ಹತ್ಯೆ ಖಂಡನೀಯ ಛತ್ತೀಸಗಡದಲ್ಲಿ ನಕ್ಸಲೀಯರು ಮತ್ತೆ ಅಟ್ಟಹಾಸ ಪ್ರದರ್ಶಿಸಿದ್ದಾರೆ. ಸುಕ್ಮಾ ಜಿಲ್ಲೆಯ ಚಿಂತಗುಫಾ ದಟ್ಟಾರಣ್ಯದಲ್ಲಿ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಮೇಲೆ ಗುಂಡಿನ ದಾಳಿ ನಡೆಸಿ 14 ಸಿಬ್ಬಂದಿಯನ್ನು ಬಲಿ ತೆಗೆದುಕೊಂಡಿದ್ದಾರೆ. ಆದರೆ ಭದ್ರತಾ ಪಡೆ­ಗಳಿಂದ ತಮ್ಮ ಮೇಲೆ ಪ್ರತಿ ದಾಳಿ ನಡೆಯದಂತೆ ಬಚಾವಾಗಲು ಸ್ಥಳೀಯ ಗ್ರಾಮಸ್ಥರನ್ನು ಗುರಾಣಿಯಾಗಿ ಬಳಸಿಕೊಂಡಿದ್ದಾರೆ. ಇದು ಹೇಡಿತನದ ಪರಮಾವಧಿ. ಮುಗ್ಧ ಮತ್ತು ಅಸಹಾಯಕ ಗ್ರಾಮಸ್ಥರನ್ನು, ಅದರಲ್ಲೂ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳನ್ನು ಮುಂದಿಟ್ಟುಕೊಂಡು ಹಿಂಸಾ­ಚಾರ ನಡೆಸಿ ಪಾರಾಗುವ ಸರಾಗ ದಾರಿಯನ್ನು ನಕ್ಸಲೀಯರು ವಿವಿಧೆಡೆ ಬಳಸುತ್ತಲೇ ಬಂದಿದ್ದಾರೆ. ಏಕೆಂದರೆ ಇಂಥ ಸನ್ನಿವೇಶದಲ್ಲಿ ಭದ್ರತಾ ಪಡೆ­ಗಳು ದಾಳಿಕೋರರ ಮೇಲೆ ಗುಂಡು ಹಾರಿಸಲು ಸಾಧ್ಯವಾಗದೆ ಕೈಕಟ್ಟಿ ಸುಮ್ಮ­ನಿರಬೇಕಾಗುತ್ತದೆ. ದಾಳಿ ನಡೆಸಿದರೆ ಸಾಯುವವರು ಗ್ರಾಮಸ್ಥರು. ಹಾಗೇನಾದರೂ ಆದರೆ ಅದರ ಹೊಣೆಯನ್ನು ಭದ್ರತಾ ಪಡೆಗಳ ತಲೆಗೆ ಕಟ್ಟಿ ಜನರ ಭಾವನೆಗಳನ್ನು ಕೆರಳಿಸುವುದು ಸುಲಭ. ನಕ್ಸಲ್‌ ಹಿಂಸಾಚಾರ ಮತ್ತು ಭದ್ರತಾ ಪಡೆಗಳ ಪ್ರತಿದಾಳಿಯಲ್ಲಿ ಸಂಭವಿಸಿದ ಸಾವುನೋವಿನ ಅಂಕಿ­ಸಂಖ್ಯೆ­ಗಳನ್ನು ನೋಡಿದರೆ ಈ ಅಂಶ ಮನದಟ್ಟಾಗುತ್ತದೆ. ಲಭ್ಯ ಮಾಹಿತಿಗಳ ಪ್ರಕಾರ ಈ ವರ್ಷದ ನವೆಂಬರ್‌ ಅಂತ್ಯದವರೆಗೆ ನಕ್ಸಲ್‌ ಹಾವಳಿಯ 7 ರಾಜ್ಯಗಳಲ್ಲಿ 71 ಭದ್ರತಾ ಸಿಬ್ಬಂದಿ, 58 ನಕ್ಸಲೀಯರು ಸಾವಿಗೀಡಾಗಿ­ದ್ದಾರೆ. ಆದರೆ ನಾಗರಿಕರ ಸಾವಿನ ಸಂಖ್ಯೆ 197. ದೇಶದಲ್ಲಿ ನಕ್ಸಲೀಯರ ಉಪಟಳ ಹೆಚ್ಚಿರುವ ರಾಜ್ಯಗಳಲ್ಲಿ ಛತ್ತೀಸಗಡ ಮೊದಲ ಸ್ಥಾನದಲ್ಲಿದೆ. ಡಾ.ರಮಣ ಸಿಂಗ್‌ ಅವರು ಮೂರನೇ ಬಾರಿ ಮುಖ್ಯ­ಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವಾಗ, ನಕ್ಸಲ್‌ ಹಾವಳಿಯನ್ನು ನಿಗ್ರಹಿಸುವ ವಾಗ್ದಾನ ಮಾಡಿದ್ದರು. ಕಳೆದ ಆರು ತಿಂಗಳಲ್ಲಿ ದಾಖಲೆ ಪ್ರಮಾ­ಣ­ದಲ್ಲಿ ಅಲ್ಲಿ ನಕ್ಸಲರು ಶರಣಾಗಿದ್ದಾರೆ. ಆದರೂ ನಕ್ಸಲರ ಅಟ್ಟಹಾಸ­ವೇನೂ ಕಡಿಮೆಯಾಗಿಲ್ಲ. ನಕ್ಸಲ್ ಚಟುವಟಿಕೆಯಿಂದ ರಾಜ್ಯ ಶೀಘ್ರವೇ ಮುಕ್ತ­ವಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದ ಮರುದಿನವೇ ಈ ದಾಳಿ ನಡೆ­ದಿರುವುದು ಕಾಕತಾಳಿಯ ಇರಲಾರದು. ಇತ್ತೀಚಿನ ದಿನಗಳಲ್ಲಿ ಶರಣಾ­ಗತಿ, ಬಂಧನಕ್ಕೊಳಗಾಗುವ ಸಹವರ್ತಿಗಳ ಸಂಖ್ಯೆ ಹೆಚ್ಚುತ್ತಿರುವುದು ನಕ್ಸಲ್‌ ನಾಯಕರಲ್ಲಿ ಹತಾಶೆ ಹೆಚ್ಚಿಸಿತ್ತು ಎಂಬ ವರದಿಗಳೂ ಇವೆ. ಈ ಸಲ ಅವರು ಆಯ್ದುಕೊಂಡ ಸ್ಥಳದ ಸಮೀಪದಲ್ಲೇ ಕಳೆದ ವರ್ಷ ಸಿಆರ್‌ಪಿಎಫ್‌ನ 76 ಸಿಬ್ಬಂದಿಯನ್ನು ಹತ್ಯೆ ಮಾಡಲಾಗಿತ್ತು. ಪ್ರತಿವರ್ಷ ಡಿ. 2ರಿಂದ 8ನ್ನು ‘ಪೀಪಲ್‌್ಸ ಲಿಬರೇಷನ್‌ ಗೆರಿಲ್ಲಾ ಆರ್ಮಿ’ ಸಪ್ತಾಹವಾಗಿ ನಕ್ಸಲರು ಆಚರಿ­ಸುತ್ತ ಬಂದಿದ್ದಾರೆ. ಈ ವಾರ ಮತ್ತು ಹಿಂದುಮುಂದಿನ ದಿನಗಳಲ್ಲಿ ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆಸುವ ವಾಡಿಕೆ ಬೆಳೆಸಿಕೊಂಡಿದ್ದಾರೆ. ಅದನ್ನು ಭದ್ರತಾ ಪಡೆಗಳು ಊಹಿಸಿಕೊಂಡು ಹೆಚ್ಚು ಜಾಗರೂಕತೆ ವಹಿಸಬೇಕಾ­ಗಿತ್ತು. ಇಲ್ಲಿ ಗೂಢಚರ್ಯೆ ವೈಫಲ್ಯ ಎದ್ದು ಕಾಣುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ಸಿಆರ್‌ಪಿಎಫ್‌ ಮುಖ್ಯಸ್ಥರ ಹುದ್ದೆ ಖಾಲಿ ಇದೆ. ಇವೆಲ್ಲ ಭದ್ರತಾ ಕಾರ್ಯಾಚರಣೆ, ಸನ್ನದ್ಧತೆ ಮೇಲೆ ಪ್ರಭಾವ ಬೀರುತ್ತವೆ. ಬಡತನ, ಶೋಷಣೆ ಹೆಚ್ಚಿರುವ ಕಡೆಯೇ ನಕ್ಸಲ್‌ ಚಟುವಟಿಕೆ ತಲೆಯೆತ್ತಿದೆ ಎಂಬುದು ವಾಸ್ತವ ಸಂಗತಿ. ನಕ್ಸಲೀಯರ ಹಾವಳಿ ತಡೆಯಲು ಶಸ್ತ್ರಸಜ್ಜಿತ ಕಾರ್ಯಾ­ಚರಣೆಯೊಂದೇ ಸಾಲದು. ಆ ಪ್ರದೇಶದಲ್ಲಿ ಅಭಿವೃದ್ಧಿ ಚುರುಕುಗೊಳಿಸುವ ಮೂಲಕ ಪ್ರತ್ಯುತ್ತರ ನೀಡಲು ಸಾಧ್ಯ ಎಂಬುದನ್ನು ಮನಗಾಣಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.