ಬದ್ಧತೆ ಪ್ರದರ್ಶಿಸಲಿ ರಾಜ್ಯದಲ್ಲಿ 4.5 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯುತ್ತಿರುವ ಕಬ್ಬು ಬೆಳೆಗೆ ಹನಿ ನೀರಾವರಿ ಸೌಕರ್ಯ ಕಲ್ಪಿಸುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ರೈತರು ಕಬ್ಬು ಬೆಳೆಯಲು ಹರಿ ನೀರಾವರಿ ಪದ್ಧತಿಯನ್ನೇ ಅವ­ಲಂ­ಬಿಸಿದ್ದಾರೆ. ಇದು ಹೆಚ್ಚು ನೀರು ಬೇಡುವ ಬೆಳೆ ಎಂದೇ ರೈತರ ಭಾವನೆ. ಆದರೆ ಕೆಲವು ರೈತರು ವೈಯಕ್ತಿಕವಾಗಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿ­ಸಿಕೊಂಡು ಕಡಿಮೆ ನೀರು ಬಳಸಿ, ಹೆಚ್ಚು ಇಳುವರಿ ಪಡೆಯುತ್ತಿರುವುದು ಇತರ ರೈತರ ಕಣ್ತೆರೆಸಬೇಕಿತ್ತು. ಅತ್ತ ರೈತರು ಗಮನಕೊಡದ ಕಾರಣ ಸರ್ಕಾರವೇ ಈ ಪದ್ಧತಿ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡಿಸಿ, ಅನುಷ್ಠಾನಕ್ಕೆ ಮುಂದಾ­ಗಿ­ರುವುದು ಸರಿಯಾದ ತೀರ್ಮಾನ. ಹನಿ ನೀರಾವರಿ ಪದ್ಧತಿಯನ್ನು ಅನು­ಸರಿಸುವ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ನೀರು ಉಳಿತಾಯವಾಗಲಿದೆ. ಹನಿ ಹನಿ ನೀರಿಗೂ ಬಡಿದಾಡುವ ಪರಿಸ್ಥಿತಿ ನಿರ್ಮಾಣವಾಗಿರುವ ಇಂದಿನ ದಿನಗ­ಳಲ್ಲಿ ಇಂತಹ ಸುಧಾರಣೆಯ ಅಗತ್ಯ ಹೆಚ್ಚಾಗಿದೆ. ಸರ್ಕಾರ ತಡವಾಗಿ­ಯಾ­ದರೂ ಎಚ್ಚೆತ್ತುಕೊಂಡು ಬೃಹತ್‌ ಪ್ರಮಾಣದಲ್ಲಿ ಈ ಯೋಜನೆ ಜಾರಿಗೆ ಸಿದ್ಧತೆ ನಡೆಸಿರುವುದು ಸರಿಯಾಗಿದೆ. ಜತೆಗೆ ವಿದ್ಯುತ್‌ ಬಳಕೆಯೂ ಗಣನೀಯ­ವಾಗಿ ಕಡಿಮೆಯಾಗಲಿದೆ. ಯೋಜನೆ ಜಾರಿಗೆ ಯಾವುದೇ ಅಡಚಣೆ ಬಾರದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಯೂ ಸರ್ಕಾರದ್ದೇ ಆಗಿದೆ. ಎದುರಾಗಬಹುದಾದ ಅಡಚಣೆಗಳನ್ನು ಮೊದಲೇ ಗ್ರಹಿಸಿ ಸರಿಪಡಿಸಲು ಕ್ರಮ ತೆಗೆದುಕೊಳ್ಳಬೇಕು. ಮಹತ್ವದ ಈ ಯೋಜನೆಯ ಜಾರಿಯಲ್ಲಿ ಸರ್ಕಾರ ಬದ್ಧತೆಯನ್ನು ಪ್ರದರ್ಶಿಸಬೇಕು. ಯೋಜಿತ ರೀತಿಯಲ್ಲಿಯೇ ಮೂರು ವರ್ಷದ ಅವಧಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಈಗಾಗಲೇ ಹಾವೇರಿ ಜಿಲ್ಲೆಯ ಶಿಗ್ಗಾವಿ ಮತ್ತು ಸವಣೂರು ತಾಲ್ಲೂಕು­ಗಳ ಹಲವು ಹಳ್ಳಿಗಳಲ್ಲಿ ರೈತರ ಹೊಲಕ್ಕೆ ಸರ್ಕಾರ ತುಂತುರು ನೀರಾವರಿ ಸೌಕರ್ಯ ಕಲ್ಪಿಸಿದೆ. ವರದಾ ನದಿಯಲ್ಲಿ ನೀರು ಹರಿಯುವ ಸಂದರ್ಭದಲ್ಲಿ ಪಂಪ್‌ ಮಾಡುವ ಮೂಲಕ ಅದನ್ನು ದೊಡ್ಡ ದೊಡ್ಡ ತೊಟ್ಟಿಗಳಿಗೆ ಹರಿಸಿಕೊಂಡು ನಂತರ ರೈತರ ಹೊಲಕ್ಕೆ ಪೂರೈಕೆ ಮಾಡಲಾಗುತ್ತಿದೆ. ಇಂತಹ ಕೆಲಸಗಳು ಇನ್ನಷ್ಟು ಹೆಚ್ಚಾಗಬೇಕು. ರೈತರಿಗೆ ಕಡಿಮೆ ನೀರು ಬಳಸಿಕೊಂಡು ಕೃಷಿ ಮಾಡುವ ವಿಧಾನಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಕೃಷಿಯಲ್ಲಿ ಸುಧಾರಣೆ ಜರೂರಾಗಿ ಆಗಬೇಕಾದ ಕೆಲಸ. ಆಧುನೀಕರಣ ಒಳ್ಳೆಯದೇ. ತಜ್ಞರ ಅಭಿಪ್ರಾಯವನ್ನು ಅಳವಡಿಸಿಕೊಳ್ಳುವತ್ತ ರೈತರೂ ತೊಡಗಿಕೊಳ್ಳ­ಬೇಕು. ಕಬ್ಬು ಬೆಳೆಗಾರರು ನೀರಿಗಾಗಿ ಪರಿತಪಿಸುವುದನ್ನು ನೋಡಿದರೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ವಿನಿಯೋಗಿಸಬೇಕಾದ ಮೊತ್ತ ತೀರಾ ಹೆಚ್ಚೇನೂ ಅಲ್ಲ. ಆದರೂ ರೈತರನ್ನು ಉತ್ತೇಜಿಸಲು ಸಬ್ಸಿಡಿ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು. ಬ್ಯಾಂಕುಗಳು ಕೂಡ ರೈತರಿಗೆ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸುಲಭವಾಗಿ ಸಾಲ ನೀಡಬೇಕು. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಬ್ಯಾಂಕುಗಳ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಸಾಲ ಪ್ರಕ್ರಿಯೆಯನ್ನು ಸರಳಗೊಳಿಸಬೇಕು. ಇದರ ಜತೆಗೆ ಸಕ್ಕರೆ ಕಾರ್ಖಾನೆಗಳ ಮಾಲೀಕರು ಕೂಡ ಈ ಯೋಜನೆ ಅಳವಡಿಸಿಕೊಳ್ಳುವ ರೈತರಿಗೆ ಎಕರೆಗೆ ರೂ 5,000 ನೆರವು ನೀಡಲು ಒಪ್ಪಿರುವುದು ಮತ್ತು ಬ್ಯಾಂಕ್‌ಗೆ ಗ್ಯಾರಂಟಿ ಒದಗಿಸಲು ಮುಂದೆ ಬಂದಿರುವುದು ಕೂಡ ಮೆಚ್ಚುವಂಥದ್ದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.