ಸುರಕ್ಷತೆಗೆ ಆದ್ಯತೆ ಇರಲಿ ಅನೇಕ ವಿಮಾನ ದುರಂತಗಳಿಗೆ 2014ನೇ ವರ್ಷ ಸಾಕ್ಷಿಯಾಗಿದೆ. ಇವುಗಳಿಗೆ ಹೊಸ ಸೇರ್ಪಡೆ ಏರ್ ಏಷ್ಯಾ ವಿಮಾನ ದುರಂತ. 162 ಪ್ರಯಾಣಿಕರು ಹಾಗೂ ಸಿಬ್ಬಂದಿಯೊಂದಿಗೆ ಇಂಡೊನೇಷ್ಯಾದ ಸುರಬಯಾ ನಗರದಿಂದ ಸಿಂಗಾಪುರಕ್ಕೆ ತೆರಳುತ್ತಿದ್ದ ಮಾರ್ಗದಲ್ಲಿ ಭಾನುವಾರ ನಾಪತ್ತೆ­ಯಾಗಿದ್ದ ಏರ್ ಏಷ್ಯಾ ಕ್ಯು ಝಡ್ 8501 ವಿಮಾನದ ಅವಶೇಷಗಳು ಎರಡು ದಿನಗಳ ತೀವ್ರ ಶೋಧದ ನಂತರ ಸಮುದ್ರದಡಿ ಪತ್ತೆಯಾಗಿವೆ. ಸುಮಾರು 40 ಮೃತ ದೇಹಗಳನ್ನು ಹೊರತೆಗೆಯಲಾಗಿದೆ. ವಿವಿಧ ದೇಶಗಳ ತಂಡಗಳು ಈ ವಿಮಾನ ಶೋಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು. ಒಂದು ಅಂದಾಜಿನ ಪ್ರಕಾರ, 2014ರಲ್ಲಿ ಸಂಭವಿಸಿದ 20 ವಾಣಿಜ್ಯ ಉದ್ದೇಶದ ವಿಮಾನಗಳ ಅಪಘಾತಗಳಲ್ಲಿ 986 ಮಂದಿ ಸತ್ತಿದ್ದಾರೆ. ಒಂದೇ ವರ್ಷ ಸಂಭವಿಸಿದ ವಿಮಾನ ದುರಂತಗಳಲ್ಲಿ ಇಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸಾವುಗಳಾಗಿರುವುದು 2005ರ ನಂತರ ಇದೇ ಮೊದಲು. ಕಳೆದ ಮಾರ್ಚ್ 8ರಂದು ಕ್ವಾಲಾಲಂಪುರದಿಂದ ಬೀಜಿಂಗ್ ಗೆ ಹೊರಟಿದ್ದ ಎಂಎಚ್‌ 370 ವಿಮಾನ ಕಾಣೆಯಾಗಿ ಹತ್ತು ತಿಂಗಳಾಗುತ್ತಿದೆ. ಆದರೆ ಈ ವಿಮಾನ ಏನಾಯಿತು ಎಂಬುದು ಈಗಲೂ ಬಿಡಿಸಲಾಗದ ಕಗ್ಗಂಟಾಗಿ ನಿಗೂಢವಾಗಿಯೇ ಉಳಿದಿದೆ. ಎಂಎಚ್‌370 ವಿಮಾನ ನಾಪತ್ತೆ ಅನೇಕ ಪ್ರಶ್ನೆಗಳನ್ನು ಎತ್ತಿದೆ. ವಿಮಾನ ಹಾರಾಟದ ಸಂದರ್ಭದ ಮಾಹಿತಿಗಳ ನಿರ್ವಹಣೆಯಲ್ಲಿ ಇನ್ನೂ ಅನೇಕ ಸುಧಾರಣೆಗಳಾಗಬೇಕಿವೆ ಎಂಬುದನ್ನು ಇದು ಎತ್ತಿ ಹಿಡಿಯುತ್ತದೆ. ಹಾಗೆಯೇ ಆಮ್‌ಸ್ಟರ್‌ಡಮ್ ನಿಂದ ಕ್ವಾಲಾಲಂಪುರಕ್ಕೆ ಹೊರಟಿದ್ದ ಎಂ ಎಚ್ 17 ವಿಮಾನವನ್ನು ಉಕ್ರೇನ್ – ರಷ್ಯಾ ಗಡಿ ಬಳಿ ಪ್ರತ್ಯೇಕತಾವಾದಿ ಹೋರಾಟಗಾರರು ಗುಂಡು ಹೊಡೆದು ಉರುಳಿಸಿದ್ದರಿಂದ 290ಕ್ಕೂ ಹೆಚ್ಚುಮಂದಿ ಸಾವನ್ನಪ್ಪಿದ್ದರು. ನಿಜ. ಅಪಘಾತ ಎಂಬುದು ಅಪಘಾತವೇ. ನಿರೀಕ್ಷಿಸದ ರೀತಿಯಲ್ಲಿ ಅದು ಸಂಭವಿಸುತ್ತದೆ. ಆದರೆ ಸುರಕ್ಷತೆಯನ್ನು ನಿರ್ಲಕ್ಷಿಸದಿರಲು ಎಲ್ಲಾ ಪ್ರಯತ್ನಗಳನ್ನೂ ಮಾಡಬೇಕು. ಅವಘಡಗಳು ಸಂಭವಿಸಿದಲ್ಲಿ ಅದರ ಕಾರಣಗಳನ್ನು ತ್ವರಿತವಾಗಿ ಪತ್ತೆಹಚ್ಚಿ ವಿಶ್ಲೇಷಿಸ­ಬೇಕು. ಮುಂದೆ ಇಂತಹ ಅಪಘಾತಗಳಾಗದಂತೆ ಮುನ್ನೆಚ್ಚರಿಕೆ ವಹಿಸಲು ಈ ಮಾಹಿತಿಗಳು ನೆರವಾಗುವಂತಾಗಬೇಕು. ಈ ವರ್ಷ ನಡೆದ ಮೂರು ಪ್ರಮುಖ ವಿಮಾನ ದುರಂತಗಳಲ್ಲಿ ಮಲೇಷ್ಯಾ ಮೂಲದ ವಿಮಾನಗಳೇ ಒಳಗೊಂಡಿರುವುದು ಕಾಕತಾಳೀಯ. ಭಾನುವಾರ ನಾಪತ್ತೆಯಾಗಿದ್ದ ವಿಮಾನವೂ ಮಲೇಷ್ಯಾ ಮೂಲದ ಏರ್ ಏಷ್ಯಾ ಕಂಪೆನಿಯ ಇಂಡೊನೇಷ್ಯಾ ಅಂಗಸಂಸ್ಥೆಗೆ ಸೇರಿದ್ದು. ಇದರಲ್ಲಿ ಮಲೇಷ್ಯಾ ಪ್ರಜೆ ಟೋನಿ ಫರ್ನಾಂಡಿಸ್‌ಗೆ ಸೇರಿರುವ ಮೂಲ ಕಂಪೆನಿ ಶೇ 49ರಷ್ಟು ಷೇರುಗಳನ್ನು ಹೊಂದಿದೆ. ಈ ಅಪ­ಘಾತ­ಗಳು ಕಡಿಮೆ ಪ್ರಯಾಣ ದರದ ವಿಮಾನಗಳ ಬೆಳವಣಿಗೆಗೆ ಕುಂದು ತರು­ವಂತಾಗ­ಬಾರದು. ಇತ್ತೀಚಿನ ದಿನಗಳಲ್ಲಿ ವಿಮಾನಗಳಲ್ಲಿ ಪ್ರಯಾಣಿಸು­ವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ನಾಗರಿಕ ವಿಮಾನಯಾನ ಸಂಚಾರದಲ್ಲಿ ಸುರಕ್ಷತೆ ನಿಯಮಗಳು ಸರಿಯಾಗಿ ಪಾಲನೆಯಾಗಬೇಕು. ಅಂತರ­ರಾಷ್ಟ್ರೀಯ ಸುರ­ಕ್ಷತಾ ನಿಯಮಗಳಿಗೆ ವಿಮಾನ ಸಂಸ್ಥೆ ಆಡಳಿತ ವರ್ಗಗಳು ಹಾಗೂ ನಾಗರಿಕ ವಿಮಾನಯಾನ ನಿಯಂತ್ರಕ ಸಂಸ್ಥೆಗಳು ಕಟ್ಟುನಿಟ್ಟಾಗಿ ಬದ್ಧವಾಗಬೇಕು. ಸಮರ್ಪಕ ನಿರ್ವಹಣೆ, ವಿಮಾನ ಚಾಲನಾ ತರಬೇತಿ, ವಿಮಾನ ಸಂಚಾರ ನಿಯಂತ್ರಣ ಸೇರಿದಂತೆ ಗಗನಯಾನದ ಸುರಕ್ಷತೆಯ ಎಲ್ಲಾ ಆಯಾಮ­ಗಳನ್ನು ಸರಿಯಾಗಿ ನಿರ್ವಹಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.