ರಚಿಕಿತ್ಸೆ ಅತ್ಯಂತ ಸುಲಭದ ಚಿಕಿತ್ಸಾ ವಿಧಾನ ಎಂದು ವೈದ್ಯಕೀಯ ಲೋಕ ಹೇಳುತ್ತದೆ. ಆದರೆ ಈ ಶಸ್ತ್ರಚಿಕಿತ್ಸೆಗೆ ಪುರುಷ­ರಿಂದ ಹೆಚ್ಚಿನ ಸ್ಪಂದನಗಳಿಲ್ಲ. ಭಾರತದಲ್ಲಿ ಶೇ 98ರಷ್ಟು ಪ್ರಕರಣಗಳಲ್ಲಿ ಮಹಿಳೆಯರೇ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳುತ್ತಾರೆ. ಇದಕ್ಕೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರಣಗಳಿವೆ. ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯಿಂದ ಪುರುಷನ ಲೈಂಗಿಕ ಸಾಮರ್ಥ್ಯ ಕುಗ್ಗುತ್ತದೆ. ಅಲ್ಲದೆ ದುಡಿ­ಯುವ ಗಂಡಸಿಗೆ ದೈಹಿಕ ನಿಶ್ಶಕ್ತಿ ಉಂಟಾಗುತ್ತದೆ ಎಂಬಂಥ ತಪ್ಪುಕಲ್ಪನೆಗಳು ಚಾಲ್ತಿಯಲ್ಲಿವೆ. ಇದರಿಂದಾಗಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿ­ಕೊ­ಳ್ಳುವ ಅನಿವಾರ್ಯಕ್ಕೆ ಮಹಿಳೆಯೇ ಸಿಲುಕುತ್ತಾಳೆ. ಛತ್ತೀಸಗಡದ ಬಿಲಾಸ ಪುರದಲ್ಲಿ ಸತ್ತ ಮಹಿಳೆಯರೆಲ್ಲರೂ ಬಡಕುಟುಂಬಗಳಿಗೆ ಸೇರಿದವರು. ಈ ಮಹಿಳೆಯರಿಗೆ ಶಸ್ತ್ರಚಿಕಿತ್ಸೆಗೊಳಗಾಗುವ ಮುನ್ನ ಸೂಕ್ತ ಮಾಹಿತಿಗಳನ್ನು ನೀಡಲಾಗಿತ್ತೆ ಎಂಬುದು ಪ್ರಶ್ನೆ. ಸಾಮೂಹಿಕ ಶಸ್ತ್ರಚಿಕಿತ್ಸೆ ಶಿಬಿರಗಳಲ್ಲಿ ಪಾಲಿ­ಸ­ಲೇಬೇಕಾದ ನಿಗದಿತ ಮಾರ್ಗಸೂಚಿಗಳಿವೆ. ಇವುಗಳ ಅನ್ವಯ ಸುಸಜ್ಜಿತ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತೆ ಎಂಬುದು ಮತ್ತೊಂದು ಪ್ರಶ್ನೆ. ಈ ವಿವರಗ­ಳೆ­ಲ್ಲವೂ ತನಿಖೆಗೆ ಒಳಪಡಬೇಕು. ನಿಯಮಗಳ ಉಲ್ಲಂಘನೆಯಾಗಿದ್ದಲ್ಲಿ ತಪ್ಪಿತ­ಸ್ಥ­ರಿಗೆ ಶಿಕ್ಷೆಯಾಗಬೇಕು. ರಾಷ್ಟ್ರದಲ್ಲಿ ಜನಸಂಖ್ಯೆ ನಿಯಂತ್ರಣದ ಗುರಿ ಸಾಧನೆಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾತ್ರವೇ ಪರಿಹಾರವಲ್ಲ ಎಂಬುದನ್ನು ನೀತಿ­ನಿರೂಪಕರು ಅರ್ಥಮಾಡಿಕೊಳ್ಳಬೇಕು. ಸಂತಾನಶಕ್ತಿ ನಿಯಂತ್ರಣದ ಇತರ ವಿಧಾನಗಳ ಬಗೆಗೂ ಜಾಗೃತಿ ಮೂಡಿಸುವುದು ಅತ್ಯಗತ್ಯ. ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಳ ಗುರಿ ಸಾಧನೆಯ ಒತ್ತಡಕ್ಕೆ ಸಿಲುಕುವ ಆರೋಗ್ಯ ಕಾರ್ಯ­ಕ­ರ್ತರು ಬಡ ಮಹಿಳೆಯರಿಗೆ ಸೂಕ್ತ ಮಾರ್ಗದರ್ಶನ ನೀಡಲು ವಿಫಲವಾಗು­ವುದೂ ಉಂಟು. ಆದರೆ ಕುಟುಂಬ ಯೋಜನೆಯ ಸಾಧನವಾಗಿ ಬಳಕೆ­ಯಾ­ಗುತ್ತಾ ಮಹಿಳೆಯ ದೇಹ ಹತ್ಯೆಯಾಗುವಂತಾಗಬಾರದು. ಈ ನಿಟ್ಟಿನಲ್ಲಿ ಬಿಲಾಸಪುರದ ಮಹಿಳೆಯರ ಸಾವುಗಳ ದುರಂತ ನಮಗೆ ಪಾಠವಾಗಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.