ಕಬ್ಬು ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಿ ಧರಣಿ, ಪ್ರತಿಭಟನೆ, ಮುತ್ತಿಗೆಯಂತಹ ಅಸ್ತ್ರಗಳನ್ನು ಪ್ರಯೋಗಿಸದೆ ಕಬ್ಬು ಬೆಳೆಗಾರರ ಯಾವೊಂದು ಸಮಸ್ಯೆಯೂ ಬಗೆಹರಿಯಲಾರ­ದೇನೊ? ಬೆಲೆ ನಿಗದಿ, ಕಾರ್ಖಾನೆಗಳಿಂದ ಬರಬೇಕಿರುವ ಬಾಕಿ ವಸೂಲಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿ­ದರೆ ಇಂತಹದೊಂದು ದಟ್ಟ ಅನುಮಾನ ಮೂಡದೇ ಇರದು. ಪ್ರತಿ ಹಂಗಾ­ಮಿ­ನಲ್ಲೂ ಯಾವುದೋ ಒಂದು ರೂಪದಲ್ಲಿ ಒತ್ತಡ ಹೇರಿಯೇ ಕೊಂಚ ಮಟ್ಟಿ­ಗಾದರೂ ತಮ್ಮ ಹಿತ ರಕ್ಷಿಸಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿಗೆ ಬೆಳೆ­ಗಾರ­ರನ್ನು ದೂಡುವುದು ಸಕ್ಕರೆ ಕಾರ್ಖಾನೆಗಳಿಗೆ ಹಾಗೂ ಜವಾಬ್ದಾರಿ­ಯುತ ಸರ್ಕಾರಕ್ಕೆ ಶೋಭೆ ತರುವ ಸಂಗತಿಯಲ್ಲ. ಕಳೆದ ವರ್ಷದ ನವೆಂಬರ್‌­ನಲ್ಲಿ ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ ನಡೆದಾಗ ಕಬ್ಬಿಗೆ ಯೋಗ್ಯ ಬೆಲೆ ನಿಗದಿಗೆ ಒತ್ತಾಯಿಸಿ ಬೆಳೆಗಾರರು ನಡೆಸಿದ ಧರಣಿ, ಪ್ರತಿ­ಭಟನೆಗಳು ರೈತರೊಬ್ಬರ ಸಾವಿನಲ್ಲಿ ಪರ್ಯವಸಾನಗೊಂಡಿದ್ದವು. ಈ ಸಲದ ಅಧಿವೇಶನ ಮಂಗಳವಾರ ಆರಂಭವಾಗಿದೆ. ಮೊದಲ ದಿನವೇ ಸದನದ ಒಳಗೂ ಮತ್ತು ಹೊರಗೂ ಮತ್ತೆ ಅದೇ ಬೆಳೆಗಾರರ ಸಮಸ್ಯೆಗಳು ಅನುರ­ಣಿ­ಸಿವೆ. ರೈತರಿಗೆ ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಚುಕ್ತಾ ಮಾಡಿಸುವ ಬೇಡಿ­ಕೆಯು ಸಂಧಾನ ಪ್ರಯತ್ನಗಳಿಂದ ಬಗೆಹರಿಯದ ಕಾರಣ ಬೆಳೆಗಾರರು ಬೀದಿ­ಗಿಳಿದು ತಮ್ಮ ಸಿಟ್ಟು ಪ್ರದರ್ಶಿಸಿದ್ದಾರೆ. ವಿರೋಧ ಪಕ್ಷವಾದ ಬಿಜೆ­ಪಿಯೂ ಬೆಳೆಗಾರರ ಪರ ಧ್ವನಿ ಎತ್ತಿದೆ. ರಾಜ್ಯದ ಬಹುಪಾಲು ಕಾರ್ಖಾ­ನೆಗಳು ಬಾಕಿ ಉಳಿಸಿಕೊಂಡಿವೆ. 2013–14ನೇ ಸಾಲಿನಲ್ಲಿ ರೈತರಿಗೆ ಸಂದಾ­ಯವಾಗಬೇಕಿರುವ ಒಟ್ಟು ಮೊತ್ತ ₨ 1,700 ಕೋಟಿಗೂ ಹೆಚ್ಚು ಎಂಬುದು ಬಾಕಿ ಮೊತ್ತದ ಅಗಾಧತೆಯನ್ನು ತೋರುತ್ತದೆ. ಕೆಲವು ಕಾರ್ಖಾನೆಗಳು ಐದು ವರ್ಷಗಳಿಂದಲೂ ಬಾಕಿ ಉಳಿಸಿಕೊಂಡಿವೆ ಎಂದು ವರದಿಯಾಗಿದೆ. ಇದು ನಿಜವೇ ಆಗಿದ್ದಲ್ಲಿ ಅಕ್ಷಮ್ಯ. ಪ್ರತಿ ಟನ್ ಕಬ್ಬಿಗೆ ರಾಜ್ಯ ಸರ್ಕಾರ ₨ 2,500 ಬೆಲೆ ನಿಗದಿಪಡಿಸಿತ್ತು. ಸರ್ಕಾರದ ಆದೇಶದ ಸಿಂಧುತ್ವ ಪ್ರಶ್ನಿಸಿ ಸಕ್ಕರೆ ಕಾರ್ಖಾ­ನೆಗಳ ಒಕ್ಕೂಟ ಮತ್ತು ಕೆಲವು ಕಾರ್ಖಾನೆಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದವು. ಸರ್ಕಾರದ ಅಧಿಸೂಚನೆಯನ್ನು ಧಾರವಾಡ ಹೈಕೋರ್ಟ್‌­ ಪೀಠ ಎತ್ತಿಹಿಡಿದಿದೆ. ಆದರೂ ಸರ್ಕಾರ ನಿಗದಿಪಡಿಸಿದ ಮೊತ್ತ ರೈತರಿಗೆ ಪಾವತಿಯಾಗಿಲ್ಲ ಎಂಬುದು ದುರದೃಷ್ಟಕರ. ಕಾರ್ಖಾನೆಗಳಿಗೆ ಪೂರೈಸುವ ಕಬ್ಬಿಗೆ ಹಣ ಪಾವತಿ ವರ್ಷಗಟ್ಟಲೆ ಬಾಕಿ ಉಳಿದರೆ ತಾಳಿಕೊಳ್ಳುವ ಶಕ್ತಿ ರೈತರಲ್ಲಿ ಇದೆಯೇ? ಪಾವತಿಸಲಾಗದ ಸ್ಥಿತಿ ಕಾರ್ಖಾನೆಗಳಿಗೆ ಒದಗಿದ್ದರೆ ಅದರ ಬಗ್ಗೆಯೂ ಪಾರದರ್ಶಕವಾಗಿ ಚರ್ಚೆ ನಡೆಯಲಿ. ಇಂತಹ ಮೌಲಿಕ ಚರ್ಚೆಗಳಿಗೆ ಸದನವೇ ಸೂಕ್ತ ವೇದಿಕೆ. ಅದ­ರಿಂದ ಬೆಳೆಗಾರರಲ್ಲಿ ಇರುವ ಅನುಮಾನಗಳೂ ನಿವಾರಣೆಯಾದಾವು. ರೈತ­ರಿಗೆ ನ್ಯಾಯಯುತವಾದ ಬೆಲೆ ಸಿಗಬೇಕು; ಕಾರ್ಖಾನೆಗಳೂ ಉಳಿಯ­ಬೇಕು. ಅಂತಹದೊಂದು ಸಮನ್ವಯ ಸೂತ್ರ ರೂಪುಗೊಳ್ಳಲಿ. ರಾಜ್ಯದ ಸಿಂಹ­ಪಾಲು ಸಕ್ಕರೆ ಕಾರ್ಖಾನೆಗಳ ಆಡಳಿತ ರಾಜಕಾರಣಿಗಳ ಕೈಯಲ್ಲಿದೆ. ಸಚಿವರು, ಶಾಸಕರು ಒಳಗೊಂಡಂತೆ ಆಳುವ ಹಾಗೂ ವಿರೋಧ ಪಕ್ಷಗಳ ಮುಖಂಡರ ಹಿಡಿತದಲ್ಲಿ ಕಾರ್ಖಾನೆಗಳು ಇರುವುದರಿಂದ ಅವರ ಪ್ರಭಾ­ವಕ್ಕೆ ಸರ್ಕಾರ ಮಣಿಯುತ್ತಿದೆ ಎಂಬ ಶಂಕೆಯಲ್ಲಿ ಸತ್ಯಾಂಶ ಇಲ್ಲದೇ ಇಲ್ಲ. ಇದೇ ಕಾರಣಕ್ಕಾಗಿ ರೈತರಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ ಎಂಬ ವಾದ­ದಲ್ಲಿ ಹುರುಳಿಲ್ಲ ಎಂಬುದನ್ನು ಜನಪ್ರತಿನಿಧಿಗಳು ಹಾಗೂ ಸರ್ಕಾರ ಸಾಬೀತು­ಪಡಿ­ಸಬೇಕಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಸೂತ್ರವನ್ನೂ ರೂಪಿಸ­ಬೇಕಿದೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.