ಹತಾಶೆಯ ಪ್ರತೀಕ ರಾಜ್ಯ ವಿಧಾನಸಭೆಯ ಮೂರನೇ ಹಂತದ ಚುನಾವಣೆಗೆ ಜಮ್ಮು ಮತ್ತು ಕಾಶ್ಮೀರ ಸಜ್ಜಾಗುತ್ತಿದೆ. ಇಂತಹ ಸಂದರ್ಭದಲ್ಲಿ ಬಾರಾ­ಮುಲ್ಲಾ ಜಿಲ್ಲೆಯ ಉರಿ ವಲಯದಲ್ಲಿ ನಡೆದಿರುವ ಉಗ್ರರ ದಾಳಿಗಳಲ್ಲಿ ಲೆಫ್ಟಿನೆಂಟ್ ಕರ್ನಲ್ ಸೇರಿ 21 ಯೋಧರು ಸತ್ತಿದ್ದಾರೆ. ಕಳೆದ ಎರಡು ವಾರಗಳಲ್ಲಿ ಇದು ಉಗ್ರರ ಮೂರನೇ ಅತಿ ದೊಡ್ಡ ದಾಳಿ. ನಾಳೆ (ಡಿಸೆಂಬರ್ 9) ಉರಿ ಮತ್ತು ಬಾರಾಮುಲ್ಲಾ ಜಿಲ್ಲೆಯ ಇನ್ನೂ ಆರು ಕ್ಷೇತ್ರಗಳಲ್ಲಿ ಮತ­ದಾನ ನಡೆಯಲಿದೆ. ಈಗಾಗಲೇ ಜಮ್ಮು– ಕಾಶ್ಮೀರದಲ್ಲಿ ನಡೆದ ಎರಡು ಹಂತಗಳ ಮತದಾನ ಯಶಸ್ವಿಯಾಗಿದ್ದು ಶೇ 70ಕ್ಕಿಂತ ಹೆಚ್ಚು ಮತದಾನ­ವಾಗಿದೆ. ಇಂತಹ ಸನ್ನಿವೇಶದಲ್ಲಿ ಉಗ್ರರ ಈ ದಾಳಿಗಳು ಹತಾಶೆಯ ಪ್ರತೀಕ ಎನ್ನದೇ ವಿಧಿಯಿಲ್ಲ. ಭಾರತ– ಪಾಕಿಸ್ತಾನ ಬಾಂಧವ್ಯದ ಸ್ವರೂಪದಲ್ಲಿ ಇತ್ತೀಚೆಗೆ ಕಂಡುಬಂದ ಗೊಂದಲಗಳು ಈ ಹತಾಶೆಯನ್ನು ಮತ್ತಷ್ಟು ಹೆಚ್ಚಿಸಿರಬಹುದು. ಮತದಾನ ಹೆಚ್ಚಳದಿಂದ ವ್ಯಕ್ತವಾಗಿರುವ ಭರ­ವಸೆಯ ವಾತಾವರಣವನ್ನು ನಾಶ ಮಾಡುವ ಪ್ರಯತ್ನ ಇದು. ಪ್ರಜಾಸತ್ತೆ ಪ್ರಕ್ರಿಯೆಗೆ ಧಕ್ಕೆ ಮಾಡುವ ಇಂತಹ ಪ್ರಯತ್ನಗಳು ಖಂಡನೀಯ. ಆದರೆ ಉಗ್ರಗಾಮಿ ಚಟು­ವಟಿಕೆಗಳಿಗೆ ಸ್ಥಳೀಯ ಜನಸಾಮಾನ್ಯರ ಬೆಂಬಲ ಇಲ್ಲ ಎಂಬುದನ್ನು ಉಗ್ರರು ತಿಳಿಯಬೇಕು. ಭಾರಿ ಸೇನಾ ನೆಲೆ ಹೊಂದಿ ಭದ್ರತೆಯ ಕೋಟೆ ಎಂದೇ ಪರಿ­ಗಣಿ­ಸಲಾಗಿರುವ ಉರಿ ವಲಯದಲ್ಲಿ ತಮ್ಮ ಅಸ್ತಿತ್ವವನ್ನು ಪ್ರದರ್ಶಿಸುವ ಪ್ರಯತ್ನ­ವನ್ನು ಪಾಕ್ ಉಗ್ರರು ಈ ದಾಳಿಯ ಮೂಲಕ ನಡೆಸಲು ಯತ್ನಿಸಿರುವುದು ಕಂಡುಬರುತ್ತದೆ. ಶ್ರೀನಗರ– ಮುಜಫರಾಬಾದ್ ಬಸ್ ಸೇವೆ ಹಾಗೂ ಕಾಶ್ಮೀರದ ಎರಡೂ ಭಾಗಗಳ ನಡುವೆ ವ್ಯಾಪಾರ ವಹಿವಾಟಿಗೆ ಉರಿ ವಲಯ ಕೇಂದ್ರ­ಸ್ಥಳ­ವಾಗಿದೆ. 90ರ ದಶಕದ ಆರಂಭದಲ್ಲಿ ಈ ಉರಿ ವಲಯ ಅಕ್ರಮ ನುಸು­ಳು­ವಿಕೆಗಳಿಗೆ ಪ್ರಮುಖ ಕೇಂದ್ರವಾಗಿತ್ತು ಎಂಬುದನ್ನು ಮರೆಯ­ಲಾಗದು. ಆದರೆ ಕಳೆದ ಅನೇಕ ವರ್ಷಗಳಲ್ಲಿ ಅಂತಹ ದೊಡ್ಡ ಪ್ರಮುಖ ನುಸುಳುವಿಕೆ ಪ್ರಕ­ರಣಗಳು ವರದಿಯಾಗಿಲ್ಲ. ಈಗಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ­ವಾಗಿ ನುಸುಳಿ ಬರುವ ಉಗ್ರರ ಬಗ್ಗೆ ಎಚ್ಚರಿಕೆ ವಹಿಸುವಲ್ಲಿ ಭಾರತದ ಭದ್ರತಾ ಪಡೆಗಳು ವಿಫಲವಾದವೇ ಎಂಬುದು ಪ್ರಶ್ನೆ. ಈ ಕುರಿತು ತನಿಖೆ­ಯಾಗಬೇಕು. ಹಾಗೆಯೇ ಈ ದಾಳಿಗಳಲ್ಲಿ ಹತರಾದ ಉಗ್ರರಿಂದ ವಶ­ಪಡಿ­ಸಿ­ಕೊಳ್ಳಲಾದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಉಗ್ರರು ಹೊಂದಿರ­ಬಹು­ದಾದ ಮಿಲಿಟರಿ ಕಾರ್ಯತಂತ್ರಗಳು ಹಾಗೂ ತೀವ್ರ ತರಬೇತಿಗಳಿಗೆ ದ್ಯೋತಕ­ವಾಗಿವೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಮುಂದೆ ಇಂತಹ ದಾಳಿ­ಗಳು ಮರುಕಳಿಸದಂತೆ ಭದ್ರತಾ ಪಡೆಗಳು ಹೆಚ್ಚಿನ ನಿಗಾ ವಹಿಸುವುದೂ ಅಷ್ಟೇ ಅಗತ್ಯ. ಆ ಮೂಲಕ ರಾಜ್ಯದಲ್ಲಿ ಚುನಾವಣೆಗಳು ನಿರ್ವಿಘ್ನವಾಗಿ ನಡೆದು ಪ್ರಜಾಸತ್ತಾತ್ಮಕ ಸರ್ಕಾರ ಸ್ಥಾಪನೆಗೊಳ್ಳಲು ಅನುವು ಮಾಡಿ­ಕೊಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.