ಜವಾಬ್ದಾರಿ ಬೇಕು ಭಗವದ್ಗೀತೆಯನ್ನು ‘ರಾಷ್ಟ್ರೀಯ ಪವಿತ್ರ ಗ್ರಂಥ ಮಾಡಬೇಕು’ ಎಂದು ಹೇಳಿಕೆ ನೀಡುವ ಮೂಲಕ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ವಿವಾದಕ್ಕೆ ಸಿಲುಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಗೀತೆಯನ್ನು ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಅವರಿಗೆ ಕೊಡುಗೆ ನೀಡಿರುವ ಹಿನ್ನೆಲೆಯಲ್ಲಿ ಗೀತೆಗೆ ‘ರಾಷ್ಟ್ರೀಯ ಗ್ರಂಥ’ದ ಗೌರವ ಬಂದಿದೆ, ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ’ ಎಂಬ ಸಚಿವೆ ಮಾತಿಗೆ ಎಲ್ಲಾ ವಿರೋಧ ಪಕ್ಷಗಳೂ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವುದು ಸರಿಯಾಗಿದೆ. ಭಾರತದಲ್ಲಿ ಭಗವದ್ಗೀತೆ ಇರಲಿ ಬೇರೆ ಯಾವುದೇ ಧರ್ಮ­ಗ್ರಂಥವಿರಲಿ ಅದನ್ನು ‘ರಾಷ್ಟ್ರೀಯ ಪವಿತ್ರ ಗ್ರಂಥ’ ಎಂದು ಕರೆಯುವುದು ಸರಿಯಲ್ಲ. ಭಾರತ ಬಹು ಸಂಸ್ಕೃತಿಗಳ ದೇಶ. ಸಂವಿಧಾನ, ಜಾತ್ಯತೀತ ತತ್ವ­ವನ್ನು ಎತ್ತಿಹಿಡಿದಿದೆ. ನಮ್ಮದು ಸಂವಿಧಾನದ ಆಶಯಗಳಿಗೆ ಅನುಗುಣವಾದ ಸರ್ಕಾರವನ್ನು ಹೊಂದಿರುವ ಪ್ರಜಾಪ್ರಭುತ್ವ ರಾಷ್ಟ್ರವೇ ಹೊರತು ಮತ, ಧರ್ಮವನ್ನು ಆಧರಿಸಿದ ಪುರೋಹಿತಶಾಹಿ ಆಡಳಿತವಲ್ಲ. ನ್ಯಾಯಾಲ­ಯ­ಗಳು ನೀಡುವ ತೀರ್ಪುಗಳು ಸಂವಿಧಾನದ ಆಶಯ ಮತ್ತು ವಿಧಿಗಳನ್ನು ಆಧರಿಸಿ ಇರುತ್ತವೆಯೇ ಹೊರತು ಯಾವುದೇ ರಾಷ್ಟ್ರೀಯ ಗ್ರಂಥವನ್ನು ಆಧ­ರಿಸಿ ಅಲ್ಲ. ಉನ್ನತ ಸ್ಥಾನದಲ್ಲಿ ಮಾತ್ರವಲ್ಲ, ಸ್ವತಃ ಶಾಸನಗಳನ್ನು ರೂಪಿಸುವ ಸ್ಥಾನದಲ್ಲಿ ಇರುವವರು ಈ ರೀತಿಯ ಹೇಳಿಕೆಗಳನ್ನು ಕೊಡುವುದು ಸರಿ­ಯಲ್ಲ. ಸಂವಿಧಾನದ ಮೂಲ ಕಲ್ಪನೆಯನ್ನೇ ಪ್ರಶ್ನಿಸುವ, ಅದರ ಆಶಯಗಳಿಗೆ ಚ್ಯುತಿ ತರುವ ಮಾತುಗಳನ್ನು ಒಪ್ಪುವುದು ಸಾಧ್ಯವಿಲ್ಲ. ಭಗವದ್ಗೀತೆಗೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನ ಇರುವುದು ನಿಜ. ಸ್ವಾತಂತ್ರ್ಯ ಆಂದೋಲನದ ಸಮಯದಲ್ಲಿ ಅರವಿಂದರು, ಲೋಕಮಾನ್ಯ ತಿಲಕರು, ವಿನೋಬಾ ಭಾವೆ, ಮಹಾತ್ಮ ಗಾಂಧೀಜಿ ಸೇರಿದಂತೆ ಹಲವರು ಗೀತೆಗೆ ವ್ಯಾಖ್ಯಾನಗಳನ್ನು ಬರೆದಿದ್ದರು. ಹಾಗೆಂದು ಭಗವದ್ಗೀತೆ ಇಡೀ ರಾಷ್ಟ್ರ­ವನ್ನು ಪ್ರತಿನಿಧಿಸುವ ರಾಷ್ಟ್ರೀಯ ಪವಿತ್ರ ಗ್ರಂಥವಾಗುವುದು ಸಾಧ್ಯವಿಲ್ಲ. ನಮಗೆ ಸಂಸತ್ತು ಇದೆ, ಚುನಾಯಿತ ಜನಪ್ರತಿನಿಧಿಗಳಿದ್ದಾರೆ, ಮಿಗಿಲಾಗಿ ಸಂವಿಧಾನವಿದೆ. ಇಷ್ಟು ವರ್ಷ ಪ್ರಜಾಪ್ರಭುತ್ವದ ತಳಹದಿಯ ಮೇಲೆ ದೇಶ ಹಲವು ರಂಗಗಳಲ್ಲಿ ಮುನ್ನಡೆ ಸಾಧಿಸಿದೆ. ಮುಂದೆಯೂ ಬಹುತ್ವ ಕಾಪಾ­ಡಿಕೊಂಡು ಸಹಬಾಳ್ವೆ ಮಾಡಲು ಇದೇ ತಕ್ಕ ದಾರಿಯಾಗಿರುತ್ತದೆ ಎಂಬು­ದರಲ್ಲಿ ಅನುಮಾನವಿಲ್ಲ. ಪ್ರಧಾನಿಯವರು ಪ್ರಗತಿಯ ಪರಿಭಾಷೆಯಲ್ಲೂ, ಸಚಿವರು ಧಾರ್ಮಿಕ ಪರಿಭಾಷೆಯಲ್ಲೂ ಮಾತನಾಡಿದರೆ ಜನರಿಗೆ ಸರ್ಕಾ­ರದ ನೀತಿ ನಿಲುವುಗಳ ಬಗ್ಗೆ ಅನುಮಾನ ಮೂಡುವುದು ಸಹಜ. ಉತ್ತಮ ಆಡಳಿತ, ಎಲ್ಲ ಜನವರ್ಗಗಳ ರಕ್ಷಣೆ, ದೇಶದ ಅಭಿವೃದ್ಧಿ, ಆರೋಗ್ಯ, ಶಿಕ್ಷಣ ಇವು ಜನಕಲ್ಯಾಣವನ್ನು ಬಯಸುವ ಯಾವುದೇ ಸರ್ಕಾರದ ಆದ್ಯ ಕರ್ತವ್ಯ­ವಾಗ­ಬೇಕು. ಸ್ವತಃ ಪ್ರಧಾನಿ ಆರ್ಥಿಕ ಪ್ರಗತಿ, ಯೋಜನೆಗಳು, ಉತ್ತಮ ವಿದೇ­ಶಾಂಗ ನೀತಿ ನಿರ್ಮಾಣದಲ್ಲಿ ಆಸಕ್ತಿ ತೋರಿಸುತ್ತಿರುವಾಗ, ಅವರದೇ ಪಕ್ಷದ ಪ್ರಮುಖ ಸ್ಥಾನದಲ್ಲಿರುವ ಹಿರಿಯ ಸಚಿವೆಯು ನೀಡಿರುವ ಇಂಥ ಹೇಳಿಕೆ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸುವುದರಲ್ಲಿ ಅನುಮಾನವಿಲ್ಲ. ಬಿಜೆಪಿ ಕೂಡ ಸಚಿವೆಯ ನಿಲುವನ್ನು ಬೆಂಬಲಿಸಿರುವುದು ಸರಿಯಲ್ಲ. ದೇಶದ ಬೆಳವಣಿಗೆ, ಸಂವಿಧಾನದ ಆಶಯಗಳ ಪಾಲನೆ ಮೊದಲ ಆದ್ಯತೆ ಆಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.