ರಾಜತಾಂತ್ರಿಕ ಸಾಧನೆ ನೇಪಾಳದ ಕಠ್ಮಂಡುವಿನಲ್ಲಿ ಕೊನೆಗೊಂಡ ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಯ (ಸಾರ್ಕ್‌) ದೇಶಗಳ ಶೃಂಗಸಭೆ ಭಾರತದ ಪಾಲಿಗೆ ರಾಜತಾಂತ್ರಿಕ ವಿಜಯ. ಸದ್ಯಕ್ಕೆ ವೀಕ್ಷಕ ಸ್ಥಾನಮಾನ ಹೊಂದಿರುವ ಚೀನವನ್ನು ಕಾಯಂ ಸದಸ್ಯ ದೇಶವಾಗಿ ಮಾಡುವ ಪಾಕಿಸ್ತಾನದ ಪ್ರಯತ್ನ ಭಾರತದ ಆಕ್ಷೇಪಣೆಯಿಂದಾಗಿ ಕೈಗೂಡಲಿಲ್ಲ. ಹೀಗಾಗಿ ಭಾರತದ ಮೇಲಿನ ಕೋಪವನ್ನು ವಾಹನ, ರೈಲು ಸಾರಿಗೆ ಮತ್ತು ಸರಕು ಸಾಗಣೆ ಒಪ್ಪಂದಕ್ಕೆ ಅಡ್ಡಿಪಡಿಸುವ ಮೂಲಕ ತೀರಿಸಿಕೊಳ್ಳಲು ಪಾಕಿಸ್ತಾನ ಪ್ರಯತ್ನಿಸಿ ಯಶ­ಸ್ವಿಯೂ ಆಯಿತು. ಆದರೆ ಇದರಿಂದ ತನಗೇ ನಷ್ಟ ಎಂಬುದನ್ನು ಅದು ಅರಿ­ಯ­ಲಿಲ್ಲ. ಏಕೆಂದರೆ ಈ ಒಪ್ಪಂದಕ್ಕೆ ಸಹಿ ಬಿದ್ದಿದ್ದರೆ ಸಾರ್ಕ್‌ನ ಎಂಟೂ ದೇಶ­ಗಳಲ್ಲಿ ಅಭಿವೃದ್ಧಿ ಚುರುಕುಗೊಳ್ಳುತ್ತಿತ್ತು. ಆದರೂ ಒಪ್ಪಂದ ಆಗದೇ ಇರು­ವು­ದರಿಂದ ಅಂಥ ನಷ್ಟವೇನಿಲ್ಲ. ಭಾರತ ಈಗಾಗಲೇ ಅನೇಕ ನೆರೆ ದೇಶಗಳ ಜತೆ ಈ ವಿಚಾರದಲ್ಲಿ ದ್ವಿಪಕ್ಷೀಯ ಒಪ್ಪಂದ ಹೊಂದಿದೆ. ಶೃಂಗದಲ್ಲಿ ಸಮಗ್ರ ವಿದ್ಯುತ್ ನಿರ್ವಹಣಾ ಜಾಲ ಸ್ಥಾಪನೆಯ ಬಗ್ಗೆ ಒಪ್ಪಂದ ಏರ್ಪಟ್ಟಿರುವುದು ಸ್ವಾಗತಾರ್ಹ. ಸಾರ್ಕ್‌ ದೇಶಗಳ ಬಳಕೆಗಾಗಿಯೇ ಪ್ರತ್ಯೇಕ ಉಪಗ್ರಹ ಉಡಾ­ವಣೆ, ಚಿಕಿತ್ಸೆಗಾಗಿ ಭಾರತಕ್ಕೆ ಬರುವ ರೋಗಿಗಳಿಗೆ ತುರ್ತು ವೀಸಾ, ಮಕ್ಕಳ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮಕ್ಕೆ ಸಹಕಾರ ಮತ್ತಿತರ ಕೊಡುಗೆಗಳ ಮೂಲಕ ಭಾರತ ತನ್ನ ಹೊಣೆಗಾರಿಕೆಯನ್ನು ಸಮರ್ಪಕವಾಗಿಯೇ ನಿಭಾಯಿಸಿದೆ. ಪಾಕ್‌ನಲ್ಲಿ ತರಬೇತಾದ ಮತ್ತು ಈಗಲೂ ಅಲ್ಲಿ ಆಶ್ರಯ ಪಡೆದಿರುವ ಭಯೋತ್ಪಾದಕರು ಮುಂಬೈ ಮೇಲೆ ನಡೆಸಿದ್ದ ದಾಳಿಯ 6ನೇ ವರ್ಷಾಚರಣೆ ದಿನದಂದೇ ಶೃಂಗಸಭೆ ಆರಂಭವಾಗಿತ್ತು. ಈ ವಿಷಯವನ್ನು ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ, ಭಯೋತ್ಪಾದನೆಗೆ ಕಡಿವಾಣ ಹಾಕಲು ಸಂಘ­ಟಿತ ಪ್ರಯತ್ನದ ಅಗತ್ಯ ಪ್ರತಿಪಾದಿಸಿದ್ದರು. ಉಳಿದ ದೇಶಗಳು ಇದನ್ನು ಬೆಂಬ­ಲಿಸಿದರೂ ಪಾಕಿಸ್ತಾನ ಮಾತ್ರ ಮೌನವಾಗಿ ಉಳಿದು ಏಕಾಂಗಿಯಾಯಿತು. ಒಂದೇ ವೇದಿಕೆ ಮೇಲಿದ್ದರೂ ಪಾಕ್ ಪ್ರಧಾನಿ ನವಾಜ್ ಷರೀಫರತ್ತ ತಿರುಗಿಯೂ ನೋಡದೆ ಮೋದಿಯವರು ಭಾರತದಅಸಮಾಧಾನವನ್ನು ಮುಚ್ಚುಮರೆ ಇಲ್ಲದೆ ಹೊರಹಾಕಿದರು. ಆ ಮೂಲಕ ಕಠಿಣ ಸಂದೇಶ ರವಾನಿ­ಸಿದರು. ಆದರೆ ಶೃಂಗಸಭೆಯ ಕೊನೆಯಲ್ಲಿ ಹಸ್ತಲಾಘವ ಮಾಡಿದರು. ಭಾರತದಲ್ಲಿ ಈಗಿರುವ ರಾಜಕೀಯ ನಾಯಕತ್ವ ಯಾವುದೇ ಒತ್ತಡಗಳಿಗೆ ಮಣಿಯುವುದಿಲ್ಲ ಎಂಬುದು ಪಾಕ್, ಚೀನ, ಅಮೆರಿಕ ಸೇರಿ ಎಲ್ಲ ದೇಶಗಳಿಗೂ ಅರಿವಾದಂತಿದೆ. ಹೀಗಾಗಿಯೇ ಸಾರ್ಕ್‌ ಕಾಯಂ ಸದಸ್ಯತ್ವ ಪಡೆಯುವ ತನ್ನ ಹಂಬಲ ಈಡೇರದೇ ಇದ್ದರೂ ಮತ್ತು ಭಾರತ ಅದಕ್ಕೆ ಕಾರಣ ಎಂದು ಗೊತ್ತಿದ್ದರೂ ಇದನ್ನು ಚೀನ ಸಕಾರಾತ್ಮಕ­ವಾಗಿಯೇ ಸ್ವೀಕರಿಸಿದೆ. ಆಫ್ಘಾನಿಸ್ತಾನದಲ್ಲಿ ಸಂಪರ್ಕ ವ್ಯವಸ್ಥೆ ಸುಧಾರಣೆ ಮತ್ತು ಅಭಿವೃದ್ಧಿಗೆ ಭಾರತ ನೀಡುತ್ತಿರುವ ಸಹಾಯಕ್ಕೆ ಮತ್ತೊಂದು ವೀಕ್ಷಕ ದೇಶವಾದ ಅಮೆರಿಕ ಮೆಚ್ಚುಗೆ ವ್ಯಕ್ತಪಡಿಸಿದೆ. ನಮ್ಮ ಸುತ್ತಲಿನ ಬಡ, ಹಿಂದು­ಳಿದ ದೇಶಗಳಿಗೆ ನಮ್ಮ ಸಹಾಯಹಸ್ತ ಸದಾ ಇದ್ದೇ ಇದೆ ಎಂಬ ಭರವಸೆ ತುಂಬುವಲ್ಲಿ ಮೋದಿ ಸಫಲರಾಗಿದ್ದಾರೆ. ಈ ದೇಶಗಳನ್ನು ತನ್ನ ತೆಕ್ಕೆಗೆ ಸೆಳೆಯಲು ಚೀನಾ ಪ್ರಯತ್ನಿಸುತ್ತಿರುವ ಈ ಸಂದರ್ಭದಲ್ಲಿ ಇದು ಗಣನೀಯವಾದ ರಾಜತಾಂತ್ರಿಕ ಸಾಧನೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.