ಪ್ರಾಮಾಣಿಕರ ನೇಮಕವಾಗಲಿ ರಾಜ್ಯ ಸರ್ಕಾರವು 452 ಮಂದಿ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಗೆ ಕರ್ನಾಟಕ ಲೋಕ­ಸೇವಾ ಆಯೋಗಕ್ಕೆ ಪ್ರಸ್ತಾವ­ವನ್ನು ಕಳುಹಿಸಿ­ಕೊಟ್ಟಿದೆ. ಈ ಸಂಬಂಧ ಅಧಿಸೂಚನೆ ಹೊರಡಿಸಲು ಆಯೋಗ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಆದರೆ 18 ತಿಂಗಳಿನಿಂದ ಆಯೋಗದ ಅಧ್ಯಕ್ಷ ಹುದ್ದೆ ಖಾಲಿ ಇದೆ. ಅಲ್ಲದೆ 7 ಸದಸ್ಯರ ಹುದ್ದೆ­ಗಳೂ ಭರ್ತಿಯಾಗಿಲ್ಲ. ಈ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ. ಇದು ಯಾವುದೇ ಕಾರಣಕ್ಕೂ ಸರಿಯಲ್ಲ. ಪ್ರಾಮಾ­ಣಿಕ, ದಕ್ಷ ವ್ಯಕ್ತಿಗಳನ್ನು ಕೆಪಿಎಸ್‌ಸಿಗೆ ತಕ್ಷಣವೇ ನೇಮಕ ಮಾಡಬೇಕು. ಆ ಮೂಲಕ ಕೆಎಎಸ್‌ ಹುದ್ದೆ­­ಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಮನದಲ್ಲಿ ಭರವಸೆಯ ಬೆಳಕನ್ನು ಮೂಡಿಸಬೇಕು. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ‘ತಾಳಿ­ಭಾಗ್ಯ’­ದಂತಹ ಅವ್ಯವಹಾರಗಳಿಂದ ಕರ್ನಾಟಕ ಲೋಕಸೇವಾ ಆಯೋ­ಗದ ಘನತೆ ಸಂಪೂರ್ಣವಾಗಿ ಕುಂದಿತ್ತು. 2011ನೇ ಸಾಲಿನ ನೇಮಕಾತಿ ಪ್ರಕ್ರಿಯೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದ ಆರೋಪ ಕೇಳಿ ಬಂದಿದ್ದರಿಂದ ನೇಮಕಾತಿ ಪಟ್ಟಿಯನ್ನೇ ರದ್ದು ಮಾಡಲಾಗಿದೆ. ಆ ಮೂಲಕ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಐತಿಹಾಸಿಕ ನಿರ್ಣಯವನ್ನು ಕೈಗೊಂಡಿದೆ. ಇಂತಹ ಛಾತಿಯನ್ನು ಈಗ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿ­ಯಲ್ಲಿಯೂ ತೋರ­­ಬೇಕಾಗಿದೆ. ಆಯೋಗದ ನಿಯಮದ ಪ್ರಕಾರ ಅಧ್ಯಕ್ಷರು ಇಲ್ಲದೆಯೂ ನೇಮಕಾತಿ ಪ್ರಕ್ರಿಯೆ ನಡೆಸಬಹುದು. ಆದರೆ ಇದು ಕಾನೂನು ಅಥವಾ ನಿಯಮದ ಪ್ರಶ್ನೆ ಅಲ್ಲ. ನೈತಿಕತೆಯ ಪ್ರಶ್ನೆ. ಆಯೋಗದಲ್ಲಿ ಈಗ ಇರುವ ಎಲ್ಲ ಸದಸ್ಯರ ವಿರುದ್ಧ ಕೂಡ ಆರೋಪವಿದೆ. ಅವರ ವಿರುದ್ಧ ದೋಷಾ­ರೋಪಣೆ ಪಟ್ಟಿ ಸಲ್ಲಿಸಲು ಸಿಐಡಿ ಪೊಲೀಸರು ಅನುಮತಿ ಕೋರಿದ್ದಾರೆ. ಈ ಬಗ್ಗೆ ಇನ್ನೂ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸದಸ್ಯೆ ಮಂಗಳಾ ಶ್ರೀಧರ್‌ ಅವರನ್ನು ಮಾತ್ರ ಅಮಾನತುಗೊಳಿಸಲಾಗಿದೆ. ಒಬ್ಬ­ರನ್ನು ಅಮಾನತು­ಗೊಳಿಸಿ ಉಳಿದವರ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳದೇ ಇರುವುದು ಹಲವಾರು ಅನುಮಾನಗಳಿಗೆ ಕಾರಣವಾಗುತ್ತದೆ. ಸದಸ್ಯರ ನೇಮಕಾತಿ ವಿಳಂಬ ಮಾಡುವುದು ಕೂಡ ಇಂತಹ ಶಂಕೆಗೆ ಕಾರಣ­ವಾಗುತ್ತದೆ. ಸಿಐಡಿ ತನಿಖಾ ವರದಿಯಲ್ಲಿ ಹೆಸರು ಇರುವ ಸದಸ್ಯರನ್ನೇ ಇಟ್ಟು­ಕೊಂಡು ಹೊಸ ನೇಮಕಾತಿ ನಡೆಸುವುದು ಸರ್ವಥಾ ಸಲ್ಲ. ಆಯೋಗಕ್ಕೆ ಅಧ್ಯಕ್ಷರಿಲ್ಲ. ಇರುವ ಸದಸ್ಯರ ಮೇಲೆ ಆರೋಪಗಳಿವೆ. ಇಂತಹ ಸ್ಥಿತಿಯಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಾಮಾಣಿಕವಾಗಿ ನಡೆಯುತ್ತದೆಯೇ ಎಂಬ ಅನುಮಾನ ಅಭ್ಯರ್ಥಿಗಳಲ್ಲಿ ಬಂದರೆ ಅದು ಅವರ ತಪ್ಪಲ್ಲ. ಕೆಪಿಎಸ್‌ಸಿ ಶುದ್ಧೀಕರಣಕ್ಕಾಗಿಯೇ ರಚಿಸಲಾಗಿದ್ದ ಪಿ.ಸಿ. ಹೋಟಾ ಸಮಿತಿಯ ಶಿಫಾರಸುಗಳನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಅದರ ಅನ್ವಯ ಕೆಲವು ಕ್ರಮಗಳನ್ನೂ ಕೈಗೊಂಡಿದೆ. ಹೊಸ ಪಠ್ಯಕ್ರಮವನ್ನೂ ಅಳ­ವಡಿಸಲಾಗಿದೆ. ಪರೀಕ್ಷಾ ಮೇಲ್ವಿಚಾರಕರನ್ನೂ ನೇಮಿಸಲಾಗಿದೆ. ಈಗ ದಕ್ಷ ಮತ್ತು ಪ್ರಾಮಾಣಿಕರನ್ನು ಆಯೋಗಕ್ಕೆ ನೇಮಿಸುವುದರ ಮೂಲಕ ರಾಜ್ಯ ಸರ್ಕಾರ ತನ್ನ ಬದ್ಧತೆಯನ್ನು ತೋರಬೇಕಾಗಿದೆ. ಕೆಪಿಎಸ್‌ಸಿಗೆ ನೇಮಕ ಮಾಡಲು ಪ್ರಾಮಾಣಿಕ ವ್ಯಕ್ತಿಗಳು ಸಿಗುವುದಿಲ್ಲ ಎಂದರೆ ಅದನ್ನು ಒಪ್ಪ­ಲಾಗದು. ಈ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಕೆಪಿಎಸ್‌ಸಿಗೆ ತಕ್ಷಣ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.