ತೀವ್ರ ಹಿನ್ನಡೆ ಅಮೆರಿಕದಲ್ಲಿ ನಡೆದ ಮಧ್ಯಾಂತರ ಚುನಾವಣೆಯಲ್ಲಿ ಹೊರಬಿದ್ದ ಫಲಿ­ತಾಂಶಗಳಿಂದ ರಾಜಕೀಯ ಚಿತ್ರ ಬದಲಾಗಿದೆ. ಈ ಚುನಾ­ವಣೆಯಲ್ಲಿ ರಿಪಬ್ಲಿಕನ್ ಪಕ್ಷ ಮೇಲುಗೈ ಸಾಧಿಸಿದೆ. ಸೆನೆಟ್‌ನಲ್ಲಿ (ಮೇಲ್ಮನೆ) ಅದು ಬಹುಮತ ಪಡೆದುಕೊಂಡಿದೆ. ಇದರಿಂದ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಅವರ ಡೆಮಾಕ್ರಟಿಕ್ ಪಕ್ಷಕ್ಕೆ ಆಗಿರುವ ಹಿನ್ನಡೆ ತೀವ್ರವಾದದ್ದು. ಎಂಟು ವರ್ಷಗಳ ಬಳಿಕ ಅಮೆರಿಕದ ಸೆನೆಟ್ ಮೇಲೆ ರಿಪ­ಬ್ಲಿಕನ್ ಪಕ್ಷ ಹಿಡಿತ ಸಾಧಿಸುವಂತಾಗಿದೆ. ಕೆಳಮನೆಯಾದ ಜನಪ್ರತಿನಿಧಿ ಸಭೆಯಲ್ಲೂ (ಹೌಸ್ ಆಫ್ ರೆಪ್ರಸೆಂಟಟಿವ್ಸ್) ರಿಪಬ್ಲಿಕನ್ ಪಕ್ಷ ತನ್ನ ಸ್ಥಾನ­ಗಳನ್ನು ಹೆಚ್ಚಿಸಿಕೊಂಡಿದೆ. ಅಲ್ಲದೆ ಅನೇಕ ಪ್ರಮುಖ ರಾಜ್ಯಗಳಲ್ಲಿ ಅವರ ಪಕ್ಷಕ್ಕೆ ಸೇರಿದವರು ಗವರ್ನರ್‌ಗಳಾಗಿ ಆಯ್ಕೆಯಾಗಿದ್ದಾರೆ. ಒಬಾಮ ಅವರ ತವರು ರಾಜ್ಯ ಇಲಿನಾಯ್ ನಲ್ಲಿ ರಿಪಬ್ಲಿಕನ್ ಗವರ್ನರ್ ಆಯ್ಕೆ­ಯಾಗಿ­ದ್ದಾರೆ. ಈ ಫಲಿತಾಂಶ ಹೆಚ್ಚಿನ ಅಚ್ಚರಿಯೇನೂ ಹುಟ್ಟಿಸಿಲ್ಲ. ಅಧ್ಯಕ್ಷ ಬರಾಕ್ ಒಬಾಮ ಅವರ ನಾಯಕತ್ವದ ವಿರುದ್ಧದ ಮತ ಎಂದೂ ಈ ಫಲಿತಾಂಶ­ವನ್ನು ಪರಿಗಣಿಸುವುದಕ್ಕೆ ಸಾಧ್ಯವಿದೆ. ಆದರೆ ನಿರೀಕ್ಷೆಗಿಂತ ಹೆಚ್ಚಿನ ಮಟ್ಟ­ದಲ್ಲೇ ಹೊಡೆತ ಅನುಭವಿಸಲಾಗಿದೆ ಎಂಬುದು ನಿಜ. ಒಬಾಮ ಅವರ ಆರು ವರ್ಷಗಳ ಆಡಳಿತಕ್ಕೆ ಮತದಾರರ ಅಸಮಾಧಾನ ನಿಚ್ಚಳ­ವಾಗಿದೆ. ಅವರು ಅಧ್ಯಕ್ಷರಾಗಿದ್ದ ಮೊದಲ ಅವಧಿಯಲ್ಲಿ ಕೈಗೊಂಡ ಅನೇಕ ಕಾರ್ಯ­ಕ್ರಮ­ಗಳು ಗಮನಾರ್ಹವಾಗಿದ್ದವು. ಅವು– ಹಣಕಾಸು ಬಿಕ್ಕಟ್ಟು ಪರಿಹಾರ, ಆರೋಗ್ಯ ಪಾಲನೆ ಸುಧಾರಣೆ ಯೋಜನೆ ಹಾಗೂ ಒಸಾಮಾ ಬಿನ್ ಲಾಡೆನ್ ಹತ್ಯೆ ಮುಂತಾದವು. ಆದರೆ ಅಧ್ಯಕ್ಷರಾಗಿ ಆಯ್ಕೆಯಾದ ಎರಡನೇ ಅವಧಿಯಲ್ಲಿ ಒಬಾಮ ಜನಪ್ರಿಯತೆ ಗಣನೀಯ­ವಾಗಿ ತಗ್ಗಿದೆ. ಅಮೆರಿಕ ಆರ್ಥಿಕತೆ ಹೆಚ್ಚಿನ ಮಟ್ಟದ ಸುಧಾರಣೆಯನ್ನೇನೂ ಕಂಡಿಲ್ಲ. ಚೇತರಿಕೆಯ ಸೂಚನೆಗಳನ್ನಷ್ಟೇ ನೀಡಿದೆ. ವಿದೇಶಾಂಗ ನೀತಿ ಕ್ಷೇತ್ರದಲ್ಲೂ ವೈಫಲ್ಯಗಳು ಗೋಚರವಾಗಿವೆ. ಐಎಸ್ಐಎಸ್ ಉಗ್ರರ ನಿರ್ವಹಣೆಯಲ್ಲಿ ಹೆಚ್ಚಿನ ಭರವಸೆ ವ್ಯಕ್ತವಾಗಿಲ್ಲ. ಇತ್ತೀಚೆಗೆ ಎಬೋಲಾ ಬಿಕ್ಕಟ್ಟು ಸವಾಲು ನಿರ್ವಹಣೆಯಲ್ಲೂ ದಕ್ಷತೆ ತೋರಿಸುವಲ್ಲಿ ಒಬಾಮ ಆಡಳಿತ ವಿಫಲ­ವಾ­ಗಿದೆ. ಮುಂದಿನ ದಿನಗಳಲ್ಲಿ ತಾವು ಭರವಸೆ ನೀಡಿರುವ ಸುಧಾರಣೆ­ಗಳನ್ನು ಜಾರಿಗೆ ತರುವುದೂ ಡೆಮಾಕ್ರಾಟರಿಗೆ ಕಷ್ಟವಾಗಲಿದೆ. ಇಂತಹ ಪ್ರಯತ್ನ­ಗಳಿಗೆ ಕಾಂಗ್ರೆಸ್ ನ(ಸಂಸತ್) ಎರಡೂ ಸದನಗಳಲ್ಲಿ ಹಿಡಿತ ಹೊಂದಿ­­ರುವ ರಿಪಬ್ಲಿಕನ್ ಪಕ್ಷದಿಂದ ಅಡ್ಡಿಗಳು ಸಹಜವಾಗಿಯೇ ಎದುರಾಗ­ಲಿವೆ. ಈ ಫಲಿತಾಂಶದಿಂದ ಭಾರತದ ಮೇಲೂ ಪರಿಣಾಮ­ಗಳಾಗಲಿವೆ. ರಿಪಬ್ಲಿಕನ್ನರು ಭಾರತದ ಪರ ಒಲವು ಹೊಂದಿದವರು ಎಂಬುದು ಸಾಮಾನ್ಯ ಗ್ರಹಿಕೆ. ಇನ್ನೆರಡು ವರ್ಷಗಳಲ್ಲಿ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ತಮ್ಮನ್ನು ತಾವು ಸಾಬೀತು­ಪಡಿ­ಸಿ­ಕೊಳ್ಳಲು ರಿಪಬ್ಲಿಕನ್ನರಿಗೆ ಇನ್ನೂ ಎರಡು ವರ್ಷಗಳ ಕಾಲಾವಕಾಶವಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.