ನಿರೀಕ್ಷೆ ಮುಂದೂಡಿಕೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ತನ್ನ ದ್ವೈಮಾಸಿಕ ಹಣಕಾಸು ನೀತಿ ಪರಾ­ಮರ್ಶೆಯಲ್ಲಿ ಅಲ್ಪಾವಧಿ ಬಡ್ಡಿ ದರ­ಗಳಲ್ಲಿ ಯಥಾಸ್ಥಿತಿ ಕಾಯ್ದು­ಕೊಂಡಿರುವುದು ಉದ್ಯಮ ಮತ್ತು ಇತರ ಸಾಲಗಾರರಲ್ಲಿ ನಿರಾಶೆ ಉಂಟುಮಾಡಿದೆ. ಬಡ್ಡಿ ದರಗಳು ಶೇ 0.50­ರಷ್ಟು ಇಳಿಕೆಯಾಗಿ ಸಾಲ ಮರುಪಾವತಿ ಕಂತು ಕಡಿಮೆಯಾಗಲಿದೆ ಎನ್ನುವ ನಿರೀಕ್ಷೆಗೆ ಆರ್‌ಬಿಐ ಈ ಬಾರಿಯೂ ತಣ್ಣೀರು ಎರಚಿದೆ. ಮುಂದಿನ ತ್ರೈಮಾ­ಸಿಕದ ಹೊತ್ತಿಗೆ ಬಡ್ಡಿ ದರಗಳು ಖಂಡಿತ­ವಾಗಿಯೂ ಕಡಿಮೆ­ಯಾಗಲಿವೆ ಎನ್ನುವ ಸ್ಪಷ್ಟ ಸಂದೇಶ­ವನ್ನು ಗವರ್ನರ್‌ ರಘುರಾಂ ರಾಜನ್‌ ನೀಡಿ­ರು­ವುದು ಮಾತ್ರ ಆಶಾದಾಯಕ­ವಾಗಿದೆ. ಹಣದುಬ್ಬರವು ಸದ್ಯದ ಮಟ್ಟದ­ಲ್ಲಿಯೇ ಇನ್ನೂ ಕೆಲವು ತಿಂಗಳು ಮುಂದು­ವರೆದರೆ ಮುಂದಿನ ವರ್ಷದ ಆರಂಭ­ದಲ್ಲಿಯೇ ಬಡ್ಡಿ ದರಗಳು ಇಳಿಯಬಹುದೆಂದು ದೇಶಿ ಕೈಗಾರಿಕಾ ರಂಗ ನಂಬಿಕೆ ಇಡ­ಬಹುದು. ಕೈಗಾರಿಕಾ ರಂಗದ ತೀವ್ರ ಒತ್ತಡ ಮತ್ತು ಕೇಂದ್ರ ಹಣ­ಕಾಸು ಸಚಿವರ ಸ್ಪಷ್ಟ ಇಂಗಿತದ ಹೊರ­ತಾಗಿಯೂ ಆರ್‌ಬಿಐ, ಬಡ್ಡಿ ದರ ಇಳಿಕೆಗೆ ಮನಸ್ಸು ಮಾಡದಿ­ರುವುದಕ್ಕೆ ಸಾಕಷ್ಟು ಸಕಾರಣಗಳೂ ಇವೆ. ಸುಸ್ಥಿರ ಮತ್ತು ನಿರಂತರ ಆರ್ಥಿಕ ವೃದ್ಧಿಯತ್ತ ಆರ್‌ಬಿಐ ಗಮನ ಕೇಂದ್ರೀಕ­ರಿಸಿದೆಯೇ ಹೊರತು, ಅಲ್ಪಾವಧಿಯ ಪ್ರಯೋಜನ­ಗಳತ್ತ ಅಲ್ಲ ಎನ್ನುವುದು ಸ್ಪಷ್ಟಗೊಳ್ಳು­ತ್ತದೆ. ಗ್ರಾಹಕರ ಬೆಲೆ ಸೂಚ್ಯಂಕವು ಸದ್ಯಕ್ಕೆ ಶೇ 5.5ರಷ್ಟಾಗಿದೆ. ಕಚ್ಚಾ ತೈಲದ ಬೆಲೆ ಐದು ವರ್ಷಗಳಲ್ಲಿಯೇ ಕನಿಷ್ಠ ಮಟ್ಟಕ್ಕೆ ಇಳಿದಿರುವುದರಿಂದ ತೈಲ ಆಮದಿಗೆ ಮಾಡುವ ವೆಚ್ಚ ಗಮ­ನಾರ್ಹವಾಗಿ ತಗ್ಗಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳೂ ಇಳಿಯುತ್ತಿವೆ. ಈ ಸಕಾ­ರಾತ್ಮಕ ಬೆಳವಣಿಗೆ ಜತೆಗೆ, ಇತ್ತೀಚೆಗೆ ಕೈಗಾರಿಕಾ ಉತ್ಪಾದನೆಯು ಕುಂಠಿತ­ಗೊಂಡಿರುವುದು ಮತ್ತು ಆರ್ಥಿಕ ವೃದ್ಧಿ ದರ (ಜಿಡಿಪಿ) ಶೇ 5.3­ರಷ್ಟಾಗಿರುವುದು ದೇಶಿ ಅರ್ಥ ವ್ಯವಸ್ಥೆಯ ಪಾಲಿಗೆ ಕಳವಳಕಾರಿ ವಿದ್ಯಮಾನಗಳಾಗಿವೆ. ಅಂತರ­ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಯಾವುದೇ ಹೊತ್ತಿನಲ್ಲಿ ಮತ್ತೆ ಏರಿಕೆಯಾಗುವ ಸಾಧ್ಯತೆ ತಳ್ಳಿ ಹಾಕು­ವಂತಿಲ್ಲ. ಮುಂಗಾರು ಫಸಲು ನಿರೀ­ಕ್ಷಿಸಿದ ಪ್ರಮಾಣದಲ್ಲಿ ಬರದಿದ್ದರೆ ಕೃಷಿ ಉತ್ಪನ್ನಗಳ ಬೆಲೆ ದುಬಾರಿಯಾಗ­ಲೂಬಹುದು. ಈ ಎಲ್ಲ ಕಾರಣಗಳಿಂದಾಗಿ ಸದ್ಯದ ಸಂದರ್ಭದಲ್ಲಿ ಬಡ್ಡಿ ದರ ಕಡಿತ ಮಾಡಲಾಗದು ಎನ್ನುವ ಆರ್‌ಬಿಐ ನಿಲುವು ಸರಿಯಾಗಿಯೇ ಇದೆ. ವಿದೇಶಿ ನೇರ ಬಂಡವಾಳ ಹೂಡಿ­ಕೆಯು ಬರೀ ಬಡ್ಡಿ ದರಗಳನ್ನಷ್ಟೇ ಅವ­ಲಂಬಿಸಿರುವುದಿಲ್ಲ. ಸುಸ್ಥಿರ ಲಾಭದ ಬಗ್ಗೆಯೇ ಹೂಡಿಕೆದಾರರು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ ಎನ್ನುವು­ದನ್ನೂ ನಾವಿಲ್ಲಿ ಮರೆಯಬಾರದು. ಹಣದುಬ್ಬರಲ್ಲಿ ಇಳಿಕೆಯಾಗಿ­ರುವು­ದೊಂದೇ ಬಡ್ಡಿ ದರ ತಗ್ಗಿಸಲು ಪ್ರೇರಣೆ­ಯಾಗ­ಲಾರದು. ಸದ್ಯಕ್ಕೆ ದೇಶಿ ಅರ್ಥ­ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಚೇತ­ರಿಕೆ­ಯನ್ನೇ ಕಂಡಿಲ್ಲ. ಕೆಲ ಮಟ್ಟಿಗಿನ ಹಿತಾನುಭವಕ್ಕೆ ದೇಶಿ ವಿದ್ಯಮಾನ­ಗಳಿ­ಗಿಂತ ವಿದೇಶಿ ಬೆಳವಣಿಗೆಗಳೇ ಮುಖ್ಯ ಕಾರಣಗಳಾಗಿವೆ. ಆರ್ಥಿಕ ವೃದ್ಧಿ ದರ ನಿರೀಕ್ಷಿಸಿದ ಮಟ್ಟದಲ್ಲಿ ಚೇತರಿಕೆ ಕಾಣು­ತ್ತಿಲ್ಲ. ಡಾಲರ್‌ ಎದುರು ರೂಪಾಯಿ ವಿನಿಮಯ ಮೌಲ್ಯವೂ ಸ್ಥಿರಗೊಳ್ಳದೆ ಅಪಮೌಲ್ಯಗೊಳ್ಳುತ್ತಲೇ ಇದೆ. ಇವೆ­ಲ್ಲವೂ ಬಡ್ಡಿ ದರ ಕಡಿತ ಮಾಡ­ದಿರುವಂತೆ ಆರ್‌ಬಿಐನ ಕೈ ಕಟ್ಟಿ ಹಾಕಿವೆ. ಫೆಬ್ರುವರಿಯಲ್ಲಿ ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್‌ ಮಂಡನೆ ಮಾಡಿ ಆಯವ್ಯಯದ ಗುರಿ ನಿಗದಿ ಮಾಡುತ್ತಿದ್ದಂತೆ, ಬಡ್ಡಿ ದರ ಕಡಿತ­ಗೊಳಿಸಲು ಆರ್‌ಬಿಐಗೆ ಮಾರ್ಗ ಸುಗಮ­ವಾಗಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.