ಸ್ಪಷ್ಟತೆ ಬೇಕು ಯೋಜನಾ ಆಯೋಗದ ಭವಿಷ್ಯದ ಬಗ್ಗೆ ರಾಜ್ಯಗಳ ಮುಖ್ಯ­ಮಂತ್ರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಚರ್ಚೆ ನಡೆಸಿ­ದ್ದಾರೆ. ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ, ನಿರ್ವಹಿಸುವಲ್ಲಿ ರಾಜ್ಯ­ಗಳಿಗೆ ಹೆಚ್ಚಿನ ಪಾತ್ರವಿರಬೇಕೆಂಬ ವಿಚಾರದ ಬಗ್ಗೆ ಎಲ್ಲಾ ರಾಜ್ಯಗಳೂ ಒಮ್ಮತ ಹೊಂದಿವೆ. ಈ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಇದು ಸರಿ­ಯಾ­ದುದೇ. ಆದರೆ ಯೋಜನಾ ಆಯೋಗವೇ ರದ್ದಾಗಬೇಕು ಎಂಬ ವಿಚಾ­ರದ ಬಗ್ಗೆ ಬಿಜೆಪಿ ಆಡಳಿತವಿರುವ ರಾಜ್ಯಗಳು ಮಾತ್ರ ಸಹಮತ ಹೊಂದಿವೆ. ಕರ್ನಾ­ಟಕವೂ ಸೇರಿದಂತೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯ­ಮಂತ್ರಿ­ಗಳು, ಯೋಜನಾ ಆಯೋಗವನ್ನು ಹೊಸ ಚಿಂತನೆ ಹಾಗೂ ಪರಿ­ಕಲ್ಪನೆಗಳ ಮೂಲಕ ಪುನರ್ ರಚನೆ ಮಾಡುವುದರ ಪರವಾಗಿದ್ದಾರೆ. ನಿಜ. ಬದಲಾಗಿರುವ ಕಾಲದಲ್ಲಿ ಯೋಜನಾ ಆಯೋಗ ಎಷ್ಟರಮಟ್ಟಿಗೆ ಪ್ರಸ್ತುತ ಎಂಬಂತಹ ಚರ್ಚೆ ಸರಿಯಾದದ್ದೇ. ಯೋಜನಾ ಆಯೋಗದ ಪುನರ್ ರಚ­ನೆಯ ಅಗತ್ಯವನ್ನು ಹಿಂದಿನ ಯುಪಿಎ ಸರ್ಕಾರದ ಪ್ರಧಾನಿ ಮನ­ಮೋಹನ್ ಸಿಂಗ್ ಕೂಡ ಪ್ರಸ್ತಾಪಿಸಿದ್ದರು. ಇದು ಸಹಜ ಬೆಳವಣಿಗೆಯೇ ಹೌದು. ಏಕೆಂದರೆ ಯೋಜನಾ ಆಯೋಗ ಜನ್ಮ ತಳೆದಿದ್ದು ಜವಾಹರಲಾಲ್ ನೆಹರೂ ಅವರ ಒತ್ತಾಸೆಯಿಂದ 1950ರಷ್ಟು ಹಿಂದೆ. ಆಗಷ್ಟೇ ಬ್ರಿಟಿಷರ ಆಳ್ವಿಕೆ­ಯಿಂದ ಮುಕ್ತಿಪಡೆದಿದ್ದ ಸ್ವತಂತ್ರ ಭಾರತದ ಆರ್ಥಿಕ ಇತಿಹಾಸದಲ್ಲಿ ಯೋಜನಾ ಆಯೋಗ ವಹಿಸಿದ ಪಾತ್ರ ಮಹತ್ವದ್ದು ಎಂಬುದನ್ನು ಮರೆಯು­ವಂತಿಲ್ಲ. ಸರ್ಕಾರಿ ಕ್ಷೇತ್ರವನ್ನು ಬಲಪಡಿಸುವುದು ಆಗಿನ ನಿಯಂತ್ರಿತ ಅರ್ಥ­ವ್ಯವಸ್ಥೆಯ ಆದ್ಯತೆಯಾಗಿತ್ತು. ಆದರೆ 1990ರ ದಶಕದಲ್ಲಿ ಆರಂಭಿಸಲಾದ ಆರ್ಥಿಕ ಸುಧಾರಣೆಗಳಿಂದಾಗಿ ಸಮಾಜವಾದಿ ಅರ್ಥ ವ್ಯವಸ್ಥೆಯಿಂದ ಮಾರು­ಕಟ್ಟೆ ಆಧಾರಿತ ಅರ್ಥವ್ಯವಸ್ಥೆಗೆ ರಾಷ್ಟ್ರ ತೆರೆದುಕೊಂಡಿದೆ. ಇಂತಹ ಸಂದರ್ಭ­ದಲ್ಲಿ ಕೇಂದ್ರೀಯ ಯೋಜನೆ ಪರಿಕಲ್ಪನೆ ಅಪ್ರಸ್ತುತವಾದದ್ದು ಎಂಬ ವಾದ­ದಲ್ಲಿ ಹುರುಳಿದೆ. ಈಗ, ‘ಸಹಕಾರ ತತ್ವ ಆಧರಿಸಿದ ಒಕ್ಕೂಟ ವ್ಯವಸ್ಥೆ’ ಹಾಗೂ ‘ಭಾರತ ತಂಡ’ (ಟೀಮ್‌ ಇಂಡಿಯಾ) ಪರಿ­ಕಲ್ಪನೆಗಳನ್ನು ಸದೃಢಗೊಳಿ­ಸು­ವಂತಹ ಪರಿ­ಣಾಮಕಾರಿ ಸಂಸ್ಥೆಯ ಅಗತ್ಯವನ್ನು ಪ್ರಧಾನಿ ಮೋದಿ ಪ್ರತಿಪಾದಿಸು­ತ್ತಿದ್ದಾರೆ. ಆರ್ಥಿಕ ಬೆಳವಣಿಗೆಯಲ್ಲಿ ರಾಜ್ಯಗಳಿಗೆ ಹೆಚ್ಚಿನ ಪಾತ್ರವನ್ನು ನೀಡುವುದು ಇದ­ರಿಂದ ಸಾಧ್ಯ ಎಂಬಂಥ ವಾದಗಳು ಮಂಡನೆಯಾಗಿವೆ. ಸದ್ಯದ ನೀತಿ ನಿರೂ­ಪಣೆಯು ‘ಮೇಲಿ­ನಿಂದ ಕೆಳಕ್ಕೆ’ ಚಲಿಸುವ ರೀತಿಯ­ಲ್ಲಿದೆ. ಇದಕ್ಕೆ ಬದಲಾಗಿ ‘ಕೆಳ ಹಂತದಿಂದ ಮೇಲ್ಮುಖವಾಗಿ ಚಲಿಸುವ ಪದ್ಧತಿ’ ಜಾರಿಗೆ ಬರಬೇಕು ಎಂಬಂಥ ವಿಚಾರ, ರಾಜ್ಯಗಳ ವಿಶಿಷ್ಟ ಅಗತ್ಯಗಳು ಹಾಗೂ ಸಮಸ್ಯೆಗಳನ್ನು ಅರಿವಿಗೆ ತಂದುಕೊಳ್ಳುವಂತಹದ್ದು. ಬಹುದೊಡ್ಡ ದೇಶವಾಗಿರುವ ಭಾರತದ ವಿವಿಧ ರಾಜ್ಯಗಳಿಗೆ ಅಭಿವೃದ್ಧಿಯ ನೀತಿಗಳು ವಿಭಿನ್ನವಾಗಿರಬೇಕು ಎಂಬುದೂ ನಿಜ. ಆದರೆ ಈಗಿರುವ ವ್ಯವಸ್ಥೆಗೇ ಹೊಸ ರೂಪ ನೀಡಬೇಕೋ ಅಥವಾ ಹೊಸ ಸಂಸ್ಥೆಯನ್ನು ರಚಿಸ­ಬೇಕೋ ಎಂಬಂಥ ಪ್ರಶ್ನೆಗೆ ಸಮರ್ಪಕ ಉತ್ತರ ಕಂಡುಕೊಳ್ಳುವುದು ಸಾಧ್ಯವಾಗಿಲ್ಲ. ಹಾಗೆಯೇ ಕೇಂದ್ರದ ಯೋಜನೆಗಳಿಗೆ ಹಣ­ಹಂಚಿಕೆ, ಹಣ ವರ್ಗಾವಣೆ ವಿಚಾರಗಳ ನಿರ್ವಹಣೆ ಕುರಿತಂತೆಯೂ ಅಸ್ಪಷ್ಟತೆಗಳಿವೆ. ಬರುವ ಜನವರಿ ಅಂತ್ಯ­ದೊಳಗೆ ಯೋಜನಾ ಆಯೋಗದ ಹೊಸ ಸ್ವರೂಪ ಅಂತಿಮಗೊಳ್ಳುವ ನಿರೀಕ್ಷೆಯಿದ್ದು ಇದಕ್ಕೆ ಮೊದಲು ಈ ಗೊಂದಲಗಳು ನಿವಾರಣೆಯಾಗಬೇಕು. ಲಭ್ಯ ಸಂಪ­ನ್ಮೂಲ, ಕೌಶಲಗಳನ್ನು ಸಮರ್ಥವಾಗಿ ಬಳಸಿಕೊಂಡು ಸುಸ್ಥಿರ ಅಭಿವೃದ್ಧಿಗೆ ಈ ಹೊಸ ವ್ಯವಸ್ಥೆ ಪೂರಕವಾಗುವಂತಿರಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.