ನಿರ್ವಹಣೆ ವೈಫಲ್ಯ ಚಿಕ್ಕಮಗಳೂರಿನ ಮಲ್ಲಂದೂರು ಅರಣ್ಯದ ಬಳಿ ಮಹಿಳೆಯೊಬ್ಬರನ್ನು ಕೊಂದ ಹುಲಿ ಸ್ಥಳಾಂತರದಲ್ಲಿ ಎದ್ದ ವಿವಾದ ವ್ಯಾಘ್ರನ ಹತ್ಯೆ­ಯೊಂದಿಗೆ ಕೊನೆಯಾಗಿದೆ. ಅರಣ್ಯ ಇಲಾಖೆಯು ವಿವೇಚನಾರಹಿತವಾಗಿ ನಡೆಸಿದ ಕಾರ್ಯಾಚರಣೆಯಿಂದ ಖಾನಾಪುರದ ಕೊಂಗಳಾ ಗ್ರಾಮದಲ್ಲಿ ಮತ್ತೊಬ್ಬರು ಮಹಿಳೆ ಬಲಿಯಾಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣ­ವಾಗಿದೆ. ಒಟ್ಟಾರೆ ಪರಿಸ್ಥಿತಿಯನ್ನು ಅವಲೋಕಿಸಿದರೆ ಅರಣ್ಯ ಇಲಾಖೆ ಹುಲಿ ಸ್ಥಳಾಂತರಕ್ಕೆ ಅತ್ಯುತ್ತಮ ಮಾರ್ಗವನ್ನು ಅನುಸರಿಸದೆ ಇರುವುದು ಎದ್ದು ಕಾಣುತ್ತಿದ್ದು, ಕರ್ತವ್ಯ ಲೋಪಕ್ಕೆ ಇದು ಉದಾಹರಣೆಯಾಗಿದೆ ಎನ್ನ­ಬ­ಹುದು. ಈ ಪ್ರಕರಣದಲ್ಲಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಮುಖ್ಯ­ಸ್ಥರ ಆಡಳಿತ ಲೋಪ, ಹುಲಿ ತಜ್ಞರಿಬ್ಬರ ನಡುವಿನ ಕೆಸರೆರೆಚಾಟದ ನಡುವೆ ಬದುಕಲು ಯೋಗ್ಯವಾಗಿದ್ದ ಹುಲಿ ಗುಂಡೇಟಿಗೆ ಬಲಿಯಾಗಿದೆ. ಚಿಕ್ಕಮಗ­ಳೂರಿ­ನಲ್ಲಿ ಹಿಡಿದಾಗಲೇ ಇದನ್ನು ಮೃಗಾಲಯಕ್ಕೆ ಸಾಗಿಸಿದ್ದರೆ ಹೊಸ ವಂಶ­ವಾಹಿಯೊಂದು ದೊರಕುತ್ತಿತ್ತು. ಕನಿಷ್ಠ ಪುನರ್ವಸತಿ ಕೇಂದ್ರಕ್ಕೆ ಸಾಗಿಸಿದ್ದರೂ ಹುಲಿ ಉಳಿಯುತ್ತಿತ್ತು ಮತ್ತು ಮೃಗಾಲಯದಲ್ಲಿ ಹತ್ತಿರದ ಸಂಬಂಧಿ­ಗಳಿಂದಲೇ ಹುಲಿ ಸಂತತಿ ಬೆಳೆಸುವುದು ತಪ್ಪುತ್ತಿತ್ತು. ಚಿಕ್ಕಮಗಳೂರಿನಲ್ಲಿ ಹುಲಿಗೆ ಮಹಿಳೆ ಬಲಿಯಾದ ತಕ್ಷಣವೇ ಇಲಾಖೆ ತಜ್ಞರ ಜೊತೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕಿತ್ತು. ಹುಲಿಗೆ ಅರಿವಳಿಕೆ ಹೊಡೆಯುವ ಸಂದರ್ಭದಲ್ಲಿ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ರಾಣಾ ಜಾರ್ಜ್‌ ಸ್ಥಳದಲ್ಲಿ ಇದ್ದದ್ದೂ ವಿವಾದಕ್ಕೆ ಕಾರಣವಾಗಿದೆ. ಮಂಡಳಿ ಇರುವುದು ಸಂರಕ್ಷಣೆ ವಿಚಾರದಲ್ಲಿ ಇಲಾಖೆಗೆ ಸಲಹೆ ನೀಡುವುದ­ಕ್ಕಾಗಿಯೇ ಹೊರತು ಕಾರ್ಯಾಚರಣೆಯಲ್ಲಿ ಭಾಗವಹಿಸಲು ಅಲ್ಲ. ಗೃಹ ಸಚಿವರ ಪುತ್ರ ಎನ್ನುವ ಕಾರಣಕ್ಕೆ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಅವಕಾಶ ನೀಡಿದ್ದು ಸರಿಯಲ್ಲ. ಸ್ಥಳಾಂತರವೂ ಗೊಂದಲಕಾರಿಯಾಗೇ ನಡೆ­ದಿದೆ. ಆರಂಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಬಳಿಯ ಅಣಶಿ ಅರಣ್ಯಕ್ಕೆ ಹುಲಿ ಸ್ಥಳಾಂತರಿಸಲು ಇಲಾಖೆ ತೀರ್ಮಾನಿಸಿದಾಗ ಜನರಿಂದ ಪ್ರತಿರೋಧ ಎದುರಾಯಿತು. ನಂತರ ಖಾನಾಪುರದ ಭೀಮಗಢ ವನ್ಯಜೀವಿ­ಧಾಮದ ತಳೇವಾಡಿ ಅರಣ್ಯಕ್ಕೆ ಅನಿವಾರ್ಯವಾಗಿ ತೆಗೆದುಕೊಂಡು ಹೋಗಿ ಬಿಡಲಾಯಿತು. ಹುಲಿಯನ್ನು ಜನವಸತಿ ಪ್ರದೇಶದಿಂದ ಕನಿಷ್ಠ ಐದು ಕಿ.ಮೀ ದೂರದಲ್ಲಿ ಬಿಡಬೇಕು ಎನ್ನುವ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸೂಚನೆಯನ್ನು ಇಲಾಖೆ ಈ ಹಂತದಲ್ಲಿ ಪರಿಗಣಿಸಲೇ ಇಲ್ಲ ಎನ್ನುವುದು ಬಹಿರಂಗವಾಗಿದೆ. ಹುಲಿ ಹಿಡಿದಾಗಲೇ ಇದನ್ನು ಸ್ಥಳಾಂತರಿಸಬೇಕು ಎನ್ನುವ ತೀರ್ಮಾನ ತೆಗೆದುಕೊಂಡು ಪ್ರಾಧಿಕಾರದ ನಿಯಮದ ಅಡಿಯಲ್ಲಿ ರೇಡಿಯೊ ಕಾಲರ್‌ ಅಳವಡಿಸಲಾಯಿತು. ಅಂದರೆ ಹುಲಿ ಸ್ಥಳಾಂತರದಲ್ಲಿ ಕಾಡಿಗೆ ಬಿಡುವ ಮಾರ್ಗ ಮಾತ್ರವೇ ಇಲಾಖೆಯ ಕಣ್ಣಿಗೆ ಬಿದ್ದಿದೆ. ಇದಕ್ಕಾಗಿ ತಜ್ಞ ಸಂಜಯ್‌ ಗುಬ್ಬಿ ಅವರನ್ನು ಇಲಾಖೆ ಆಶ್ರಯಿಸಬೇಕಾಯಿತು. ಲಕ್ಷಗ­ಟ್ಟಲೆ ಸಂಬಳ ಪಡೆಯುವ ಅಧಿಕಾರಿಗಳಿಗೆ ರೇಡಿಯೊ ಕಾಲರ್‌ ಅಳವಡಿಸುವ ಕಲೆ ಕರಗತವಾಗಿಲ್ಲವೇ? ಇಲಾಖೆಗೆ ರೇಡಿಯೊ ಕಾಲರ್‌ ಹಾಕಲು ಬಲ್ಲ ತಜ್ಞರನ್ನು ರೂಪಿಸುವುದು ಅಸಾಧ್ಯವೇ? ಇದನ್ನು ಒಪ್ಪಲು ಸಾಧ್ಯವಿಲ್ಲ. ಒಟ್ಟಾರೆ ಪ್ರಕರಣವನ್ನು ಅವಲೋಕಿಸಿದರೆ ಇಲಾಖೆಯ ವನ್ಯಜೀವಿ ವಿಭಾಗ ಸಂಪೂರ್ಣವಾಗಿ ಸೋತಿದೆ. ಇದಕ್ಕೆ ಹುಲಿ ಬಲಿಯಾಗಿದೆ. ಆದರೆ ಪ್ರಕರಣ­ವನ್ನು ನಿರ್ವಹಿಸುವಲ್ಲಿ ಸೋತ ಅಧಿಕಾರಿಗಳಿಗೆ ಯಾವುದೇ ಶಿಕ್ಷೆಯಾಗಿಲ್ಲ. ಇದು ಸರಿಯಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.