ಅನಿಶ್ಚಯ ಅಂತ್ಯ ದೆಹಲಿ ವಿಧಾನಸಭೆ ವಿಸರ್ಜನೆಗೆ ಕೇಂದ್ರ ಸಚಿವ ಸಂಪುಟ ಶಿಫಾರಸು ಮಾಡಿದೆ. ಎಂಟೂವರೆ ತಿಂಗಳಿಂದ ತಲೆದೋರಿರುವ ಅನಿಶ್ಚಯ ರಾಜಕೀಯ ಸ್ಥಿತಿಗೆ, ಕೇಂದ್ರದ ಈ ತೀರ್ಮಾನ ಕೊನೆ ಹಾಡಲಿದೆ. ಪ್ರಜಾ­ಪ್ರಭುತ್ವ ವ್ಯವಸ್ಥೆಯಲ್ಲಿ ದೀರ್ಘಕಾಲ ರಾಷ್ಟ್ರಪತಿ ಆಡಳಿತ ಹೇರುವುದು ಸೂಕ್ತ­ವಾದ ಕ್ರಮವಲ್ಲ. ಇದರಿಂದ ಆಡಳಿತ ಯಂತ್ರ ಸ್ಥಗಿತಗೊಳ್ಳುವ ಅಪಾಯವಿದೆ. ಜನಪರ ಯೋಜನೆಗಳು ಜಾರಿಯಾಗುತ್ತಿಲ್ಲ ಎಂಬ ಅಸಮಾ­ಧಾನ ದೆಹಲಿ ಜನರಲ್ಲೂ ಇದೆ. ಚುನಾವಣೆ ನಡೆಸುವುದರಿಂದ ಚುನಾಯಿತ ಸರ್ಕಾರವೊಂದು ಅಧಿಕಾರಕ್ಕೆ ಬರಲಿದೆ. ಪದೇ ಪದೇ ಚುನಾವಣೆಗಳನ್ನು ನಡೆಸುವುದೂ ಅನಗತ್ಯ ಹೊರೆ. ಆದರೆ ಬೇರೆ ದಾರಿ ಇಲ್ಲ. ಬಿಜೆಪಿ, ಆಮ್‌ ಆದ್ಮಿ ಪಕ್ಷ (ಎಎಪಿ) ಮತ್ತು ಕಾಂಗ್ರೆಸ್‌ ಪಕ್ಷಗಳು ಸರ್ಕಾರ ರಚಿಸುವುದಿ­ಲ್ಲ­ವೆಂದು ಹೇಳಿರುವುದರಿಂದ ಲೆಫ್ಟಿನೆಂಟ್‌ ಗವರ್ನರ್‌ ನಜೀಬ್ ಜಂಗ್‌ ವಿಧಾನ­ಸಭೆ ವಿಸರ್ಜಿಸುವಂತೆ ಕೇಂದ್ರಕ್ಕೆ ವರದಿ ಕಳುಹಿಸುವುದು ಅನಿ­ವಾರ್ಯ­ವಾಯಿತು. ಅವರು ಮೊದಲೇ ಈ ಕೆಲಸ ಮಾಡಿದ್ದರೆ, ಜಾರ್ಖಂಡ್ ಹಾಗೂ ಜಮ್ಮು– ಕಾಶ್ಮೀರದಲ್ಲಿ ನಡೆಯಲಿರುವ ಚುನಾವಣೆ­ಗಳ ಜೊತೆಗೇ ದೆಹಲಿ ವಿಧಾನಸಭೆಗೂ ಚುನಾವಣೆ ನಡೆಸಲು ಅವಕಾಶ­ವಿತ್ತು. ಏಕೋ, ಏನೋ ಅವರು ವಿಳಂಬ ನೀತಿ ಅನುಸರಿಸಿದರು. ಯಾವುದೇ ತೀರ್ಮಾನ ತೆಗೆದು­ಕೊಳ್ಳದೆ ಕಾಲಹರಣ ಮಾಡಿದರು. ಸುಪ್ರೀಂಕೋರ್ಟ್‌ ಚಾಟಿ ಬೀಸಿದ ಬಳಿಕ ಎಚ್ಚೆತ್ತುಕೊಂಡರು. ‘ಪ್ರಜಾಪ್ರಭುತ್ವದಲ್ಲಿ ಚುನಾಯಿತ ಸರ್ಕಾರ ಇರಬೇಕೇ ವಿನಾ ರಾಷ್ಟ್ರಪತಿ ಆಡಳಿತ ನಡೆಯಬಾರದು. ದೆಹಲಿ­ಯಲ್ಲಿ ಸರ್ಕಾರ ರಚನೆಗೆ ಪ್ರಯತ್ನಿಸದೆ ಸಮಯ ವ್ಯರ್ಥ ಮಾಡಲಾಗಿದೆ’ ಎಂದು ಸುಪ್ರೀಂಕೋರ್ಟ್‌ ಟೀಕಿಸಿತು. ಸರ್ಕಾರ ರಚಿಸಲು ಒಂದು ಹಂತದಲ್ಲಿ ಬಿಜೆಪಿ ತೆರೆಮರೆಯಲ್ಲಿ ಕಸರತ್ತು ನಡೆ­ಸಿತ್ತು. ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಸರ್ಕಾರ ರಚಿಸಲು ಬಿಜೆಪಿ ನಾಯಕರನ್ನು ಆಹ್ವಾನಿಸುವಂತೆ ಸೂಚಿಸಿದ್ದೂ ಆಯಿತು. ಆದರೆ, ತನ್ನ ಶಾಸಕರನ್ನು ಸೆಳೆದುಕೊಳ್ಳಲು ಬಿಜೆಪಿ ಆಮಿಷವೊಡ್ಡುತ್ತಿದೆ ಎಂದು ಎಎಪಿ ಬಹಿರಂಗವಾಗಿಯೇ ಗುಲ್ಲೆಬ್ಬಿಸಿತು. ಜೊತೆಗೆ ತನ್ನ ಶಾಸಕರೊಬ್ಬರ ಜತೆ ಬಿಜೆಪಿ ನಾಯಕರೊಬ್ಬರು ನಡೆಸಿದ ದೂರವಾಣಿ ಸಂಭಾಷಣೆಯನ್ನೂ ಎಎಪಿ ಬಿಡುಗಡೆ ಮಾಡಿದ್ದರಿಂದಾಗಿ ಬಿಜೆಪಿ ಮುಜುಗರ ಅನುಭವಿಸಬೇಕಾಯಿತು. ಈ ಬೆಳವಣಿಗೆಯ ಬಳಿಕ ಸರ್ಕಾರ ರಚಿಸಲು ಅಡ್ಡ ದಾರಿ ಹಿಡಿಯುವುದು ಬೇಡ ಎಂದು ಬಿಜೆಪಿಯ ಒಂದು ಗುಂಪು ಪಟ್ಟು ಹಿಡಿದಿದ್ದಾಗಿಯೂ ವರದಿ­ಯಾಗಿದೆ. ಕಳೆದ ತಿಂಗಳು ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಗೆ ದೊರೆತಿರುವ ಗೆಲುವು ಕೂಡ ವರಿಷ್ಠ ನಾಯ­ಕರು ನಿಲುವು ಬದಲಿಸಲು ಪ್ರೇರಕವಾಗಿದೆ ಎಂಬ ಮಾತೂ ಇದೆ. ಅಗತ್ಯ ಬಹುಮತವಿಲ್ಲದೆ ಸರ್ಕಾರ ಮಾಡಿ ಹೆಸರು ಕೆಡಿಸಿಕೊಳ್ಳುವುದಕ್ಕಿಂತಲೂ ಚುನಾ­ವಣೆ ಎದುರಿಸುವುದೇ ಲೇಸು ಎಂಬ ತೀರ್ಮಾನವನ್ನು ಬಿಜೆಪಿ ಕೈ­ಗೊಂಡಿದೆ. ಅಂತೂ ವಿಧಾನಸಭೆ ಚುನಾವಣೆಗೆ ಅಖಾಡ ಸಿದ್ಧವಾಗಿದೆ. ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಸರ್ವ ಸಿದ್ಧತೆ ಮಾಡಿಕೊಳ್ಳುತ್ತಿವೆ. ಚೆಂಡು ಈಗ ಮತದಾರರ ಅಂಗಳದಲ್ಲಿದೆ. ಮುಕ್ತ ಹಾಗೂ ನ್ಯಾಯಯುತ ಚುನಾ­ವಣೆ ನಡೆಸಬೇಕಾದ ಹೊಣೆ ಚುನಾವಣಾ ಆಯೋಗದ ಮೇಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.