ಇನ್ನು ವಿಳಂಬ ಬೇಡ ಆತ್ಮಹತ್ಯೆ ‘ಪ್ರಯತ್ನ’ ಶಿಕ್ಷಾರ್ಹ ಅಪರಾಧ ಅಲ್ಲ ಎಂದು ಪರಿಗಣಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಈಗ ಜಾರಿಯಲ್ಲಿರುವ ಭಾರ­ತೀಯ ದಂಡ ಸಂಹಿತೆಯ (ಐಪಿಸಿ) 309ನೇ ಕಲಂ ಪ್ರಕಾರ, ಆತ್ಮಹತ್ಯೆ ಯತ್ನ ‘ಒಂದು ವರ್ಷದ ಜೈಲು ಶಿಕ್ಷೆ ಮತ್ತು ದಂಡಕ್ಕೆ ಅರ್ಹವಾದ ಅಪರಾಧ’. ಬೆರಳೆಣಿಕೆ­ಯಷ್ಟು ದೇಶಗಳನ್ನು ಬಿಟ್ಟರೆ ವಿಶ್ವದ ಬಹುತೇಕ ನಾಗರಿಕ ಸಮಾ­ಜ­ಗಳಲ್ಲಿ ಆತ್ಮಹತ್ಯೆ ಅಪರಾಧವೇ ಅಲ್ಲ. ನಮ್ಮಲ್ಲೂ 309ನೇ ಕಲಂ ರದ್ದಾದ ಬಳಿಕ ನಾವೂ ಆ ಪಟ್ಟಿಗೆ ಸೇರುತ್ತೇವೆ. ಬ್ರಿಟಿಷ್‌ ಕಾಲದ ಕಾನೂನಿನ ಕ್ರೌರ್ಯ­ವೊಂದ­­ರಿಂದ ಮುಕ್ತರಾಗುತ್ತೇವೆ. ಆದರೆ ಇದು ಆತ್ಮಹತ್ಯೆ ಹೆಚ್ಚಳಕ್ಕೆ ಕುಮ್ಮಕ್ಕು ಕೊಡ­ಲಿದೆ ಎಂದು ಹೇಳುವವರೂ ಇದ್ದಾರೆ. ಕಾಯ್ದೆಯಡಿ ಅಪರಾಧ ಅಲ್ಲ ಎನ್ನುವ ಕಾರಣಕ್ಕಾಗಿ ಜನರು ಆತ್ಮಹತ್ಯೆ ಮಾಡಿಕೊಳ್ಳ­ಬಹುದು ಎಂಬ ವಾದ ಸರಿ­­ಯಲ್ಲ. ಹತಾಶೆ ಹಾಗೂ ಭಾವನಾತ್ಮಕ, ಸಾಮಾ­ಜಿಕ, ಆರ್ಥಿಕ ಸಮಸ್ಯೆ­ಗಳು ಕಾಡಿ­ದಾಗ, ಬದುಕಿನ ಬಗ್ಗೆ ವಿಶ್ವಾಸವೇ ಹೊರ­ಟುಹೋದಾಗ ಜನ ಆತ್ಮ­ಹತ್ಯೆಗೆ ಶರಣಾಗುತ್ತಾರೆ. ಇಂಥ ಪ್ರಯತ್ನದಲ್ಲಿ ಬದುಕುಳಿದವರಿಗೆ ನೀಡಬೇಕಿ­ರು­ವುದು ಸಾಂತ್ವನವೇ ಹೊರತು ಶಿಕ್ಷೆಯಲ್ಲ. ಅದನ್ನು ಈಗ ಸರ್ಕಾರ ಗುರುತಿಸಿದೆ ಎನ್ನುವುದು ಸ್ವಾಗತಾರ್ಹ. ಅಷ್ಟಕ್ಕೂ ಆತ್ಮಹತ್ಯೆ ಬಗ್ಗೆ ದೀರ್ಘ ಕಾಲದಿಂದಲೂ ಪರ, ವಿರೋಧ ಚರ್ಚೆ ನಡೆಯುತ್ತಲೇ ಬಂದಿದೆ. ಸಂವಿಧಾನದ 21ನೇ ವಿಧಿ ಎಲ್ಲ ನಾಗರಿಕರಿಗೂ ಬದು­­ಕುವ ಸ್ವಾತಂತ್ರ್ಯ ನೀಡುತ್ತದೆ. ಆದರೆ ‘ಅಂಥ ಬದುಕು ನಡೆಸಲು ಸಾಧ್ಯವೇ ಇಲ್ಲ ಎನಿಸಿದರೆ ಜೀವ ಕಳೆದುಕೊಳ್ಳುವ ಹಕ್ಕೂ ಅದರಲ್ಲಿಯೇ ಅಂತ­ರ್ಗತ­ವಾಗಿದೆ, ಈ ಹಕ್ಕನ್ನು ಐಪಿಸಿ 309ನೇ ಕಲಂ ಕಸಿಯುತ್ತದೆ’ ಎಂಬ ಪ್ರತಿ­ಪಾದನೆ­ಯನ್ನು ಸುಪ್ರೀಂಕೋರ್ಟ್ 1994ಷ್ಟು ಹಿಂದೆಯೇ ಎತ್ತಿ ಹಿಡಿ­ದಿತ್ತು. ಮುಂದೆ 1996­ರಲ್ಲಿ, ‘ಯಾವುದೇ ವ್ಯಕ್ತಿಗೆ ತನ್ನ ಜೀವವನ್ನು ಪ್ರಕೃತಿಗೆ ವಿರುದ್ಧ­ವಾದ ವಿಧಾನದ ಮೂಲಕ ಕೊನೆಗೊಳಿಸಿಕೊಳ್ಳುವ ಹಕ್ಕಿಲ್ಲ, ಅದೇನಿ­ದ್ದರೂ ಸ್ವಾಭಾ­ವಿಕವಾ­ಗಿಯೇ ಆಗಬೇಕು’ ಎಂಬ ವಾದ ಪುರಸ್ಕರಿಸಿ 309ನೇ ಕಲಂ ಪುನಃ ಊರ್ಜಿತ­ಗೊಳಿಸಲಾಗಿತ್ತು. ಆದರೆ 2011ರಲ್ಲಿ ನೀಡಿದ ತೀರ್ಪಿ­ನಲ್ಲಿ, ಈ ಕಲಂ ತೆಗೆದು­ಹಾಕುವಂತೆ ಸಂಸತ್ತಿಗೆ ಸಲಹೆ ಮಾಡಲಾಗಿತ್ತು. ವಾಸ್ತ­­ವ­ವಾಗಿ, ನಮ್ಮ ಸಂಸ್ಕೃತಿ, ಪರಂಪರೆಯಲ್ಲೇ ಸಾವನ್ನು ಅಸ್ವಾಭಾವಿಕ­ವಾಗಿ ಆಹ್ವಾ­ನಿಸಿ­ಕೊಂಡ­ವರ ನಿದರ್ಶನಗಳಿವೆ. ಮಹಾಭಾರತದ ಇಚ್ಛಾ­ಮರಣಿ ಭೀಷ್ಮನನ್ನೇ ನೆನಪಿಸಿ­ಕೊಳ್ಳಬಹುದು. ಜೈನ ಧರ್ಮದಲ್ಲೂ ­ಸಲ್ಲೇ­ಖನ ವ್ರತದ ಮೂಲಕ ಇಹ­ಲೋಕ ತ್ಯಜಿಸಲು ಶಾಸ್ತ್ರಗಳೇ ಅವಕಾಶ ನೀಡಿವೆ. ಮನು­ಸ್ಮೃತಿಯಲ್ಲೂ ಆತ್ಮ­ಹತ್ಯೆ ಧರ್ಮ­ಬಾಹಿರ ಅಲ್ಲ ಎಂಬುದನ್ನು ಕಾನೂನು ಆಯೋಗ ಉಲ್ಲೇಖಿಸಿದೆ. 1971 ಮತ್ತು 2008ರಲ್ಲಿ ನೀಡಿದ ವರದಿಗ­­ಳಲ್ಲೂ 309ನೇ ಕಲಂ ರದ್ದತಿಗೆ ಶಿಫಾ­ರಸು ಮಾಡಲಾಗಿತ್ತು. 1978­ರಷ್ಟು ಹಿಂದೆಯೇ ರಾಜ್ಯಸಭೆ ಈ ಕಲಂ ರದ್ದತಿ ಮಸೂದೆ ಅಂಗೀಕರಿಸಿತ್ತು. ಆದರೆ ಅಷ್ಟರಲ್ಲಿ ಲೋಕಸಭೆ ವಿಸರ್ಜನೆ­ಯಾದ ಕಾರಣ ಇದಕ್ಕೆ ಕಾನೂನಿನ ಬಲ ಸಿಕ್ಕಿ­ರಲಿಲ್ಲ. ಈಗ 18 ರಾಜ್ಯಗಳು, ನಾಲ್ಕು ಕೇಂದ್ರಾಡಳಿತ ಪ್ರದೇಶಗಳು 309ನೇ ಕಲಂ ರದ್ದತಿಗೆ ಬೆಂಬಲ ಸೂಚಿ­ಸಿವೆ. ಇಂಥ ಕ್ರೂರ ಕಲಂ ಬೇಕಿಲ್ಲ ಎಂಬುದು ಕೇಂದ್ರಕ್ಕೂ ಮನದಟ್ಟಾಗಿದೆ. ಅದನ್ನು ಕಾರ್ಯಗತಗೊಳಿಸಲು ಇನ್ನು ವಿಳಂಬ ಬೇಡ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.