ಅವಘಡಗಳು ತಪ್ಪಲಿ ಒಂದು ವರ್ಷದಿಂದೀಚೆಗೆ ನಡೆದ ಸರಣಿ ಅವಘಡಗಳಿಂದ ಕಂಗೆಟ್ಟಿದ್ದ ನೌಕಾಪಡೆಗೆ, ವಿಶಾಖಪಟ್ಟಣದ ಕರಾವಳಿಯಲ್ಲಿ ಇದೇ 6ರಂದು ಹಡಗೊಂದು ಮುಳುಗುವ ಮೂಲಕ ಮತ್ತೊಂದು ಹೊಡೆತ ಬಿದ್ದಿದೆ. ಸಿಬ್ಬಂದಿ ತರಬೇತಿಯಲ್ಲಿ ನಿರತರಾಗಿದ್ದಾಗ ನಡೆದ ಈ ದುರ್ಘಟನೆಯಲ್ಲಿ ನಾವಿಕರೊಬ್ಬರು ಮೃತರಾಗಿ, ಬೆಳಗಾವಿ ಮೂಲದ ಕಮಾಂಡರ್‌ ಶಿಶಿರ್‌ ಕುಮಾರ ಯಡಣ್ಣವರ ಸೇರಿದಂತೆ ನಾಲ್ವರು ಕಣ್ಮರೆಯಾಗಿದ್ದಾರೆ. ನಾಲ್ಕು ದಿನ­ಗಳಿಂದ ವ್ಯಾಪಕ ಶೋಧ ನಡೆಯುತ್ತಿದ್ದರೂ ಸುಳಿವು ಲಭ್ಯವಾಗಿಲ್ಲ. ವಿಶ್ವದಲ್ಲೇ ನಾಲ್ಕನೇ ಅತಿ ದೊಡ್ಡದು ಎನಿಸಿಕೊಂಡಿರುವ ನಮ್ಮ ನೌಕಾಪಡೆ­ಯಲ್ಲಿ ಇಂತಹ ದುರಂತಗಳು ಮರುಕಳಿಸುತ್ತಲೇ ಇರುವುದು ನಿಜಕ್ಕೂ ಆತಂಕಕಾರಿ. ಅಷ್ಟೇ ಅಲ್ಲ, ಪ್ರಶ್ನಾರ್ಹ ಕೂಡ. ಜಲಸಾರಿಗೆ ಬಳಸಿಕೊಂಡು ಉಗ್ರರು ದೇಶದ ಮೇಲೆ ದಾಳಿ ನಡೆಸಲು ಸಂಚು ಹೂಡಿರುವ ಸುಳಿವು ಈಗಾಗಲೇ ಸರ್ಕಾರಕ್ಕೆ ಲಭ್ಯವಾಗಿದೆ. ಮುಂಬೈ ದಾಳಿಯಂತಹ ಬೃಹತ್‌ ವಿಧ್ವಂಸಕ ಕೃತ್ಯ ಎಸಗಿದ ಉಗ್ರರು ಭಾರತದ ಒಳನುಸುಳಿದ್ದೇ ಮುಂಬೈ ಕರಾವಳಿಯ ಮೂಲಕ. ಹೀಗಿರುವಾಗ ನೌಕಾಪಡೆಯನ್ನು ಎಷ್ಟು ಸನ್ನದ್ಧ ಸ್ಥಿತಿಯಲ್ಲಿ ಇಟ್ಟರೂ ಸಾಲದು. ಆದರೆ ಇಲ್ಲಿ ಆಗುತ್ತಿರುವುದೇನು? ತರಬೇತಿ ನಿರತ ನೌಕೆಗಳಲ್ಲಿ, ಜಲಾಂತರ್ಗಾಮಿಗಳಲ್ಲಿ ಸ್ಫೋಟ, ಬೆಂಕಿ, ಅನಿಲ ಸೋರಿಕೆ ಸಾಮಾನ್ಯ ಎಂಬಂತಾಗಿದೆ. ಕಳೆದ ವರ್ಷದ ಆಗಸ್‌್ಟನಲ್ಲಿ ಮುಂಬೈ ಬಂದರಿನಲ್ಲಿ ‘ಐಎನ್‌ಎಸ್‌ ಸಿಂಧುರಕ್ಷಕ್‌’ ಜಲಾಂತರ್ಗಾಮಿ ಸ್ಫೋಟಿಸಿ 18 ಮಂದಿ ಸಾವಿಗೀಡಾದಾಗಿನಿಂದ ಇಂದಿನವರೆಗೆ ಸುಮಾರು 15 ದುರಂತಗಳು ಘಟಿಸಿವೆ. ಹೀಗಿರುವಾಗ ನಮ್ಮ ಜಲಗಡಿ ಸುರಕ್ಷಿತವಾಗಿದೆ ಎಂಬ ನಂಬಿಕೆ ನಾಗರಿಕರಿಗೆ ಹೇಗೆ ಬರಲು ಸಾಧ್ಯ? ನೌಕಾಪಡೆ ಮುಖ್ಯಸ್ಥರಾಗಿದ್ದ ಡಿ.ಕೆ.ಜೋಷಿ ಇಂತಹ ದುರಂತಗಳ ನೈತಿಕ ಹೊಣೆ ಹೊತ್ತು ಕಳೆದ ಫೆಬ್ರುವರಿಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆದರೂ ಅಪಘಾತ ನಿಯಂತ್ರಣ ಸಾಧ್ಯವಾಗಿಲ್ಲ. ಅವರ ನಂತರ ಈ ಸ್ಥಾನಕ್ಕೆ ಬಂದಿರುವ ಆರ್‌.ಕೆ.ಧವನ್, ಉದ್ದೇಶಿತ ಯೋಜನೆಗಳ ತ್ವರಿತ ಅನು­ಷ್ಠಾನ ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದ್ದಾರೆ. ಯುದ್ಧನೌಕೆಗಳ ಆಯುಷ್ಯ ಸಾಮಾನ್ಯವಾಗಿ 25–30 ವರ್ಷ. ನಮ್ಮಲ್ಲಿರುವ ಶೇ 50ರಷ್ಟು ನೌಕೆ­ಗಳು 20 ವರ್ಷಗಳಷ್ಟು ಹಳೆಯವು. ಈಗ ವಿಶಾಖಪಟ್ಟಣದಲ್ಲಿ ಮುಳು­ಗಿದ ಹಡಗು 31 ವರ್ಷಗಳಷ್ಟು ಹಳೆಯದು. ಪರಿಸ್ಥಿತಿ ಹೀಗಿದ್ದರೂ ತುರ್ತು ಕ್ರಮ­ಗಳಿಗೆ ನೌಕಾಪಡೆ ಮುಂದಾಗದಿದ್ದರೆ ಸಿಬ್ಬಂದಿ ಆತ್ಮಸ್ಥೈರ್ಯ ಕಳೆದು­ಕೊಳ್ಳು­ತ್ತಾರೆ; ಸಮರ ಸನ್ನದ್ಧತೆಗೂ ಹೊಡೆತ ಬೀಳುತ್ತದೆ. ನಮಗಿಂತ ನಾಲ್ಕು ಪಟ್ಟು ಹೆಚ್ಚು ಜಲಾಂತರ್ಗಾಮಿಗಳನ್ನು ಹೊಂದಿರುವ ಚೀನಾ ಸೇರಿದಂತೆ ನೆರೆ­ಹೊರೆಯ ದೇಶಗಳಲ್ಲೇ ಉನ್ನತ ನೌಕಾಶಕ್ತಿ ಹೊಂದಬೇಕೆಂಬ ಭಾರತದ ಕನಸು ನನಸಾಗಬೇಕಾದರೆ ಸೂಕ್ತ ಕ್ರಮ ಅನಿವಾರ್ಯ. ಸಶಸ್ತ್ರ ಪಡೆಗಳಿಗೆ ವ್ಯಯಿ­ಸುವ ರೂ 80 ಸಾವಿರ ಕೋಟಿ ಯಲ್ಲಿ ನೌಕಾಪಡೆಗೆ ದೊಡ್ಡ ಪಾಲನ್ನೇ ತೆಗೆದಿರಿ­ಸಲಾಗಿದೆ. ಆದರೆ ನೌಕಾಪಡೆ, ಈ ಉದ್ದೇಶಿತ ಯೋಜನೆಗಳು ಅನು­ಷ್ಠಾನಕ್ಕೆ ಬರುವವರೆಗೂ ಕಾಯುತ್ತಾ ಕೂರದೆ ತ್ವರಿತವಾಗಿ ರಕ್ಷಣಾ ಕಾರ್ಯ­ತಂತ್ರಗಳನ್ನು ಹೆಣೆಯ ಬೇಕಾಗಿದೆ. ಇದಕ್ಕೆ ಪೂರಕವಾಗಿ, ಅವಧಿ ಮೀರಿದ ನೌಕೆಗಳನ್ನು ಬದಲಿಸುವ ಮೂಲಕ ನೌಕಾಪಡೆಯ ಬಲವರ್ಧನೆಗೆ ಸರ್ಕಾರ ಮುಂದಾಗಬೇಕು. ಜೊತೆಗೆ ಇಂತಹ ಘಟನೆಗಳ ಬಗ್ಗೆ ಸೂಕ್ತ ತನಿಖೆ ಕೈಗೊಂಡು ನಿಖರ ಕಾರಣ ಕಂಡುಹಿಡಿಯ ಬೇಕಾಗಿರುವುದೂ ಅಷ್ಟೇ ಮಹತ್ವದ ಕಾರ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.