ಪಾಠ ಮರೆಯದಿರಲಿ ಮಧ್ಯ­ಪ್ರದೇಶದ ಭೋಪಾಲ್‌­ನಲ್ಲಿ 1984ರ ಡಿಸೆಂಬರ್ 2 ಮತ್ತು 3ರ ಮಧ್ಯರಾತ್ರಿ ನಡೆದ ಘೋರ ವಿಷಾನಿಲ ದುರಂತಕ್ಕೆ ಈಗ 30 ವರ್ಷ. ಅಲ್ಲಿನ ಯೂನಿಯನ್ ಕಾರ್ಬೈಡ್ ಕ್ರಿಮಿನಾಶಕ ಘಟಕದಿಂದ ನಲ­ವತ್ತು ಟನ್‌ಗಳಷ್ಟು ತೀವ್ರ ವಿಷಕಾರಿಯಾದ ಅನಿಲ ಸೋರಿಕೆಯಾಗಿ ಕೂಡಲೇ ಮೂರು ಸಾವಿರ ಜನ ಸತ್ತಿದ್ದರು. ಮುಂದಿನ ದಿನಗಳಲ್ಲಿ ಇನ್ನೂ ಸಾವಿರಾರು ಮಂದಿ ಸಾವಿಗೀಡಾಗಿದ್ದರು. ಈ ದುರಂತದ ಸಂತ್ರಸ್ತರಿಗೆ ಈವ­ರೆಗೂ ನ್ಯಾಯ ದೊರೆತಿಲ್ಲ. ಬದುಕಿ ಉಳಿದವರು ಅಂಧತ್ವ, ಕ್ಯಾನ್ಸರ್, ಉಸಿ­ರಾಟದ ತೊಂದರೆ, ನರ ದೌರ್ಬಲ್ಯದಿಂದ ಸಂಕಟ ಪಡುತ್ತಿ­ದ್ದಾರೆ. ಅಂತಹ­ವರಿಗೆ ಜನಿಸಿದ ಮಕ್ಕಳೂ ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ಇಷ್ಟಾದರೂ ಈ ಮಟ್ಟಿನ ದುರಂತಕ್ಕೆ ಕಾರಣರಾದವರು ಯಾವುದೇ ಶಿಕ್ಷೆಗೆ ಒಳಗಾಗದೆ ಪಾರಾಗಿರುವುದು ವಿಷಾದನೀಯ. ಯೂನಿಯನ್ ಕಾರ್ಬೈಡ್ ಸಂಸ್ಥೆ ದುರಂತದ ವೇಳೆ ಸೋರಿಕೆಯಾದ ಅನಿಲದ ವಿವರವನ್ನು ಭಾರತ ಸರ್ಕಾರಕ್ಕೆ ಈವರೆಗೂ ಬಿಟ್ಟುಕೊಟ್ಟಿಲ್ಲ. ಈ ವಿವರ ಪಡೆಯಲು ಸರ್ಕಾರ ವಿಫಲ­ವಾಗಿ­ರುವುದಂತೂ ಶೋಚನೀಯ. ದುರಂತದ ವೇಳೆ ಕಾರ್ಬೈಡ್ ಸಂಸ್ಥೆಯ ಮುಖ್ಯ ಅಧಿಕಾರಿಯಾಗಿದ್ದ ವಾರೆನ್ ಆ್ಯಂಡರ್‌ಸನ್ ಕೆಲ ದಿನ­ಗಳಲ್ಲೇ ದೇಶ­ದಿಂದ ಪಲಾಯನ ಮಾಡಿದವರು ಮತ್ತೆಂದೂ ಭಾರತೀಯ ಕೋರ್ಟ್‌ನ ಮುಂದೆ ಹಾಜರಾಗಲಿಲ್ಲ. ಇತ್ತೀಚೆಗೆ ಅವರೂ ಮರಣ ಹೊಂದಿದ್ದಾರೆ. 2001ರಲ್ಲಿ ಕಾರ್ಬೈಡ್ ಸಂಸ್ಥೆಯನ್ನು ವಹಿಸಿಕೊಂಡ ಡೌ ಕೆಮಿಕಲ್ಸ್ ಸಂಸ್ಥೆ ನ್ಯಾಯಾಂಗದ ಎದುರು ಬರಲು ನಿರಾಕರಿಸುತ್ತಿದೆ. ದುರಂತದ ಸಂತ್ರ­ಸ್ತರಿಗೆ ಪರಿಹಾರ ನೀಡಲು ಸರ್ಕಾರ, ಕಾರ್ಬೈಡ್ ಸಂಸ್ಥೆಗೆ ತಾಕೀತು ಮಾಡಿ­ದರೂ ಅದರಿಂದ ಜೀವಮಾನ ಪೂರ್ತಿ ನರಳುತ್ತಿರುವವರಿಗೆ ದೊರೆತ ಪರಿ­ಹಾರ ನಗಣ್ಯ. ಮತ್ತಷ್ಟು ವಿಷಾದದ ಸಂಗತಿಯೆಂದರೆ, ಅನಿಲ ಸೋರಿಕೆ­ಯಾದ ಸ್ಥಳವನ್ನು ಇದುವರೆಗೂ ಸ್ವಚ್ಛಗೊಳಿಸದಿರುವುದು. ಈ ಇಡೀ ವಿದ್ಯ­ಮಾನದಲ್ಲಿ ಕೇಂದ್ರ ಸರ್ಕಾರದ ಧೋರಣೆ ಕಳವಳ ಹುಟ್ಟಿಸುವಷ್ಟು ಮೃದು­ವಾಗಿದೆ. ಸರ್ಕಾರ ಕೂಡಲೇ ತನ್ನ ನಾಗರಿಕರ ಪರವಾಗಿ ಗಟ್ಟಿಯಾಗಿ ನಿಂತು ಕಾರ್ಬೈಡ್ ಸಂಸ್ಥೆಯನ್ನು ಎದುರಿಸಿದ್ದರೆ ಭೋಪಾಲ್ ನಗರದ ನೆಲ ಮತ್ತು ನೀರು ಇಂದಿಗೂ ವಿಷಯುಕ್ತವಾಗಿರುವುದನ್ನು ತಪ್ಪಿಸಬಹುದಿತ್ತು. ಇಂಥ ‘ಶತ­ಮಾನದ ಘೋರ ದುರಂತ’ ನಡೆದ ಬಳಿಕವೂ ಇತರೆಡೆ ರಾಸಾಯ­ನಿ­ಕಗಳು ಮತ್ತು ಪೆಟ್ರೊ ರಾಸಾಯನಿಕ ಸೋರಿಕೆ ಪ್ರಕರಣಗಳು ವರದಿ­ಯಾ­ಗುತ್ತಿರುವು­ದರಿಂದ ದೇಶ ಇಂಥ ಸವಾಲುಗಳಿಂದ ಸಂಪೂರ್ಣ ಮುಕ್ತವಾಗಿಲ್ಲ ಎಂಬು­ದನ್ನು ಒಪ್ಪಿಕೊಳ್ಳಬೇಕು. ಕೈಗಾರಿಕಾ ವಲಯದ ನಿರ್ಮಾಣ, ಕೆಲಸ­ಗಾರರ ರಕ್ಷಣೆ ಈಗಲೂ ಆತಂಕದ ವಿಷಯಗಳು. ಸರ್ಕಾರ ಕೈಗಾರಿಕೆಗಳ ಸುರಕ್ಷತೆಗೆ ಸಂಬಂಧಿಸಿದ ಕಾನೂನುಗಳನ್ನು ಮರು ಪರಿಶೀಲಿಸಬೇಕಾದ ಅಗತ್ಯವಿದೆ. ನಂತರ 2011ರಲ್ಲಿ ಫುಕುಶಿಮಾ ಪರಮಾಣು ಘಟಕದ ದುರಂತ ಘಟಿಸಿತು. ಇತಿಹಾಸದಿಂದ ಮಾನವಕುಲ ಪಾಠ ಕಲಿತಿಲ್ಲ ಎಂಬುದಕ್ಕೆ ಇದು ದ್ಯೋತಕ. ನಾಗರಿಕರ ರಕ್ಷಣೆ, ನ್ಯಾಯಾಂಗ ವ್ಯವಸ್ಥೆಯ ಪಾಲನೆ ಮತ್ತು ಕೈಗಾರಿಕಾ ಸುರಕ್ಷತೆ ವಿಷಯದಲ್ಲಿ ಸರ್ಕಾರ ಇನ್ನಷ್ಟು ಗಂಭೀರ ಬದ್ಧತೆ ತೋರಬೇಕು. ಈ ನಿಟ್ಟಿನಲ್ಲಿ, ತಲೆಮಾರುಗಳನ್ನೇ ಕಾಡುವ ಇಂಥ ಮಾನವ ನಿರ್ಮಿತ ಸಾವು ನೋವುಗಳ ದುರಂತ ನಮಗೆ ಪಾಠವಾಗಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.