ಮಕ್ಕಳ ರಕ್ಷಣೆಗೆ ಪ್ರೇರಣೆಯಾಗಲಿ ಭಾರತದ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಶ್‌ ಸತ್ಯಾರ್ಥಿ ಹಾಗೂ ಪಾಕಿ­­ಸ್ತಾನದಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕುಗಳ ಹೋರಾ­ಟಗಾರ್ತಿ ಮಲಾಲಾ ಯೂಸಫ್‌ಝೈ ನೊಬೆಲ್‌ ಶಾಂತಿ ಪ್ರಶಸ್ತಿ­ಯನ್ನು ಸ್ವೀಕರಿಸಿದ್ದಾರೆ. ಬಲಾತ್ಕಾರದ ದುಡಿಮೆ ಮತ್ತು ಅಕ್ರಮಸಾಗಣೆ­ಯಿಂದ ಮಕ್ಕಳನ್ನು ರಕ್ಷಿಸುವುದಕ್ಕೆಂದೇ ಎಲೆ­ಕ್ಟ್ರಿ­ಕಲ್‌ ಎಂಜಿನಿಯರ್‌ ಕೆಲಸ ತ್ಯಜಿಸಿ, ಸ್ವಯಂಸೇವಾ ಸಂಸ್ಥೆಯನ್ನು ಸ್ಥಾಪಿಸಿದ 60 ವರ್ಷದ ಸತ್ಯಾರ್ಥಿ ಮತ್ತು ತಾಲಿ­ಬಾನ್‌ ಉಗ್ರರ ಗುಂಡೇಟಿಗೂ ಜಗ್ಗದೆ ಹೆಣ್ಣು ಮಕ್ಕಳ ಶಿಕ್ಷಣ­ಕ್ಕಾಗಿ ಹೋರಾ­ಡುತ್ತಿರುವ 17 ವರ್ಷದ ಮಲಾಲಾ ಪ್ರಶಸ್ತಿ ಹಂಚಿ­ಕೊಂಡಿ­ದ್ದಾರೆ. ಒಬ್ಬರು ಹಿರಿಯ ತಲೆಮಾರನ್ನು ಪ್ರತಿನಿಧಿಸಿದರೆ ಮತ್ತೊಬ್ಬರು ಯುವ­ಜನಾಂಗವನ್ನು ಪ್ರತಿನಿಧಿಸುವಂತಹವರು. ಒಬ್ಬರು ಹಿಂದೂ, ಮತ್ತೊ­ಬ್ಬರು ಮುಸ್ಲಿಂ. ಇದು ಬಿಂಬಿಸುವ ಏಕತೆಯ ಸಂದೇಶ ವಿಶ್ವಕ್ಕೆ ಈಗ ಅಗತ್ಯ­ವಿರುವ ಶಾಂತಿಯ ಸಂದೇಶವನ್ನು ಸಂಕೇತಿಸುವಂತಹದ್ದೇ. ಆದರೆ ಇದೇ ಸಂದರ್ಭ­ದಲ್ಲಿ ಯುನಿಸೆಫ್ ಬಿಡುಗಡೆ ಮಾಡಿರುವ ವರದಿ ಕಂಗೆಡಿಸುವಂತ­ಹದ್ದು. ಈ ವರದಿಯ ಪ್ರಕಾರ, 2014ನೇ ವರ್ಷ ಲಕ್ಷಾಂತರ ಮಕ್ಕಳಿಗೆ ಅತ್ಯಂತ ವಿಧ್ವಂಸಕ ವರ್ಷವಾಗಿದೆ. ಏಕೆಂದರೆ, ಸಶಸ್ತ್ರ ಸಂಘರ್ಷಗಳಿಂದ ಛಿದ್ರ­ವಾಗಿರುವ ರಾಷ್ಟ್ರ­ಗಳು ಹಾಗೂ ಪ್ರದೇಶಗಳಲ್ಲಿ ವಿಶ್ವದ ಅಂದಾಜು 23 ಕೋಟಿ ಮಕ್ಕಳು ಬದು­ಕುತ್ತಿದ್ದಾರೆ. ಅನೇಕ ಮಕ್ಕಳು ಅನಾಥರಾಗಿದ್ದಾರೆ, ಅಪ­ಹರಣಕ್ಕೊಳ­ಗಾಗಿ­ದ್ದಾರೆ, ಅತ್ಯಾಚಾರಕ್ಕೊಳಗಾಗಿದ್ದಾರೆ ಅಥವಾ ಜೀತ­ದಾಳು­ಗಳಾಗಿ ಮಾರಾಟ­ವಾಗಿದ್ದಾರೆ ಎಂಬಂತಹ ದಾರುಣ ಚಿತ್ರವನ್ನು ಈ ವರದಿ ಕಟ್ಟಿಕೊಟ್ಟಿದೆ. ಇದು ಗಂಭೀರವಾಗಿ ಪರಿಶೀಲನೆಗೊಳಬೇಕಾದ ವಿಚಾರ. ಕಳೆದ 30 ವರ್ಷಗಳಲ್ಲಿ 80 ಸಾವಿರ ಬಾಲ ಕಾರ್ಮಿಕರನ್ನು ಸತ್ಯಾರ್ಥಿ ಅವರ ‘ಬಚ್‌ಪನ್ ಬಚಾವೋ’ ಆಂದೋಲನ (ಬಾಲ್ಯ ರಕ್ಷಿಸಿ ಆಂದೋಲನ) ರಕ್ಷಿಸಿದೆ. ಆದರೆ ಈಗಲೂ ದೇಶದ 6 ಕೋಟಿ ಮಕ್ಕಳು ಶಿಕ್ಷಣದ ಅವಕಾಶ­ವಿ­ಲ್ಲದೆ ದುಡಿ­­ಮೆ­­ಯಲ್ಲಿ ತೊಡಗಿಕೊಂಡಿದ್ದಾರೆ ಎಂಬುದು ನಾವಿನ್ನೂ ಸಾಗ­ಬೇಕಾ­­ಗಿ­­ರುವ ಹಾದಿಗೆ ದಿಕ್ಸೂಚಿ. 2010ರಲ್ಲಿ ಕಾಣೆಯಾದ ಮೂರು ಮಕ್ಕಳಲ್ಲಿ ಬಹು­ತೇಕ ಒಂದು ಮಗುವನ್ನು ಪತ್ತೆಹಚ್ಚುವುದು ಅಸಾಧ್ಯವಾ­ಗಿರುತ್ತಿತ್ತು. ನಂತರ 2013ರಲ್ಲಿ ಕಾಣೆಯಾದ ಇಬ್ಬರು ಮಕ್ಕಳಲ್ಲಿ ಒಂದು ಮಗು ಪತ್ತೆ­ಯಾಗುವುದು ಅಸಾಧ್ಯ ಎಂದಾಗಿದೆ. ಭಾರತದಲ್ಲಿ ಪ್ರತಿ 8 ನಿಮಿಷಗಳಿಗೆ ಒಂದು ಮಗು ಕಾಣೆಯಾಗುತ್ತಿದೆ ಎಂಬುದು ಆತಂಕದ ಸಂಗತಿ. ಅಪಹರಣ­ಗೊಂಡ ಅಥವಾ ಅಕ್ರಮ ಸಾಗಣೆಗೊಳಗಾದ ಮಗುವನ್ನು ಸಾಮಾನ್ಯವಾಗಿ ಲೈಂಗಿಕ ವ್ಯಾಪಾರಕ್ಕೆ ಇಳಿಸಲಾಗುತ್ತದೆ ಎಂಬ ಅಂಶ ನಮ್ಮ ಮಕ್ಕಳ ಸ್ಥಿತಿಗತಿ­ಗಳು ಸುಧಾರಿಸಬೇಕಾಗಿರುವ ಅಂಶದೆಡೆ ಗಮನ ಸೆಳೆಯು­ತ್ತದೆ. ಮಿಲಿಟರಿ­ಗಾಗಿ ಮಾಡುವ ವೆಚ್ಚವನ್ನು ಕೇವಲ ಒಂದು ವಾರದವರೆಗೆ ಜಗತ್ತು ಸ್ಥಗಿತ­ಗೊಳಿಸಿ­ದಲ್ಲಿ ಅದರಿಂದ ದೊರೆಯುವ ಹಣ, ವಿಶ್ವದ ಎಲ್ಲಾ ಮಕ್ಕಳನ್ನು ತರ­ಗತಿ­ಗಳಿಗೆ ಕಳಿ­ಸಲು ಸಾಕಾಗುತ್ತದೆ ಎಂಬುದನ್ನು ಸತ್ಯಾರ್ಥಿ ಅವರು ಸರ್ಕಾರ­ಗಳಿಗೆ ಮನ­ವರಿಕೆ ಮಾಡಿಕೊಡಲು ಪ್ರಯತ್ನಿಸಿರು­ವುದು ಮುಖ್ಯ­ವಾದದ್ದು. ‘ವಿಶಿಷ್ಟ­ವಾ­ದದ್ದು ಎಂದು ನಾನು ನನ್ನ ಕಥೆ ಹೇಳು­ತ್ತಿಲ್ಲ. ಇದು ಅನೇಕ ಹೆಣ್ಣು­ಮಕ್ಕಳ ಕಥೆ’ ಎಂಬಂಥ ಮಲಾಲಾ ಮಾತುಗಳು ಪ್ರಗತಿ ಸಾಧನೆಗೆ ಕ್ರಮ ಕೈಗೊಳ್ಳಲು ಪ್ರೇರಕವಾದದ್ದು. ಎಲ್ಲರೊಳಗಿರುವ ಮಗುವಿನ ಮನಸ್ಸನ್ನು ಉದ್ದೀಪಿಸಿ ಕರು­ಣೆಯ ಭಾವವನ್ನು ಜಾಗೃತಗೊಳಿಸಿ ಜಾಗ­ತಿಕ­ಗೊಳಿಸಬೇಕು ಎಂಬ ಸತ್ಯಾರ್ಥಿ ಅವರ ಸಂದೇಶ ಅರ್ಥಪೂರ್ಣ. ಏಕೆಂದರೆ ಮಕ್ಕಳ ಮೇಲೆ ಯಾವ ರೀತಿಯ ದೌರ್ಜನ್ಯಗಳಿಗೂ ನಾಗರಿಕ ಸಮಾಜದಲ್ಲಿ ಅವಕಾಶ ಇರಲೇ ಕೂಡದು ಎಂಬುದು ಪ್ರಾಥಮಿಕ ಬದ್ಧತೆಯಾಗಲು ಇದು ಅವಶ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.