ಮರುಕಳಿಸದಿರಲಿ ಪಂಜಾಬ್‌ನ ಗುರುದಾಸಪುರ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಉಚಿತ ನೇತ್ರ ಶಿಬಿರದಲ್ಲಿ ಕಣ್ಣಿನ ಪೊರೆಯ ಶಸ್ತ್ರಕ್ರಿಯೆಗೆ ಒಳ­ಗಾಗಿದ್ದ ಅನೇಕರು ದೃಷ್ಟಿ ಕಳೆದುಕೊಂಡಿದ್ದಾರೆ. ಇಂಥವರ ಸಂಖ್ಯೆ 16 ರಿಂದ 60 ಇರಬಹುದು ಎನ್ನಲಾಗುತ್ತಿದೆ. ಇವರಲ್ಲಿ ಹೆಚ್ಚಿನವರು ಹಳ್ಳಿಗಾಡಿನ ಬಡ, ಅನಕ್ಷರಸ್ಥ ವೃದ್ಧರು. ಈ ಶಿಬಿರ ಏರ್ಪಡಿಸಿದ್ದ ಸ್ವಯಂಸೇವಾ ಸಂಘಟ­ನೆಯು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿಯಿಂದ ಅನುಮತಿ ಪಡೆದಿರಲಿಲ್ಲ ಎಂದು ಅಧಿಕಾರಿಗಳು ಈಗ ಹೇಳುತ್ತಿದ್ದಾರೆ. ಆದರೆ ಶಿಬಿರ ನಡೆಯುವ ಮೊದಲೇ ಈ ಬಗ್ಗೆ ತಪಾಸಣೆ ಮಾಡದೇ ಇರುವುದು ಅಧಿಕಾರಿಗಳಿಂದಾದ ಮಹಾಲೋಪ. ಸಾವಿರಾರು ಸಂಖ್ಯೆಯಲ್ಲಿ ಜನ ಭಾಗವಹಿಸುವ ಇಂಥ ಶಿಬಿರಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದು ತೀರಾ ಅಗತ್ಯ. ಈ ವಿಷಯದಲ್ಲಿ ಸ್ವಲ್ಪ ನಿಷ್ಕಾಳಜಿ ಮಾಡಿದರೂ ಸೋಂಕು ಉಂಟಾಗಿ ಅಮೂಲ್ಯ ದೃಷ್ಟಿಯೇ ಹೋಗಿ ಬಿಡಬಹುದು. ಶಸ್ತ್ರಕ್ರಿಯೆ ನಂತರ ಸರಿಯಾದ ಆರೈಕೆ, ಔಷಧೋಪ­ಚಾರದ ಜತೆಗೆ ರೋಗಿಯೇ ಸ್ವತಃ ವಹಿಸಬೇಕಾದ ಕಾಳಜಿಯೂ ಮುಖ್ಯ. ಇಲ್ಲಿ ಶಿಬಿರದ ಸಂಘಟಕರು ಮತ್ತು ವೈದ್ಯರ ಹೊಣೆ ಹೆಚ್ಚು. ಅವರಿಂದ ಏನು ಲೋಪವಾಗಿದೆ ಎಂಬುದು ತನಿಖೆಯ ನಂತರ ಗೊತ್ತಾಗಲಿದೆ. 6-–7 ಜನರಿಗೆ ಸೂಕ್ತ ಚಿಕಿತ್ಸೆ ಮೂಲಕ ದೃಷ್ಟಿ ಮರಳಿ ಬರುವಂತೆ ಮಾಡಬಹುದು ಎಂದು ವೈದ್ಯರು ಹೇಳಿದ್ದಾರೆ. ಆದರೆ ಶಾಶ್ವತವಾಗಿ ದೃಷ್ಟಿ ಕಳೆದುಕೊಂಡವರ ನೋವು, ಸಂಕಷ್ಟಕ್ಕೆ ಪರ್ಯಾಯ ಏನಿದೆ? ಯಾರದೋ ಹೊಣೆಗೇಡಿತನಕ್ಕೆ ಅಮಾಯಕರು ತೊಂದರೆ ಅನುಭವಿಸುವಂತಾಯಿತು ಎನ್ನುವುದಂತೂ ನೋವಿನ ಸಂಗತಿ. ಅಧ್ಯಯನದ ಪ್ರಕಾರ 50 ವರ್ಷಕ್ಕಿಂತ ಮೇಲಿನವರಲ್ಲಿ ಕಾಣಿಸಿಕೊಳ್ಳುವ ಅಂಧತ್ವದಲ್ಲಿ ಕಣ್ಣಿನ ಪೊರೆಯಿಂದ ಬರುವ ಅಂಧತ್ವದ ಪ್ರಮಾಣ ಶೇ 62.6. ಇದಕ್ಕೆ ಪೊರೆ ತೆಗೆಯುವ ಶಸ್ತ್ರಕ್ರಿಯೆ ಬಿಟ್ಟು ಬೇರೆ ಚಿಕಿತ್ಸೆಯೇ ಇಲ್ಲ. ತಜ್ಞರು ಹೇಳುವಂತೆ ಈ ಶಸ್ತ್ರಕ್ರಿಯೆ ತುಂಬ ಸರಳ ಮತ್ತು ಅನಾಹುತದ ಸಾಧ್ಯತೆ ತೀರಾ ವಿರಳ. ಈ ಕಾರಣದಿಂದಲೇ ಉಚಿತ ನೇತ್ರ ಶಿಬಿರಗಳು ಎಲ್ಲೆಡೆ ಜನಪ್ರಿಯವಾಗಿವೆ. ದುಬಾರಿ ಹಣ ತೆತ್ತು ಒಳ್ಳೆಯ ಆಸ್ಪತ್ರೆಗಳ ಮೆಟ್ಟಿಲು ಹತ್ತಲು ಸಾಧ್ಯವಿಲ್ಲದ ಬಡವರ ಪಾಲಿಗೆ ಇವು ವರದಾನ. ಕೇಂದ್ರ ಸರ್ಕಾರದ ‘ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮ’ ಕೂಡ ಇಂಥ ಶಿಬಿರಗಳಿಗೆ ಉತ್ತೇಜನ ನೀಡುತ್ತಿದೆ. ಈ ಸಲ 66 ಲಕ್ಷ ಕಣ್ಣಿನ ಪೊರೆ ಶಸ್ತ್ರಕ್ರಿಯೆ ಗುರಿ ಇಟ್ಟುಕೊಂಡಿದೆ. ಶಿಬಿರಗಳಲ್ಲಿ ಗುಣಮಟ್ಟ ಮತ್ತು ಸ್ವಚ್ಛತೆ ಕಾಪಾಡಿಕೊಳ್ಳಲು ವಹಿಸಬೇಕಾದ ಮುಂಜಾಗ್ರತೆ ಬಗ್ಗೆ ಸ್ಪಷ್ಟ ಮಾರ್ಗದರ್ಶಿಯನ್ನೂ ಕೊಟ್ಟಿದೆ. ಒಬ್ಬ ನೇತ್ರ ವೈದ್ಯ ದಿನಕ್ಕೆ 30ಕ್ಕಿಂತ ಹೆಚ್ಚು ಶಸ್ತ್ರಕ್ರಿಯೆ ಮಾಡುವಂತಿಲ್ಲ. ಆದರೆ ಇದನ್ನೆಲ್ಲ ಪಂಜಾಬ್‌ನ ಶಿಬಿರದಲ್ಲಿ ಅನುಸರಿಸಿದಂತಿಲ್ಲ. ಕಳೆದ ತಿಂಗಳು ಛತ್ತೀಸಗಡದಲ್ಲಿ ಸಂತಾನಶಕ್ತಿ ಹರಣ ಶಸ್ತ್ರಕ್ರಿಯೆ ನಂತರ 13 ಬಡ ಮಹಿಳೆ­ಯರು ಮೃತಪಟ್ಟಿದ್ದರು. ಹೀಗೆ ಒಂದರ ಹಿಂದೊಂದು ನಡೆಯುತ್ತಿರುವ ದುರಂತಗಳನ್ನು ನೋಡಿದರೆ ಬಡವರ ಜೀವ ಮತ್ತು ಆರೋಗ್ಯದ ಬಗ್ಗೆ ಕಾಳಜಿ ಕಡಿಮೆಯಾಗುತ್ತಿದೆಯೇ ಎಂಬ ಅನುಮಾನ ಬರುತ್ತದೆ. ಉಚಿತ ಎಂದಾಕ್ಷಣ ಸೇವೆಯ ಗುಣಮಟ್ಟವೂ ಕಳಪೆ ಆಗಬೇಕಾಗಿಲ್ಲ ಎನ್ನುವ ಪ್ರಜ್ಞೆ ಇದ್ದರೆ ಇಂಥ ಅನಾಹುತಗಳು ಮರುಕಳಿಸುವುದಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.