ಸಾಲ ಮನ್ನಾ ಉರುಳಾಗದಿರಲಿ ದೇಶದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಐದು ವರ್ಷಗಳ ಅವಧಿ­ಯಲ್ಲಿ ರೂ1.06 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿವೆ. ಜತೆಗೆ ಬ್ಯಾಂಕುಗಳಲ್ಲಿ ವಸೂಲಾಗದ ಸಾಲದ ಪ್ರಮಾಣ (ಎನ್‌ಪಿಎ) ಹನುಮಂತನ ಬಾಲದಂತೆ ಬೆಳೆಯುತ್ತಿದೆ. ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಟನೆ ಹೇಳುವಂತೆ 2013ರ ಸೆಪ್ಟೆಂಬರ್ ಅಂತ್ಯಕ್ಕೆ ಎನ್‌ಪಿಎ ರೂ 2.36 ಲಕ್ಷ ಕೋಟಿಯಷ್ಟಿತ್ತು. ಈ ವಿಷಯದಲ್ಲಿ ದೇಶದ 20 ಖಾಸಗಿ ಬ್ಯಾಂಕ್‌ಗಳೂ ಹಿಂದೆ ಬಿದ್ದಿಲ್ಲ. 2012ರಲ್ಲಿ ರೂ 18,768 ಕೋಟಿ ಯಷ್ಟಿದ್ದ ಇವುಗಳ ಎನ್‌ಪಿಎ 2014ರಲ್ಲಿ ರೂ 24,541 ಕೋಟಿಗೆ ಏರಿದೆ. ಉದ್ದೇಶ­ಪೂರ್ವಕ­ವಾಗಿ ಬಾಕಿ ಉಳಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚಿದೆ. ಕೇಂದ್ರ ಹಣಕಾಸು ಖಾತೆ ಸಹಾಯಕ ಸಚಿವರು ಸಂಸತ್ತಿಗೆ ನೀಡಿದ ಮಾಹಿತಿ ಪ್ರಕಾರ ರೂ 25 ಲಕ್ಷಕ್ಕಿಂತ ಹೆಚ್ಚು ಮೊತ್ತವನ್ನು ಉದ್ದೇಶಪೂರ್ವಕವಾಗಿ ಬಾಕಿ ಉಳಿಸಿಕೊಂಡ 1600 ಸುಸ್ತಿದಾರರ ಹೆಸರುಗಳನ್ನು ಬ್ಯಾಂಕುಗಳು ಬಹಿರಂಗಪಡಿಸಿವೆ. ಇದರಲ್ಲಿ ಕಿಂಗ್ ಫಿಷರ್ ವಿಮಾನಯಾನ ಸಂಸ್ಥೆ ಮುಖ್ಯಸ್ಥ ವಿಜಯ್ ಮಲ್ಯ ಸೇರಿ ಅನೇಕ ಉದ್ಯಮಿಗಳಿದ್ದಾರೆ. ಹಾಗೆಯೇ, ಸರ್ಕಾರಿ ಬ್ಯಾಂಕುಗಳು ಕಲ್ಲಿದ್ದಲು ಗಣಿ ಕಂಪೆನಿಗಳಿಗೆ ರೂ96,484 ಕೋಟಿ ಸಾಲ ಕೊಟ್ಟಿವೆ. ಅದನ್ನು ವಸೂಲು ಮಾಡುವ ದಾರಿ ಕಾಣದೆ ಪೇಚಾಟಕ್ಕೆ ಸಿಲುಕಿವೆ. ಆರ್‌ಬಿಐ ವರದಿ ಪ್ರಕಾರ ಡಿಸೆಂಬರ್ 12ರ ಹೊತ್ತಿಗೆ ಬ್ಯಾಂಕುಗಳು ಕೊಟ್ಟ ಒಟ್ಟೂ ಸಾಲ ರೂ 63.03 ಲಕ್ಷ ಕೋಟಿ ಮತ್ತು ಸಂಗ್ರಹಿಸಿದ ಠೇವಣಿ ರೂ 82.93 ಲಕ್ಷ ಕೋಟಿ ಇತ್ತು. ಬ್ಯಾಂಕ್‌ಗಳ ಅಗಾಧ ವಹಿವಾಟಿಗೆ ಹೋಲಿಸಿ­ದರೆ ಎನ್‌ಪಿಎ, ಮನ್ನಾ ಮಾಡಿದ ಸಾಲ ಅಷ್ಟೇನೂ ದೊಡ್ಡದಲ್ಲ ಎಂದು ಸಮರ್ಥಿಸಿಕೊಳ್ಳುವಂತೆ ಇಲ್ಲವೇ ಇಲ್ಲ. ಏಕೆಂದರೆ 5 ವರ್ಷದಲ್ಲಿ ಸರ್ಕಾರಿ ಬ್ಯಾಂಕ್‌ಗಳು ಮನ್ನಾ ಮಾಡಿದ ಹಣದಲ್ಲಿ ಬಡ ಕುಟುಂಬಗಳ 15 ಲಕ್ಷ ಮಕ್ಕಳನ್ನು ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಉಚಿತವಾಗಿ ಓದಿಸ­ಬಹುದಿತ್ತು ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಹೋಲಿಕೆ ಮಾಡಿದ್ದರು. ಹಾಗೆಯೇ ಕೃಷಿ ಸಾಲ ಮನ್ನಾದಿಂದ ರೈತರಿಗೆ ಅನುಕೂಲವೇನೂ ಆಗಿಲ್ಲ ಎಂಬಂಥ ರಘುರಾಮ ರಾಜನ್ ಮಾತು­ಗಳ ಪರಾಮರ್ಶೆಯೂ ಆಗಬೇಕು. ಬ್ಯಾಂಕ್‌ಗಳಲ್ಲಿನ ಒಂದೊಂದು ನಯಾ­ಪೈಸೆಯೂ ದುಡಿದು ಠೇವಣಿ ಇಟ್ಟ ಸಾರ್ವಜನಿಕರ ಸೊತ್ತು. ಬ್ಯಾಂಕ್‌ಗಳು ಈ ಹಣದ ಧರ್ಮದರ್ಶಿಗಳು. ಆದ್ದರಿಂದ ಅಧಿಕಾರ ಇದೆ ಎಂದು ಮನಸ್ಸಿಗೆ ತೋಚಿದಂತೆ ಮನ್ನಾ ಮಾಡುವ, ಸಾಲ ಮರುಹೊಂದಾ­ಣಿಕೆ ಹೆಸರಿನಲ್ಲಿ ವಸೂಲಿ ಮುಂದೂಡುವ ಪ್ರವೃತ್ತಿ ಸರಿಯಲ್ಲ. ಅಲ್ಲದೆ ಸಣ್ಣಪುಟ್ಟ ಸಾಲ­ಗಾರರ ಮೇಲೆ ಕಟ್ಟುನಿಟ್ಟು ಕ್ರಮ ಅನುಸರಿಸುವ ಬ್ಯಾಂಕ್‌­ಗಳು, ಪ್ರಭಾವಿ ಸಾಲಗಾರರ ವಿಚಾರ ಬಂದಾಗ ಮೆತ್ತಗಾಗುತ್ತವೆ ಎಂಬ ಆರೋಪ ಸರ್ವೇ­ಸಾಮಾನ್ಯ. ಅವಕ್ಕೆಲ್ಲ ಅವಕಾಶ ಕೊಡಬಾರದು. ಹಣದಾಸೆಗೆ ಬಲಿ­ಬಿದ್ದು ಸಾಲ ಮಂಜೂರಾತಿ ಮತ್ತು ವಸೂಲಿಯಲ್ಲಿ ಉದ್ದೇಶ­ಪೂರ್ವಕ ಲೋಪ ಎಸಗುವ, ಆಮಿಷಗಳಿಗೆ ಒಳಗಾಗುವ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಂತೆಯೇ ರಾಜಕೀಯ ಲಾಭಕ್ಕಾಗಿ ಸಾಲ ಮನ್ನಾ ಮಾಡುವ ಪ್ರವೃತ್ತಿಗೂ ಕಡಿವಾಣ ಬೀಳಬೇಕು. ಬ್ಯಾಂಕಿಂಗ್ ವ್ಯವಸ್ಥೆ ಒಂದು ದೇಶದ ಅಭಿವೃದ್ಧಿಯ ಜೀವನಾಡಿ. ದೋಷಪೂರಿತ ನಿರ್ಧಾರಗ­ಳಿಂದ ಇದು ಹಾಳಾಗಲು ಬಿಡಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.