ಜನಪ್ರಿಯ ಸರ್ಕಾರ ರಚನೆಯಾಗಲಿ ಜಮ್ಮು–ಕಾಶ್ಮೀರ ಮತದಾರರು ನೀಡಿರುವ ಫಲಿತಾಂಶ ಯಾವುದೇ ಒಂದು ಪಕ್ಷ ಸ್ವಂತ ಶಕ್ತಿ ಮೇಲೆ ಸರ್ಕಾರ ರಚಿಸಲು ಸಾಧ್ಯವಾಗದ ಅತಂತ್ರ ವಾತಾವರಣ ಸೃಷ್ಟಿಸಿದೆ. ಮುಸ್ಲಿಮರ ಪ್ರಾಬಲ್ಯವಿರುವ ಕಾಶ್ಮೀರ­ದಲ್ಲಿ ಅತಿಹೆಚ್ಚು ಸ್ಥಾನಗಳನ್ನು ಪಡೆದಿರುವ ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ, ಜಮ್ಮು ಭಾಗದಲ್ಲಿ ದೊಡ್ಡ ಪಕ್ಷವಾಗಿರುವ ಬಿಜೆಪಿಯ ನಾಯ­ಕರು ಮೈತ್ರಿ ಸರ್ಕಾರ ರಚನೆ ಕುರಿತು ನಡೆಸಿದ ಮಾತುಕತೆ ಫಲಪ್ರದವಾಗಿಲ್ಲ. ನ್ಯಾಷನಲ್‌ ಕಾನ್ಫರೆನ್ಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳನ್ನು ತಿರಸ್ಕರಿಸಿರುವ ಜನ ಪಿಡಿಪಿ– ಬಿಜೆಪಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಬೇಕೆಂದು ಅಪೇಕ್ಷಿಸಿದ್ದಾರೆ. ಆದರೆ, ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದಂತೆ ತಲೆದೋರಿರುವ ಬಿಕ್ಕಟ್ಟಿನಿಂದ ಚರ್ಚೆಗೆ ಹಿನ್ನಡೆಯಾಗಿದೆ. ಪೂರ್ಣ ಆರು ವರ್ಷ ತನಗೇ ಮುಖ್ಯ­ಮಂತ್ರಿ ಸ್ಥಾನ ಬೇಕೆಂದು ಪಿಡಿಪಿ ಪಟ್ಟು ಹಿಡಿದಿದೆ. ಈ ಪ್ರಮುಖ ಸ್ಥಾನವನ್ನು ಎರಡೂ ಪಕ್ಷಗಳು ತಲಾ ಮೂರು ವರ್ಷಗಳ ಅವಧಿಗೆ ಹಂಚಿಕೊಳ್ಳಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ಇದರಿಂದಾಗಿ ಮಾತುಕತೆ ಸ್ಥಗಿತಗೊಂಡಿದೆ. ಒಮರ್‌ ಅಬ್ದುಲ್ಲಾ ಉಸ್ತುವಾರಿ ಹೊಣೆಯಿಂದ ಬಿಡುಗಡೆ ಬಯಸಿದ್ದರಿಂದ ರಾಷ್ಟ್ರಪತಿ ಆಳ್ವಿಕೆ ಅನಿವಾರ್ಯವಾಯಿತು. ಆದರೆ, ಇದು ತಾತ್ಕಾಲಿಕ ಕ್ರಮವಾಗಬೇಕು. ವಿಧಾನಸಭೆಯಲ್ಲಿ 28 ಸ್ಥಾನ ಗೆದ್ದು ದೊಡ್ಡ ಪಕ್ಷವಾಗಿರುವ ಪಿಡಿಪಿ, 25 ಸೀಟುಗಳನ್ನು ಪಡೆದು ಎರಡನೇ ಸ್ಥಾನದಲ್ಲಿರುವ ಬಿಜೆಪಿ ಮಾತುಕತೆ ಪುನರ್‌ ಆರಂಭಿಸಿ ಕಾರ್ಯಸಾಧ್ಯ ಸೂತ್ರವನ್ನು ಕಂಡುಕೊಳ್ಳಬೇಕು. ಕಣಿವೆಯಲ್ಲಿ ಧರ್ಮದ ಆಧಾರದಲ್ಲಿ ಮತದಾರರು ಧ್ರುವೀಕರಣ ಆಗಿರುವುದು ಸಮಸ್ಯೆಗೆ ಕಾರಣವಾಗಿದೆ. ಬಿಜೆಪಿ ಜತೆ ಮೈತ್ರಿಗೆ ಮುಂದಾಗಿ­ರುವ ಪಿಡಿಪಿಗೆ ಹಿಂದೂ ಸಮಾಜಕ್ಕೆ ಸೇರಿದ ನಾಯಕರೊಬ್ಬರು ಮುಖ್ಯ­ಮಂತ್ರಿ ಆಗುವುದು ಸುತರಾಂ ಇಷ್ಟವಿಲ್ಲ. ಹಿಂದೂ ಮುಖ್ಯಮಂತ್ರಿಯನ್ನು ಕಾಶ್ಮೀರದ ಜನ ಅದರಲ್ಲೂ ಪ್ರತ್ಯೇಕತಾವಾದಿ ಗುಂಪುಗಳು ಒಪ್ಪುವುದಿಲ್ಲ. ಹೀಗಾಗಿ ಮುಖ್ಯಮಂತ್ರಿ ಸ್ಥಾನ ಅವಧಿಪೂರ್ತಿ ತನಗೇ ಇರಬೇಕೆಂದು ಪಿಡಿಪಿ ಷರತ್ತು ವಿಧಿಸಿದೆ. ಉಭಯ ಪಕ್ಷಗಳ ಮಾತುಕತೆಗೆ ಸಂವಿಧಾನದ 370ನೇ ಕಲಂ ಮತ್ತು ಸಶಸ್ತ್ರ ಪಡೆ ವಿಶೇಷ ಅಧಿಕಾರ ಕಾಯ್ದೆ (ಎಎಫ್‌ಎಸ್‌ಪಿಎ) ಅಡ್ಡಿಯಾಗಬಹುದು ಎನ್ನುವ ಊಹೆ ಹುಸಿಯಾಗಿದೆ. ಅಧಿಕಾರ ಹಂಚಿಕೆಯೇ ಬಹು ಮುಖ್ಯ ತೊಡಕಾಗಿದೆ. ನ್ಯಾಷನಲ್‌ ಕಾನ್ಫರೆನ್ಸ್‌ ಬೆಂಬಲ ಕೊಡಲು ಮುಂದೆ ಬಂದಿದ್ದರೂ ಕಣಿವೆಯಲ್ಲಿ ತನಗೆ ರಾಜಕೀಯ ಎದುರಾಳಿ ಆಗಿರುವ ಎನ್‌ಸಿ ಬೆಂಬಲ ಪಡೆದರೆ ಆಗಬಹುದಾದ ಪರಿಣಾಮ ಕುರಿತಾದ ಅರಿವು ಪಿಡಿಪಿ ನಾಯಕರಿಗಿದೆ. ಕಾಂಗ್ರೆಸ್‌ ಬೆಂಬಲ ಪಡೆದರೂ ಸರ್ಕಾರ ರಚನೆಗೆ ಅಗತ್ಯವಿರುವ ಸರಳ ಬಹುಮತ ಸಿಗುವುದಿಲ್ಲ. ಈ ಕಾರಣಕ್ಕೆ ಪಿಡಿಪಿ ಮತ್ತು ಬಿಜೆಪಿ ಮಾತುಕತೆ ಪುನಃ ಆರಂಭಿಸಬೇಕು. ಜನಪ್ರಿಯ ಸರ್ಕಾರ ರಚನೆಗೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಅಡ್ಡಿಯಾಗಿರುವ ವೈಯಕ್ತಿಕ ಲಾಭ– ನಷ್ಟಗಳ ಲೆಕ್ಕಾಚಾರ ಹಾಗೂ ಪ್ರತಿಷ್ಠೆಗಳನ್ನು ಬದಿಗೊತ್ತಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.