ಸಮಗ್ರ ಕಾರ್ಯತಂತ್ರ ರೂಪಿಸಿ ಬೆಂಗಳೂರಿನಲ್ಲಿ ಮತ್ತೊಮ್ಮೆ ಬಾಂಬ್‌ ಸ್ಫೋಟವಾಗಿದೆ. ಸುಧಾರಿತ ಸ್ಫೋಟಕ ಸಾಧನ ಸ್ಫೋಟಗೊಂಡಿದ್ದು ಮಹಿಳೆಯೊಬ್ಬರು ಮೃತ­ರಾಗಿದ್ದಾರೆ. ಬೆಂಗಳೂರಿನಲ್ಲಿ ಕಳೆದ 9 ವರ್ಷಗಳಲ್ಲಿ ನಡೆದ ಐದನೇ ಭಯೋ­ತ್ಪಾದನಾ ಬಾಂಬ್‌ ದಾಳಿಯಿದು. 2005ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ­ಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ವಿಜ್ಞಾನಿಯೊಬ್ಬರು ಮೃತಪಟ್ಟರೆ, 2008ರಲ್ಲಿ ನಗರದ 6 ಕಡೆ ನಡೆದ ಸರಣಿ ಬಾಂಬ್‌ಸ್ಫೋಟಗಳಲ್ಲಿ ಒಬ್ಬ ಮಹಿಳೆ ಸತ್ತಿದ್ದು, 16 ಜನರು ಗಾಯಗೊಂಡಿದ್ದರು. 2010ರಲ್ಲಿ ಚಿನ್ನ­ಸ್ವಾಮಿ ಸ್ಟೇಡಿಯಂ ಬಳಿ ನಡೆದ ಸರಣಿ ಸ್ಫೋಟದಲ್ಲಿ ಐಪಿಎಲ್‌ ಪಂದ್ಯದ ಬಂದೋಬಸ್ತ್‌ನಲ್ಲಿದ್ದ ಪೊಲೀಸರ ಸಹಿತ ಹತ್ತಾರು ಮಂದಿ ಗಾಯ­ಗೊಂಡಿದ್ದರು. 2013ರಲ್ಲಿ ಮಲ್ಲೇಶ್ವರದ ಬಿಜೆಪಿ ಕಚೇರಿಯ ಬಳಿ ನಡೆದ ಬಾಂಬ್‌ಸ್ಫೋಟದಲ್ಲಿ ಮೀಸಲು ಪೊಲೀಸ್‌ ಸಿಬ್ಬಂದಿ ಸಹಿತ 18 ಜನರು ಗಾಯ­ಗೊಂಡಿದ್ದರು. ಎಲ್ಲ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸ­ಲಾ­ಗಿದೆ­ಯಾದರೂ, ನ್ಯಾಯಾಲಯದ ವಿಚಾರಣೆ ತ್ವರಿತವಾಗಿ ನಡೆದಿಲ್ಲ ಎನ್ನು­ವುದು ಗಮನಾರ್ಹ. 2008ರಲ್ಲಿ ನಡೆದ ಸರಣಿ ಸ್ಫೋಟದ, 26 ಜನ ಆರೋಪಿ­ಗಳಲ್ಲಿ 12 ಜನ ಇನ್ನೂ ತಲೆತಪ್ಪಿಸಿಕೊಂಡಿದ್ದಾರೆ. ಆರು ವರ್ಷ­ಗಳಾದರೂ ಕೋರ್ಟ್‌ನಲ್ಲಿ ಬಂಧಿತರ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ. ಧರ್ಮ, ದೇಶಾಭಿಮಾನದ ವಿಚಾರದಲ್ಲಿ ಅತಿರೇಕದ ಭಾವೋದ್ವೇಗ­ಗ­ಳಿಂದ, ಭಯೋತ್ಪಾದನೆಯ ಹಿಂಸೆ ಹೆಚ್ಚುತ್ತಿರುವುದು ಎಲ್ಲೆಡೆ ಕಂಡು­ಬರು­ತ್ತಿರುವ ವಿದ್ಯಮಾನ. ಈ ಹೇಡಿತನದ ಕೃತ್ಯ ಖಂಡನಾರ್ಹ. ಬೆಂಗಳೂರು ನಗರ ದಿನದಿಂದ ದಿನಕ್ಕೆ ಅಡ್ಡಾದಿಡ್ಡಿಯಾಗಿ ವಿಸ್ತರಿಸುತ್ತಿದ್ದು, ಜನಸಂಖ್ಯೆ ಒಂದು ಕೋಟಿ ಸಮೀಪಿಸಿದೆ. ಇಲ್ಲಿರುವ ಪೊಲೀಸರ ಸಂಖ್ಯೆ ಸುಮಾರು 18 ಸಾವಿರ. ‘ದೇಶದ ಐ.ಟಿ ರಾಜಧಾನಿ’ಯಾಗಿರುವ ಕಾರಣ ಉದ್ಯೋಗ­ಕ್ಕಾಗಿ ವಿವಿಧ ರಾಜ್ಯಗಳಿಂದ ವಲಸಿಗರ ಸಂಖ್ಯೆ ಏರುತ್ತಿದೆ. ಓದು, ಉದ್ಯೋಗ, ಉದ್ಯಮ ಎಂದು ವಿದೇಶೀ ಪ್ರಜೆಗಳೂ ಸಾಕಷ್ಟು ಸಂಖ್ಯೆಯಲ್ಲಿ ನೆಲೆಯೂರಿ­ದ್ದಾರೆ. ನಿರಂತರ ವಲಸೆಯ ಕಾರಣ ಪೊಲೀಸರು ಎಲ್ಲರ ಮೇಲೆ ಕಣ್ಣಿಡುವುದು ಕಷ್ಟವಾದರೂ, ವಲಸಿಗರ ಮಾಹಿತಿಗಳನ್ನು ಹೆಚ್ಚು ವ್ಯವಸ್ಥಿತ­ವಾಗಿ ಕಾಪಿಡುವ ವ್ಯವಸ್ಥೆಯೊಂದು ಜಾರಿಗೆ ಬರಬೇಕು. ರಾಜ್ಯದಲ್ಲಿ ದಕ್ಷತೆ ಮತ್ತು ಹೆಚ್ಚು ಕಾರ್ಯಕ್ಷಮತೆಯುಳ್ಳ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ, ಕಾನೂನು-ಶಿಸ್ತು ಪಾಲನೆ ವಿಭಾಗದಲ್ಲಿ ಕೆಲಸ ಮಾಡಲು ಮುಂದಾಗುತ್ತಿ­ದ್ದಾರೆಯೇ ಹೊರತು, ಗುಪ್ತಚರ ವಿಭಾಗದಲ್ಲಿ ಕೆಲಸ ಮಾಡಲು ಆಸಕ್ತಿ ತೋರಿಸುವುದಿಲ್ಲ ಎನ್ನುವುದು ಗುಟ್ಟಿನ ವಿಷಯ­ವೇನಲ್ಲ. ಹೀಗಾಗಿ ರಾಜ್ಯದಲ್ಲಿ ಗುಪ್ತಚರ ವಿಭಾಗವನ್ನು ಬಲಪಡಿ­ಸಬೇಕಿದೆ. ನಾಗರಿಕರು ಕೂಡಾ ಸುರಕ್ಷಾ ವ್ಯವಸ್ಥೆ ಭಾಗವಾಗಿ ಸ್ಪಂದಿಸುವುದು ಈಗಿನ ಅಗತ್ಯ. ಮುಖ್ಯಮಂತ್ರಿ­ಯವರ ಭರವಸೆಯಂತೆ ವಿಶೇಷ ತನಿಖಾ ತಂಡ ರಚಿಸಿ, ದುಷ್ಕರ್ಮಿ­ಗಳನ್ನು ತಕ್ಷಣ ಬಂಧಿಸಲು ಎಲ್ಲ ಕ್ರಮಗಳನ್ನೂ ಕೈಗೊಳ್ಳ­ಬೇಕು. ಈ ಸ್ಫೋಟಕ್ಕೆ ಕಾರಣ­ವಾಗಿರಬಹುದಾದ ಎಲ್ಲಾ ಸೂಕ್ಷ್ಮ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸುವ ಅಗತ್ಯವಿದೆ. ನಗರದ ಸುರಕ್ಷತೆ­ಗಾಗಿ ಹೊಸ ಕಾಲದ ಅಗತ್ಯ­ಗಳಿಗೆ ಅನುಗುಣವಾಗಿ ಪರಿಣಾಮಕಾರಿ ಕಾರ್ಯತಂತ್ರಗಳನ್ನು ರೂಪಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.