ಈ ಮುಷ್ಕರ ಸರಿಯಲ್ಲ ಬ್ಯಾಂಕ್ ಸಿಬ್ಬಂದಿ ಮತ್ತೆ ಮುಷ್ಕರದ ಹಾದಿ ಹಿಡಿದಿ­ದ್ದಾರೆ.­ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಮಂಗಳವಾರ ಎಲ್ಲ ಬಗೆಯ ಬ್ಯಾಂಕಿಂಗ್ ವ್ಯವಹಾರಗಳನ್ನು ಬಂದ್ ಮಾಡಿದ್ದರು. ಇಂಥದೇ ಪ್ರತಿಭಟನೆ ದೇಶದ ಒಂದೊಂದು ವಲಯದಲ್ಲಿ ಒಂದೊಂದು ದಿನ ನಡೆಯುತ್ತಿದೆ. ಇದು ಈ ವರ್ಷದಲ್ಲಿ ಮೂರನೇ ಮುಷ್ಕರ ಎನ್ನುವುದು ಶೋಭೆ ತರುವ ಸಂಗತಿ­ಯೇನಲ್ಲ. ಬಹುತೇಕ ಸಂದರ್ಭಗಳಲ್ಲಿ ಇಂಥ ಮುಷ್ಕರಗಳು ಸರ್ಕಾರಿ ಸ್ವಾಮ್ಯದ 27 ಬ್ಯಾಂಕ್‌ಗಳಿಗಷ್ಟೇ ಸೀಮಿತವಾಗಿಲ್ಲ. 20 ದೇಶಿ, ವಿದೇಶಿ ಖಾಸಗಿ ಬ್ಯಾಂಕುಗಳು ಮತ್ತು ವಿಶೇಷವಾಗಿ ಅರೆ ಪಟ್ಟಣ, ಹಳ್ಳಿಗಾಡಿನ­ಲ್ಲಿ­ರುವ ಗ್ರಾಮೀಣ ಮತ್ತು ಸಹಕಾರಿ ಬ್ಯಾಂಕ್ ಸಿಬ್ಬಂದಿಯೂ ಪಾಲ್ಗೊಳ್ಳು­ತ್ತಿದ್ದಾರೆ. ಇದು ಇಡೀ ದೇಶದ ಬ್ಯಾಂಕಿಂಗ್ ಮತ್ತು ಅರ್ಥವ್ಯವಸ್ಥೆ ಮೇಲೆ ನೇರ ಪರಿಣಾಮ ಬೀರುತ್ತದೆ. ಬ್ಯಾಂಕ್‌ಗಳ 10 ಲಕ್ಷಕ್ಕೂ ಅಧಿಕ ನೌಕರರು ರಾಷ್ಟ್ರವ್ಯಾಪಿ ಒಂದು ದಿನದ ಮುಷ್ಕರ ನಡೆಸಿದರೆ ಸರಿಸುಮಾರು ₨ 7.40 ಲಕ್ಷ ಕೋಟಿ ಮೊತ್ತದ 10 ಕೋಟಿ ಚೆಕ್‌ಗಳ ವಹಿವಾಟು ನಿಲ್ಲುತ್ತದೆ. ಮಂಗ­ಳ­­ವಾರದ ಮುಷ್ಕರದಿಂದಾಗಿ ದಕ್ಷಿಣದ ರಾಜ್ಯಗಳ 22 ಸಾವಿರ ಶಾಖೆ­ಗಳು ಮುಚ್ಚಿ ₨ 1.75 ಲಕ್ಷ ಕೋಟಿ ಮೌಲ್ಯದ 2.5 ಕೋಟಿ ಚೆಕ್‌ಗಳ ಕ್ಲಿಯ­ರೆನ್‌್ಸ ಸ್ಥಗಿತಗೊಂಡಿತ್ತು. ಈಗೆಲ್ಲ ಎಟಿಎಂಗಳು, ಮೊಬೈಲ್ ಮತ್ತು ಇಂಟರ್‌­ನೆಟ್‌ ಬ್ಯಾಂಕಿಂಗ್ ಸೌಕರ್ಯ ಇರುವುದರಿಂದ ನಗರ ಪ್ರದೇಶಗಳಲ್ಲಿ ಸಣ್ಣ­ಪುಟ್ಟ ನಗದು ವಹಿವಾಟಿಗೆ ಅಷ್ಟೊಂದು ತೊಂದರೆ ಆಗುವುದಿಲ್ಲ ಎಂದು­ಕೊಂಡರೂ ಬ್ಯಾಂಕಿಂಗ್ ವ್ಯವಹಾರ ಇಷ್ಟಕ್ಕೇ ಸೀಮಿತವಾಗಿಲ್ಲ. ಸಾಲ ಮರು­ಪಾವತಿ ಒಂದು ದಿನ ಮುಂದೆ ಹೋದರೂ ಗ್ರಾಹಕರ ಮೇಲೆ ಬಡ್ಡಿ ಹೊರೆ ಹೆಚ್ಚು­ತ್ತದೆ. ಹೊರದೇಶಗಳ ಗ್ರಾಹಕರ ಜತೆಗಿನ ವಹಿವಾಟಿನಲ್ಲಿ ಒಂದು ದಿನ ಏರು­ಪೇರಾದರೂ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ. ಬ್ಯಾಂಕಿಂಗ್ ವ್ಯವಸ್ಥೆ ಈಗ ನಿತ್ಯ ಬದುಕಿನ ಅನಿವಾರ್ಯ ಮತ್ತು ಅತ್ಯಗತ್ಯ ಸೇವೆ ಆಗಿರು­ವುದ­ರಿಂದಲೇ ಈ ಎಲ್ಲ ತಾಪತ್ರಯ. ನೌಕರರ ಮುಖ್ಯ ಬೇಡಿಕೆ ಎಂದರೆ ವೇತನದಲ್ಲಿ ಶೇಕಡ 23ರ ಹೆಚ್ಚಳ, ವಾರಕ್ಕೆ 5 ದಿನಗಳ ಕೆಲಸ. ಶೇ 11ರಷ್ಟು ವೇತನ ಹೆಚ್ಚಳಕ್ಕೆ ಆಡಳಿತ ಮಂಡಳಿ­ಗಳು ಸಮ್ಮತಿಸಿದರೂ ನೌಕರರು ಒಪ್ಪುತ್ತಿಲ್ಲ. ‘ಬ್ಯಾಂಕ್‌ಗಳು ಲಾಭದಲ್ಲಿವೆ; ಆದ್ದರಿಂದ ಸಂಬಳ ಏರಿಕೆ ಅವುಗಳ ಮೇಲೆ ಅಂಥ ಹೊರೆಯೇನಲ್ಲ’ ಎಂಬುದು ನೌಕರರ ವಾದ. ಆದರೆ ಬಂದ ಲಾಭವನ್ನೆಲ್ಲ ನೌಕರರಿಗೇ ಹಂಚಲು ಸಾಧ್ಯವೇ? ಇಂಥ ವಿಷಯದಲ್ಲಿ ಮೊಂಡಾಟ ಸರಿಯಲ್ಲ. ಬ್ಯಾಂಕ್ ನೌಕರರಲ್ಲಿ ಕೆಲಸದ ಸಂಸ್ಕೃತಿ ಕಡಿಮೆಯಾಗಿದೆ, ಸೇವಾ ಮನೋಭಾವ ಕಾಣಿ­ಸುತ್ತಿಲ್ಲ, ಗ್ರಾಹಕ ಸ್ನೇಹಿಯಾಗಿಲ್ಲ, ವಿಳಂಬದ ಜಾಡ್ಯ ಆವರಿಸಿಕೊಂಡಿದೆ ಎಂಬುದು ಬಹಳಷ್ಟು ಗ್ರಾಹಕರ ಅನುಭವ. ಸಾಲದ್ದಕ್ಕೆ ಪದೇಪದೇ ಮುಷ್ಕರ­ದಿಂದ ಗ್ರಾಹಕರ ಸಹಾ­ನುಭೂತಿ ಕಳೆದುಕೊಳ್ಳಬೇಕಾಗುತ್ತದೆ ಎಂಬ ಪರಿ­ಜ್ಞಾನ ನೌಕರರ ಸಂಘ­ಟನೆ­ಗಳಿಗೂ ಬೇಕು. ಈಗಿನ ಸ್ಪರ್ಧಾ ಯುಗದಲ್ಲಿ 5 ದಿನ­ವಷ್ಟೇ ಕೆಲಸ ಮಾಡು­ತ್ತೇವೆ ಎಂಬ ಬೇಡಿಕೆಯಂತೂ ವಿವೇಕ, ವಿವೇಚನೆ ಎರಡೂ ಇಲ್ಲದ್ದು. ಹಗಲು ರಾತ್ರಿಯ ಪರಿವೆಯಿಲ್ಲದೆ ಕಂಪ್ಯೂಟರ್‌ನ ವೇಗಕ್ಕೆ ಪೈಪೋಟಿ ಕೊಟ್ಟು ಕೆಲಸ ಮಾಡುತ್ತಿರುವ ನಮ್ಮ ಯುವ ಪೀಳಿಗೆಯನ್ನು ನೋಡಿ­ಯಾ­ದರೂ ಬ್ಯಾಂಕ್ ಸಿಬ್ಬಂದಿ ಒಂದಿಷ್ಟು ಕಲಿಯಬೇಕು. ಜಾಗತಿಕ ವಿದ್ಯ-­ಮಾನಗಳು ನಮ್ಮ ಮೇಲೆ ಬೀರುವ ಪರಿಣಾಮ ಮತ್ತು ಆರ್ಥಿಕ ಪ್ರಗತಿಯ ಅನಿವಾರ್ಯ­ವನ್ನು ಇಡೀ ಬ್ಯಾಂಕಿಂಗ್ ವಲಯ ಅರ್ಥ ಮಾಡಿ­ಕೊಳ್ಳಬೇಕು. ದೇಶಕ್ಕೇನಾ­ದರೂ ನಮ­ಗೇನು ಎಂಬ ಹಳೆಯ ಧೋರಣೆ­ಯಿಂದ ಅನಾಹುತವೇ ಹೆಚ್ಚು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.