ದಿಟ್ಟ ನಡೆ ಬಸ್‌ನಲ್ಲಿ ತಮ್ಮನ್ನು ಚುಡಾಯಿಸಿದ ಮೂವರು ಯುವಕರನ್ನು ಚೆನ್ನಾಗಿ ಥಳಿಸಿ ಬುದ್ಧಿ ಕಲಿಸುವ ಧೈರ್ಯವನ್ನು ಹರಿಯಾಣದ ಸೋದರಿ­ಯರು ಪ್ರದರ್ಶಿಸಿದ್ದಾರೆ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ದಿನನಿತ್ಯ ವರದಿಯಾಗುತ್ತಾ ನಾಗರಿಕರನ್ನು ಆತಂಕಕ್ಕೆ ದೂಡಿರುವ ಈ ಹೊತ್ತಿನಲ್ಲಿ, ಯುವಕರ ಕೀಟಲೆಗೆ ಎದೆಗುಂದದ ಯುವತಿಯರ ಈ ನಡವಳಿಕೆ ಅನುಕ­ರ­ಣೀಯ. ಅವರಿಗೆ ಬಹುಮಾನ ನೀಡಿ ಸನ್ಮಾನಿಸುವ ಹರಿಯಾಣ ಸರ್ಕಾರದ ನಿರ್ಧಾರ ಸರಿಯಾಗಿಯೇ ಇದೆ. ಸೋದರಿಯರ ಕಾರ್ಯಕ್ಕೆ ಗಣ್ಯರಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ. ಜನರಿದ್ದ ಬಸ್‌ನಲ್ಲೇ ಪುಂಡರು ಎಗ್ಗಿಲ್ಲದೆ ಯುವತಿ­ಯರನ್ನು ಚುಡಾಯಿಸುತ್ತಾರೆ ಎಂದರೆ, ನಮ್ಮ ಸಮಾಜ ನಿಜಕ್ಕೂ ಎತ್ತ ಸಾಗುತ್ತಿದೆ, ಸಂವೇದನೆಯನ್ನೇ ಕಳೆದುಕೊಂಡುಬಿಟ್ಟಿದೆಯೇ ಎಂಬ ಆತಂಕ ಮೂಡುತ್ತದೆ. ಪದೇಪದೇ ಹುಡುಗಿಯರು ಎಚ್ಚರಿಕೆ ಕೊಟ್ಟರೂ ಯುವಕರು ಕೀಟಲೆ ಮುಂದು­ವರಿಸಿದ್ದಾರೆ. ರೋಸಿಹೋದ ಯುವತಿಯರು ತಮ್ಮನ್ನು ಥಳಿಸಲು ಮುಂದಾದಾಗ ಅವರನ್ನು ಕೆಳಕ್ಕೆ ಕೆಡವಿದ್ದಾರೆ. ಅಷ್ಟಾದರೂ ಧೈರ್ಯಗೆಡದ ಯುವತಿಯರಲ್ಲಿ ಒಬ್ಬಳು ತನ್ನ ಬೆಲ್ಟನ್ನು ಬಿಚ್ಚಿ ಅದರಲ್ಲೇ ಅವರನ್ನು ಥಳಿಸಿ­ದ್ದಾಳೆ. ಆಗ ಯುವಕರು, ಇಬ್ಬರನ್ನೂ ಚಲಿಸುತ್ತಿದ್ದ ಬಸ್‌ನಿಂದ ಹೊರಕ್ಕೆ ದಬ್ಬಿ­ದ್ದಾರೆ. ಇಷ್ಟೆಲ್ಲ ಆಗುವಾಗ ಸಹಪ್ರಯಾಣಿಕರಾಗಲಿ, ಚಾಲಕ ಅಥವಾ ನಿರ್ವಾ­ಹಕರಾಗಲಿ ಏನು ಮಾಡುತ್ತಿದ್ದರು? ಮಹಿಳಾ ಸಹಪ್ರಯಾಣಿಕ­ರೊಬ್ಬರು ಇಡೀ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದರಿಂದ ಪ್ರಕರಣದ ದೃಶ್ಯಗಳು ದೇಶದಾದ್ಯಂತ ಟಿ.ವಿ. ಹಾಗೂ ಸಾಮಾಜಿಕ ಮಾಧ್ಯ­ಮ­ಗಳಲ್ಲಿ ಹರಿದಾಡಿವೆ. ಈ ಘಟನೆ ನಡೆಯುವಾಗ ಸುತ್ತಲಿದ್ದವರು ನೆರವಿಗೆ ಧಾವಿಸದೆ ಇರುವುದು ನಾಗರಿಕ ಸಮಾಜದ ಲಕ್ಷಣವಲ್ಲ. ಆತ್ಮರಕ್ಷಣೆಗಾಗಿ ಕಾನೂನನ್ನು ಕೈಗೆತ್ತಿಕೊಳ್ಳದೆ ಯುವತಿಯರಿಗೆ ಬೇರೆ ವಿಧಿಯಿರಲಿಲ್ಲ. ಪೋಷ­ಕರ ನೇತೃತ್ವದಲ್ಲಿ ಪುಂಡರ ವಿರುದ್ಧ ಯುವತಿಯರು ಪೊಲೀಸರಿಗೆ ದೂರಿ­ತ್ತಿದ್ದಾರೆ. ಆದರೆ ದೂರನ್ನು ವಾಪಸ್‌ ಪಡೆಯುವಂತೆ ಸ್ಥಳೀಯ ಪಂಚಾ­ಯತ್‌ ಕುಟುಂಬದ ಮೇಲೆ ಒತ್ತಡ ಹೇರುತ್ತಿರುವುದು ಖಂಡನೀಯ. ಇಂತಹ ಒತ್ತಡಗಳು ಅಥವಾ ಬೆದರಿಕೆಗಳಿಗೆ ಸೊಪ್ಪುಹಾಕಬಾರದು. ಒತ್ತಡಗಳಿಗೆ ಮಣಿ­­ದದ್ದೇ ಆದರೆ ಸೋದರಿಯರು ಮಾತ್ರವಲ್ಲ ಇಡೀ ದೇಶದ ಮಹಿಳೆ­ಯರ ಆತ್ಮಸ್ಥೈರ್ಯವನ್ನು ಕುಗ್ಗಿಸಿದಂತೆ ಆಗುತ್ತದೆ. ಹರಿಯಾಣ ಸಾರಿಗೆ ಸಂಸ್ಥೆಯು ಬಸ್‌ನ ಚಾಲಕ, ನಿರ್ವಾಹಕರನ್ನು ಅಮಾನತು ಮಾಡಿದೆ. ಪುಂಡರ ಬೆಂಬಲಕ್ಕೆ ನಿಂತಿರುವ ಪಂಚಾಯತ್‌ ವರ್ತನೆ ಸರಿಯಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಸಮಾಜವೊಂದು ಸಂವೇದನೆ ಕಳೆದುಕೊಳ್ಳುವುದು ಅತ್ಯಂತ ಅಪಾ­ಯ­ಕಾರಿ ಸ್ಥಿತಿ. ಕಣ್ಣೆದುರೇ ಅನಿಷ್ಟಗಳು ನಡೆಯುತ್ತಿದ್ದರೂ ಸಂಬಂಧವೇ ಇಲ್ಲ­ದಂತೆ ವರ್ತಿಸುವ ಮನೋಭಾವ, ಸಮಾಜದ ಅಧೋಗತಿ­ಯನ್ನು ಸೂಚಿ­ಸು­ತ್ತದೆ. ಈ ಬಗ್ಗೆ ನಾಗರಿಕರು ಕಟುವಾಗಿ ಆತ್ಮವಿಮರ್ಶೆ ಮಾಡಿಕೊಳ್ಳಲೇ­ಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.