ಮಹತ್ವದ ಹೆಜ್ಜೆ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಕೇಳುವ ಪ್ರಶ್ನೆಗಳಿಗೆ ಆನ್‌ಲೈನ್‌ ಮೂಲಕ ಉತ್ತರಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ, ನಾಗರಿಕರ ಈ ವಿಶೇಷ ಹಕ್ಕನ್ನು ಇನ್ನಷ್ಟು ಜನಸ್ನೇಹಿ ಆಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ. ಪ್ರಧಾನಿ ಅವರ ‘ಡಿಜಿಟಲ್‌ ಇಂಡಿಯಾ’ ಯೋಜನೆಯ ಭಾಗವಾಗಿ ಅಕ್ಟೋಬರ್‌ 31ರಿಂದ ಈ ಕ್ರಮ ಜಾರಿ­ಯಾಗಿದೆ. 2005ರಲ್ಲಿ ಆರಂಭವಾದ ಆರ್‌ಟಿಐನ ಪ್ರಭಾವ ಈಗಾ­ಗಲೇ ಹಲವಾರು ಬಾರಿ ಸಾಬೀತಾಗಿದೆ. ಸರ್ಕಾರ ಮತ್ತು ಪ್ರತಿಷ್ಠಿತ ವ್ಯಕ್ತಿಗಳ ಸಾಕಷ್ಟು ಅವ್ಯವಹಾರ ಮತ್ತು ಭ್ರಷ್ಟಾಚಾರಗಳನ್ನು ಅದು ಬಯಲಿಗೆಳೆದಿದೆ; ಉನ್ನತ ಸಚಿವರೇ ಅಧಿಕಾರ ಕಳೆದುಕೊಂಡಿದ್ದಾರೆ; ಸಚಿವಾಲಯಗಳ ಕಾರ್ಯ­ವೈಖರಿ ತನಿಖೆಗೆ ಒಳಪಟ್ಟಿದೆ. ಮಾಹಿತಿ ಕಾನೂನಿನ ಸಮರ್ಪಕ ಜಾರಿಗೆ ಸಂಬಂಧಿಸಿದಂತೆ ಕಳೆದ ವರ್ಷ ನಡೆದ ಸಮೀಕ್ಷೆಯೊಂದರಲ್ಲಿ, 95 ರಾಷ್ಟ್ರಗಳ ಪೈಕಿ ಭಾರತ ಎರಡನೇ ಸ್ಥಾನ ಪಡೆದುಕೊಂಡಿದೆ. ಅಮೆರಿಕ ಮತ್ತು ಬ್ರಿಟನ್‌ನಂತಹ ದೇಶಗಳೇ ಈ ಸಾಧನೆಯಲ್ಲಿ ಸಾಕಷ್ಟು ಹಿಂದೆ ಉಳಿದಿವೆ. ಸಾಮಾನ್ಯ ನಾಗರಿಕರಿಗೆ ಸಿಕ್ಕಿರುವ ಇಂತಹ ಪ್ರಬಲ ಅಸ್ತ್ರವನ್ನು ದುರ್ಬಲ­ಗೊಳಿಸುವ ವಿಫಲ ಪ್ರಯತ್ನಗಳು ಸಹ ಆಗಾಗ್ಗೆ ನಡೆಯುತ್ತಲೇ ಬಂದಿವೆ. ಭ್ರಷ್ಟಾಚಾರ ವಿರೋಧಿ ದಳವನ್ನು ಆರ್‌ಟಿಐನಿಂದ ಹೊರತುಪಡಿಸಿದ್ದ ಮಹಾ­ರಾಷ್ಟ್ರದ ಹಿಂದಿನ ಸರ್ಕಾರದ ಕ್ರಮವನ್ನು ನಾಗರಿಕರ ಒತ್ತಡದ ಮೇರೆಗೆ ರಾಜ್ಯಪಾಲರು ಇತ್ತೀಚೆಗೆ ರದ್ದುಪಡಿಸಿದ್ದಾರೆ. ಮಾಹಿತಿ ಕೇಳುವವರು ಅದಕ್ಕೆ ಕಾರಣವನ್ನೂ ವಿವರಿಸಬೇಕು ಎಂದು ಹೇಳಿದ್ದ ತನ್ನ ಆದೇಶವನ್ನು ಮದ್ರಾಸ್‌ ಹೈಕೋರ್ಟ್‌ ಕೆಲ ದಿನಗಳಲ್ಲೇ ಮಾರ್ಪಡಿಸಿಕೊಂಡಿದೆ. ಇಷ್ಟೊಂದು ಸಶಕ್ತವಾಗಿರುವ ಆರ್‌ಟಿಐನ ಅಡಿ ಕೇಳುವ ಪ್ರಶ್ನೆಗಳಿಗೆ ಈವ­ರೆಗೆ ಅಂಚೆ ಮೂಲಕವಷ್ಟೇ ಉತ್ತರ ಕಳುಹಿಸಲಾಗುತ್ತಿತ್ತು. ಈಗ ಸಚಿವಾ­ಲಯಗಳು ಮತ್ತು ಸರ್ಕಾರಿ ಅಧಿಕಾರಿಗಳ ವೆಬ್‌ಸೈಟ್‌ನಲ್ಲೂ ಉತ್ತರ ದೊರೆ­ಯುವುದರಿಂದ ಪಾರದರ್ಶಕತೆ ಸಾಧ್ಯವಾಗಲಿದೆ. ಅಷ್ಟೇ ಅಲ್ಲ, ಒಂದೇ ಪ್ರಶ್ನೆ­ಯನ್ನು ಅರಿವಿಲ್ಲದೇ ಹಲವಾರು ಮಂದಿ ಕೇಳುತ್ತಿದ್ದ ಪರಿಪಾಠವೂ ತಪ್ಪಲಿದೆ. ನಾಗರಿಕರು ಪ್ರಶ್ನೆ ಕಳುಹಿಸುವ ಮೊದಲು ಅಂತಹುದೇ ಪ್ರಶ್ನೆಗೆ ಈಗಾಗಲೇ ಉತ್ತರ ನೀಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು. ಇದ­ರಿಂದ ಅವರ ಸಮಯ, ಹಣ, ಶ್ರಮ ಎಲ್ಲವೂ ಉಳಿತಾಯವಾಗಲಿದೆ. ಅಷ್ಟೇ ಅಲ್ಲ, ಉತ್ತರ ಎಲ್ಲರಿಗೂ ಲಭ್ಯವಾಗುವುದರಿಂದ ಅದಕ್ಕಾಗಿ ಅಧಿಕಾರಿಗಳು ಸಾಕಷ್ಟು ತಯಾರಿ ಮಾಡಿಕೊಳ್ಳಬೇಕಾದ ಒತ್ತಡ ಸಹ ಸೃಷ್ಟಿಯಾಗಲಿದೆ. ಸಾರ್ವಜನಿಕ ಹಿತಾಸಕ್ತಿ ಇಲ್ಲದ ಉತ್ತರಗಳನ್ನು ವೆಬ್‌ಸೈಟ್‌ಗೆ ಅಳವಡಿಸ­ಬೇಕಾದ ಅಗತ್ಯ ಇಲ್ಲ ಎಂದು ಆದೇಶ ತಿಳಿಸಿದೆ. ಇದು ವ್ಯಕ್ತಿಗಳ ಖಾಸಗಿತನ ಕಾಯ್ದು­ಕೊಳ್ಳಲು ನೆರವಾಗಲಿದೆ. ಆದರೆ ಉತ್ತರಗಳ ಜೊತೆ ಅರ್ಜಿದಾರರ ಹೆಸರೂ ಪ್ರಕಟವಾಗಲಿರುವುದು ಆತಂಕಕಾರಿ. ಕೆಲವು ಪ್ರಕರಣಗಳಲ್ಲಿ ಅರ್ಜಿದಾರರೇ ಸ್ವತಃ ತಾವು ಪಡೆದ ಮಾಹಿತಿಯನ್ನು ಬಹಿರಂಗ­ಪಡಿಸು­ವುದೂ ಇದೆ. ಆದರೆ ಈಗಾಗಲೇ ಕೆಲವೆಡೆ ಮಾಹಿತಿ ಹಕ್ಕು ಕಾರ್ಯಕರ್ತರು ದುಷ್ಟಶಕ್ತಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೀಗಾಗಿ ಸರ್ಕಾರ ಅರ್ಜಿದಾ­ರರ ಹೆಸರನ್ನು ಗೋಪ್ಯವಾಗಿಟ್ಟು ಅವರ ಖಾಸಗಿತನ ಕಾಯ್ದುಕೊಳ್ಳಲು ಮುಂದಾಗುವುದು ಒಳಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.